ಸಿಂಗಾರಗೊಂಡ ಅರಮನೆ ನಗರಿ

7
ದಸರೆಗೆ ನೀತಿ ಸಂಹಿತೆ ಅಡ್ಡಿ ಸಾಧ್ಯತೆ– ಸಲಹೆ ಕೋರಿ ಚುನಾವಣಾ ಆಯೋಗಕ್ಕೆ ಪತ್ರ

ಸಿಂಗಾರಗೊಂಡ ಅರಮನೆ ನಗರಿ

Published:
Updated:
Deccan Herald

ಮೈಸೂರು: ನಾಡಹಬ್ಬ ದಸರಾ ಮಹೋತ್ಸವಕ್ಕೆ ಅರಮನೆಗಳ ನಗರಿ ಸಿಂಗಾರಗೊಂಡಿದ್ದು, ಪ್ರಮುಖ ರಸ್ತೆಗಳು, ವೃತ್ತಗಳು ವಿದ್ಯುತ್ ದೀಪಾಲಂಕಾರದಿಂದ ಜಗಮಗಿಸುತ್ತಿವೆ.

ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ ದಸರೆ ಆರಂಭಕ್ಕೂ ಮುನ್ನ ಗಾಳಿಪಟ ಉತ್ಸವ, ವಿಂಟೇಜ್‌ ಕಾರು ರ‍್ಯಾಲಿ, ಆಟೊಕ್ರಾಸ್‌, ಟ್ರಯಥ್ಲಾನ್‌ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿರುವುದರಿಂದ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ತೆರೆದ ಬಸ್‌ನಲ್ಲಿ ಪ್ರವಾಸಿಗರು ನಗರದ ಸೊಬಗು ಕಣ್ತುಂಬಿಕೊಳ್ಳುತ್ತಿದ್ದಾರೆ.

ಹತ್ತು ದಿನಗಳ ದಸರಾ ಉತ್ಸವವನ್ನು ಉದ್ಯಮಿ, ಲೇಖಕಿ ಸುಧಾಮೂರ್ತಿ ಬುಧವಾರ ಬೆಳಿಗ್ಗೆ 7 ಗಂಟೆಗೆ ಚಾಮುಂಡಿಬೆಟ್ಟದಲ್ಲಿ ಉದ್ಘಾಟಿಸಲಿದ್ದಾರೆ.

ನೀತಿ ಸಂಹಿತೆ ಆತಂಕ: ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿರುವುದರಿಂದ ದಸರೆ ಆಚರಣೆಗೂ ನೀತಿ ಸಂಹಿತೆ ಬಿಸಿ ತಟ್ಟುವ ಆತಂಕ ಎದುರಾಗಿದೆ. ಈ ಬಗ್ಗೆ ಸಲಹೆ ಕೋರಿ ಚುನಾವಣಾ ಆಯೋಗಕ್ಕೆ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್‌ ಪತ್ರ ಬರೆದಿದ್ದಾರೆ.

‘ಮೂರು ಪುಟಗಳ ಪತ್ರ ಬರೆಯಲಾಗಿದೆ. ಮಂಗಳವಾರ ಸಂಜೆ ವೇಳೆಗೆ ಸ್ಪಷ್ಟ ಮಾಹಿತಿ ನೀಡುವುದಾಗಿ ಹೇಳಿದ್ದಾರೆ. ಮಂಡ್ಯ ಲೋಕಸಭೆ ಕ್ಷೇತ್ರಕ್ಕೆ ಮೈಸೂರು ಜಿಲ್ಲೆಯ ಕೆ.ಆರ್‌.ನಗರ ವಿಧಾನಸಭಾ ಕ್ಷೇತ್ರ ಕೂಡ ಸೇರಲಿದೆ. ಹೀಗಾಗಿ, ನಮಗೂ ನೀತಿ ಸಂಹಿತೆ ಅನ್ವಯವಾಗುವ ಸಾಧ್ಯತೆ ಇದೆ. ಆದರೆ, ಈ ವಿಚಾರದಲ್ಲಿ ತುಸು ಗೊಂದಲ ಏರ್ಪಟ್ಟಿದೆ‌’ ಎಂದು ಅವರು ತಿಳಿಸಿದರು.

‘ದಸರಾ ವೇಳಾಪಟ್ಟಿ ಬದಲಾವಣೆ ಅಸಾಧ್ಯ. ಅಕಸ್ಮಾತ್‌ ನೀತಿ ಸಂಹಿತೆ ಜಾರಿಯಾದರೆ ಯಾವ ರೀತಿ ಆಚರಿಸಬಹುದು ಎಂಬುದರ ಬಗ್ಗೆ ಸಲಹೆ ಕೋರಿದ್ದೇವೆ. ದಸರೆಗೆ ಈಗಾಗಲೇ ಸಿದ್ಧತೆಗಳು ಪೂರ್ಣಗೊಂಡಿವೆ’ ಎಂದರು.‌

ನೀತಿ ಸಂಹಿತೆ ಪೂರ್ಣ ಪ್ರಮಾಣದಲ್ಲಿ ಮೈಸೂರು ಜಿಲ್ಲೆಗೂ ಅನ್ವಯಿಸಿದರೆ ಮುಖ್ಯಮಂತ್ರಿ ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳು ದಸರೆಯಿಂದ ಹೊರಗುಳಿಯಬೇಕಾಗುತ್ತದೆ.

ವಿಮಾನ ಸೇವೆ: ಪ್ರವಾಸೋದ್ಯಮ ಇಲಾಖೆ ವತಿಯಿಂದ ಅ.10ರಿಂದ 19ರವರೆಗೆ ಬೆಂಗಳೂರು– ಮೈಸೂರು ನಡುವೆ ವಿಶೇಷ ವಿಮಾನ ಸೇವೆ ಆರಂಭಿಸಲಾಗುತ್ತಿದೆ.

‘ಬೆಂಗಳೂರಿನಿಂದ ಕೇವಲ ₹ 999 ದರದಲ್ಲಿ ಮುಕ್ಕಾಲು ಗಂಟೆಯಲ್ಲಿ ಮೈಸೂರು ತಲುಪಬಹುದು. ಟ್ಯಾಕ್ಸಿಯಲ್ಲಿ ಹೋಗಲು ಕನಿಷ್ಠ ಎರಡೂವರೆ ಗಂಟೆ ಬೇಕು. ₹ 4,000 ಖರ್ಚು ಮಾಡಬೇಕಾಗುತ್ತದೆ’ ಎಂದು ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಬಿ.ರಾಮು ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 10

  Happy
 • 1

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !