ಕೊಲೆ ರಹಸ್ಯ ಬಯಲು ಮಾಡಿದ ‘ಜೈ ಶ್ರೀರಾಮ್‌’ ಹಚ್ಚೆ!

7
₹ 50 ಲಕ್ಷ ವಿಮೆ ಹಣ ಲಪಟಾಯಿಸಲು ತನ್ನನ್ನೇ ಹೋಲುವ ಅಮಾಯಕನ ಕೊಲೆ ಮಾಡಿದ ಆರೋಪಿ

ಕೊಲೆ ರಹಸ್ಯ ಬಯಲು ಮಾಡಿದ ‘ಜೈ ಶ್ರೀರಾಮ್‌’ ಹಚ್ಚೆ!

Published:
Updated:

ಹುಬ್ಬಳ್ಳಿ: ತನ್ನ ಹೆಸರಿನಲ್ಲಿರುವ ₹50 ಲಕ್ಷ ವಿಮಾ ಮೊತ್ತವನ್ನು ಲಪಟಾಯಿಸಲು ತನ್ನಂತೆ ಹೋಲುವ ವ್ಯಕ್ತಿಯೊಬ್ಬನನ್ನು ಸ್ನೇಹಿತನ ಜತೆ ಸೇರಿ ಕೊಲೆ ಮಾಡಿ, ತಾನೇ ಸತ್ತು ಹೋಗಿದ್ದೇನೆ ಎಂದು ಬಿಂಬಿಸಲು ಯತ್ನಿಸಿದ ಪ್ರಕರಣ ಒಂದೇ ದಿನದಲ್ಲಿ ಬಯಲಾಗಿದೆ.

ಗೋಕುಲ ಗ್ರಾಮದ ನಿವಾಸಿ ಸಂಜೀವ ಕುಮಾರ ಬೆಂಗೇರಿ ಎಂಬಾತ ಎಚ್‌ಡಿಎಫ್‌ಸಿ ಬ್ಯಾಂಕಿನಲ್ಲಿ ಜೀವ ವಿಮೆ ಮಾಡಿಸಿದ್ದನು. ಅಪಘಾತದಲ್ಲಿ ಸಾವಿಗೀಡಾಗಿದ್ದೇನೆ ಎಂದು ಬಿಂಬಿಸಿದರೆ ವಿಮೆ ಹಣ ಸಿಗಲಿದೆ ಎಂಬ ದುರಾಸೆಯಿಂದ ಈ ಕೃತ್ಯ ಎಸಗಿದ್ದಾನೆ.

‘ಸ್ನೇಹಿತ ಮಹಾಂತೇಶ ದುಗ್ಗಾಣಿ ಜತೆ ಸೇರಿ ಮಂಗಳವಾರ ಈ ಕೊಲೆ ಮಾಡಿದ್ದಾನೆ. ಬಳಿಕ ಶವಕ್ಕೆ ತನ್ನ ಪ್ಯಾಂಟ್‌, ಶರ್ಟ್‌ ತೊಡಿಸಿದ್ದಾನೆ. ಆ ನಂತರ ಗೋಕುಲ ರಸ್ತೆಯ ರೇವಡಿಹಾಳ ಸೇತುವೆ ಬಳಿ ತನ್ನ ಬೈಕ್‌ ಮತ್ತು ಶವವನ್ನು ಎಸೆದು, ಅಪಘಾತ ನಡೆದಿರುವಂತೆ ಬಿಂಬಿಸಿದ್ದಾನೆ. ಶವದ ಗುರುತು ಸಿಗದಂತೆ ಯುವಕನ ಮುಖವನ್ನು ಜಜ್ಜಿ ಹಾಕಿ, ಪರಾರಿಯಾಗಿದ್ದಾನೆ’ ಎಂದು ಪೊಲೀಸ್‌ ಕಮಿಷನರ್‌ ಎಂ.ಎನ್‌. ನಾಗರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆರೋಪಿ ಸಂಜೀವನ ಸಹೋದರ ಮಂಜು ಬೆಂಗೇರಿ ಅವರು ‘ನನ್ನ ತಮ್ಮ ಅಪಘಾತದಲ್ಲಿ ಸತ್ತಿಲ್ಲ. ಯಾರೋ ಕೊಲೆ ಮಾಡಿದ್ದಾರೆ’ ಎಂದು ಗೋಕುಲ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಇನ್‌ಸ್ಪೆಕ್ಟರ್‌ ದಿಲೀಪ್‌ ನಿಂಬಾಳ್ಕರ್‌ ಸ್ಥಳಕ್ಕೇ ಭೇಟಿ ನೀಡಿ ಪರಿಶೀಲಿಸಿದಾಗ, ಸುಸ್ಥಿತಿಯಲ್ಲಿದ್ದ ಬೈಕ್‌ ಮತ್ತು ಶವದ ಮುಖ ಜಜ್ಜಿರುವುದನ್ನು ಗಮನಿಸಿ ಇದು ಅಪಘಾತವಲ್ಲ, ಕೊಲೆ ಎಂಬುದನ್ನು ತನಿಖೆಯಿಂದ ಮನಗಂಡಿದ್ದರು’ ಎಂದು ಹೇಳಿದರು.

‘ಘಟನೆ ನಡೆದ ಮರುದಿನ ಬುಧವಾರ ಕಿಮ್ಸ್‌ ಆಸ್ಪತ್ರೆಯಲ್ಲಿ ಶವ ಪರೀಕ್ಷೆಗೆ ವೈದ್ಯರು ಮುಂದಾದಾಗ ಸ್ಥಳದಲ್ಲಿದ್ದ ಮಂಜು ಬೆಂಗೇರಿ ಅವರು ಇದು ನನ್ನ ತಮ್ಮನ ದೇಹವಲ್ಲ. ಆತನ ಕೈಮೇಲೆ ಜೈ ಶ್ರೀರಾಮ್‌ ಎಂಬ ಹಚ್ಚೆ ಇತ್ತು. ಆದರೆ, ಈ ಶವದ ಕೈ ಮೇಲೆ ಅದು ಇಲ್ಲ ಎಂದು ಅನುಮಾನಪಟ್ಟರು. ಇದು ಕೊಲೆ ಪ್ರಕರಣ ಪತ್ತೆಯಾಗಲು ನೆರವಾಯಿತು’ ಎಂದು ಅವರು ವಿವರಿಸಿದರು.

‘ತಲೆ ಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ನಡೆದಿದೆ. ಕೊಲೆಯಾದ ಅಮಾಯಕ ವ್ಯಕ್ತಿ ಯಾರೆಂದು ಇದುವರೆಗೂ ಗೊತ್ತಾಗಿಲ್ಲ. ಆರೋಪಿಗಳು ಸಿಕ್ಕ ನಂತರ ಮಾಹಿತಿ ಲಭಿಸಲಿದೆ’ ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 4

  Frustrated
 • 3

  Angry

Comments:

0 comments

Write the first review for this !