ಭಾನುವಾರ, ನವೆಂಬರ್ 17, 2019
24 °C

ಮೂರುಸಾವಿರ ಮಠ: ಉತ್ತರಾಧಿಕಾರಿ ಆಯ್ಕೆ ಚರ್ಚೆ ಮತ್ತೆ ಮುನ್ನೆಲೆಗೆ

Published:
Updated:

ಹುಬ್ಬಳ್ಳಿ: ಇಲ್ಲಿನ ಪ್ರತಿಷ್ಠಿತ ಮೂರುಸಾವಿರ ಮಠದ ಉತ್ತರಾಧಿಕಾರಿಯನ್ನಾಗಿ ಬಾಲೇಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಅವರನ್ನು ಆಯ್ಕೆ ಮಾಡಬೇಕು ಎಂಬ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.

ಉತ್ತರಾಧಿಕಾರಿ ಆಯ್ಕೆಗೆ ಸಂಬಂಧಿಸಿದಂತೆ ಕೆಲವು ಮಠಾಧೀಶರು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದಾರೆ ಎಂಬ ಸುದ್ದಿಯಿಂದಾಗಿ ಬೆಳಿಗ್ಗೆಯಿಂದಲೇ ಅನೇಕ ಭಕ್ತರು ಮಠಕ್ಕೆ ಭೇಟಿ ನೀಡಿ ಶ್ರೀಗಳೊಂದಿಗೆ ಚರ್ಚೆ ನಡೆಸಿದರು.

‘ಈ ಸಂಬಂಧ ಹತ್ತಕ್ಕೂ ಹೆಚ್ಚು ಮಠಾಧೀಶರು ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದಾರೆ. ಅವರು, ಕಾನೂನು ಸಲಹೆಗಾರ ಮೋಹನ ಲಿಂಬಿಕಾಯಿ ಅವರ ಗಮನಕ್ಕೆ ತಂದು, ಮುಂದೇನು ಮಾಡಬಹುದು ಎಂಬುದರ ಬಗ್ಗೆ ಚರ್ಚಿಸಿದ್ದಾರೆ. ಇದನ್ನು ನನಗೂ ಯಾರೊ ತಿಳಿಸಿದರು’ ಎಂದು ಮಠದ ಉನ್ನತ ಸಮಿತಿ ಸದಸ್ಯ ಬಸವರಾಜ ಹೊರಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಉತ್ತರಾಧಿಕಾರಿ ಆಯ್ಕೆಯನ್ನು ಮಠದ ಉನ್ನತ ಸಮಿತಿಯಲ್ಲಿ ನಿರ್ಧರಿಸಬೇಕು. ಆದರೆ, ಅಂತಹ ಯಾವುದೇ ಪ್ರಸ್ತಾವ ಸಮಿತಿಯ ಮುಂದೆ ಬಂದಿಲ್ಲ’ ಎಂದು ಅವರು ಹೇಳಿದರು.

‘ಈ ವಿಷಯ ಕುರಿತು ಯಡಿಯೂರಪ್ಪ ನನ್ನ ಜತೆ ಚರ್ಚಿಸಿಲ್ಲ. ಸ್ವಾಮೀಜಿಗಳು ಅವರ ಬಳಿಗೆ ಹೋಗಿರುವ ವಿಷಯವೂ ಗೊತ್ತಿಲ್ಲ’ ಎಂದು ಸಮಿತಿಯ ಸದಸ್ಯರೂ ಆದ ಲಿಂಬಿಕಾಯಿ ವಿವರಿಸಿದರು.

‘ಈಗ ಶ್ರೀಗಳು ಮಠವನ್ನು ಉತ್ತಮವಾಗಿಯೇ ನಡೆಸಿಕೊಂಡು ಹೋಗುತ್ತಿದ್ದಾರೆ. ಹಾಗಾಗಿ, ಉತ್ತರಾಧಿಕಾರಿ ಆಯ್ಕೆಯ ಪ್ರಶ್ನೆ ಬರುವುದಿಲ್ಲ. ಅನಗತ್ಯವಾಗಿ ನನ್ನ ಹೆಸರು ತರಲಾಗುತ್ತಿದೆ’ ಎಂದು ಸಮಿತಿಯ ಮತ್ತೊಬ್ಬ ಸದಸ್ಯ, ಸಚಿವ ಜಗದೀಶ ಶೆಟ್ಟರ್ ಹೇಳಿದರು.

ಅವರನ್ನೇ ಕೇಳಿ
‘ಉತ್ತರಾಧಿಕಾರಿ ಆಯ್ಕೆಯ ಬಗೆಗೆ ಯಾರು ಸುದ್ದಿ ಹಬ್ಬಿಸಿದ್ದಾರೋ, ಅವರನ್ನೇ ಕೇಳಿ’ ಎಂದು ಮೂರುಸಾವಿರ ಮಠದ ಪೀಠಾಧಿಪತಿ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.

‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ಅದು ಒಬ್ಬರೇ ಮಾಡುವ ಕೆಲಸವಲ್ಲ. ಸಮಿತಿಯಲ್ಲಿ ತೀರ್ಮಾನವಾಗಬೇಕು. ಅದರ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಎಲ್ಲವೂ ದೇವರ ಇಚ್ಛೆಯಂತೆ ನಡೆಯುತ್ತದೆ’ ಎಂದರು.

ಪ್ರತಿಕ್ರಿಯಿಸಿ (+)