ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆಗೆ ತಯಾರಿ: ಬಿಎಸ್‌ವೈ 15 ದಿನ ಪ್ರವಾಸ

Last Updated 17 ಫೆಬ್ರುವರಿ 2019, 20:30 IST
ಅಕ್ಷರ ಗಾತ್ರ

ಬೆಂಗಳೂರು: ‘ಮೈತ್ರಿ ಸರ್ಕಾರ ಪತನಗೊಳಿಸುವ ಕಾರ್ಯತಂತ್ರವನ್ನು ಸದ್ಯಕ್ಕೆ ಬದಿಗೆ ಸರಿಸಿರುವ ಬಿಜೆಪಿ ರಾಜ್ಯ ಘಟಕ, ಲೋಕಸಭಾ ಚುನಾವಣೆಯತ್ತ ಕಣ್ಣು ನೆಟ್ಟಿದೆ.

ತಿಂಗಳ ಅಂತ್ಯದಲ್ಲಿ ರಾಜ್ಯ ಪ್ರವಾಸ ಮಾಡಲು ಪಕ್ಷದ ಬಿ.ಎಸ್‌.ಯಡಿಯೂರಪ್ಪ ಸನ್ನದ್ಧರಾಗಿದ್ದಾರೆ.

ಕಳೆದ 2–3 ತಿಂಗಳಿಂದ ಸರ್ಕಾರವನ್ನು ಪತನಗೊಳಿಸುವ ಯತ್ನದಲ್ಲೇ ಕಮಲ ಪಡೆ ತೊಡಗಿತ್ತು. ಇದಕ್ಕೆ ಪಕ್ಷದ ವಲಯದಲ್ಲೇ ಟೀಕೆ ವ್ಯಕ್ತವಾಗಿತ್ತು. ಇದೇ ಧೋರಣೆ ಮುಂದುವರಿಸಿದರೆ ಕಳೆದ ಸಲ ಗೆದ್ದಿರುವ 17 ಸ್ಥಾನಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

‘ಆಪರೇಷನ್‌ ಆಡಿಯೊ’ ಪ್ರಕರಣದಿಂದ ಪಕ್ಷದ ವರ್ಚಸ್ಸಿಗೆ ಹೊಡೆತ ಬಿದ್ದಿದೆ. ಈ ಪ್ರಕರಣ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲೇ ಬಯಲಿಗೆ ಬಂದಿತ್ತು. ಈ ಆಡಿಯೊದಿಂದ ಅವರು ಮುಜುಗರ ಪಟ್ಟುಕೊಳ್ಳುವಂತಾಗಿತ್ತು. ಲೋಕಸಭಾ ಚುನಾವಣೆ ಮುಗಿಯುವ ವರೆಗೆ ಸರ್ಕಾರವನ್ನು ಪತನಗೊಳಿಸುವ ಪ್ರಯತ್ನ ಕೈಬಿಡಿ ಎಂಬುದಾಗಿ ಪಕ್ಷದ ವರಿಷ್ಠರು ನಿರ್ದೇಶನ ನೀಡಿದ್ದಾರೆ ಎಂದು ಪಕ್ಷದ ನಾಯಕರೊಬ್ಬರು ವಿಶ್ಲೇಷಿಸಿದರು.

‘ಯಡಿಯೂರಪ್ಪ ಅವರು 15 ದಿನಗಳು ಪ್ರವಾಸ ಮಾಡಲಿದ್ದು, ಮೈತ್ರಿ ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸಲಿದ್ದಾರೆ. ಮೈತ್ರಿ ಸರ್ಕಾರದ ಯೋಜನೆಗಳು ನಾಲ್ಕು ಜಿಲ್ಲೆಗಳಿಗೆ ಸೀಮಿತವಾಗಿದ್ದು, ಈ ಬಗ್ಗೆಯೂ ವ್ಯಾಪಕ ಜನಾಂದೋಲನ ರೂಪಿಸಲಾಗುತ್ತದೆ. ರಾಜ್ಯದಲ್ಲಿ ಅಭದ್ರ ಸರ್ಕಾರ ಇದೆ ಎಂಬ ಭಾವನೆಯನ್ನು ಬಿಂಬಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದ್ದು, ಇನ್ನಷ್ಟು ಪ್ರಚಾರ ಮಾಡಿದರೆ ಲೋಕಸಭಾ ಚುನಾವಣೆಯಲ್ಲಿ ‘ಮಿಷನ್‌–20’ ಗುರಿ ತಲುಪಬಹುದು’ ಎಂದು ಅವರು ಹೇಳಿದರು.

ಮೋದಿ ರ್‍ಯಾಲಿ

ಕಲಬುರ್ಗಿ: ‘ನರೇಂದ್ರ ಮೋದಿ ಅವರು ಮಾರ್ಚ್‌ 1ರಂದು ಮಧ್ಯಾಹ್ನ 2ಕ್ಕೆ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ. ಹೈದರಾಬಾದ್‌ ಕರ್ನಾಟಕ ಭಾಗದಿಂದ 1.5 ಲಕ್ಷ ಜನ ಸೇರುವ ನಿರೀಕ್ಷೆ ಇದೆ’ ಎಂದು ಶಾಸಕ ಆರ್‌.ಅಶೋಕ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT