ಭಾನುವಾರ, ಸೆಪ್ಟೆಂಬರ್ 15, 2019
30 °C
ಅಪರೂಪದ ಅರಣ್ಯ ಪ್ರಭೇದ ರಕ್ಷಣೆಗೆ ಒತ್ತಾಯ

ಶರಾವತಿ ಕಣಿವೆಯಲ್ಲಿ ‘ನೀರು ನೇರಳೆ ಜಡ್ಡಿ’

Published:
Updated:
Prajavani

ಶಿರಸಿ: ಶರಾವತಿ ಕಣಿವೆಯಲ್ಲಿರುವ ‘ನೀರು ನೇರಳೆ ಜಡ್ಡಿ’ ಪತ್ತೆಯಾಗಿದೆ. ಜಾಗತಿಕವಾಗಿ ಮಹತ್ವ ಪಡೆದಿರುವ ‘ಮಿರಿಸ್ಟಿಕಾ ಸ್ವ್ಯಾಂಪ್’ ಜಡ್ಡಿ ಇದಾಗಿದ್ದು, ಇವುಗಳ ರಕ್ಷಣೆಯ ಹಿನ್ನೆಲೆಯಲ್ಲಿ ಲಿಂಗನಮಕ್ಕಿ ನೀರಿನ ಲಭ್ಯತೆ ಹೆಚ್ಚಿಸುವ ಬಗ್ಗೆ ಯೋಚಿಸಬೇಕು ಎಂದು ವೃಕ್ಷಲಕ್ಷ ಆಂದೋಲನ ಒತ್ತಾಯಿಸಿದೆ.

ಸಂರಕ್ಷಣಾ ಜೀವಶಾಸ್ತ್ರಜ್ಞ ಡಾ. ಕೇಶವ ಕೊರ್ಸೆ ನೇತೃತ್ವದಲ್ಲಿ ಸಾಗರ ತಾಲ್ಲೂಕು ಹುಳಕೋಡಿನಲ್ಲಿರುವ ಲಿಂಗನಮಕ್ಕಿ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ನಡೆದಿರುವ ನೇರಳೆ ಜಡ್ಡಿ ಅರಣ್ಯ ವೈವಿಧ್ಯ, ಪಾರಿಸಾರಿಕ ಮಹತ್ವದ ಕುರಿತ ಅಧ್ಯಯನ ವರದಿಯನ್ನು ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಅಶೀಸರ ಅವರು ಇತ್ತೀಚೆಗೆ ಬೆಂಗಳೂರಿನಲ್ಲಿ ರಾಜ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪಿ.ಶ್ರೀಧರ ಅವರಿಗೆ ಸಲ್ಲಿಸಿದರು.

ವರದಿಯ ಸಾರಾಂಶ: ಶರಾವತಿ ಹಿನ್ನೀರಿನ ಪ್ರದೇಶದ ಪರ್ವತಮಾಲೆಯು ನಿತ್ಯಹರಿದ್ವರ್ಣ ಹಾಗೂ ಮಿಶ್ರಹರಿದ್ವರ್ಣ ಕಾಡುಗಳನ್ನು ಹೊಂದಿರುವ ಬಹುಸೂಕ್ಷ್ಮ ಜಲಾನಯನ ಪ್ರದೇಶ. 2018ರಲ್ಲಿ ಇಲ್ಲಿನ ಕಾಡು, ಪ್ರಸ್ತುತ ಪರಿಸ್ಥಿತಿ ಅಧ್ಯಯನ ನಡೆಸುವ ಸಂದರ್ಭದಲ್ಲಿ ನೀರ ನೇರಲ ಜಡ್ಡಿ ಪತ್ತೆಯಾಯಿತು. ಇಲ್ಲಿನ ಸುತ್ತಮುತ್ತ ಪ್ರದೇಶದಲ್ಲಿ ಇಂತಹ ಅನೇಕ ಪ್ರಭೇದಗಳು ಕಂಡಿವೆ. ಹುಳಕೋಡು ಜಡ್ಡಿಯಲ್ಲಿ ಅತಿ ಅಪರೂಪದ ನೀರುನೇರಳ ಮರಗಳಿವೆ. ಜೊತೆಗೆ, ರಾಂಪತ್ರೆ, ಕೇದಗೆ, ಹೊಲಗೇರಿ, ನೀಮಾ, ಜಿಮ್ನಾಕ್ರೆಂಥೇರಾ, ಗುಲ್ಮಾವು ತರಹದ ಹಲವಾರು ವಿನಾಶದ ಅಂಚಿನ ಜೌಗು ಪ್ರಭೇದಗಳೂ ಇಲ್ಲಿವೆ.

ಸುಮಾರು 300 ಕ್ಕೂ ಹೆಚ್ಚು ಹೂಬಿಡುವ ಪೊದೆ ಹಾಗೂ ಮರದ ಜಾತಿಯ ಪ್ರಭೇದಗಳನ್ನು ಇಲ್ಲಿ ಗುರುತಿಸಲಾಗಿದೆ. ಇವುಗಳಲ್ಲಿ 25ಕ್ಕೂ ಹೆಚ್ಚು ವಿನಾಶದಂಚಿನ ಪ್ರಭೇದಗಳು, 60ಕ್ಕೂ ಮಿಕ್ಕಿ ಔಷಧ ಗಿಡಗಳು, 15ಕ್ಕೂ ಹೆಚ್ಚು ನದೀತೀರದ ಮರಪ್ರಭೇದಗಳು, ಮಂಗ, ಕಾಡುಪಾಪ, ಚಿರತೆ, ಕಾಡುಕೋಣ, ಜಿಂಕೆ, ಹಂದಿ, ಮುಳ್ಳುಹಂದಿ ಸೇರಿದಂತೆ 18ಕ್ಕೂ ಹೆಚ್ಚಿನ ಸಸ್ತನಿ ಪ್ರಭೇದಗಳು, 55ಕ್ಕೂ ಹೆಚ್ಚಿನ ಪಕ್ಷಿಪ್ರಭೇದಗಳು, 21ಕ್ಕೂ ಹೆಚ್ಚಿನ ಮೀನು ಪ್ರಭೇದಗಳನ್ನು ದಾಖಲಿಸಲಾಗಿದೆ. ಇದು ಅಮೂಲ್ಯ ಜೀವವೈವಿಧ್ಯವಿರುವ ಅರಣ್ಯ ಪ್ರದೇಶವಾಗಿದೆ.

ಶಿಫಾರಸು: ರಾಮೇಶ್ವರ ನೀರನೇರಳೆ ಜಡ್ಡಿ ಸಂರಕ್ಷಣಾ ವಲಯವನ್ನು ಘೋಷಿಸಿ, ಸ್ಥಳೀಯ ಗ್ರಾಮ ಅರಣ್ಯ ಸಮಿತಿ ಮೂಲಕ ಅದನ್ನು ಸಂರಕ್ಷಿಸಬೇಕು. ಶರಾವತಿ ನದಿಯ ಮೇಲ್ಭಾಗದಲ್ಲಿ ಲಿಂಗನಮಕ್ಕಿ ಹಿನ್ನೀರಿಗೆ ಹೊಂದಿಕೊಂಡಿರುವ ಪರ್ವತ ಶ್ರೇಣಿಗುಂಟ ಇನ್ನೂ ಈ ತರಹದ ಜಡ್ಡಿ ಪ್ರದೇಶಗಳಿರುವ ಸಾಧ್ಯತೆಗಳಿವೆ. ಅದನ್ನು ಗುರುತಿಸುವ ಕಾರ್ಯವಾಗಬೇಕು.

ನೀರು ನೇರಳೆ ಜಡ್ಡಿಯ ಮರದ ಪ್ರಬೇಧಗಳನ್ನೂ ಒಳಗೊಂಡಂತೆ, ಈ ಪ್ರದೇಶದಲ್ಲಿರುವ ಎಲ್ಲ ಬಗೆಯ ವಿನಾಶದ ಅಂಚಿನಲ್ಲಿರುವ ಅಪರೂಪದ ಹೂಬಿಡುವ ಮರಗಳ ಪ್ರಭೇದಗಳನ್ನು ನರ್ಸರಿಯಲ್ಲಿ ಬೆಳೆಸಿ, ಅರಣ್ಯ ಬರಿದಾದ ಸ್ಥಳಗಳಲ್ಲಿ ಬೆಳೆಸುವ ಮತ್ತು ರೈತರಿಗೆ ವಿತರಿಸುವ ಪ್ರಯತ್ನವಾಗಬೇಕು. ಲಿಂಗನಮಕ್ಕಿ ಜಲಾಶಯದ ಹಿನ್ನೀರಿಗೆ ಸೇರುವ ಹುಳಕೋಡು ಹೊಳೆ ಸೇರಿದಂತೆ ಎಲ್ಲ ತೊರೆಗಳನ್ನು ಸಂರಕ್ಷಿಸಬೇಕು. ಗ್ರಾಮ ಅರಣ್ಯ ಸಮಿತಿಗಳ ಸಹಕಾರದೊಂದಿಗೆ, ತೀರದಂಚಿನ ಗಿಡಗಳನ್ನು ಬೆಳೆಸಿ, ಸಂರಕ್ಷಿಬೇಕು. ಕೆಪಿಸಿಯು ಜಲಾಶಯದ ಹಿನ್ನೀರಿನ ಪ್ರದೇಶದ ಮುಳುಗಡೆಯಾಗದ ಪ್ರದೇಶದಲ್ಲಿ ಹಸಿರು ಕಾರಿಡಾರ್ ನಿರ್ಮಿಸಲು ಯೋಜನೆ ರೂಪಿಸಬೇಕು.

Post Comments (+)