ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗೀತ ಶಿಕ್ಷಕಿಯಾದ ಎಂಜಿನಿಯರ್‌

ತಂದೆ ಹೆಸರಲ್ಲಿ ಸಂಗೀತ ಶಾಲೆ ತೆರೆಯುವ ಆಸೆ
Last Updated 30 ಸೆಪ್ಟೆಂಬರ್ 2019, 20:15 IST
ಅಕ್ಷರ ಗಾತ್ರ

ಮೈಸೂರು: ಬೆಂಗಳೂರಿನ ಆಕ್ಸೆಂಚರ್‌ ಕಂಪನಿಯಲ್ಲಿ ಎಂಜಿನಿಯರ್‌ ಆಗಿ ದೊಡ್ಡ ಮೊತ್ತದ ವೇತನ ಪಡೆಯುತ್ತಿದ್ದ ಮೈಸೂರಿನ ಯುವತಿಯೊಬ್ಬರು, ಸಂಗೀತದ ಮೋಹಕ್ಕೆ ಒಳಗಾಗಿ ಈಗ ಸಂಗೀತ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ.

ಆ ಯುವತಿಯ ಹೆಸರು ಎಸ್‌.ಎಲ್‌.ಶ್ರೀರಂಜಿನಿ. ಸಂಗೀತಗಾರ್ತಿಯೂ ಆಗಿರುವ ಇವರು ಕರ್ನಾಟಕ ಸಂಗೀತ
ಗಾಯನದಲ್ಲಿ ಮೊದಲ ‍ರ‍್ಯಾಂಕ್‌ನೊಂದಿಗೆ ಎಂ.ಎ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ.

ಸೋಮವಾರ ಇಲ್ಲಿ ನಡೆದ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಐದು ಚಿನ್ನದ ಪದಕ, ನಗದು ಪುರಸ್ಕಾರಕ್ಕೆ ಭಾಜನರಾದರು. 2018–19ನೇ ಸಾಲಿನಲ್ಲಿ ಹೆಚ್ಚು ಚಿನ್ನದ ಪದಕ ಪಡೆದ ಹೆಗ್ಗಳಿಕೆಗೂ ಪಾತ್ರರಾದರು.

ಸಂಗೀತ ಅಧ್ಯಯನಕ್ಕೂ ಮೊದಲು ಮೈಸೂರಿನ ಜಯಚಾಮರಾಜೇಂದ್ರ ಎಂಜಿನಿಯರಿಂಗ್ ಕಾಲೇಜಿನಲ್ಲಿ ‘ಇಂಡಸ್ಟ್ರಿಯಲ್‌ ಪ್ರೊಡಕ್ಷನ್‌’ನಲ್ಲಿ ಎಂಜಿನಿಯರಿಂಗ್‌ ಪದವಿ ಪೂರೈಸಿದ್ದರು.

‘ಕಾರ್ಪೊರೇಟ್‌ ಜಗತ್ತಿನಲ್ಲಿ ಮುಂದುವರಿಯಲು ನನಗೆ ಆಸಕ್ತಿ ಇಲ್ಲ. ಆರು ತಿಂಗಳು ಕೆಲಸ ಮಾಡಿ ರಾಜೀನಾಮೆ ನೀಡಿದೆ. ತಂದೆ ಲಕ್ಷ್ಮೀನರಸಿಂಹ ಅವರ ಆಸೆ ಕೂಡ ನಾನು ಸಂಗೀತಗಾರ್ತಿಯಾಗಿ, ಸಂಗೀತ ಶಿಕ್ಷಕಿಯಾಗಿ ಮುಂದುವರಿಯಬೇಕು ಎಂಬುದು. ಅವರೇ ನನ್ನ ಮೊದಲ ಗುರು. ತಂದೆಯ ಹೆಸರಿನಲ್ಲಿ ಸಂಗೀತ ಶಾಲೆ ತೆರೆಯಬೇಕೆಂಬ ಕನಸಿದೆ. ಸಂಗೀತದಿಂದಲೂ ಬದುಕು ಕಟ್ಟಿಕೊಳ್ಳಬಹುದು’ ಎಂದು ಶ್ರೀರಂಜಿನಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಅವರೀಗ ಬೆಂಗಳೂರಿನ ಎಚ್‌.ಎಸ್‌.ಆರ್‌ ಲೇಔಟ್‌ನ ನ್ಯಾಷನಲ್‌ ಪಬ್ಲಿಕ್‌ ಶಾಲೆಯಲ್ಲಿ ಸಂಗೀತ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಮಿಂಚಿದ ಅಂಧ ವಿದ್ಯಾರ್ಥಿನಿ: ಹಿಂದೂಸ್ತಾನಿ ಸಂಗೀತ ಗಾಯನದಲ್ಲಿ ಬಿ.ಎ ಪದವಿ ಪೂರೈಸಿರುವ ನಂಜನಗೂಡಿನ ಅಂಧ ವಿದ್ಯಾರ್ಥಿನಿ ಎಂ.ಆರ್‌.ಕಲಾವತಿ, ನಗದು ‍ಪುರಸ್ಕಾರಕ್ಕೆ ‍ಪಾತ್ರರಾದರು. 2018ನೇ ಸಾಲಿನಲ್ಲಿ ಅತಿ ಹೆಚ್ಚು ಅಂಕ ಪಡೆದಿದ್ದು, ಇದೇ ವಿಷಯದಲ್ಲಿ ಎಂ.ಎ ವ್ಯಾಸಂಗ ಮಾಡುತ್ತಿದ್ದಾರೆ.

‘ಪೋಷಕರು ವ್ಯವಸಾಯದಲ್ಲಿ ತೊಡಗಿದ್ದಾರೆ. ಸಂಗೀತದಲ್ಲಿ ಉತ್ತಮ ಸಾಧನೆ ಮಾಡುವ ಆಸೆ ನನಗಿದೆ. ಹಲವು ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಿದ್ದೇನೆ’ ಎಂದು ಅವರು ಪ್ರತಿಕ್ರಿಯಿಸಿದರು.

2017–18 ಮತ್ತು 2018–19ನೇ ಸಾಲಿನಲ್ಲಿ ವಿವಿಧ ಪದವಿ ಮತ್ತು ಸ್ನಾತಕೋತ್ತರ ಪದವಿ ಪೂರೈಸಿದ 85 ಮಂದಿಗೆ ಪದವಿ ಪ್ರಮಾಣಪತ್ರ ಪ್ರದಾನ ಮಾಡಲಾಯಿತು.

* ಸಂಗೀತ ಕ್ಷೇತ್ರಕ್ಕೆ ಏನಾದರೂ ಕೊಡುಗೆ ನೀಡಬೇಕು. ಸಂಗೀತದ ಬಗ್ಗೆ ಒಲವು ಹೊಂದಿರುವವರಿಗೆ ಪಾಠ ಮಾಡಿ ಈ ಕ್ಷೇತ್ರ ಬೆಳೆಸಬೇಕು

- ಎಸ್‌.ಎಲ್‌.ಶ್ರೀರಂಜಿನಿ, ಎಂ.ಎ (ಕರ್ನಾಟಕ ಸಂಗೀತ ಗಾಯನ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT