ಎಂಆರ್‌ಪಿಎಲ್‌ಗೆ ಇನ್ನು ಸಮುದ್ರದ ನೀರು

7
ಬೇಸಿಗೆಯ ನೀರಿನ ಬವಣೆ ನೀಗಿಸಿಕೊಳ್ಳಲು ₹ 467 ಕೋಟಿಯ ಯೋಜನೆ

ಎಂಆರ್‌ಪಿಎಲ್‌ಗೆ ಇನ್ನು ಸಮುದ್ರದ ನೀರು

Published:
Updated:
Prajavani

ಮಂಗಳೂರು: ಮಂಗಳೂರು ರಿಫೈನರಿ ಆಂಡ್‌ ಪೆಟ್ರೋಕೆಮಿಕಲ್ಸ್‌ ಲಿಮಿಟೆಡ್‌ (ಎಂಆರ್‌ಪಿಎಲ್‌) ಕಂಪನಿಯ ಬೇಸಿಗೆಯ ನೀರಿನ ಬವಣೆ ನಿವಾರಿಸುವ ಸಲುವಾಗಿ ಸಮುದ್ರದ ನೀರನ್ನು ಬಳಸುವ ಯೋಜನೆ ರೂಪುಗೊಂಡಿದ್ದು, ನವಮಂಗಳೂರು ಬಂದರು ಬಳಿ (ಎನ್‌ಎಂಪಿಟಿ) ನೀರು ಶುದ್ಧೀಕರಣ ಘಟಕ ಸ್ಥಾಪನೆಯಾಗಲಿದೆ.

₹ 467 ಕೋಟಿ ವೆಚ್ಚದ ನೀರು ಶುದ್ಧೀಕರಿಸುವ ಕಾಮಗಾರಿಯ ಗುತ್ತಿಗೆ ಬಹುರಾಷ್ಟ್ರೀಯ ಕಂಪನಿ ವಾ ಟೆಕ್‌ ವಬಾಗ್‌ ಪಾಲಾಗಿದ್ದು, ಪರಿಸರ ಅನುಮತಿ ದೊರೆತ ತಕ್ಷಣ ಕಾಮಗಾರಿ ಆರಂಭಿಸಲಿದೆ. 10 ವರ್ಷಗಳ ಕಾಲ ಸಮುದ್ರ ನೀರನ್ನು ಶುದ್ಧೀಕರಿಸುವ ಮತ್ತು ನಿರ್ವಹಿಸುವ ಹೊಣೆಗಾರಿಕೆಯನ್ನು ಸಹ ವಬಾಗ್‌ ಕಂಪನಿ ಹೊರಲಿದೆ ಎಂದು ಎಂಆರ್‌ಪಿಎಲ್‌ನ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

30 ಎಂಎಲ್‌ಡಿ ಸಮುದ್ರ ನೀರು ಶುದ್ಧೀಕರಿಸುವ ಸಾಮರ್ಥ್ಯದ ಯೋಜನೆ ಇದಾಗಿದ್ದು, ಇದನ್ನು 70 ಎಂಎಲ್‌ಡಿಗೆ ಹೆಚ್ಚಿಸುವುದೂ ಸಾಧ್ಯವಿದೆ. 22 ತಿಂಗಳಲ್ಲಿ ಯೋಜನೆ ಪೂರ್ಣಗೊಳ್ಳಲಿದೆ.

ಸಮುದ್ರದ ನೀರನ್ನು ಅತ್ಯಾಧುನಿಕ ತಂತ್ರಜ್ಞಾನದಿಂದ ಸಿಹಿನೀರಾಗಿ ಪರಿವರ್ತಿಸುವ ಯೋಜನೆ ಇದಾಗಿದ್ದು, ರಿವರ್ಸ್‌ ಓಸ್ಮಾಸಿಸ್‌, ಬ್ರಾಕಿಶ್‌ ವಾಟರ್‌ ರಿವರ್ಸ್‌ ಓಸ್ಮಾಸಿಸ್‌ ಮತ್ತು ಅಲ್ಟ್ರಾ ಫಿಲ್ಟ್ರೇಷನ್‌ ಪದ್ಧತಿಯನ್ನು ಇಲ್ಲಿ ಅಳವಡಿಸಲಾಗುತ್ತದೆ. ಈ ಯೋಜನೆಯಲ್ಲಿ ಎಂಆರ್‌ಪಿಎಲ್‌ನ ಘಟಕಕ್ಕೆ ನೀರು ಪೂರೈಸುವ 11 ಕಿ.ಮೀ.ಉದ್ದದ ಪೈಪ್‌ಲೈನ್‌ ಅಳವಡಿಸುವ ಕಾಮಗಾರಿಯೂ ಸೇರಿದೆ.

ಕಳೆದ ವರ್ಷ ಹೊರತುಪಡಿಸಿ ಈ ಹಿಂದೆ ಎಂಆರ್‌ಪಿಎಲ್‌ ಬಿರು ಬೇಸಿಗೆಯಲ್ಲಿ ಭಾರಿ ಪ್ರಮಾಣದಲ್ಲಿ ನೀರಿನ ಕೊರತೆ ಎದುರಿಸಿತ್ತು. ಯೋಜನಾ ಪ್ರದೇಶಕ್ಕೆ 16ರಿಂದ 18 ಎಂಜಿಡಿ ನೀರಿನ ಅಗತ್ಯ ಇದೆ. ಕಂಪನಿ ಸರಪಾಡಿ ಅಣೆಕಟ್ಟೆಯಿಂದ 10 ಎಂಜಿಡಿ, ಮಂಗಳೂರು ಮಹಾನಗರ ಪಾಲಿಕೆಯ ಕೊಳಚೆ ನೀರು ಶುದ್ಧೀಕರಣ ರೂಪದಲ್ಲಿ 6 ಎಂಜಿಡಿ ಹಾಗೂ ತನ್ನದೇ ಕೊಳಚೆ ನೀರು ಶುದ್ಧೀಕರಣದಿಂದ 2.5 ಎಂಜಿಡಿ ನೀರು ಪಡೆಯುತ್ತಿದೆ.

2012ರಲ್ಲಿ ನೀರಿನ ವಿಚಾರದಲ್ಲಿ ಜಿಲ್ಲಾಡಳಿತ ವಿರುದ್ಧ ಎದ್ದಿದ್ದ ಕಾನೂನು ಸಮರದಲ್ಲಿ ಎಂಆರ್‌ಪಿಎಲ್ ಗೆದ್ದಿತ್ತು. ಆದರೂ ಬಿರು ಬೇಸಿಗೆ ಕಾಲದಲ್ಲಿ ನೀರಿನ ಕೊರತೆಯಿಂದಾಗಿ ಮುಂದಿನ ವರ್ಷಗಳಲ್ಲಿ ಕಂಪನಿ ಕೆಲವು ದಿನಗಳ ಕಾಲ ತೈಲ ಶುದ್ಧೀಕರಣ ಘಟಕಗಳನ್ನು ಮುಚ್ಚಬೇಕಾಗಿ ಬಂದಿತ್ತು. ಇದೀಗ ಸಮುದ್ರ ನೀರನ್ನೇ ಬಳಸಿಕೊಳ್ಳಲು ಮುಂದಾಗುವ ಮೂಲಕ ವರ್ಷದ 365 ದಿನಗಳೂ ನೀರಿನ ಕೊರತೆ ಇರದೆ ತೈಲ ಶುದ್ಧೀಕರಣ ಕಾರ್ಯ ಮುಂದುವರಿಸುವ ಯೋಜನೆಯನ್ನು ಕಂಪನಿ ರೂಪಿಸಿದೆ.   

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !