ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನನಗೆ ಜೀವನ ಕೊಟ್ಟಿದ್ದೇ ಬೆಂಗಳೂರು’

Last Updated 20 ನವೆಂಬರ್ 2018, 20:00 IST
ಅಕ್ಷರ ಗಾತ್ರ

ವಿಶೇಷ ಎನಿಸುವಂತಹ ಅಪರೂಪದ ಜುಗಲ್‌ಬಂದಿಗಳನ್ನು ಆಯೋಜಿಸುತ್ತಾ ಸಂಗೀತ ರಸಿಕರ ಗಮನ ಸೆಳೆಯುತ್ತಿರುವ ವೈಟ್‌ಫೀಲ್ಡ್‌ ಸಂಗೀತ ಉತ್ಸವದ ಪರಿಕಲ್ಪನೆ, ಆಯೋಜನೆ ಹಿಂದೆ ಸಿತಾರ್ ವಾದಕ ಪ್ರಬೀರ್ ಭಟ್ಟಾಚಾರ್ಯ ಅವರ ಶ್ರಮ ಅಪಾರ. ವಿವಿಧ ಕಲಾವಿದರನ್ನು ಒಂದೇ ವೇದಿಕೆ ಮೇಲೆ ತಂದು ಸಂಗೀತದ ರಸದೌತಣ ಉಣಬಡಿಸುತ್ತಿರುವ ಅವರು ತಮ್ಮ ವೃತ್ತಿಜೀವನದ ಹೆಜ್ಜೆ ಗುರುತುಗಳನ್ನು ‘ಮೆಟ್ರೊ’ ಜೊತೆಗೆ ಹಂಚಿಕೊಂಡರು

ಸಂಗೀತ ಕ್ಷೇತ್ರಕ್ಕೆ ಬರಲು ಕಾರಣ?

ನಮ್ಮ ತಂದೆ ಅಮಲ್ ಭಟ್ಟಾಚಾರ್ಯ ಸಂಗೀತ ವಿದ್ವಾಂಸರು. ಚಿಕ್ಕವನಾಗಿದ್ದಾಗ ಸಂಗೀತದ ಕಡೆ ಗಮನ ಕೊಡುತ್ತಿರಲಿಲ್ಲ. ಕ್ರಿಕೆಟ್‌ ಆಡುವುದೇ ಹೆಚ್ಚು ಇಷ್ಟವಾಗುತ್ತಿತ್ತು. ನಾನು ಆರನೇ ತರಗತಿಯಲ್ಲಿದ್ದಾಗ ನಮ್ಮ ತಂದೆ ಒಮ್ಮೆ ಸಂಗೀತ ಕಛೇರಿಗೆ ಕರೆದುಕೊಂಡು ಹೋದರು. ಕಲಾವಿದರ ಗಾಯನ, ವಾದ್ಯಗಳನ್ನು ನುಡಿಸಿದ ಪರಿ ನನ್ನನ್ನು ಮಂತ್ರಮುಗ್ಧನನ್ನಾಗಿಸಿತು. ಸಂಗೀತ ಕ್ಷೇತ್ರದ ಮಹತ್ವ ಅರಿತು, ಸಾಧನೆ ಮಾಡುವುದಿದ್ದರೆ ಇಲ್ಲೇ ಮಾಡಬೇಕೆಂದು ಅಂದೇ ನಿರ್ಧರಿಸಿದೆ.

ಕಲಿಕೆ ಹೇಗಿತ್ತು?

ಆರಂಭದ ದಿನಗಳಲ್ಲಿ ಕಲಿಯಲು ಕಷ್ಟವಾಗುತ್ತಿತ್ತು. ಕೋಲ್ಕತ್ತದ ರವೀಂದ್ರಭಾರತಿ ವಿಶ್ವವಿದ್ಯಾಲಯದಿಂದ ಸಂಗೀತದಲ್ಲೇ ಎಂ.ಎ ಪದವಿ ಪಡೆದೆ. ನನ್ನ ಪ್ರವೃತ್ತಿಯನ್ನೇ ವೃತ್ತಿಯಾಗಿ ಸ್ವೀಕರಿಸಿದೆ.

‘ಆನಂಧಧ್ವನಿ’ ಹೇಗೆ ಆರಂಭವಾಯಿತು?

ನಮ್ಮ ದೇಶದಲ್ಲಿ ಕಲೆಗೆ ಕೊರತೆಯಿಲ್ಲ. ಆದರೆ ಅದು ಬೆಳಕಿಗೆ ಬರುತ್ತಿಲ್ಲ. ಪ್ರತಿಯೊಂದು ರಾಜ್ಯದಲ್ಲೂ ಆಯಾ ಪ್ರದೇಶದ ಸಂಸ್ಕೃತಿಯನ್ನು ಬಿಂಬಿಸುವ ಕಲೆಗಳಿವೆ. ಇಂತಹ ಕಲೆಗಳನ್ನು ಪರಿಚಯಿಸುವುದರ ಜತೆಗೆ, ಎಲೆಮರೆ ಕಾಯಿಯಂತೆ ಇರುವ ಹಲವು ಕಲಾವಿದರಿಗೆ ವೇದಿಕೆ ಕಲ್ಪಿಸಿಕೊಡುವ ಉದ್ದೇಶದಿಂದ ‘ಆನಂದಧ್ವನಿ’ ಸಂಸ್ಥೆ ಆರಂಭಿಸಿದೆವು. ಎಲ್ಲಕ್ಕಿಂತ ಮುಖ್ಯವಾಗಿ ಕರ್ನಾಟಕ ಸಂಗೀತ ಮತ್ತು ಹಿಂದೂಸ್ತಾನಿ ಸಂಗೀತದ ಮಾಧುರ್ಯವನ್ನು ಒಂದೇ ವೇದಿಕೆ ಮೇಲೆ ಪರಿಚಯಿಸುವುದು ನಮ್ಮ ಉದ್ದೇಶ.

ಆನಂದಧ್ವನಿ ಹೆಸರಿನ ಅರ್ಥವೇನು?

ಕರ್ನಾಟಕ ಸಂಗೀತದ ಪ್ರಮುಖ ರಾಗಗಳಲ್ಲಿ ಒಂದಾದ ‘ಹಂಸಧ್ವನಿ’ ಮತ್ತು ಹಿಂದೂಸ್ತಾನಿ ಸಂಗೀತದ ‘ಆನಂದ ಕಳ್ಯಾಣಿ’ ರಾಗಗಳ ಪ್ರೇರಣೆಯಿಂದ ‘ಆನಂದಧ್ವನಿ’ ಎಂದು ಹೆಸರಿಟ್ಟೆವು. ಇದರ ಸ್ಥಾಪನೆ ಹಿಂದೆ ನಮ್ಮ ಗುರುಗಳಾದ ದೀಪಕ್ ಚೌದರಿಯವರ ಪ್ರೇರಣೆ, ಮಾರ್ಗದರ್ಶನವಿದೆ. ಅವರ ಇಷ್ಟದಂತೆಯೇ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.

ಪಾಶ್ಚಾತ್ಯ ಮತ್ತು ಶಾಸ್ತ್ರೀಯ ಸಂಗೀತ ಬಗ್ಗೆ ಏನು ಹೇಳುತ್ತೀರಿ?

ಶಾಸ್ತ್ರೀಯ ಮತ್ತು ಪಾಶ್ಚಾತ್ಯ ಸಂಗೀತಗಳಿಗೆ ಪ್ರತ್ಯೇಕ ಅಭಿಮಾನಿಗಳಿದ್ದಾರೆ . ಎರಡನ್ನೂ ಇಷ್ಟಪಡುವ ರಸಿಕರೂ ಇದ್ದಾರೆ. ಎರಡಕ್ಕೂ ಅದರದ್ದೇ ಆದ ಮಹತ್ವವಿದೆ.

ಬೆಂಗಳೂರಿನ ಬಗ್ಗೆ ಏನು ಹೇಳುತ್ತೀರಿ?

ಬೆಂಗಳೂರು ಎಂಬ ಹೆಸರು ಕೇಳಿದ ಕೂಡಲೇ ಹಲವು ನೆನಪುಗಳು ಕಣ್ಣಮುಂದೆ ತೆರೆದುಕೊಳ್ಳುತ್ತವೆ. ನನಗೆ ಬದುಕು ಕೊಟ್ಟಿದ್ದೇ ಬೆಂಗಳೂರು. ಈ ನಗರದೊಂದಿಗೆ ಬಿಡಿಸಲಾಗದ ಸಂಬಂಧವಿದೆ. ಇಲ್ಲಿರುವಷ್ಟು ಸಂಗೀತ ಪ್ರೇಮಿಗಳನ್ನು ಬೇರೆ ಯಾವ ನಗರದಲ್ಲೂ ನೋಡಿಲ್ಲ. ಕಲಾವಿದರನ್ನು, ಕಲೆಯನ್ನು ಇಲ್ಲಿನವರು ತುಂಬಾ ಆರಾಧಿಸುತ್ತಾರೆ. ಕನ್ನಡಿಗರಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು.

ವೈಟ್‌ಫೀಲ್ಡ್‌ನಲ್ಲಿ ಉತ್ಸವ ಆಯೋಜಿಸಲು ಕಾರಣ?

ಈ ಉತ್ಸವ ಆಯೋಜಿಸಲು ತನು, ಮನ, ಧನ ಹೀಗೆ ಎಲ್ಲ ರೀತಿಯಲ್ಲೂ ಈ ಭಾಗದವರೇ ನೆರವು ನೀಡುತ್ತಿದ್ದಾರೆ. ಹೀಗಾಗಿ ಇಲ್ಲಿ ಆಯೋಜಿಸಿದ್ದೇವೆ. ವೈಟ್‌ಫೀಲ್ಡ್‌ಗೆ ಹೋಲಿಸಿದರೆ ನಗರದ ಹೃದಯ ಭಾಗದಲ್ಲೇ ಹೆಚ್ಚು ಸಂಗೀತ ಅಭಿಮಾನಿಗಳಿದ್ದಾರೆ. ಅದರಲ್ಲೂ ಬಸವನಗುಡಿ, ಮಲ್ಲೇಶ್ವರಂ ಮತ್ತು ಜಯನಗರದಲ್ಲೇ ಹೆಚ್ಚು ಜನರಿದ್ದಾರೆ. ಇಲ್ಲೂ ಆಯೋಜಿಸಬೇಕೆಂಬ ಆಸೆ ಇದೆ. ಅವಕಾಶ, ಸಂದರ್ಭ ಕೂಡಿ ಬಂದರೆ ಖಂಡಿತ ಇಲ್ಲೂ ಆನಂದಧ್ವನಿ ಸಂಗೀತ ಸದ್ದು ಮಾಡಬಹುದು.

ಈ ಉತ್ಸವದ ವಿಶೇಷವೇನು?

ಸಾಂಪ್ರದಾಯಿಕ ಮತ್ತು ಜಾನಪದ ನೃತ್ಯ, ಶಾಸ್ತ್ರೀಯ ಮತ್ತು ಹಳ್ಳಿ ಹಾಡುಗಳ ಸಮ್ಮಿಲನಕ್ಕೆ ಈ ಉತ್ಸವ ಸಾಕ್ಷಿಯಾಗಲಿದೆ. ಅಲ್ಲದೇ ಅಪರೂಪದ ಜುಗಲ್‌ಬಂದಿಗಳನ್ನು ಸ್ವರ ಮಾಧುರ್ಯ ಕೇಳಿ ಆನಂದಿಸಬಹುದು.

ಆನಂದಧ್ವನಿಯ ಮುಂದಿನ ಗುರಿಗಳೇನು?

ಇಂತಹ ಹಲವು ಉತ್ಸವಗಳನ್ನು ಆಯೋಜಿಸುವುದೇ ಗುರಿ. ಸಂಗೀತ ಎಲ್ಲರಿಗೂ ತಲುಪಬೇಕು. ಶಾಸ್ತ್ರೀಯ ಸಂಗೀತವನ್ನು ಜನಪ್ರಿಯಗೊಳಿಸಬೇಕು. ವಾದ್ಯ ಸಂಗೀತ, ಹಿಮ್ಮೇಳ ಇವೆಲ್ಲವನ್ನೂ ವೇದಿಕೆಯ ಮೇಲೆ ಮಿಂಚುವಂತೆ ಮಾಡಬೇಕು.

ನಮ್ಮಲ್ಲಿ ಈಗಲೂ ಸಂಗೀತವೆಂದರೆ ಕೇವಲ ಗಾಯರಕು ಎಂಬ ಭಾವನೆ ಇದೆ. ಇದನ್ನು ಳನ್ನು ಬೆಳಕಿಗೆ ತಂದು ಕಲಾವಿದರನ್ನು ಪ್ರೋತ್ಸಾಹಿಸಬೇಕು. ಭಾರತದ ಭವ್ಯ ಸಂಗೀತ ಪರಂಪರೆಗೆ ಕೈಲಾದಷ್ಟು ಕೊಡುಗೆ ಸಲ್ಲಿಸಬೇಕು. ಹಾಗಾಗಿ ಹಾಡುಗಾರರು, ಸಂಗೀತಗಾರರು, ವಾದ್ಯ ಸಂಯೋಜಕರು, ವಾದ್ಯಗಾರರು ಎಲ್ಲರೂ ಒಡಗೂಡಿ ಹೆಚ್ಚುಹೆಚ್ಚು ಕಾರ್ಯಕ್ರಮಗಳನ್ನು ನೀಡುವಂತಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT