ಶನಿವಾರ, ಡಿಸೆಂಬರ್ 14, 2019
23 °C
ಶೇ 20 ರಷ್ಟು ಡೀಸೆಲ್‌ ರಫ್ತು ಹೆಚ್ಚಿಸಿದ ಎಂಆರ್‌ಪಿಎಲ್‌

ಹೆಚ್ಚಿದ ಉತ್ಪಾದನೆ: ತಗ್ಗಿದ ಬೇಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಬರುವ ವರ್ಷದ ಏಪ್ರಿಲ್‌ 1ರಿಂದ ದೇಶದಾದ್ಯಂತ ಬಿಎಸ್‌–6 ಇಂಧನ ಕಡ್ಡಾಯವಾಗಲಿದ್ದು, ಇದೀಗ ದೇಶದ ಮಾರುಕಟ್ಟೆಯಲ್ಲಿ ಡೀಸೆಲ್‌ನ ಬೇಡಿಕೆ ಕುಸಿದಿದೆ. ಇದರ ಪರಿಣಾಮವಾಗಿ ಎಂಆರ್‌ಪಿಎಲ್‌ ಉತ್ಪಾದಿಸಿದ ಡೀಸೆಲ್‌ ಅನ್ನು ರಫ್ತು ಮಾಡಲು ಮುಂದಾಗಿದೆ.

ಡೀಸೆಲ್‌ ರಫ್ತು ಪ್ರಮಾಣವನ್ನು ಕಳೆದ ಎರಡು ತಿಂಗಳಿನಿಂದ ಶೇ 20ರಷ್ಟು ಹೆಚ್ಚಿಸಿದ್ದು, ಎಂಆರ್‌ಪಿಎಲ್‌ನಲ್ಲಿ ಹೆಚ್ಚಿರುವ ಡೀಸೆಲ್‌ ದಾಸ್ತಾನನ್ನು ಸರಿದೂಗಿಸಿಕೊಳ್ಳಲು ರಫ್ತು ಅನಿವಾರ್ಯ ಎನ್ನುವಂತಾಗಿದೆ.

ವಾಣಿಜ್ಯ ವಾಹನಗಳ ಮಾರಾಟದಲ್ಲಿ ಕುಸಿತ, ಸರಕು ಸಾಗಣೆ ವೆಚ್ಚ ಇಳಿಸಲು ರೈಲಿನ ಬಳಕೆ, ಕಾರ್ಖಾನೆ ಸೇರಿದಂತೆ ಉತ್ಪಾದನೆ ವಲಯದಲ್ಲಿ ಕಡಿಮೆ ಬಳಕೆ ಸೇರಿದಂತೆ ಹಲವು ಕಾರಣಗಳಿಂದ ದೇಶೀ ಮಾರುಕಟ್ಟೆಯಲ್ಲಿ ಡೀಸೆಲ್‌ ಬಳಕೆ ಕಡಿಮೆಯಾಗಿದೆ ಎಂದು ಹೇಳಲಾಗುತ್ತಿದೆ.

ಎಂಆರ್‌ಪಿಎಲ್‌ ಪ್ರತಿ ತಿಂಗಳಿಗೆ ಸುಮಾರು 550 ಟನ್‌ಗಳಷ್ಟು ಡೀಸೆಲ್‌ ಉತ್ಪಾದಿಸುತ್ತದೆ. ಈ ಮೊದಲು 200 ಟನ್‌ಗಳನ್ನು ಡೀಸೆಲ್‌ ರಫ್ತಾಗುತ್ತಿತ್ತು. ಉಳಿದೆಲ್ಲ ಡೀಸೆಲ್‌ ದೇಶಿಯವಾಗಿ ಸರಬರಾಜು ಆಗುತ್ತಿತ್ತು. ದೇಶೀಯ ಪೂರೈಕೆ ಶೇ 65ರಷ್ಟಿದ್ದರೆ ವಿದೇಶಗಳಿಗೆ ರಫ್ತು ಶೇ 35 ಇತ್ತು. ಇದೀಗ ಎಂಆರ್‌ಪಿಎಲ್‌ನ ರಫ್ತು ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ. ಶೇ 35ರಷ್ಟಿದ್ದ ರಫ್ತು ಇದೀಗ ಶೇ 55ಕ್ಕೆ ಏರಿದೆ. ಉಳಿದ ಕೇವಲ ಶೇ 45ರಷ್ಟು ಮಾತ್ರ ದೇಶದಲ್ಲಿ ಬಳಕೆಯಾಗುತ್ತಿದೆ. ದೇಶದ ಐಒಸಿಎಲ್‌, ಎಚ್‌ಪಿಸಿಎಲ್‌, ಬಿಪಿಸಿಎಲ್‌ ಮತ್ತು ಎಂಆರ್‌ಪಿಎಲ್‌ ಔಟ್‌ಲೆಟ್‌ಗಳಿಗೆ ಎಂಆರ್‌ಪಿಎಲ್‌ನಿಂದ ಡೀಸೆಲ್‌ ಸರಬರಾಜಾಗುತ್ತಿದೆ.

ಕೆಲವು ತಿಂಗಳ ಹಿಂದೆ ನೀರಿನ ಸಮಸ್ಯೆಯಿಂದ ಎಂಆರ್‌ಪಿಎಲ್‌ನ ಯೂನಿಟ್‌ ಕಾರ್ಯ ಸ್ಥಗಿತಗೊಳಿಸಿತ್ತು. ಆ ಬಳಿಕ ಭಾರೀ ಮಳೆಯಿಂದಾಗಿ ಭೂಕುಸಿತ ಉಂಟಾಗಿದ್ದರಿಂದ ಡೀಸೆಲ್‌ ಸರಬರಾಜಿನಲ್ಲಿ ವ್ಯತ್ಯಯವಾಗಿತ್ತು. ಒಂದೆರಡು ತಿಂಗಳಿಂದ ಎಲ್ಲ ಘಟಕಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿವೆ. ಆದರೆ, ಪೆಟ್ರೋಲ್‌ಗೆ ದೇಶದಲ್ಲಿ ಬೇಡಿಕೆ ಹೆಚ್ಚಾಗಿಯೇ ಇದ್ದು, ರಫ್ತು ಮಾಡುವ ಅಗತ್ಯ ಕಂಡುಬಂದಿಲ್ಲ ಎಂದು ಎಂಆರ್‌ಪಿಎಲ್‌ನ ಮೂಲಗಳು ತಿಳಿಸಿವೆ.

ಅಮೆರಿಕಕ್ಕೂ ಮಂಗಳೂರಿನ ಡೀಸೆಲ್‌: ಸಿಂಗಾಪುರ, ಮಲೇಷ್ಯಾ ಸೇರಿದಂತೆ ವಿವಿಧ ದೇಶಗಳಿಗೆ ಸದ್ಯ ಎಂಆರ್‌ಪಿಎಲ್‌ ಡೀಸೆಲ್‌ ಪೂರೈಸುತ್ತಿದೆ. ಈಗ ಇದರ ಪ್ರಮಾಣ ಏರಿದೆ. ಯಾವ ದೇಶದ ತೈಲ ವ್ಯಾಪಾರ ಸಂಸ್ಥೆಗಳು ಬೇಡಿಕೆ ಸಲ್ಲಿಸುತ್ತವೆಯೋ ಅಲ್ಲಿಗೆ ಎಂಆರ್‌ಪಿಎಲ್‌ ಡೀಸೆಲ್‌ ಸರಬರಾಜು ಮಾಡುತ್ತಿದೆ. ವಿಶೇಷವೆಂದರೆ, ಒಮ್ಮೆ ಅಮೆರಿಕದ ಕಂಪನಿಗೂ ಎಂಆರ್‌ಪಿಎಲ್‌ ಡೀಸೆಲ್‌ ರಫ್ತು ಮಾಡಿದೆ.

ಪರಿಶೀಲನೆಯಲ್ಲಿ ವಿಸ್ತರಣಾ ಯೋಜನೆ: ಎಂಆರ್‌ಪಿಎಲ್ ವಿಸ್ತರಣೆ ಯೋಜನೆಗಳಿಗೆ ಅಗತ್ಯವಾದ ಕೆಲವು ದೀರ್ಘಕಾಲೀನ ಚಟುವಟಿಕೆಗಳನ್ನು ಪ್ರಾರಂಭಿಸಲಾಗಿದೆ. ಆದರೆ, ಈ ವಿಸ್ತರಣಾ ಯೋಜನೆಗಳ ಸಾಧಕ–ಬಾಧಕಗಳ ಕುರಿತು ಇನ್ನೂ ಪರಿಶೀಲನೆ ನಡೆಯುತ್ತಿದೆ ಎಂದು ಎಂಆರ್‌ಪಿಎಲ್‌ ಸ್ಪಷ್ಟಪಡಿಸಿದೆ.

ಎಂಆರ್‌ಪಿಎಲ್‌ನ ನಾಲ್ಕನೇ ಹಂತದ ವಿಸ್ತರಣೆಗಾಗಿ ಕೆಐಎಡಿಬಿ ಮೂಲಕ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದು, ಪ್ರಾಥಮಿಕ ಕಾರ್ಯ ಸಾಧ್ಯತೆಯ ಅಧ್ಯಯನ ವರದಿ ಸಿದ್ಧಪಡಿಸುವುದು. ಪರಿಸರ ಇಲಾಖೆಯ ಪರವಾನಗಿ ಪಡೆಯಲು ಅರ್ಜಿ ಸಲ್ಲಿಕೆ ಮಾಡುವ ಪ್ರಕ್ರಿಯೆಗಳು ನಡೆದಿವೆ. ಯೋಜನೆಯು ವಿವರವಾದ ತಾಂತ್ರಿಕ, ಆರ್ಥಿಕ ಕಾರ್ಯಸಾಧ್ಯತೆಯ ಕುರಿತು ಪರಿಶೀಲನೆ ಮಾಡಲಾಗುತ್ತಿದೆ. ಈ ಎಲ್ಲ ಚಟುವಟಿಕೆಗಳು, ಸರ್ಕಾರದ ಅನುಮತಿಯ ಬಳಿಕ ಸ್ಪಷ್ಟವಾಗಲಿವೆ.

ಪ್ರತಿಕ್ರಿಯಿಸಿ (+)