ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು– ಕೊಡಗು: ಫಲಿತಾಂಶ ನಿರ್ಧರಿಸುವ ‘ಮೈತ್ರಿ ಬೆಸುಗೆ’

ಪ್ರತಿಷ್ಠೆ ಪಣಕ್ಕಿಟ್ಟ ಸಿದ್ದರಾಮಯ್ಯ
Last Updated 24 ಏಪ್ರಿಲ್ 2019, 12:15 IST
ಅಕ್ಷರ ಗಾತ್ರ

ಮೈಸೂರು: ಮೈಸೂರು– ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ತಮ್ಮ ಪ್ರತಿಷ್ಠೆ ಪಣಕ್ಕಿಟ್ಟಿದ್ದಾರೆ. ಮೈತ್ರಿ ಅಭ್ಯರ್ಥಿಯ ಗೆಲುವಿಗಾಗಿ ‘ರಾಜಕೀಯ ಹೊಂದಾಣಿಕೆ’ಯಲ್ಲಿ ತೊಡಗಿದ್ದಾರೆ. ಕ್ಷೇತ್ರದ ಮಟ್ಟಿಗೆ ‘ಸಿದ್ದರಾಮಯ್ಯ– ಮೋದಿ’ ನಡುವಿನ ಹಣಾಹಣಿ ಎಂದೇ ಬಿಂಬಿತವಾಗಿದೆ.

ಮೈತ್ರಿ ಕೂಟದ ಅಭ್ಯರ್ಥಿ ಸಿ.ಎಚ್.ವಿಜಯಶಂಕರ್, ಬಿಜೆಪಿ ಸಂಸದ ಪ್ರತಾಪಸಿಂಹ ನಡುವೆ ನೇರ ಕದನವಿದೆ. ಬಿಎಸ್‌ಪಿಯಿಂದ ಬಿ.ಚಂದ್ರ ಕಣದಲ್ಲಿ ಇದ್ದಾರೆ.

ಜೆಡಿಎಸ್‌ ಈ ಕ್ಷೇತ್ರಕ್ಕಾಗಿ ಪಟ್ಟು ಹಿಡಿದಿತ್ತು. ಆದರೆ, ಸಿದ್ದರಾಮಯ್ಯ ತಮ್ಮ ಪ್ರಭಾವ ಬಳಸಿ ಕಾಂಗ್ರೆಸ್ ತೆಕ್ಕೆಯಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಕ್ಷೇತ್ರ ಕೈ ಬಿಟ್ಟುಹೋದ ಸಂಕಟ ಜೆಡಿಎಸ್‌ ಮುಖಂಡರನ್ನು ಕಾಡುತ್ತಿದೆ. ಆರಂಭದಲ್ಲಿ ಇದ್ದ ಸಿಟ್ಟು ಈಗ ತಗ್ಗಿದೆ. ಆದರೆ, ಪೂರ್ಣ ಶಮನವಾಗಿಲ್ಲ. ಒಳಬೇಗುದಿಗೆ ಮುಲಾಮು ಹಚ್ಚಿಲ್ಲ. ಗಾಯ ಮೇಲ್ನೋಟಕ್ಕೆ ಒಣಗಿದಂತೆ ಕಂಡರೂ ಒಳಗೆ ಹಸಿಯಾಗಿದೆ.

ಪಕ್ಕದ ಕ್ಷೇತ್ರಗಳ ಪರಿಣಾಮ: ಮೈಸೂರು ಬಿಟ್ಟುಕೊಟ್ಟಿದ್ದಕ್ಕೆ ಮಂಡ್ಯ, ಹಾಸನ, ತುಮಕೂರು ಕ್ಷೇತ್ರದಲ್ಲಾದರೂ ಅನುಕೂಲ ಆಗಬಹುದು ಎಂಬ ಜೆಡಿಎಸ್ ಮುಖಂಡರ ಲೆಕ್ಕಾಚಾರ ತಲೆ ಕೆಳಗಾದಂತೆ ಕಾಣುತ್ತಿದೆ. ಒಂದೆಡೆ ಕ್ಷೇತ್ರ ಕಿತ್ತುಕೊಂಡ ಸಿದ್ದರಾಮಯ್ಯ, ಮತ್ತೊಂದೆಡೆ ಬೆಂಬಲಿಗರ ಮೂಲಕ ಪಕ್ಕದ ಎರಡೂ ಕ್ಷೇತ್ರದಲ್ಲಿ ಕಿಡಿ ಹಚ್ಚಿ ದ್ದಾರೆ ಎಂಬ ಅಸಮಾಧಾನ ವರಿಷ್ಠ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರಲ್ಲಿ ಮೂಡಿದೆ. ಮಂಡ್ಯದಲ್ಲಿ ನಟಿ ಸುಮಲತಾ ಸ್ಪರ್ಧೆಗೆ ಪರೋಕ್ಷ ಬೆಂಬಲ ನೀಡಿ, ಗೌಡರ ವಿರೋಧಿಗಳ ಮೂಲಕ ಸಹಕರಿಸಿದ್ದಾರೆ. ಹಾಸನದಲ್ಲಿ ಎ.ಮಂಜು, ಬಿಜೆಪಿಯಿಂದ ಸ್ಪರ್ಧಿ ಸುವಂತೆ ಮಾಡಿ ದೊಡ್ಡಗೌಡರ ಕೈ ಕಟ್ಟಿಹಾಕುವಂತೆ ಮಾಡಿದ್ದಾರೆ ಎಂಬ ಮಾತು ಜೆಡಿಎಸ್‌ನಲ್ಲಿ ದಟ್ಟವಾಗಿದೆ.

ಈ ಮೂರು ಕ್ಷೇತ್ರಗಳ ಸುತ್ತಲೇ ರಾಜಕೀಯ ಲೆಕ್ಕಾಚಾರ ಗಿರಕಿ ಹೊಡೆ ಯುತ್ತಿದೆ. ಅಲ್ಲಿ ಕಾಂಗ್ರೆಸ್‌ನವರು ಹೇಗೆ ಸಹಕಾರ ಕೊಡುತ್ತಾರೆ ಎಂಬುದರ ಮೇಲೆ ಮೈಸೂರು ಕ್ಷೇತ್ರದಲ್ಲೂ ಸಹ ಕಾರ ಸಿಗಲಿದೆ. ಅಲ್ಲಿ ಕೈ ಕೊಟ್ಟರೆ, ಇಲ್ಲಿ ನಾವೂ ನೋಡಿಕೊಳ್ಳುತ್ತೇವೆ ಎನ್ನುತ್ತಿದ್ದಾರೆ ಜೆಡಿಎಸ್ ಮುಖಂಡರು. ತೋರಿಕೆಗಾಗಿ ಒಗ್ಗಟ್ಟು ಪ್ರದರ್ಶಿಸಿದರೂ ಎರಡು ಪಕ್ಷಗಳ ಕಾರ್ಯಕರ್ತರ ಸಿಟ್ಟು ಶಮನಗೊಳಿಸುವ ಪ್ರಯತ್ನ ನಡೆದಿಲ್ಲ. ಉಳಿದಿರುವ ಸಮಯದಲ್ಲಾದರೂ ಒಗ್ಗೂಡದಿದ್ದರೆ ಫಲಿತಾಂಶದ ಮೇಲೆ ಪರಿಣಾಮ ಗೋಚರಿಸುವುದು ನಿಶ್ಚಿತ.

ಬೆಸುಗೆ: ಅನಿವಾರ್ಯವಾಗಿ ‘ಗುರು– ಶಿಷ್ಯರು’ ಒಗ್ಗಟ್ಟು ಪ್ರದರ್ಶಿಸಿದರೂ ಇತರ ನಾಯಕರು ಮನಸ್ಸು ಬಿಚ್ಚಿ ಅಖಾ ಡಕ್ಕೆ ಇಳಿದಿಲ್ಲ. ಸಚಿವ ಜಿ.ಟಿ.ದೇವೇಗೌಡ, ಜೆಡಿಎಸ್ ರಾಜ್ಯ ಅಧ್ಯಕ್ಷ ಎಚ್.ವಿಶ್ವನಾಥ್ ಈಗಷ್ಟೇ ಪ್ರಚಾರದತ್ತ ಮುಖಮಾಡಿದ್ದಾರೆ. ಸಚಿವ ಸಾ.ರಾ.ಮಹೇಶ್ ಮಂಡ್ಯ ಕ್ಷೇತ್ರದತ್ತ ಗಮನ ಹರಿಸಿದ್ದಾರೆ. ಮೈತ್ರಿ ಬಲಗೊಂಡರೆ ಗೆಲುವಿನ ದಡ ಸೇರುವುದು ಕಷ್ಟವಾಗ ಲಾರದು.

ವಿಜಯಶಂಕರ್ ಅವರನ್ನು ಬಿಜೆಪಿ ಯಿಂದ ಕರೆತಂದು ನಿಲ್ಲಿಸಿರುವುದಕ್ಕೆ ಕಾಂಗ್ರೆಸ್ ಒಳಗೂ ಅಸಮಾಧಾನ ಮೂಡಿತ್ತು. ಕ್ಷೇತ್ರದಲ್ಲಿ ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರೂ ಅವಕಾಶ ನೀಡಿಲ್ಲ. ತಮ್ಮ ಸಮುದಾಯದವರಿಗೆ ಸಿದ್ದರಾಮಯ್ಯ ಮಣೆ ಹಾಕಿದ್ದಾರೆ ಎಂಬ ಭಾವನೆ ಇತ್ತು. ಚುನಾವಣೆ ಸಮೀಪಿಸಿದಂತೆ ವಾತಾವರಣ ತಿಳಿಯಾ ಗುತ್ತಿದೆ. ದೋಸ್ತಿ ಜೊತೆಗೆ ಒಬಿಸಿ ಮತಗಳು ಸೇರಿದರೆ ವಿಜಯಶಂಕರ್‌ ಗೆಲುವಿನ ದಡ ಸೇರಲಿದ್ದಾರೆ ಎಂಬ ಲೆಕ್ಕಾಚಾರ ಕಾಂಗ್ರೆಸ್ ವಲಯದಲ್ಲಿದೆ.

ಮೋದಿ ಬಲ: ಮೋದಿ ಬಲದ ಮೇಲೆ ಪ್ರತಾಪ ಸಿಂಹ ಪ್ರಚಾರಕ್ಕೆ ಇಳಿದಿದ್ದಾರೆ. ‘ಮೋದಿ ವರ್ಸಸ್ ಮೋದಿ’ ಎಂಬುದೇ ಪ್ರಚಾರದ ಮಂತ್ರ. ಮೋದಿಗೆ ದೇಶದಲ್ಲಿ ಯಾರೂ ಪರ್ಯಾಯ ಇಲ್ಲ. ಐದು ವರ್ಷಗಳ ಆಡಳಿತ, ಕೊಟ್ಟ ಯೋಜನೆ ನೋಡಿ ಮತ ನೀಡುತ್ತಾರೆ. ಹಿಂದೆ ನಗರ ಪ್ರದೇಶಗಳಲ್ಲಿ ಮಾತ್ರ ಮೋದಿ ಬಗ್ಗೆ ಒಲವಿತ್ತು. ಈಗ ಗ್ರಾಮೀಣ ಪ್ರದೇಶಕ್ಕೂ ವಿಸ್ತರಿಸಿದೆ. ಪ್ರಧಾನಿ ನೋಡಿ ತಮ್ಮನ್ನು ಗೆಲ್ಲಿಸುತ್ತಾರೆ ಎಂದು ನಂಬಿದ್ದಾರೆ.

ಪ್ರತಾಪ ಸಿಂಹ ಯುವಕ, ಸಂಸತ್‌ ಪ್ರತಿನಿಧಿಸುವ ಚಾಕಚಕ್ಯತೆ, ಕಲೆಗಾರಿಕೆ ಇದೆ. ‘ಯುವ ಶಕ್ತಿ’ ಕೈ ಹಿಡಿಯಲಿದೆ. ಮತದಾರರ ಮೇಲೆ ಯುವಪಡೆ ಹೆಚ್ಚು ಪರಿಣಾಮ ಬೀರಲಿದೆ. ಜತೆಗೆ ಅಭಿವೃದ್ಧಿ ಕಾರ್ಯಗಳೂ ಮತಬುಟ್ಟಿ ತುಂಬಿಸಲಿವೆ ಎಂಬ ಉತ್ಸಾಹದಲ್ಲಿ ಇದ್ದಾರೆ. ರೈಲ್ವೆ ಯೋಜನೆ, ಹೆದ್ದಾರಿ ವಿಸ್ತರಣೆ, ಮೈಸೂರಿಗೆ ರೈಲು ಸಂಖ್ಯೆ ಹೆಚ್ಚಳ, ವಿಮಾನಯಾನ ಸೌಲಭ್ಯ ವಿಸ್ತರಣೆಯಂತಹ ಪ್ರಮುಖ ಸಾಧನೆಗಳು ಬಲ ತುಂಬುತ್ತಿವೆ.

ಪಕ್ಷದ ಒಳಗೆ: ಸ್ವಲ್ಪಮಟ್ಟಿಗೆ ಪಕ್ಷದ ಒಳಗೂ ವಿರೋಧ ಎದುರಿಸುತ್ತಿದ್ದಾರೆ. ಏನಿದ್ದರೂ ಮೋದಿ, ಅಮಿತ್ ಶಾ ಎನ್ನುತ್ತಾರೆ. ನಾವು ಲೆಕ್ಕಕ್ಕೆ ಇಲ್ಲ ಎಂಬುದು ಕೋಪಕ್ಕೆ ಕಾರಣವಾಗಿದೆ. ಪೂರ್ಣ ಪ್ರಮಾಣದಲ್ಲಿ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ, ಸಮರ್ಥ ಕಾರ್ಯಕರ್ತರ ಪಡೆಯನ್ನೂ ಸಜ್ಜು ಗೊಳಿಸಿಲ್ಲ ಎಂಬುದು ಮುಖಂಡರ ಕೋಪ ಹೆಚ್ಚಿಸಿದೆ. ಸದಾ ಬಿಜೆಪಿ ಮತಬುಟ್ಟಿ ತುಂಬಿ ಸುತ್ತಾ ಬಂದಿರುವ ಕೊಡಗು ಜಿಲ್ಲೆಯಲ್ಲಿ ಕಳೆದ ಬಾರಿಯಷ್ಟು ಉತ್ತಮ ವಾತಾವರಣ ಕಂಡುಬರುತ್ತಿಲ್ಲ. ಕೊಡಗನ್ನು ನಿರ್ಲಕ್ಷ್ಯಿ ಸಿದರು ಎಂಬ ಭಾವನೆ ಇದೆ. ಇಲ್ಲಿ ವ್ಯಕ್ತಿಗಿಂತ ಪಕ್ಷದ ಮುಖ ನೋಡುವುದರಿಂದ, ಮುಂದಿನ ನಡೆ ನಿಗೂಢವಾಗಿದೆ.

ಕಳೆದ ಸಲ ಸಿದ್ದರಾಮಯ್ಯ ಮೇಲಿನ ಜೆಡಿಎಸ್‌ ಸಿಟ್ಟು ಪ್ರತಾಪ ಸಿಂಹಗೆ ವರ ವಾಗಿತ್ತು. ಮೋದಿ– ಬಿಜೆಪಿ ವಿರುದ್ಧ ದೇವೇಗೌಡ, ಕಾಂಗ್ರೆಸಿಗರು ತೊಡೆ ತಟ್ಟಿದ್ದಾರೆ. ಮೈತ್ರಿಯ ಒಡಕಿನ ಲಾಭದ ನಿರೀಕ್ಷೆಯಲ್ಲಿ ಸಿಂಹ ಇದ್ದಾರೆ.

ಬಿಎಸ್‌ಪಿ ಚಂದ್ರ ಹೆಚ್ಚು ಮತ ಗಳನ್ನು ಗಳಿಸಿದಷ್ಟೂ ಕಾಂಗ್ರೆಸ್‌ಗೆ ಹಿನ್ನಡೆಯಾಗಲಿದೆ. ಈ ಪಕ್ಷ ದಲಿತರು, ಒಬಿಸಿ ಮತಗಳನ್ನೇ ಕೇಂದ್ರೀಕರಿಸಿದೆ. ಬಿಎಸ್‌ಪಿಗೆ ಗೆಲುವಿಗಿಂತಲೂ ಸಾಧ್ಯ ವಾದಷ್ಟು ಹೆಚ್ಚು ಮತಗಳನ್ನು ಪಡೆದು ತಮ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಉಮೇದಿದೆ.

***

ಹಿಂದೆ ಸಂಸದನಾಗಿ ಕೆಲಸ ಮಾಡಿದ್ದೇನೆ. ಅಭಿವೃದ್ಧಿ ನೋಡಿ ಮತದಾರರು, ನನ್ನನ್ನು ಬೆಂಬಲಿಸುತ್ತಾರೆ.

-ಸಿ.ಎಚ್.ವಿಜಯ ಶಂಕರ್, ಕಾಂಗ್ರೆಸ್ ಅಭ್ಯರ್ಥಿ

2014ರ ಚುನಾವಣೆಯಲ್ಲಿ ಮೋದಿ ಪರಿಚಯಿಸಬೇಕಿತ್ತು. 5 ವರ್ಷಗಳಲ್ಲಿ ಅವರು ಮಾಡಿರುವ ಕೆಲಸ ನೋಡಿ ಮತ ನೀಡುತ್ತಾರೆ.

-ಪ್ರತಾಪ ಸಿಂಹ, ಬಿಜೆಪಿ ಅಭ್ಯರ್ಥಿ

ಗೆದ್ದ ನಂತರ ಜನರತ್ತ ತಿರುಗಿಯೂ ನೋಡುವುದಿಲ್ಲ. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಮನಸ್ಸಿರುವ ಅಭ್ಯರ್ಥಿಗೆ ಮತ ನೀಡಬೇಕು. ಹಣಕ್ಕೆ ಯಾರೂ ವೋಟು ಮಾರಿಕೊಳ್ಳಬಾರದು.

-ಎನ್‌.ರಾಜೇಶ್, ಮೈಸೂರು

ಈಗಿನ ರಾಜಕೀಯ ವ್ಯವಸ್ಥೆ ನೋಡಿದರೆ ಯಾರಿಗೂ ಮತ ಹಾಕಬಾರದು ಎನಿಸುತ್ತದೆ. ಆದರೆ ನಮ್ಮ ಹಕ್ಕು ಚಲಾಯಿಸಬೇಕು. ಇದುದ್ದರಲ್ಲಿ ಉತ್ತಮ ಅಭ್ಯರ್ಥಿಗೆ ಜಾತಿ, ಮತ ನೋಡದೆ ವೋಟು ಕೊಡಬೇಕು.

-ಮಹೇಶ್, ವಿದ್ಯಾರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT