ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳ್ತಂಗಡಿ | ಜೀವವನ್ನಷ್ಟೇ ಉಳಿಸಿಹೋದ ಮೃತ್ಯುಂಜಯ ನದಿ

ಬೆಳ್ತಂಗಡಿ ತಾಲ್ಲೂಕಿನ ಫರ್ಲಾನಿ ಗ್ರಾಮ
Last Updated 14 ಆಗಸ್ಟ್ 2019, 9:18 IST
ಅಕ್ಷರ ಗಾತ್ರ

ಚಾರ್ಮಾಡಿ (ಬೆಳ್ತಂಗಡಿ): ಕುದುರೆಮುಖದ ಘಟ್ಟ ಶ್ರೇಣಿಯಲ್ಲಿ ಹುಟ್ಟಿ, ಕೆಲವು ಕಿಲೋಮೀಟರ್‌ ಹರಿದು ನೇತ್ರಾವತಿಯೊಂದಿಗೆ ವಿಲೀನವಾಗುವ ಮೃತ್ಯುಂಜಯ ನದಿ ಭೂಕುಸಿತದಿಂದ ಉಕ್ಕಿ ಹರಿದ ಪರಿಣಾಮವಾಗಿ ಜನರ ಬದುಕನ್ನು ಸಂಕಷ್ಟದ ಕಡಲಲ್ಲಿ ಮುಳುಗಿಸಿದೆ. ಫರ್ಲಾನಿ, ಅಂತರ, ಕೊಳಂಬೆ, ಅರಣ್ಯಪಾದೆಯಯ ಹಲವರ ಜೀವವನ್ನಷ್ಟೇ ಉಳಿಸಿಹೋಗಿದೆ ಮಹಾ ಪ್ರವಾಹ.

ಮೃತ್ಯುಂಜಯ ನದಿ ಸಾಗುವ ಮಾರ್ಗದಲ್ಲಿನ ಹಳ್ಳಿಗಳಲ್ಲಿ ಈಗ ಅಕ್ಷರಶಃ ಸ್ಮಶಾನ ಮೌನ ಆವರಿಸಿದೆ. ಬೃಹದಾಕಾರದ ಮರದ ದಿಮ್ಮಿಗಳು, ಕಲ್ಲು ಬಂಡಗಳೊಂದಿಗೆ ಬಂದು ಅಪ್ಪಳಿಸಿದ ಪ್ರವಾಹ ನದಿ ತೀರದ ನೂರಾರು ಎಕರೆ ಕೃಷಿ ಜಮೀನನ್ನು ಧ್ವಂಸ ಮಾಡಿದೆ. ಕೆಲವು ಮನೆಗಳು ನೆಲಕ್ಕುರುಳಿದ್ದರೆ, ಹಲವು ಮನೆಗಳಲ್ಲಿ ನಾಲ್ಕರಿಂದ ಐದು ಅಡಿಗಳಷ್ಟು ಮರಳು, ಕೆಸರು ತುಂಬಿಕೊಂಡಿದೆ. ಈ ಕುಟುಂಬಗಳ ಬಳಿ ಉಟ್ಟ ಬಟ್ಟೆಯ ಹೊರತಾಗಿ ಏನೂ ಉಳಿದಿಲ್ಲ.

ಫರ್ಲಾನಿಯ ಕಿಟ್ಟುಗೌಡ ಎಂಬುವವರ ಮನೆ ಸಂಪೂರ್ಣ ಕುಸಿದುಬಿದ್ದಿದೆ. ಅನತಿ ದೂರದಲ್ಲಿ ಅವರು ಕಟ್ಟಿಸುತ್ತಿದ್ದ ಹೊಸ ಮನೆಗೂ ಹಾನಿಯಾಗಿದೆ. ಬಾಬು ಪೂಜಾರಿ ಮತ್ತು ದೇವು ಪೂಜಾರಿ ಎಂಬುವವರ ಮನೆಗಳು ಯಾವುದೇ ಕ್ಷಣದಲ್ಲೂ ಉರುಳುವಂತಿವೆ. ಅದೇ ಊರಿನ ರಮಾನಂದ, ಗಿರಿಜಾ, ಸುರೇಶ್‌ ಗೌಡ ಎಂಬುವವರ ಮನೆಗಳು ಕೆಸರು, ಮರಳಿನಿಂದ ಆವೃತವಾಗಿವೆ.

ಬೆಳ್ತಂಗಡಿ ತಾಲ್ಲೂಕಿನ ಚಾರ್ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಫರ್ಲಾನಿಯಲ್ಲಿ ಮೃತ್ಯುಂಜಯ ನದಿಯ ಪ್ರವಾಹದಲ್ಲಿ ಕೊಚ್ಚಿಹೋದ ಸೇತುವೆ. ಚಿತ್ರ: ಗೋವಿಂದರಾಜ ಜವಳಿ.
ಬೆಳ್ತಂಗಡಿ ತಾಲ್ಲೂಕಿನ ಚಾರ್ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಫರ್ಲಾನಿಯಲ್ಲಿ ಮೃತ್ಯುಂಜಯ ನದಿಯ ಪ್ರವಾಹದಲ್ಲಿ ಕೊಚ್ಚಿಹೋದ ಸೇತುವೆ. ಚಿತ್ರ: ಗೋವಿಂದರಾಜ ಜವಳಿ.

ಜೀವ ಮಾತ್ರ ಉಳಿಯಿತು: ‘ಶುಕ್ರವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಸುಂಕಸಾಲೆ ಕಡೆಯಲ್ಲಿ ಗುಡ್ಡ ಕುಸಿದ ಶಬ್ದ ಕೇಳಿದೆ. ಮಧ್ಯಾಹ್ನ 2.30ರ ಸುಮಾರಿಗೆ ಮರಗಳು, ಬಂಡೆಗಳನ್ನು ಹೊತ್ತು ಬಂದ ಮೃತ್ಯುಂಜಯ ನದಿಯ ಪ್ರವಾಹ ಸೇತುವೆಗೆ ಅಪ್ಪಳಿಸಿದೆ. ಮರದ ದಿಮ್ಮಿಗಳು ಸೇತುವೆಗೆ ಅಡ್ಡ ಸಿಲುಕಿದ್ದರಿಂದ ಅಣೆಕಟ್ಟೆಯಂತಾಯಿತು. ಉಕ್ಕಿದ ನದಿ ನಮ್ಮ ಜಮೀನು, ಮನೆಗಳತ್ತ ಹರಿಯಿತು. ಸಂಜೆಯ ಹೊತ್ತಿಗೆ ಜೀವದ ಹೊರತಾಗಿ ಏನೂ ಉಳಿಯಲಿಲ್ಲ’ ಎಂದು ಫರ್ಲಾನಿಯ ರಮಾನಂದ ಘಟನೆಯನ್ನು ವಿವರಿಸುತ್ತಲೇ ಕಣ್ಣೀರಾದರು.

‘ನಾನು ಕೆಲಸಕ್ಕೆ ಹೋಗಿದ್ದೆ. ನೆರೆಯ ಸುದ್ದಿ ತಿಳಿದು ಮನೆಗೆ ಬಂದೆ. ಎಲ್ಲರ ಮನೆಗಳೂ ಮುಳುಗಿದ್ದವು. ನೂರಾರು ಸಂಖ್ಯೆಯಲ್ಲಿ ಅಡಿಕೆ, ತೆಂಗಿನ ಮರಗಳು ಉರುಳಿಬಿದ್ದಿವೆ. ಬಹುತೇಕರು ಉಟ್ಟ ಬಟ್ಟೆಯಲ್ಲೇ ಪರಿಹಾರ ಕೇಂದ್ರ ಸೇರಿದ್ದೇವೆ. ಮನೆಯಲ್ಲಿದ್ದ ನಗದು, ಚಿನ್ನಾಭರಣ, ದಾಖಲೆಗಳು, ಆಹಾರ ಪದಾರ್ಥ ಎಲ್ಲವೂ ಪ್ರವಾಹದಲ್ಲಿ ಕೊಚ್ಚಿಹೋಗಿವೆ. ಮುಂದೆ ದಿಕ್ಕು ತೋಚದಂತಾಗಿದೆ’ ಎಂದರು.

400 ಎಕರೆ ಜಮೀನಿಗೆ ಹಾನಿ: ಪ್ರವಾಹದಲ್ಲಿ ತೇಲಿಬಂದ ಬೃಹದಾಕಾರದ ಮರಗಳು ಅಪ್ಪಳಿಸಿದ ಹೊಡೆತಕ್ಕೆ ನದಿಯ ಇಕ್ಕೆಲಗಳ ಜಮೀನುಗಳಲ್ಲಿದ್ದ ಸಾವಿರಾರು ಅಡಿಕೆ, ತೆಂಗಿನ ಮರಗಳು ಉರುಳಿಬಿದ್ದಿವೆ. ಅರಣ್ಯ ಭಾಗದಿಂದ ಕಿಲೋ ಮೀಟರ್‌ಗಟ್ಟಲೇ ತೇಲಿಬಂದ ಸಾವಿರಾರು ಮರದ ದಿಮ್ಮಿಗಳು ಸಿಪ್ಪೆ ಸುಲಿದು ಕೃಷಿ ಜಮೀನು, ಮನೆಗಳ ಮುಂದೆ ರಾಶಿಯಾಗಿಬಿದ್ದಿವೆ.

ಪ್ರವಾಹದ ಅಬ್ಬರಕ್ಕೆ ಕೊಳಂಬೆಯಲ್ಲಿದ್ದ ಕಿಂಡಿ ಅಣೆಕಟ್ಟೆ ಸಂಪೂರ್ಣವಾಗಿ ಕೊಚ್ಚಿಹೋಗಿದೆ. ಫರ್ಲಾನಿ, ಅಂತರ, ಕೊಳಂಬೆ, ಅರಣ್ಯಪಾದೆಯ 400 ಎಕರೆಗೂ ಹೆಚ್ಚಿನ ಕೃಷಿ ಜಮೀನಿಗೆ ಹಾನಿಯಾಗಿದೆ. ಜಮೀನುಗಳಲ್ಲಿ ಭಾರಿ ಪ್ರಮಾಣದ ಮರಳು ತುಂಬಿಕೊಂಡಿದ್ದು, ಉಳಿದಿರುವ ಅಡಿಕೆ ಮತ್ತು ತೆಂಗಿನ ಮರಗಳಿಗೂ ಕುತ್ತು ಬರುವ ಭೀತಿ ಎದುರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT