ಗುರುವಾರ , ಸೆಪ್ಟೆಂಬರ್ 19, 2019
22 °C
‘ಕುಮಾರಸ್ವಾಮಿ ಅವಕಾಶವಾದಿ, ದೇವೇಗೌಡರು ಸಮಾಜವಾದಿ’

ಮೂರುವರೆ ಕೋಟಿ ಪಡೆದು ನಾಮಪತ್ರ ವಾಪಸ್ ಪಡೆದ ಮುದ್ದಹನುಮೇಗೌಡ; ಆರೋಪ

Published:
Updated:

ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ಕೈತಪ್ಪಿ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಎಸ್.ಪಿ.ಮುದ್ದಹನುಮೇಗೌಡ ಮೂರುವರೆ ಕೋಟಿ ಹಣ ಪಡೆದು ನಾಮಪತ್ರ ವಾಪಸ್ ಪಡೆದಿದ್ದಾರೆ ಎಂದು ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಜಿಲ್ಲಾ ಸಂಚಾಲಕ ದರ್ಶನ್ ಎಂಬುವರು ಆರೋಪಿಸಿದ್ದಾರೆ.

ಈ ದರ್ಶನ್ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಆಪ್ತರು. ಪರಮೇಶ್ವರ ನಗರಕ್ಕೆ ಬಂದಾಗ, ಹೋಗುವಾಗ ಅವರೊಂದಿಗೆ ಕಾಣಿಸಿಕೊಳ್ಳುವ ವ್ಯಕ್ತಿ.

ಆಡಿಯೊದಲ್ಲೇನಿದೆ?
ದರ್ಶನ್ ಕಾರ್ಯಕರ್ತರೊಬ್ಬರ ಜೊತೆಗೆ ಮೊಬೈಲ್‌ನಲ್ಲಿ ಮಾತನಾಡಿದ ಸಂಭಾಷಣೆ ಆಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಹಾಲಿ ಸಂಸದರಾಗಿದ್ದ ಮುದ್ದಹನುಮೇಗೌಡರಿಗೆ ಟಿಕೆಟ್ ಕೈ ತಪ್ಪಿದ ಬಳಿಕ ಮುನಿಸಿಕೊಂಡು ಟಿಕೆಟ್‌ಗೆ ಪಟ್ಟು ಹಿಡಿದಿದ್ರರು. ಅವರನ್ನು ಮಾಜಿ ಶಾಸಕ ಕೆ.ಎನ್. ರಾಜಣ್ಣ ಬೆಂಬಲಿಸಿದರು. ಮೈತ್ರಿ ಅಭ್ಯರ್ಥಿ ವಿರುದ್ಧ ಇಬ್ಬರು ಬಂಡಾಯ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದರು. ತಲಾ ಮೂರುವರೆ ಕೋಟಿ ಪಡೆದು ನಾಮಪತ್ರ ವಾಪಸ್ ಪಡೆದಿದ್ದಾರೆ ಎಂದು ದರ್ಶನ್ ಆರೋಪಿಸಿದ್ದಾರೆ.

ಈಗ ಮೂರುವರೆ ಕೋಟಿ ಅಷ್ಟೆ. ಗೆದ್ದ ಬಳಿಕ ಮತ್ತೊಂದಿಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಮೂರುವರೆ ಕೋಟಿ ಹಣ ಪಡೆದ ಬಳಿಕ ಸುಮ್ಮನಿದ್ದು ಮೈತ್ರಿ ಅಭ್ಯರ್ಥಿ ಬೆಂಬಲಿಸಬೇಕಿತ್ತು. ಅದನ್ನು ಮಾಡಿಲ್ಲ. ದೇವೇಗೌಡರು ಸೋತರೆ ಕೆ.ಎನ್ ರಾಜಣ್ಣ ಪಕ್ಷದಿಂದ ಅಮಾನತು ಆಗುತ್ತಾರೆ. ಮುದ್ದಹನುಮೇಗೌಡರು ಟಾರ್ಗೆಟ್ ಆಗ್ತಾರೆ ಎಂದು ದರ್ಶನ್ ಹೇಳಿದ್ದಾರೆ.

ಮುದ್ದಹನುಮೇಗೌಡರಿಗೆ ಟಿಕೆಟ್ ಕೊಡಿಸಿ. ತುಮಕೂರಿಗೆ ಆಗದೇ ಇದ್ದರೆ ಬೆಂಗಳೂರು ಉತ್ತರಕ್ಕೆ ಕೊಡಿಸಿ ಎಂದು ನಮ್ಮ ಸಾಹೇಬ್ರಿಗೆ (ಡಾ.ಜಿ.ಪರಮೇಶ್ವರ ಅವರಿಗೆ) ಹೇಳಿದ್ದೆ. ಈ ಮನುಷ್ಯ (ಮುದ್ದ ಹನುಮೇಗೌಡ) ಅಲ್ಲಿಗೆ ಹೋಗಲೇ ಇಲ್ಲ. ಇಲ್ಲಿಯೇ ಸ್ಪರ್ಧಿಸಬೇಕು. ಗೆದ್ದರೆ ಮಂತ್ರಿಯಾಗುತ್ತೇನೆ ಎಂದುಕೊಂಡು ಬಿಟ್ಟ. ಮೂರುವರೆ ಕೋಟಿ ತಗೊಂಡು ಸುಮ್ಮನಾದ ಎಂದು ಆರೋಪಿಸಿರುವುದು ಆಡಿಯೊದಲ್ಲಿದೆ.

ಮುದ್ದಹನುಮೇಗೌಡ್ರು ಬರೀ ಈಗ ಹಣ ಪಡೆದಿಲ್ಲ. ದೊಡ್ಡ ದೊಡ್ಡ 170ಕ್ಕೂ ಹೆಚ್ಚು ಅಧಿಕಾರಿಗಳನ್ನು ವರ್ಗಾವಣೆ ಮಾಡಿಸಿ ಹಣ ಮಾಡಿದ್ದಾರೆ. ಮನುಷ್ಯ ಒಳ್ಳೆಯವ್ರು. ಕೆಲಸಾ ಮಾಡಿದ್ದಾರೆ, ಯೋಜನೆಗಳನ್ನು ತಂದಿದ್ದಾರೆ. ಆದರೆ, ವೈಯಕ್ತಿಕ ಲಾಭಗಳನ್ನೂ ಮಾಡಿಕೊಂಡಿದ್ದಾರೆ ಎಂದು ಕಾರ್ಯಕರ್ತರ ಮುಂದೆ ದರ್ಶನ್ ಆರೋಪಿಸಿದ್ದಾರೆ.

ದೇವೇಗೌಡ್ರು ಗೆದ್ದರೆ ನಮ್ಮ ಸಾಹೇಬ್ರು (ಡಾ.ಜಿ.ಪರಮೇಶ್ವರ) ಮುಖ್ಯಮಂತ್ರಿ ಆಗ್ತಾರೆ. ಎಚ್.ಡಿ.ರೇವಣ್ಣ ಉಪಮುಖ್ಯಮಂತ್ರಿ ಆಗ್ತಾರೆ. ಈಗಿನ ಸ್ಥಿತಿಯಲ್ಲಿ ಜೆಡಿಎಸ್ ನಲ್ಲಿ ಮುಖ್ಯಮಂತ್ರಿ ಆಗುವ ಅರ್ಹತೆಯುಳ್ಳವರೂ ಯಾರೂ ಇಲ್ಲ. ಎಚ್.ಡಿ.ಕುಮಾರಸ್ವಾಮಿಗೆ ಆರೋಗ್ಯ ಸಮಸ್ಯೆ ಇದೆ. ಹೀಗಾಗಿ ಅವ್ರು ಫುಲ್ ರೇಸ್‌ಗೆ ಹೋಗ್ತಾರೆ. ಕುಮಾರಸ್ವಾಮಿ ಅವಕಾಶವಾದಿ, ದೇವೇಗೌಡರು ಸಮಾಜವಾದಿ. ನಮ್ಮ ಸಾಹೇಬ್ರನ್ನ ಸಿಎಂ ಮಾಡ್ತಾರೆ ಎಂದು ದರ್ಶನ್ ಆಡಿಯೊದಲ್ಲಿ ಹೇಳಿಕೊಂಡಿದ್ದಾರೆ.

ರಮೇಶ್ ಜಾರಕಿಹೊಳಿ ನಿಂದಿಸಿದ್ದ: ಈ ದರ್ಶನ್ ಶಾಸಕ ರಮೇಶ್ ಜಾರಕಿಹೊಳಿ ಬಗ್ಗೆಯೂ ಸಾಮಾಜಿಕ ಜಾಲತಾಣದಲ್ಲಿ ನಿಂದಿಸಿದ್ದ. ಜಾರಕಿಹೊಳಿ ಬೆಂಬಲಿಗರು ಈತನನ್ನು ಹಿಡಿದು ತರಾಟೆಗೆ ತೆಗೆದುಕೊಂಡು ಹಲ್ಲೆ ಮಾಡಲು ಮುಂದಾದಾಗ ಕೈ ಮುಗಿದು ಕ್ಷಮೆಯಾಚಿಸಿದ್ದ. ಕ್ಷಮೆ ಯಾಚಿಸಿದ್ದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.

Post Comments (+)