ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ತದಾನ ಶಿಬಿರಕ್ಕೂ ತಟ್ಟಿದ ನೀತಿ ಸಂಹಿತೆ ಬಿಸಿ

ಹಳ್ಳಿಗಳಲ್ಲಿ ಶಿಬಿರ ಆಯೋಜನೆಗೆ ಹಿಂದೇಟು ಹಾಕುತ್ತಿರುವ ಜನಪ್ರತಿನಿಧಿಗಳು
Last Updated 28 ಏಪ್ರಿಲ್ 2018, 7:36 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಒಂದೆಡೆ ವಿಧಾನಸಭೆ ಚುನಾವಣೆ ಮಾದರಿ ನೀತಿ ಸಂಹಿತೆ ಅಡ್ಡಿ, ಇನ್ನೊಂದೆಡೆ ಪರೀಕ್ಷೆ ಋತುವಿನಿಂದಾಗಿ ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆ ಜಿಲ್ಲಾ ಶಾಖೆ ವ್ಯಾಪಕವಾಗಿ ರಕ್ತದಾನ ಶಿಬಿರ ಆಯೋಜಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಜಿಲ್ಲೆಯಲ್ಲಿ ರಕ್ತದ ಕೊರತೆ ಕಾಣಿಸಿಕೊಂಡಿದೆ.

ಸರ್ಕಾರ ಕಳೆದ ಸೆಪ್ಟೆಂಬರ್‌ನಿಂದ ಒಂದು ಯೂನಿಟ್ ರಕ್ತದ ಬೆಲೆಯನ್ನು ₹ 600ರಿಂದ ₹450ಕ್ಕೆ ಇಳಿಕೆ ಮಾಡಿತ್ತು. ಇದರಿಂದಾಗಿ ಜಿಲ್ಲೆಯ ರಕ್ತನಿಧಿಗೆ ಕೋಲಾರ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ತುಮಕೂರು, ಆಂಧ್ರಪ್ರದೇಶದ ಮತ್ತಿತರ ಜಿಲ್ಲೆಗಳಿಂದ ರಕ್ತ ಪಡೆಯಲು ಬರುವವರ ಸಂಖ್ಯೆ ಹೆಚ್ಚುತ್ತಿದೆ. ಒಂದೆಡೆ ಸರಿಯಾಗಿ ಶಿಬಿರಗಳು ನಡೆಯದೆ ಸಂಗ್ರಹ ಕಡಿಮೆಯಾಗಿದೆ. ಇನ್ನೊಂದೆಡೆ ಪರಸ್ಥಳದವರಿಂದ ಬೇಡಿಕೆ ಜಾಸ್ತಿಯಾಗಿದೆ. ಈ ವ್ಯತ್ಯಾಸ ಕೊರತೆಯನ್ನು ಸೃಷ್ಟಿ ಮಾಡುತ್ತಿದೆ.

‘ಬೇಸಿಗೆಯಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಪರೀಕ್ಷೆ ಒತ್ತಡ ಮತ್ತು ಪರೀಕ್ಷೆ ನಂತರ ರಜೆ ಇರುವುದು. ಹೀಗಾಗಿ ಸದ್ಯ ಕಾಲೇಜುಗಳಲ್ಲಿ ರಕ್ತದಾನ ಶಿಬಿರ ಆಯೋಜಿಸಲು ಸಾಧ್ಯವಾಗುತ್ತಿಲ್ಲ. ಜತೆಗೆ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಗೆ ಬಂದ ದಿನದಿಂದ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಶಿಬಿರ ನಡೆಸಲು ಆಗುತ್ತಿಲ್ಲ’ ಎನ್ನುತ್ತಾರೆ ರೆಡ್‌ಕ್ರಾಸ್‌ ಸಂಸ್ಥೆ ಜಿಲ್ಲಾ ಶಾಖೆ ಕಾರ್ಯದರ್ಶಿ ಭದ್ರಾಚಲಂ.

ಸಾಮಾನ್ಯ ದಿನಗಳಲ್ಲಿ ರಾಜಕಾರಣಿಗಳು, ಚಿತ್ರನಟರ ಜನ್ಮದಿನದಂದು ಬೆಂಬಲಿಗರು, ಅಭಿಮಾನಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಶಿಬಿರ ಆಯೋಜಿಸುತ್ತಿದ್ದರು. ಈಗ ಎಲ್ಲರೂ ಚುನಾವಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಅತಿ ಹೆಚ್ಚು ರಕ್ತದಾನ ಶಿಬಿರಗಳ ಆಯೋಜನೆ, ಸದಸ್ಯತ್ವ ನೋಂದಣಿ, ಹೆಚ್ಚು ರಕ್ತ ಸಂಗ್ರಹದ ಸಾಧನೆಗಳಿಗಾಗಿ ರೆಡ್‌ ಕ್ರಾಸ್‌ ಜಿಲ್ಲಾ ಶಾಖೆ ಮೂರು ಬಾರಿ ರಾಜ್ಯ ಮಟ್ಟದ ಪ್ರಶಸ್ತಿ ಪಡೆದಿದೆ. ಆಂಧ್ರಪ್ರದೇಶದ ಗಡಿಯಿಂದ ಬೆಂಗಳೂರುವರೆಗೂ ಉತ್ತಮ ರಕ್ತನಿಧಿ ಕೇಂದ್ರಗಳಿಲ್ಲ. ಇದರಿಂದಾಗಿ ಹೊರಜಿಲ್ಲೆಯ ಆಸ್ಪತ್ರೆಗಳಿಗೂ ಇಲ್ಲಿಂದ ರಕ್ತ ಪೂರೈಸಲಾಗಿತ್ತು. ಆದರೆ ಈಗ ಬೇಡಿಕೆಗೆ ತಕ್ಕಷ್ಟು ರಕ್ತ ಪೂರೈಸುವುದೇ ದೊಡ್ಡ ಸವಾಲಾಗಿದೆ ಎಂದೂ ಹೇಳುವರು.

**
ಚುನಾವಣಾ ನೀತಿ ಸಂಹಿತೆ ಜಾರಿಯಾದ ದಿನದಿಂದ ಈವರೆಗೆ ಐದಾರು ಶಿಬಿರ ರದ್ದುಗೊಂಡಿವೆ. ನಿಯಮಿತವಾಗಿ ನಡೆಯಬೇಕಿದ್ದ ಅನೇಕ ಶಿಬಿರಗಳೂ ನಡೆಯದೆ ರಕ್ತದ ಕೊರತೆಯಾಗಿದೆ
 – ಭದ್ರಾಚಲಂ, ರೆಡ್​ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT