ಮಂಗಳವಾರ, ನವೆಂಬರ್ 12, 2019
25 °C
ಒಂದು ಕೆ.ಜಿ. ಅಣಬೆ ₹600ರಿಂದ ₹700ಕ್ಕೆ ಮಾರಾಟ– ರೈತರಿಗೆ ಹರ್ಷ

ಮಳೆಗಾಲದ ಅತಿಥಿ ’ಅಣಬೆ’ಗೆ ಡಿಮ್ಯಾಂಡು

Published:
Updated:
Prajavani

ತರೀಕೆರೆ: ಅಣಬೆ ಅಂದರೆ ಯಾರಿಗಿಷ್ಟವಿಲ್ಲ ಹೇಳಿ. ಇದು ಕಣ್ಣೋಟಕ್ಕೆ ಆಪ್ತ ಅನುಭವ ನೀಡುವುದರ ಜತೆಗೆ; ಬಗೆಬಗೆಯ ಖಾದ್ಯಗಳಿಂದಲೂ ಜನರ ಮನಗೆದ್ದಿದೆ. ಈಗಂತೂ ಮಳೆಗಾಲ. ದೊಡ್ಡ ಮರಗಳ ಬುಡಗಳಲ್ಲಿ, ತೋಟ ಮತ್ತು ಹೊಲಗಳ ಬದುವಿನಲ್ಲಿ ಸೊಂಪಾಗಿ ಬೆಳೆದು ನಿಂತಿರುವ ಅಣಬೆಗೆ ಈಗ ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಇದೆ.

ಪಟ್ಟಣದಲ್ಲಿ ಒಂದು ತಿಂಗಳಿನಿಂದಲೂ ದಿನನಿತ್ಯ 500 ಕೆ.ಜಿ.ಗೂ ಹೆಚ್ಚೂ ಕಾಡು ಅಣಬೆಯನ್ನು ಮಾರಾಟ ಮಾಡಲಾಗುತ್ತಿದ್ದು, ಜನರು ಖರೀದಿಗಾಗಿ ಮುಗಿ ಬೀಳುತ್ತಿದ್ದರೆ; ಅಣಬೆ ಮಾರಾಟಗಾರು ಉತ್ತಮ ಆದಾಯ ಕಾಣುತ್ತಿದ್ದಾರೆ.

ಅಣಬೆಯು ರುಚಿ ಹಾಗೂ ಪೌಷ್ಟಿಕಾಂಶಗಳನ್ನು ಹೇರಳವಾಗಿ ಹೊಂದಿರುರುವುದರಿಂದ ಅಣಬೆಪ್ರಿಯರು ಬೆಲೆ ತುಸು ಹೆಚ್ಚಿದ್ದರೂ ಇಷ್ಟಪಟ್ಟು ಖರೀದಿಸಿ, ಆಸ್ವಾದಿಸುತ್ತಿದ್ದಾರೆ.

ತಾಲ್ಲೂಕಿನಾದ್ಯಂತ ಈ ವರ್ಷ ಅತಿಯಾಗಿ ಸುರಿದ ಮಳೆಯಿಂದಾಗಿ ಸುತ್ತ ಮುತ್ತಲಿನ ಗದ್ದೆ, ಕಾಡು ಪ್ರದೇಶದಲ್ಲಿ ಅಣಬೆಯು ಹೇರಳವಾಗಿ ದೊರೆಯುತ್ತಿದೆ. ರೈತರು ಮುಂಜಾನೆಯೇ ಎದ್ದು ಕಾಡು, ಹೊಲಗಳಿಗೆ ಹೋಗಿ ತಾಜಾ ಅಣಬೆಗಳನ್ನು ಕಿತ್ತು ತಂದು ಪಟ್ಟಣದಲ್ಲಿ ಮಾರಾಟ ಮಾಡುತ್ತಿದ್ದಾರೆ. ಈ ಮಧ್ಯೆ ಮಧ್ಯವರ್ತಿಗಳು ರೈತರಿಗೆ ಅಷ್ಟಿಷ್ಟು ಹಣ ಕೊಟ್ಟು, ಅವರಿಂದ ಅಣಬೆ ಖರೀದಿಸಿ ಅದನ್ನು ಉತ್ತಮ ದರಕ್ಕೆ ಮಾರಿಕೊಳ್ಳುತ್ತಿದ್ದಾರೆ. ಪಟ್ಟಣದ ಭಾರತ್ ಚಿತ್ರಮಂದಿರದ ಮುಂದೆ ಬೆಳಿಗ್ಗೆಯಿಂದಲೇ ಆರಂಭವಾಗುವ ಅಣಬೆ ವ್ಯಾಪಾರ ಸಂಜೆವರೆಗೂ ಭರ್ಜರಿಯಾಗಿ ನಡೆಯುತ್ತಲೇ ಇರುತ್ತದೆ.

ಖಾಸಗಿ ಪಾರ್ಟಿಗಳು ಹಾಗೂ ರೆಸ್ಟೊರೆಂಟ್‌ಗಳಲ್ಲಿ ಅಣಬೆಯನ್ನು ಖಾದ್ಯಗಳ ತಯಾರಿಕೆಗೆ ಬಳಸಲಾಗುತ್ತದೆ. ಅಣಬೆಯಿಂದ ಸಾರು, ಫ್ರೈ, ಡ್ರೈ, ಗ್ರೇವಿಗಳನ್ನು ತಯಾರಿಸಿ ಸ್ಟಾಟರ್ಸ್‌ ಹಾಗೂ ಮುಖ್ಯಮೆನುವಿನೊಂದಿಗೆ ಬಡಿಸಲಾಗುತ್ತದೆ. ಅಣಬೆಪ್ರಿಯರಂತೂ ಈ ಖಾದ್ಯಗಳನ್ನು ಚಪ್ಪರಿಸಿ ತಿನ್ನುತ್ತಾರೆ.

ಒಂದು ಕೆ.ಜಿ. ಅಣಬೆಯನ್ನು ₹600ರಿಂದ ₹700ವರೆಗೆ ಮಾರಾಟ ಮಾಡಲಾಗುತ್ತಿದೆ. ಮೊಗ್ಗಿನ ಅಣಬೆಗೆ ಬೇಡಿಕೆ ಹೆಚ್ಚಾಗಿದ್ದು, ಅರಳಿದ ಅಣಬೆಯು ಅರ್ಧ ಬೆಲೆಗೆ ಮಾರಾಟವಾಗುತ್ತಿದೆ. ಅಪರೂಪಕ್ಕೆ ಸಿಗುವ ಅಣಬೆಯನ್ನು ಒಬ್ಬ ಗ್ರಾಹಕ ಇಷ್ಟಪಟ್ಟು 2ರಿಂದ 3 ಕೆ.ಜಿ.ವರೆಗೆ ಖರೀದಿಸುತ್ತಿದ್ದಾನೆ. ದೂರದ ಊರಿನ ನೆಂಟರಿಷ್ಟರಿಗೆ ಅಣಬೆಯನ್ನು ತಲುಪಿಸುತ್ತಿರುವ ಕಾರಣ ತಾಲ್ಲೂಕಿನ ಅಣಬೆ ಚಿತ್ರದುರ್ಗ, ಮೈಸೂರು ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಸೇರುತ್ತಿದೆ. ಹೆದ್ದಾರಿ ಬದಿಯಲ್ಲಿಯೇ ಮಾರಲಾಗುತ್ತಿರುವ ಅಣಬೆ ಕಣ್ಣಿಗೆ ಕುಕ್ಕುವುದರಿಂದ ಖಾಸಗಿ ವಾಹನಗಳ ಸವಾರರು ಗಾಡಿ ನಿಲ್ಲಿಸಿ, ಅಣಬೆ ಖರೀದಿಸಿ ಮುಂದೆ ಸಾಗುತ್ತಾರೆ.

‘ಈ ಊರಿನಲ್ಲಿ ಸಿಗುವ ಕಾಡು ಅಣಬೆ ತಿಂದು ಬೆಳೆದಿದ್ದೇನೆ. ಹಾಗಾಗಿ, ಬೆಂಗಳೂರಿನಲ್ಲಿದ್ದರೂ ಇಲ್ಲಿನ ಅಣಬೆ ರುಚಿ ನೆನಪಾಗುತ್ತದೆ. ಹೀಗಾಗಿ ಖರೀದಿಸಿ ಕೊಂಡೊಯ್ಯುತ್ತಿದ್ದೇನೆ’ ಎನ್ನುತ್ತಾರೆ ಮೂಲತ ಪಟ್ಟಣದವರೇ ಆಗಿರುವ ಬೆಂಗಳೂರಿನ ಪೈಲ್ವಾನ್ ಅಣ್ಣಪ್ಪ.

ಹೊಲ, ಗದ್ದೆ, ತೋಟದ ಅಂಚಿನ ಬದುಗಳ ಪೊದೆಗಳಲ್ಲಿ ಹುಟ್ಟುತ್ತಿದ್ದ ಅಣಬೆಗೆ ಇತ್ತೀಚೆಗೆ ರೈತರು ರಾಸಾಯನಿಕ ಸಿಂಪಡಿಸುತ್ತಿರುವ ಕಾರಣ ಸ್ವಾಭಾವಿಕವಾಗಿ ಹುಟ್ಟುತ್ತಿಲ್ಲ. ರಾಸಾಯನಿಕ ಸಿಂಪಡಣೆ ನಿಲ್ಲಬೇಕು ಎನ್ನುತ್ತಾರೆ ರೈತ ಮುಖಂಡ ಆರ್.ದೇವಾನಂದ್.

ಕೃತಕ ಹಾಗೂ ನೈಸರ್ಗೀಕ ಅಣಬೆಯ ಮಾರುಕಟ್ಟೆ ಹಾಗೂ ಶೀಥಲೀಕರಣ ಘಟಕದ ಸ್ಥಾಪನೆಗೆ ಎಪಿಎಂಸಿ ಹಾಗೂ ತೋಟಗಾರಿಕೆ ಇಲಾಖೆ ಮುಂದಾದರೇ ರೈತರಿಗೆ ಅಣಬೆ ಬೆಳೆಯಲು ಅನುಕೂಲವಾಗುತ್ತದೆ ಎನ್ನುತ್ತಾರೆ ಎಪಿಎಂಸಿ ನಿರ್ದೇಶಕ ಟಿ.ಆರ್.ಶ್ರೀಧರ್.

 

ಪ್ರತಿಕ್ರಿಯಿಸಿ (+)