ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ದಸರಾ: ಅರ್ಜುನನಿಗೆ ಕಡೆಯ ಅವಕಾಶ

60 ವರ್ಷ ದಾಟಿದ ಆನೆಗಳ ಮೇಲೆ ಹೆಚ್ಚು ಒತ್ತಡ ಹೇರುವಂತಿಲ್ಲ
Last Updated 30 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

ಮೈಸೂರು: ದಸರಾ ಮಹೋತ್ಸವದ ಜಂಬೂಸವಾರಿಯಲ್ಲಿ 750 ಕೆ.ಜಿ. ಭಾರದ ಚಿನ್ನದ ಅಂಬಾರಿ ಹೊರಲು ಸಿದ್ಧವಾಗುತ್ತಿರುವ 59 ವರ್ಷದ ಅರ್ಜುನ ಆನೆಗೆ ಬಹುತೇಕ ಇದೇ ಕಡೆ ಅವಕಾಶ. ಹೀಗಾಗಿ, ಅರಣ್ಯ ಇಲಾಖೆಯು ಪರ್ಯಾಯ ಆನೆಯ ಹುಡುಕಾಟ ಆರಂಭಿಸಿದೆ.

ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಕೇಂದ್ರ ಸರ್ಕಾರ ರೂಪಿಸಿರುವ ಮಾರ್ಗಸೂಚಿ ಪ್ರಕಾರ 60 ವರ್ಷ ದಾಟಿದ ಆನೆಗಳ ಮೇಲೆ ಹೆಚ್ಚು ಒತ್ತಡ ಹೇರುವಂತಿಲ್ಲ. ಎಂಟನೇ ಬಾರಿ ಅಂಬಾರಿ ಹೊರಲಿರುವ ‘ಅರ್ಜುನ‘ನಿಗೆ ಮುಂದಿನ ವರ್ಷದ ದಸರೆ ವೇಳೆಗೆ 60 ತುಂಬಲಿದೆ.

‘ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯವು ಹೊರಡಿಸಿರುವ ಮಾರ್ಗಸೂಚಿ ಪ್ರಕಾರ ಶಿಬಿರ, ದೇಗುಲಗಳಲ್ಲಿ ಇಟ್ಟುಕೊಂಡಿರುವ, ವಯಸ್ಸಾದ ಆನೆಗಳನ್ನು ಕೆಲಸಕ್ಕೆ ಬಳಸಿಕೊಳ್ಳುವ ಸಂಬಂಧ ನಿರ್ಬಂಧಗಳಿವೆ. ಆನೆಯ ಆರೋಗ್ಯದ ಕುರಿತು ಪಶುವೈದ್ಯರು ನೀಡುವ ಪ್ರಮಾಣಪತ್ರದ ಮೇಲೆ ನಿರ್ಧಾರ ಕೈಗೊಳ್ಳಬೇಕಾಗುತ್ತದೆ’ ಎಂದು ಮಲೆಮಹದೇಶ್ವರ ವನ್ಯಜೀವಿ ಧಾಮದ ಡಿಸಿಎಫ್‌ ಏಡುಕುಂಡಲ ತಿಳಿಸಿದರು.

19 ವರ್ಷಗಳಿಂದ ದಸರೆಯಲ್ಲಿ ಭಾಗವಹಿಸುತ್ತಿರುವ ಅರ್ಜುನನ್ನು 1968ರಲ್ಲಿ ಕಾಕನಕೋಟೆ ಅರಣ್ಯದಲ್ಲಿ ಸೆರೆ ಹಿಡಿಯಲಾಗಿತ್ತು. ಬಳ್ಳೆ ಶಿಬಿರದ ಈ ಆನೆಯ ತೂಕ 5,800 ಕೆ.ಜಿ.

20 ವರ್ಷಗಳಿಂದ ದಸರೆಯಲ್ಲಿ ಪಾಲ್ಗೊಳ್ಳುತ್ತಿರುವ ಮತ್ತಿಗೋಡು ಶಿಬಿರದ ಅಭಿಮನ್ಯು (53) ಆನೆಗೆ ಅವಕಾಶ ಸಿಗುವ ಸಾಧ್ಯತೆ ಇದೆ. 1977ರಲ್ಲಿ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಹೆಬ್ಬಳ್ಳ ಪ್ರದೇಶದಲ್ಲಿ ಇದನ್ನು ಸೆರೆ ಹಿಡಿಯಲಾಗಿತ್ತು. ಕಾಡಾನೆಗಳನ್ನು ಹಿಡಿಯುವುದರಲ್ಲಿ ಇದು ಪಳಗಿದೆ.

ಒತ್ತಡದಲ್ಲಿ ಗಜಪಡೆ: ಜಂಬೂಸವಾರಿಯಲ್ಲಿ ಬಳಸುವ ಆನೆಗಳು ಹೆಚ್ಚು ಒತ್ತಡಕ್ಕೆ ಒಳಗಾಗುತ್ತಿವೆ ಎಂದು ಹೈದರಾಬಾದ್‌ನಲ್ಲಿರುವ ‘ಸೆಲ್ಯೂಲರ್‌ ಅಂಡ್‌ ಮಾಲಿಕ್ಯೂಲರ್‌ ಬಯಾಲಜಿ ಕೇಂದ್ರ’ದ (ಸಿಸಿಎಂಬಿ) ಅಧ್ಯಯನ ವರದಿ ಹೇಳುತ್ತಿದೆ.

‘ಕಾಡಿನಲ್ಲಿ ಹಾದು ಹೋಗಿರುವ ರಸ್ತೆಗಳಲ್ಲಿ ವಾಹನಗಳು ಸಂಚರಿಸಿದಾಗ, ಸಫಾರಿ ವಾಹನಗಳ ಸದ್ದಿನಿಂದ ಹಾಗೂ ಜನಸಂದಣಿ ಮಧ್ಯೆ ಓಡಾಡಿದಾಗ ಆನೆಗಳು ಒತ್ತಡಕ್ಕೆ ಒಳಗಾಗುತ್ತಿವೆ. ಭಾರ ಹೊರಿಸಿದಾಗಲೂ ಒತ್ತಡ ಉಂಟಾಗುತ್ತಿದೆ. ರಕ್ತದ ಮಾದರಿ ಪಡೆದು ನಡೆಸಿದ ಪರೀಕ್ಷೆಯಿಂದ ಇದು ಸಾಬೀತಾಗಿದೆ’ ಎಂದು ಮೈಸೂರಿನ ವನ್ಯಜೀವಿ ಸಂರಕ್ಷಣಾ ಫೌಂಡೇಷನ್‌ ವ್ಯವಸ್ಥಾಪಕ ಟ್ರಸ್ಟಿ ಡಿ.ರಾಜಕುಮಾರ್‌ ತಿಳಿಸಿದರು.

**

ಅಂಬಾರಿ ಹೊರಿಸಲು 2ನೇ ಹಂತದ ಆನೆ ಸಜ್ಜು ಗೊಳಿಸಲಾಗುತ್ತಿದೆ. ‘ಅಭಿಮನ್ಯು’ ಮೊದಲ ಆಯ್ಕೆ. ‘ಗೋಪಿ’, ‘ಧನಂಜಯ’ನಿಗೂ ತರಬೇತಿ ನೀಡಲಾಗುವುದು
– ಡಾ.ಡಿ.ಎನ್‌. ನಾಗರಾಜ್‌, ಪಶುವೈದ್ಯ

**

ಸೆರೆ ಹಿಡಿದ ಆನೆಗಳ ಸರಾಸರಿ ಜೀವಿತಾವಧಿ 65. ಹೀಗಾಗಿ, 60 ವರ್ಷ ದಾಟಿದ ಆನೆಗಳ ಮೇಲೆ ಭಾರ ಹೊರಿಸಬಾರದು, ಹೆಚ್ಚು ಕೆಲಸ ನೀಡಬಾರದು
– ಡಿ.ರಾಜಕುಮಾರ್‌, ವ್ಯವಸ್ಥಾಪಕ ಟ್ರಸ್ಟಿ,ವನ್ಯಜೀವಿ ಸಂರಕ್ಷಣಾ ಫೌಂಡೇಷನ್‌, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT