ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ಫ್ಯೂ ಉಲ್ಲಂಘಿಸಿದರೆ ಪ್ರಕರಣ ದಾಖಲು, ಶಿಸ್ತುಕ್ರಮ: ಯಡಿಯೂರಪ್ಪ ಕಟು ಎಚ್ಚರಿಕೆ

Last Updated 24 ಮಾರ್ಚ್ 2020, 12:10 IST
ಅಕ್ಷರ ಗಾತ್ರ

ಬೆಂಗಳೂರು: ಈ ವರ್ಷ ಸರಳ ಯುಗಾದಿ ಆಚರಿಸಬೇಕು. ಕರ್ಫ್ಯೂ ಮಾದರಿ ನಿರ್ಬಂಧವನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು. ಇದು ಜನರ ಹಿತಕ್ಕಾಗಿ ಹೊರಡಿಸಿರುವ ಆದೇಶ. ನಮ್ಮ ಆದೇಶಕ್ಕೆ ಬೆಲೆ ಕೊಡದಿದ್ದರೆ ಪ್ರಕರಣ ದಾಖಲಿಸುವುದೂ ಸೇರಿದಂತೆ ಶಿಸ್ತು ಕ್ರಮ ಜರುಗಿಸಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಖಡಕ್ ಎಚ್ಚರಿಕೆ ನೀಡಿದರು.

ನಗರದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಿರ್ಬಂಧದ ಆದೇಶ ವಿಧಿಸಿದರೂ ಜನರು ಬಹುದೊಡ್ಡ ಸಂಖ್ಯೆಯಲ್ಲಿ ಹೊರಗೆ ಬಂದಿದ್ದಾರೆ. ಇಂಥವನ್ನು ಸಹಿಸಲು ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಬೆಂಗಳೂರಿನಿಂದ ಜನರು ಹೊರಗೆ ಹೋಗಲು ಮತ್ತು ಹೊರಗಿನಿಂದ ಬೆಂಗಳೂರಿಗೆ ಬರಲು ಇದೊಂದು ದಿನ ಅವಕಾಶ ನೀಡಲಾಗುವುದು. ಇಂಥದ್ದಕ್ಕೆಲ್ಲಾ ಅವಕಾಶ ಇರುವುದಿಲ್ಲ ಎಂದು ನುಡಿದರು.

ಕೋವಿಡ್‌-19 ಸಮಸ್ಯೆಯನ್ನು ಶೀಘ್ರ ತಹಬದಿಗೆ ತರಲೆಂದು ಇಬ್ಬರು ಉಪಮುಖ್ಯಮಂತ್ರಿಗಳಿರುವ ಕಾರ್ಯಪಡೆ ರಚಿಸಲಾಗಿದೆ. ಬೆಂಗಳೂರಿನಲ್ಲಿ ಸುಸಜ್ಜಿತ ವಾರ್‌ ರೂಂ ರೂಪಿಸಲಾಗಿದೆ. ರಾಜ್ಯದ ಯಾವುದೇ ಆಸ್ಪತ್ರೆಯಲ್ಲಿರುವ ಯಾವುದೇ ಸೋಂಕಿತನ ಆರೋಗ್ಯವನ್ನು ಇಲ್ಲಿಂದಲೇ ಗಮನಿಸಲು ಅವಕಾಶ ಕಲ್ಪಿಸಲಾಗಿದೆ. ಇಂಥ ಪ್ರಯತ್ನ ದೇಶದಲ್ಲಿಯೇ ಮೊದಲು ಎಂದು ಹೇಳಿದರು.

ವಿದೇಶದಿಂದ ಬರುವವರು ಮನೆಯಲ್ಲಿ ಪ್ರತ್ಯೇಕವಾಗಿರುವುದು ಕಡ್ಡಾಯ. ಅವರ ಮತ್ತು ಅವರ ಸಂಪರ್ಕಕ್ಕೆ ಬಂದವರ ಚಲನವಲನದ ಮೇಲೆ ನಿಗಾ ಇಡುತ್ತೇವೆ ಎಂದು ಘೋಷಿಸಿದರು.

ನಿರ್ಬಂಧದ ಆದೇಶದಿಂದ ಬಡವರಿಗೆ ತೊಂದರೆಯಾಗುತ್ತಿರುವ ಅರಿವು ನಮಗಿದೆ. ಇಂದಿರಾ ಕ್ಯಾಂಟೀನ್ ಮೂಲಕ ಆಹಾರ ಒದಗಿಸಲು ಮಾಡಿದ ಪ್ರಯತ್ನ ಫಲ ನೀಡಲಿಲ್ಲ. ಹೀಗಾಗಿ ಬಡವರಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ಸಹಾಯಧನ ಮತ್ತು2 ತಿಂಗಳ ಪಡಿತರ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ವೃದ್ಧಾಪ್ಯ ವೇತನವೂ ಸೇರಿದಂತೆ ಎಲ್ಲ ಬಗೆಯ ಪಿಂಚಣಿಗಳಎರಡು ತಿಂಗಳ ಮೊತ್ತ ಪಾವತಿಸುತ್ತೇವೆ ಎಂದು ಭರವಸೆ ನೀಡಿದರು.

ಸುಧಾಕರ್ ಮತ್ತು ಶ್ರೀರಾಮುಲು ನಡುವೆ ಯಾವುದೇ ಭಿನ್ನಮತವಿಲ್ಲ. ಸುಧಾಕರ್ ಬೆಂಗಳೂರಿನಲ್ಲಿದ್ದು ಕೋವಿಡ್-19 ತಡೆಗೆ ಶ್ರಮಿಸುತ್ತಾರೆ, ಶ್ರೀರಾಮುಲು ಇಡೀ ರಾಜ್ಯ ಸುತ್ತುತ್ತಾರೆ. ನಾನೂ ಪ್ರತಿದಿನ ವಾರ್‌ ರೂಂಗೆ ಭೇಟಿ ನೀಡುತ್ತೇನೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT