ಮಲಪ್ರಭಾ, ಮುಳವಾಡ ಯೋಜನೆಗಳ ಕಾಮಗಾರಿ: ಗುತ್ತಿಗೆದಾರರು ಕಪ್ಪುಪಟ್ಟಿಗೆ

7
ಸಚಿವ ಡಿಕೆಶಿ ವಿರುದ್ಧ ‘ಕಮಿಷನ್‌’ ಆರೋಪಕ್ಕೆ ಇದು ಕಾರಣವೇ?; ಮಲಪ್ರಭಾ, ಮುಳವಾಡ ಯೋಜನೆಗಳ ಕಾಮಗಾರಿ

ಮಲಪ್ರಭಾ, ಮುಳವಾಡ ಯೋಜನೆಗಳ ಕಾಮಗಾರಿ: ಗುತ್ತಿಗೆದಾರರು ಕಪ್ಪುಪಟ್ಟಿಗೆ

Published:
Updated:

ಬೆಂಗಳೂರು: ಮುಳವಾಡ ಏತ ನೀರಾವರಿ ಹಾಗೂ ಮಲಪ್ರಭಾ ಆಧುನೀಕರಣ ಯೋಜನೆಗಳ ಕಾಮಗಾರಿ ಗುಣಮಟ್ಟ ಕಳಪೆಯಾಗಿದೆ ಎಂಬ ಕಾರಣ ನೀಡಿ ಹಿರಿಯ ಎಂಜಿನಿಯರ್‌ಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಹಾಗೂ ಇಬ್ಬರು ‘ಪ್ರಭಾವಿ’ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಜಲಸಂಪನ್ಮೂಲ ಇಲಾಖೆ ಮುಂದಾಗಿದೆ.

ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಹಾಗೂ ಇಲಾಖೆ ಕಾರ್ಯದರ್ಶಿ ಜಯಪ್ರಕಾಶ್‌ ಅವರು ಜೂನ್‌ 24ರಂದು ಈ ಕಾಮಗಾರಿಗಳ ಪರಿಶೀಲನೆ ನಡೆಸಿದ್ದರು. ಸಚಿವರ ನಿರ್ದೇಶನದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಇಲಾಖೆ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

‘ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದ ₹10,000 ಕೋಟಿ ಮೌಲ್ಯದ ಕಾಮಗಾರಿಗಳ ಬಿಲ್‌ ಪಾವತಿಯಾಗಿಲ್ಲ. ಹಿಂದಿನ ಅವಧಿಯಲ್ಲಿ ಕಮಿಷನ್ ಕೊಟ್ಟಿದ್ದರೂ ಬಾಕಿ ಪಾವತಿಗೆ ಕಮಿಷನ್‌ ಕೊಡಬೇಕು ಎಂದು ಸಚಿವರು ಷರತ್ತು ವಿಧಿಸುತ್ತಿದ್ದಾರೆ. ಅಲ್ಲಿಯವರೆಗೆ ಬಿಲ್ ಪಾವತಿ ಮಾಡಬೇಡಿ ಎಂದು ಮೌಖಿಕ ಸೂಚನೆ ನೀಡಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಶುಕ್ರವಾರ ಆರೋಪಿಸಿದ್ದರು. ‘ಈ ಬಗ್ಗೆ ಬಹಿರಂಗ ಚರ್ಚೆಗೆ ಬನ್ನಿ’ ಎಂದು ಡಿ.ಕೆ.ಶಿವಕುಮಾರ್‌ ತೀಕ್ಷ್ಮವಾಗಿ ಪ್ರತಿಕ್ರಿಯಿಸಿದ್ದರು.

‘ಸಚಿವ ಶಿವಕುಮಾರ್ ಒತ್ತಡ ವಿಪರೀತವಾಗಿದೆ. ನೀವೇ ದಾರಿ ತೋರಿಸಿ ಎಂದು ಗುತ್ತಿಗೆದಾರರು ಯಡಿಯೂರಪ್ಪ ಅವರಿಗೆ ದಾಖಲೆಗಳನ್ನು ನೀಡಿದ್ದರು. ಅದರ ಆಧಾರದಲ್ಲೇ ನಮ್ಮ ನಾಯಕರು ಆರೋಪ ಮಾಡಿದ್ದರು’ ಎಂದು ಯಡಿಯೂರಪ್ಪ ಆಪ್ತ ಮೂಲಗಳು ತಿಳಿಸಿವೆ.

‘ಕಾಮಗಾರಿ ತೃಪ್ತಿಕರವಾಗಿಲ್ಲ ಎಂದು ಸೂಪರಿಂಟೆಂಡಿಂಗ್‌ ಎಂಜಿನಿಯರ್‌ (ಗುಣಮಟ್ಟ) ಅವರು 2016ರ ಜನವರಿ 13ರಂದು ವರದಿ ನೀಡಿದ್ದರು. ಆ ಬಳಿಕ ಇಲಾಖೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಕಿರಿಯ ಹಂತದ ಅಧಿಕಾರಿಗಳ ಮೇಲೆ ಚಾಟಿ ಬೀಸುವ ನಾಟಕ ನಡೆಸಲಾಗಿತ್ತು. ಈಗ ಏಕಾಏಕಿ ಗುತ್ತಿಗೆದಾರ ಹಾಗೂ ಹಿರಿಯ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ಮುಂದಾಗಿರುವುದು ಅನುಮಾನ ಮೂಡಿಸಿದೆ’ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಮುಳವಾಡ ಯೋಜನೆಗೆ ಸಂಬಂಧಿಸಿದಂತೆ ಸೂಪರಿಂಟೆಂಡಿಂಗ್‌ ಎಂಜಿನಿಯರ್ ಪಿ.ಎನ್‌.ಕುಲಕರ್ಣಿ (ಬಸವನಬಾಗೇವಾಡಿ), ಕಾರ್ಯಪಾಲಕ ಎಂಜಿನಿಯರ್‌ (ಮಟ್ಟಿಹಾಳ ಉಪವಿಭಾಗ) ಭರತ್‌ ಕಾಂಬ್ಳೆ, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ (ಮಟ್ಟಿಹಾಳ) ಕೆ.ಎಸ್‌.ಮೋಹನ್‌ ಕುಮಾರ್‌ ಅವರಿಗೆ ಇದೇ 26ರಂದು ನೋಟಿಸ್‌ ನೀಡಲಾಗಿದ್ದು, ಮೂರು ದಿನಗಳಲ್ಲಿ ಉತ್ತರ ನೀಡುವಂತೆ ಸೂಚಿಸಲಾಗಿದೆ.

‘ನಿರ್ಮಾಣ ಹಂತದಲ್ಲೇ ಅಧಿಕಾರಿಗಳು ತಮ್ಮ ಕರ್ತವ್ಯದಲ್ಲಿ ಉದಾಸೀನ ತೋರಿದ್ದಾರೆ. ಈ ವಿಷಯದ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ಎಂಜಿನಿಯರ್‌ಗಳಿಗೆ ತಕ್ಷಣವೇ ನೋಟಿಸ್‌ ನೀಡಿ ಶಿಸ್ತುಕ್ರಮ ಕೈಗೊಳ್ಳಬೇಕು. ಗುತ್ತಿಗೆದಾರರ ಮೇಲೆ ದಂಡನಾತ್ಮಕ ಕ್ರಮ ಕೈಗೊಳ್ಳಬೇಕು’ ಎಂದು ಕೃಷ್ಣ ಜಲಭಾಗ್ಯ ನಿಗಮದ ಮುಖ್ಯ ಎಂಜಿನಿಯರ್ (ಆಲಮಟ್ಟಿ ಅಣೆಕಟ್ಟು ವಲಯ) ಎಸ್‌.ಎಚ್‌.ಮಂಜಪ್ಪ ಅವರಿಗೆ ನಿರ್ದೇಶನ ನೀಡಲಾಗಿದೆ.

‘ನಿಮ್ಮನ್ನು ಏಕೆ ಕಪ್ಪುಪಟ್ಟಿಗೆ ಸೇರಿಸಬಾರದು’ ಎಂದು ಪ್ರಶ್ನಿಸಿ, ಗುತ್ತಿಗೆದಾರ ಸಂಸ್ಥೆ ಹೈದರಾಬಾದ್‌ನ ‘ಮೆಗಾ ಎಂಜಿನಿಯರಿಂಗ್ ಆ್ಯಂಡ್‌ ಇನ್‌ ಫ್ರಾಸ್ಟ್ರಕ್ಚರ್‌ ಲಿಮಿಟೆಡ್‌’ಗೆ ಎಂಬ ನೋಟಿಸ್‌ ನೀಡಲಾಗಿದೆ.

‘ಮೂರನೇ ಹಂತದ ಕಾಮಗಾರಿ ಮೊತ್ತ ₹ 425.70 ಕೋಟಿ. ಈ ಕಾಮಗಾರಿಗೆ 2012ರ ಜನವರಿಯಲ್ಲಿ ಚಾಲನೆ ನೀಡಲಾಗಿತ್ತು. 2016ರ ಮಾರ್ಚ್‌ ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂಬ ಗಡುವು ನೀಡಲಾಗಿತ್ತು. ಕೆಲಸ ಮಂದಗತಿಯಲ್ಲಿ ಸಾಗಿದ್ದು, ಕಳಪೆ ಗುಣಮಟ್ಟದಿಂದ ಕೂಡಿದೆ. ಕಾಮಗಾರಿ ತೃಪ್ತಿಕರವಾಗಿಲ್ಲ ಎಂದು ಸೂಪರಿಂಟೆಂಡಿಂಗ್‌ ಎಂಜಿನಿಯರ್ (ಗುಣಮಟ್ಟ ನಿಯಂತ್ರಣ) 2016ರಲ್ಲೇ ವರದಿ ನೀಡಿದ್ದರು. ಆ ಬಳಿಕವೂ ಗುಣಮಟ್ಟದಲ್ಲಿ ಸುಧಾರಣೆ ಆಗಿಲ್ಲ. ಗುತ್ತಿಗೆ ನಿಯಮಗಳನ್ನು ಉಲ್ಲಂಘಿಸಲಾಗಿದೆ’ ಎಂದೂ ತಿಳಿಸಲಾಗಿದೆ.

ಅದೇ ರೀತಿಯಲ್ಲಿ, ಮಲಪ್ರಭಾ ಯೋಜನೆಗೆ ಸಂಬಂಧಿಸಿದಂತೆ ಎಂಜಿನಿಯರ್‌ಗಳಿಗೆ ಹಾಗೂ ಗುತ್ತಿಗೆದಾರ ಡಿ.ವೈ.ಉಪ್ಪಾರ ಅವರಿಗೆ ನೋಟಿಸ್‌ ನೀಡಲಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

‘ಇಲಾಖೆಯು ₹100 ಕೋಟಿಗಿಂತ ಹೆಚ್ಚಿನ ಮೊತ್ತದ ಕಾಮಗಾರಿಗಳ ಪರಿಶೀಲನೆ ಆರಂಭಿಸಿದೆ. ಕಳಪೆ ಕಾಮಗಾರಿ ಎಂಬ ನೆಪ ನೀಡಿ ಗುತ್ತಿಗೆದಾರರಿಗೆ ಬೆದರಿಕೆ ಒಡ್ಡಲಾಗುತ್ತಿದೆ. ಇದನ್ನು ಖಂಡಿಸಿ ಕಾಮಗಾರಿ ಸ್ಥಗಿತಗೊಳಿಸಲು ಚಿಂತನೆ ನಡೆಸಿದ್ದೇವೆ’ ಎಂದು ಗುತ್ತಿಗೆದಾರರ ಸಂಘದ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !