ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗವಿಕಲರನ್ನು ಕರೆತರಲಿದ್ದಾರೆ ಅಂಗವಿಕಲರು!

ಮತಗಟ್ಟೆಗೆ ಕರೆತರಲು ವಾಹನ ಸೌಲಭ್ಯ: ಸ್ವಯಂ ಪ್ರೇರಣೆಯಿಂದ ಮುಂದೆ ಬಂದ ಫಲಾನುಭವಿಗಳು
Last Updated 16 ಏಪ್ರಿಲ್ 2019, 20:29 IST
ಅಕ್ಷರ ಗಾತ್ರ

ಹಾವೇರಿ: ಸರ್ಕಾರದ ವಿವಿಧ ಯೋಜನೆಗಳಲ್ಲಿ ಯಂತ್ರ ಚಾಲಿತ ತ್ರಿಚಕ್ರ ವಾಹನ (ಸ್ಕೂಟರ್) ಪಡೆದಅಂಗವಿಕಲರು, ಇತರ ಅಂಗವಿಕಲ ಮತದಾರರನ್ನು ಮತದಾನದಂದು ಮತಗಟ್ಟೆಗೆ ಕರೆದುಕೊಂಡು ಬರಲಿದ್ದಾರೆ.

ಸಂಸದರು, ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಹಾಗೂ ಸ್ಥಳೀಯಾಡಳಿತ ಸಂಸ್ಥೆಗಳು, ಪಂಚಾಯ್ತಿಗಳು ಸೇರಿದಂತೆ ಸರ್ಕಾರದ ವಿವಿಧ ಅನುದಾನಗಳಲ್ಲಿ ಶೇ 3ರಷ್ಟನ್ನು ಅಂಗವಿಕಲರ ಕಲ್ಯಾಣಕ್ಕಾಗಿ ಮೀಸಲು ಇಡಲಾಗುತ್ತದೆ. ಈ ಅನುದಾನದಲ್ಲಿ ಅಂಗವಿಕಲರಿಗೆ ಯಂತ್ರ ಚಾಲಿತ ತ್ರಿಚಕ್ರ ವಾಹನಗಳನ್ನು ವಿವಿಧ ಸಂದರ್ಭಗಳಲ್ಲಿ ನೀಡಲಾಗಿತ್ತು.

ಹೀಗೆ ಸರ್ಕಾರದ ಸೌಲಭ್ಯ ಪಡೆದ 672 ಅಂಗವಿಕಲರು, ಇತರ ಅಂಗವಿಕಲ ಮತದಾರರನ್ನು ಮತಗಟ್ಟೆಗೆ ಕರೆದುಕೊಂಡು ಬರಲು ಸ್ವಯಂಪ್ರೇರಿತವಾಗಿ ಮುಂದೆ ಬಂದಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 34,461 (2011 ಜನಗಣತಿ) ಅಂಗವಿಕಲರಿದ್ದು, ಈ ಪೈಕಿ 17,239 ಮತದಾರರು. ಇವರನ್ನು ಮತಗಟ್ಟೆಗೆ ಕರೆದುಕೊಂಡು ಬರಲು ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

‘ಇತರೆಡೆ ಅವರನ್ನು ಮತಗಟ್ಟೆಗೆ ಕರೆದುಕೊಂಡು ಬರಲು ವಾಹನ ಸೌಲಭ್ಯ ಮಾಡಲಾಗುತ್ತಿದೆ. ಇದಕ್ಕಾಗಿ ₹12ರಿಂದ ₹20 ಲಕ್ಷ ತನಕ ಖರ್ಚಾಗುತ್ತಿದೆ. ಆದರೆ, ನಮ್ಮಲ್ಲಿ ಫಲಾನುಭವಿ ಅಂಗವಿಕಲರೇ ಮುಂದೆ ಬಂದಿದ್ದು, ಅವರಿಗೆ ಪೆಟ್ರೋಲ್ ಭತ್ಯೆ ನೀಡಲಾಗುವುದು. ಇದರಿಂದ ₹3ರಿಂದ ₹5 ಲಕ್ಷದೊಳಗೆ ಖರ್ಚಾಗಲಿದ್ದು, ಸರ್ಕಾರಕ್ಕೆ ಉಳಿತಾಯವಾಗಲಿದೆ’ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ ಮಠದ ತಿಳಿಸಿದರು.

‘ಸರ್ಕಾರದಿಂದ ವಾಹನ ನೀಡಿದ ಬಳಿಕ, ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದೇನೆ. ಈ ಕೃತಜ್ಞತೆಯನ್ನು ಸಲ್ಲಿಸಲು ಇಲಾಖೆ ಅವಕಾಶ ಕಲ್ಪಿಸಿದ್ದು, ಮುಂದೆ ಬಂದಿದ್ದೇನೆ. ಅಂದು ಬೆಳಿಗ್ಗೆ 7ರಿಂದ ಸಂಜೆ 6ರ ತನಕ ಸಾಧ್ಯವಾದಷ್ಟು ಅಂಗವಿಕಲರನ್ನು ಮತಗಟ್ಟೆಗೆ ಕರೆದುಕೊಂಡು ಬರುತ್ತೇನೆ’ ಎಂದು ಹಾವೇರಿ ಕೋಣನತಂಬಗಿ ಶರಣಪ್ಪ ಹೊಂಬರಡಿ ತಿಳಿಸಿದರು.

‘ಜಿಲ್ಲೆಯಲ್ಲಿ ಅಂಗವಿಕಲ ಮತದಾರರಿಗಾಗಿ ರ‍್ಯಾಂಪ್‌, ವೀಲ್‌ ಚೇರ್‌, ರೇಲಿಂಗ್ ಮತ್ತಿತರ ಸೌಲಭ್ಯ ಕಲ್ಪಿಸಲಾಗುತ್ತಿದೆ. ದೃಷ್ಟಿ ದೋಷ ಉಳ್ಳವರಿಗೆ ‘ಬ್ರೈಲ್ ಲಿಪಿ’ ಹಾಗೂ ಕಿವುಡ ಮತ್ತು ಮೂಕರಿಗೆ ‘ಸಂಜ್ಞೆ ಭಾಷೆ’ಯ ವಿಡಿಯೊ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿದೆ. ಈ ಸೌಲಭ್ಯಗಳ ಜೊತೆಗೆ, ನಾವೆಲ್ಲ ಅಂಗವಿಕಲರೂ ಮತದಾನ ಹೆಚ್ಚಳಕ್ಕಾಗಿ ಸೇವೆ ಸಲ್ಲಿಸಲು ಮುಂದೆ ಬಂದಿದ್ದೇವೆ’ ಎನ್ನುತ್ತಾರೆ ಜಿಲ್ಲಾ ಅಂಗವಿಕಲರ ಮತದಾನ ಜಾಗೃತಿ ರಾಯಭಾರಿ ಹಸೀನಾ ಹೆಡಿಯಾಲ.

**

ಸರ್ಕಾರಿ ಸೌಲಭ್ಯ ಪಡೆದ ಅಂಗವಿಕಲರು ಮತದಾರರ ಜಾಗೃತಿಗಾಗಿ ಮುಂದೆ ಬಂದಿರುವುದು ಜಿಲ್ಲೆಯ ವಿಶೇಷ. ಇದರಿಂದ ಸರ್ಕಾರಕ್ಕೆ ಆರ್ಥಿಕ ಉಳಿತಾಯವೂ ಸಾಧ್ಯವಾಗಿದೆ.
–ಮಲ್ಲಿಕಾರ್ಜುನ ಮಠದ,ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT