ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕ ಕರುಣಾಕರ ರೆಡ್ಡಿ ಸಂಸ್ಕೃತಿ ನನ್ನದಲ್ಲ: ಕುಂ. ವೀರಭದ್ರಪ್ಪ

Last Updated 2 ಅಕ್ಟೋಬರ್ 2019, 18:14 IST
ಅಕ್ಷರ ಗಾತ್ರ

ಹೊಸಪೇಟೆ: ‘ನನ್ನನ್ನು ಅವಿವೇಕಿ ಎಂದು ಶಾಸಕ ಜಿ. ಕರುಣಾಕರ ರೆಡ್ಡಿ ಅವರು ಕಠಿಣ ಪದ ಬಳಕೆಯಿಂದ ಮೂದಲಿಸಿದ್ದಾರೆ. ಆದರೆ, ನನಗೆ ಯಾವುದೇ ಬೇಸರವಿಲ್ಲ. ಶತಮೂರ್ಖ, ಮುಠ್ಠಾಳ ಸೇರಿದಂತೆ ಇತರೆ ಪದಗಳು ನನಗೂ ಬಳಸುವುದು ಗೊತ್ತಿದೆ. ಆದರೆ, ನನ್ನದು ಆ ಸಂಸ್ಕೃತಿಯಲ್ಲ’ ಎಂದು ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ ಬುಧವಾರ ಪ್ರತಿಕ್ರಿಯಿಸಿದ್ದಾರೆ.

‘ಶಾಸಕರಾದ ಜಿ. ಸೋಮಶೇಖರ್‌ ರೆಡ್ಡಿ, ಜಿ. ಕರುಣಾಕರ ರೆಡ್ಡಿ ಅವರು ಮೂಲತಃ ಆಂಧ್ರದವರು. ಈ ಕಾರಣಕ್ಕಾಗಿಯೇ ಅವರು ಬಳ್ಳಾರಿ ಜಿಲ್ಲೆ ವಿಭಜಿಸಿ ವಿಜಯನಗರ ಜಿಲ್ಲೆ ಆಗುವುದಕ್ಕೆ ವಿರೋಧಿಸುತ್ತಿದ್ದಾರೆ’ ಎಂದು ವೀರಭದ್ರಪ್ಪ ಇತ್ತೀಚೆಗೆ ಹೇಳಿಕೆ ಕೊಟ್ಟಿದ್ದರು. ಅದಕ್ಕೆ ಹರಪನಹಳ್ಳಿಯಲ್ಲಿ ಪ್ರತಿಕ್ರಿಯಿಸಿದ್ದ ಸೋಮಶೇಖರ್ ರೆಡ್ಡಿ, ‘ವೀರಭದ್ರಪ್ಪ ಒಬ್ಬ ಅವಿವೇಕಿ ಸಾಹಿತಿ’ ಎಂದು ಮಂಗಳವಾರ ಹೀಗಳೆದಿದ್ದರು.

‘ನಾನೂ ನಲ್ವತ್ತು ವರ್ಷ ಆಂಧ್ರ ಪ್ರದೇಶದಲ್ಲಿದವನು. ಆದರೆ, ನನಗೆ ನನ್ನ ನಾಡು, ನುಡಿ ಬಗ್ಗೆ ಹೆಮ್ಮೆ ಇದೆ. ಒಬ್ಬ ಲೇಖಕನಾಗಿ ನನ್ನ ನಾಡಿನ ಜನರ ನೋವು ನಲಿವುಗಳಿಗೆ ಸ್ಪಂದಿಸುವೆ. ವಿಜಯನಗರ ಜಿಲ್ಲೆ ಆಗಬೇಕೆಂಬುದು ದಶಕದ ಬೇಡಿಕೆಯಾಗಿದೆ. ಅದನ್ನು ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಹೇಳಿದ್ದೆ. ಅದಕ್ಕೆ ಕರುಣಾಕರ ರೆಡ್ಡಿ ಅವರೇಕೇ ಸಿಟ್ಟು ಮಾಡಿಕೊಳ್ಳಬೇಕು’ ಎಂದು ಪ್ರಶ್ನಿಸಿದ್ದಾರೆ.

‘ದಶಕದ ಬೇಡಿಕೆ ಈಡೇರುವ ಹಂತಕ್ಕೆ ಬಂದಿದೆ. ಅದಕ್ಕೆ ಶಾಸಕರು ಅಡ್ಡಗಾಲು ಹಾಕಬರದು. ಜನರ ಭಾವನೆಗಳಿಗೆ ಬೆಲೆ ಕೊಡಬೇಕು. ಯಾವ ಊರೂ ಸಹ ಯಾರ ಜಹಗೀರಲ್ಲ. ಅದು ಪ್ರಜೆಗಳ ಆಸ್ತಿ. ಚುನಾವಣೆಯಲ್ಲಿ ಗೆಲ್ಲಿಸಿ ಕಳುಹಿಸಿದ ಜನರ ಋಣ ತೀರಿಸಬೇಕು ಎಂಬ ಭಾವನೆಯಿದ್ದರೆ ಹೊಸ ಜಿಲ್ಲೆ ಬೇಡಿಕೆಗೆ ಬೆಂಬಲ ಕೊಡಬೇಕು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT