ಭಾನುವಾರ, ಜನವರಿ 19, 2020
24 °C

ಬಿಲ್ಲವ – ಮುಸ್ಲಿಂ ಸಮಾವೇಶ: ದಿನೇಶ್ ಅಮಿನ್ ಮಟ್ಟುಗೆ ಕೊಲೆ ಬೆದರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: ಪುಣೆ ಬಿಲ್ಲವ ಸಂಘದ ಅಧ್ಯಕ್ಷ ಎನ್ನಲಾದ ವಿಶ್ವನಾಥ್ ಪೂಜಾರಿ ಕಡ್ತಲ ಎಂಬವರು ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ತನಗೆ ಹಾಗೂ ವಿನಯ್‌ಕುಮಾರ್ ಸೊರಕೆ ಅವರಿಗೆ ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಿ ಹಿರಿಯ ಪತ್ರಕರ್ತ ದಿನೇಶ ಅಮೀನ್‌ ಮಟ್ಟು ಅವರು ಡಿ.ಜೆ.ಹಳ್ಳಿ ಠಾಣೆಗೆ ದೂರು ನೀಡಿದ್ದಾರೆ.

‘ಉಡುಪಿಯಲ್ಲಿ ಇದೇ 11ರಂದು ನಡೆದಿದ್ದ ಬಿಲ್ಲವ– ಮುಸ್ಲಿಂ ಸ್ನೇಹ ಸಮಾವೇಶದ ಅಧ್ಯಕ್ಷತೆಯನ್ನು ವಿನಯ್‌ಕುಮಾರ್ ಸೊರಕೆ ವಹಿಸಿದ್ದರು. ನಾನು ಮುಖ್ಯ ಭಾಷಣಕಾರನಾಗಿದ್ದೆ. ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ನೋಡಿ ಜನವರಿ 4ರಂದು ಕರೆ ಮಾಡಿದ್ದ ವಿಶ್ವನಾಥ್ ಪೂಜಾರಿ ಕಡ್ತಲ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಕಾರ್ಯಕ್ರಮವನ್ನು ನಿಲ್ಲಿಸದಿದ್ದರೆ, ನನ್ನ ಹಾಗೂ ವಿನಯ್ ಕುಮಾರ್ ಸೊರಕೆಯ ಎದೆಗೆ ಗುಂಡಿಟ್ಟು ಕೊಲೆ ಮಾಡುವುದಾಗಿ ಜೀವ ಬೆದರಿಕೆಯೊಡ್ಡಿದ್ದರು’ ಎಂದು ದೂರಿನಲ್ಲಿ ದಿನೇಶ್ ಹೇಳಿದ್ದಾರೆ.

‘ಮುಸ್ಲಿಂ ಸಮುದಾಯವನ್ನು ಅಶ್ಲೀಲವಾಗಿ ನಿಂದಿಸಿರುವ ವಿಶ್ವನಾಥ್, ಹಲವು ಸುಳ್ಳು ಆರೋಪ ಮಾಡಿದ್ದಾರೆ. ಈ ಮೂಲಕ ಎರಡು ಧರ್ಮಗಳ ನಡುವೆ ಸಂಘರ್ಷ ಉಂಟಾಗಲು ಪ್ರಚೋದನೆ ನೀಡಿದ್ದಾರೆ. ಸಾಮಾಜಿಕ ಶಾಂತಿಯನ್ನು ಕೆಡಿಸಲು ಯತ್ನಿಸಿದ್ದಾರೆ. ಇಬ್ಬರ ಸಂಭಾಷಣೆಯನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲೂ ಹರಿಬಿಟ್ಟಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ’ ಎಂದು ದೂರಿನಲ್ಲಿ ದಿನೇಶ್ ಒತ್ತಾಯಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು