ದಸರಾ ಚಿನ್ನದ ಅಂಬಾರಿ ರೂವಾರಿಯ ಭಾರ 5,650 ಕೆ.ಜಿ; ಈ ಬಾರಿಯೂ ಅರ್ಜುನನೇ ಬಲಾಢ್ಯ

7
ಗಜಪಡೆ ತೂಕ

ದಸರಾ ಚಿನ್ನದ ಅಂಬಾರಿ ರೂವಾರಿಯ ಭಾರ 5,650 ಕೆ.ಜಿ; ಈ ಬಾರಿಯೂ ಅರ್ಜುನನೇ ಬಲಾಢ್ಯ

Published:
Updated:
Deccan Herald

ಮೈಸೂರು: 750 ಕೆ.ಜಿ ತೂಕದ ಚಿನ್ನದ ಅಂಬಾರಿ ಹೊರುವ ಅರ್ಜುನ ಆನೆ ಈ ಬಾರಿಯೂ ಬಲಶಾಲಿಯಾಗಿ ಹೊರಹೊಮ್ಮಿದೆ. ಈ ಸಲಗವು ಬರೋಬ್ಬರಿ 5,650 ಕೆ.ಜಿ ಭಾರವಿದೆ.

ಕಳೆದ ವರ್ಷಕ್ಕಿಂತ 400 ಕೆ.ಜಿ ತೂಕ ಹೆಚ್ಚಿಸಿಕೊಂಡಿದ್ದು, ಕಟ್ಟುಮಸ್ತಾಗಿದೆ. ಏಕೆಂದರೆ 2017ರ ದಸರೆಯಲ್ಲಿ ಪಾಲ್ಗೊಳ್ಳಲು ಬಂದಾಗ ಈ ಆನೆ ತೂಕ 5,250 ಕೆ.ಜಿ. ಇತ್ತು. ಯಶಸ್ವಿಯಾಗಿ ಜಂಬೂಸವಾರಿ ಪೂರೈಸಿ ಹೊರಡುವಾಗ 5,910 ಕೆ.ಜಿ.ಗೆ ಏರಿತ್ತು.

ವಿಶ್ವಪ್ರಸಿದ್ಧ ದಸರಾ ಮಹೋತ್ಸವದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲಿರುವ ಆನೆಗಳ ತೂಕ ಪರೀಕ್ಷೆಯನ್ನು ಗುರುವಾರ ನಡೆಸಲಾಯಿತು. ಧನ್ವಂತ್ರಿ ರಸ್ತೆಯಲ್ಲಿರುವ ಸಾಯಿರಾಂ ಎಲೆಕ್ಟ್ರಾನಿಕ್‌ ವೇಬ್ರಿಡ್ಸ್‌ ಮೇಲೆ ಅರ್ಜುನ ಬಂದು ನಿಲ್ಲುತ್ತಿದ್ದಂತೆ ಎಲ್ಲರ ಚಿತ್ತ ಕಂಪ್ಯೂಟರ್‌ನತ್ತ ವಾಲಿತು.

ಆನೆಗಳ ಆರೋಗ್ಯದ ಮೇಲೆ ನಿಗಾ ಇಡಲು, ಅವುಗಳ ಆರೈಕೆಗೆ ಮಾನದಂಡ ತಿಳಿದುಕೊಳ್ಳಲು, ಸಮರ್ಪಕ ಆಹಾರ ಪೂರೈಕೆ ಮಾಡಲು ಪ್ರತಿ ಬಾರಿ ತೂಕ ಮಾಡುವುದು ವಾಡಿಕೆ. ಜಂಬೂಸವಾರಿಗೆ ಎರಡು ದಿನ ಬಾಕಿ ಇರುವಾಗ ಮತ್ತೊಮ್ಮೆ ತೂಕ ಮಾಡಿಸಿ ಎಷ್ಟು ಪೌಷ್ಟಿಕಾಂಶ ನೀಡಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ. ದಸರಾ ಮುಗಿದ ನಂತರವೂ ಆನೆಗಳನ್ನು ತೂಕಕ್ಕೆ ಒಳಪಡಿಸಲಾಗುತ್ತದೆ.

ದಸರಾ ಆನೆಗಳಿಗೆ ಜಂಬೂಸವಾರಿ ತಾಲೀಮು ಸಂಜೆಯಿಂದಲೇ ಆರಂಭವಾಯಿತು. ಈ ಆನೆಗಳಿಗೆ ಈಗಿನಿಂದಲೇ ಪೌಷ್ಟಿಕ ಆಹಾರ ನೀಡಲಾಗುತ್ತದೆ.

4,435 ಕೆ.ಜಿ. ತೂಕ ಹೊಂದಿರುವ ಗೋಪಿ ಆನೆ ಎರಡನೇ ಸ್ಥಾನದಲ್ಲಿದೆ. ಇದೇ ಮೊದಲ ಬಾರಿಗೆ ದಸರೆಯಲ್ಲಿ ಭಾಗವಹಿಸುತ್ತಿರುವ ಧನಂಜಯ ಆನೆ 4,045 ಕೆ.ಜಿ ತೂಕ ಹೊಂದಿದೆ.

ವಿಶೇಷ ಆಹಾರ: ಗಜಪಡೆಗೆ ಹಸಿರು ಕಾಳು, ಉದ್ದಿನ ಕಾಳು, ಕುಸುಬಲ ಅಕ್ಕಿ, ಗೋಧಿ ಬೇಯಿಸಿ ಅದಕ್ಕೆ ಈರುಳ್ಳಿ, ಉಪ್ಪು ಹಾಕಿ ಬೇಯಿಸಲಾಗುತ್ತದೆ. ನಂತರ ಅದಕ್ಕೆ ತರಕಾರಿ, ತುಪ್ಪ ಹಾಕಿ ಗುಡ್ಡೆ ಮಾಡಿ ಬೆಳಿಗ್ಗೆ 6.30 ರ ಸುಮಾರಿಗೆ ನೀಡಲಾಗುತ್ತದೆ. ‌

ವಿಶೇಷ ಆಹಾರದ ಜೊತೆಗೆ ಕುಸರೆಯ ಮೂಲಕ ಭತ್ತ, ಬೆಲ್ಲ, ಬೆಣ್ಣೆ ವಿವಿದ ಬಗ್ಗೆಯ ಸೊಪ್ಪು, ಕೊಬ್ಬರಿ, ತೆಂಗಿನಕಾಯಿಯನ್ನು ಪ್ರತಿದಿನ ಎರಡು ಬಾರಿ ನೀಡಲಾಗುತ್ತದೆ. ಕ್ಯಾಪ್ಟನ್‌ ಅರ್ಜುನನ ಆಹಾರದಲ್ಲೂ ವಿಶೇಷ ಕಾಳಜಿ ವಹಿಸಲಾಗುತ್ತದೆ. ವಿಶೇಷ ಆಹಾರದ ಜೊತೆಗೆ ಹೆಚ್ಚಿನ ಬೆಣ್ಣೆ, ಬೆಲ್ಲ, ಕೊಬ್ಬರಿ, ಕಬ್ಬು ನೀಡಿ ಬಲಶಾಲಿಯನ್ನಾಗಿ ಮಾಡಲಾಗುತ್ತದೆ. ತಾಲೀಮು ಆರಂಭಕ್ಕೂ ಮುನ್ನ ಹಾಗೂ ತಾಲೀಮು ಮುಗಿದ ನಂತರ ದಿನಕ್ಕೆ ಎರಡು ಬಾರಿ ವಿಶೇಷ ಆಹಾರ ನೀಡಲಾಗುತ್ತದೆ.

‘ಕಾಡಿನಲ್ಲಿದ್ದಾಗ ಕೇವಲ ಭತ್ತ, ಹುಲ್ಲು, ಸೊಪ್ಪು ತಿಂದುಕೊಂಡು ಇರುತ್ತವೆ. ಇಲ್ಲಿಗೆ ಬಂದ ಮೇಲೆ ಕಾಳನ್ನು ಬೇಯಿಸಿ ನೀಡುತ್ತೇವೆ. ಜೊತೆಗೆ ಪೌಷ್ಟಿಕಾಂಶಯುಕ್ತ ಆಹಾರ ನೀಡಲಾಗುತ್ತದೆ. ಹೀಗಾಗಿ, ತೂಕ ಹೆಚ್ಚುತ್ತದೆ’ ಎಂದು ಹೇಳುತ್ತಾರೆ ಆನೆ ವೈದ್ಯ ಡಾ.ನಾಗರಾಜು.

ಮೊದಲ ಹಂತದಲ್ಲಿ ಆರು ಆನೆಗಳು ಅರಮನೆ ಆವರಣ ಪ‍್ರವೇಶಿಸಿವೆ. ಎರಡನೇ ಹಂತದಲ್ಲಿ ಉಳಿದ ಆನೆಗಳು ಸೆ.14 ರಂದು ಬರುವ ನಿರೀಕ್ಷೆ ಇದೆ.

ಆನೆಗಳ ತೂಕ (ಕೆ.ಜಿಗಳಲ್ಲಿ)

ಅರ್ಜುನ: 5,650

ಗೋಪಿ: 4,435

ಧನಂಜಯ: 4,045

ವಿಕ್ರಮ: 3,985

ವರಲಕ್ಷ್ಮಿ: 3,120

ಚೈತ್ರಾ: 2,920

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !