ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂಭಮೇಳ: ಸಂಗಮದ ಒಡಲಲ್ಲಿ ಮಹೋದಯ ಪುಣ್ಯಸ್ನಾನ

ಕಾವೇರಿ–ಕಪಿಲಾ–ಸ್ಫಟಿಕ ನದಿಗಳಲ್ಲಿ ಮಿಂದೆದ್ದ ಸರ್ವಧರ್ಮೀಯರು
Last Updated 19 ಫೆಬ್ರುವರಿ 2019, 18:21 IST
ಅಕ್ಷರ ಗಾತ್ರ

ಮೈಸೂರು: ಶಾಂತವಾಗಿ ಹರಿಯುವ ಜೀವನದಿ ಕಾವೇರಿ– ಕಪಿಲಾ– ಗುಪ್ತಗಾಮಿನಿ ಸ್ಫಟಿಕ ಸರೋವರದ ಒಡಲಲ್ಲಿ ಮಂಗಳವಾರ ಪುಣ್ಯಸ್ನಾನದ ಸಡಗರ. ತ್ರಿವೇಣಿ ಸಂಗಮದಲ್ಲಿ ಸಾಧು ಸಂತರು, ಸ್ವಾಮೀಜಿಗಳು, ಯತಿಗಳು, ಪುರೋಹಿತರು, ಸಹಸ್ರಾರು ಭಕ್ತರು ಮುಳುಗೆದ್ದರು.

‘ದಕ್ಷಿಣ ಕಾಶಿ’ ಖ್ಯಾತಿಯ ತಿ.ನರಸೀಪುರದ ತಿರುಮಕೂಡಲು ಪುಣ್ಯ ಕ್ಷೇತ್ರದಲ್ಲಿ ನಡೆದ ಕುಂಭಮೇಳದಲ್ಲಿ ಸರ್ವಧರ್ಮೀಯರು ಹುಣ್ಣಿಮೆಯ ಮಹೋದಯ ಪುಣ್ಯ ಮಾಘಸ್ನಾನ ಮಾಡಿ ಪಾವನರಾದರು.

ಪವಿತ್ರ ನದಿಗಳು ಕೂಡುವಿಕೆಯ ಮಧ್ಯ ಭಾಗದಲ್ಲಿ ನಿಂತು ಮಂತ್ರಪಠಣದಲ್ಲಿ ತೊಡಗಿದರು. ತಲೆಗೆ ನೀರು ಚಿಮುಕಿಸಿಕೊಳ್ಳುತ್ತಿದ್ದರು. ಬೊಗಸೆಯಲ್ಲಿ ತುಂಬಿದ ನೀರು ಚೆಲ್ಲುತ್ತಾ ಸೂರ್ಯದೇವನಿಗೆ ಅರ್ಘ್ಯ ಸಮರ್ಪಿಸಿದರು.

ಮೂರು ದಿನ ನಡೆದ ಕುಂಭಮೇಳದ ಕಡೆಯ ದಿನ ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ಉತ್ತಮ ಗಳಿಗೆಯಲ್ಲಿ ಪುಣ್ಯಸ್ನಾನ ಮಾಡಿ ಪುನೀತರಾಗಲು ನಾಡಿನ ಮೂಲೆಮೂಲೆಯಿಂದ ಭಕ್ತಾದಿಗಳು ಬಂದಿದ್ದರು.

ಬೆಳಿಗ್ಗೆ 9.35ಕ್ಕೆ ಸಲ್ಲುವ ಮೀನ ಲಗ್ನದಲ್ಲಿ ಮಾಘಸ್ನಾನ ಶುರುವಾಯಿತು. ದೇಹಶುದ್ಧಿ ಪ್ರತೀಕವಾಗಿರುವ ಈ ಸ್ನಾನದ ಮುಖ್ಯ ಉದ್ದೇಶ ಮನ ಶುದ್ಧಿ.

ದಿನವಿಡೀ ಧಾರ್ಮಿಕ ಚಟು ವಟಿಕೆಗಳು ನಡೆದವು. ನದಿ ಪಾತ್ರದಲ್ಲಿ ಚಂಡಿಹೋಮ, ಪೂರ್ಣಾಹುತಿ, ಕುಂಭೋಧ್ವಾಸನ ಹಮ್ಮಿಕೊಳ್ಳಲಾಯಿತು. ಗಂಗೆ, ಕಪಿಲೆ, ಯಮುನೆ ಸೇರಿದಂತೆ ಸಪ್ತ ನದಿಗಳಿಂದ ತಂದಿದ್ದ ಪವಿತ್ರ ತೀರ್ಥವನ್ನು ತ್ರಿವೇಣಿ ಸಂಗಮದಲ್ಲಿ ಸಂಯೋಜನೆ ಮಾಡಲಾಯಿತು.

ತ್ರಿವೇಣಿ ಸಂಗಮದ ಅಭಿವೃದ್ಧಿಗೆ ಧಾರ್ಮಿಕ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

‘ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ಆಸಕ್ತಿ ಹೊಂದಿರುವ, ದೈವಿಕ ಚಿಂತನೆಯಲ್ಲಿ ತೊಡಗಿರುವ ಕುಮಾರಸ್ವಾಮಿ ಇನ್ನೂ 10 ವರ್ಷ ಮುಖ್ಯಮಂತ್ರಿ ಆಗಿರಲಿ’ ಎಂದು ವಿವಿಧ ಮಠಗಳ ಸ್ವಾಮೀಜಿಗಳು ಆಶಿಸಿದರು.

ಸೇತುವೆ ಮೇಲೆ ನೀರು: ಕಬಿನಿ ಜಲಾಶಯದಿಂದ ಹೆಚ್ಚು ನೀರು ಹರಿಸಿದ್ದರಿಂದ ತಾತ್ಕಾಲಿಕ ಸೇತುವೆ ಮೇಲೆ ನೀರು ನಿಂತಿತ್ತು. ಇದರಿಂದಾಗಿ ಆಚೀಚೆ ಓಡಾಡಲು ಜನರಿಗೆ ಸಮಸ್ಯೆ ಉಂಟಾಯಿತು.

ಸಿ.ಎಂಗೆ ಪ್ರೋಕ್ಷಣೆ, ಜಿಟಿಡಿ ಪುಣ್ಯಸ್ನಾನ

ತ್ರಿವೇಣಿ ಸಂಗಮದಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಪುಣ್ಯಸ್ನಾನ ಪ್ರೋಕ್ಷಣೆಗಷ್ಟೇ ಸೀಮಿತಗೊಂಡಿತು. ನಿಗದಿತ ಸಮಯಕ್ಕೆ ಬಂದ ಅವರು ಸಂಗಮದಲ್ಲಿ ದೇವರ ದರ್ಶನ ಪಡೆದರು. ಬಳಿಕ ನದಿಗಿಳಿದರೂ ಪುಣ್ಯಸ್ನಾನ ಮಾಡಲಿಲ್ಲ. ಬೆಳಿಗ್ಗೆ 11.30ಕ್ಕೆ ಸಲ್ಲುವ ವೃಷಭ ಲಗ್ನದಲ್ಲಿ ಸ್ನಾನ ಮಾಡುತ್ತಾರೆಂದು ಪ್ರತ್ಯೇಕ ಸ್ನಾನಘಟ್ಟ ನಿರ್ಮಿಸಲಾಗಿತ್ತು. ಕುಮಾರಸ್ವಾಮಿ ಹಾಗೂ ಸಚಿವ ಸಾ.ರಾ.ಮಹೇಶ್ ಅವರಿಗೆ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಪ್ರೋಕ್ಷಣೆ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಮಾತ್ರ ನದಿಯಲ್ಲಿ ಮುಳುಗೆದ್ದರು. ನಿರ್ಮಲಾನಂದನಾಥ ಸ್ವಾಮೀಜಿ ಕೂಡ ಪುಣ್ಯಸ್ನಾನ ಮಾಡಿ ಸೂರ್ಯನಿಗೆ ಅರ್ಘ್ಯ ಸಲ್ಲಿಸಿದರು.

**

ಕೆಲವೆಡೆ ಅಮಾನವೀಯ ಕೃತ್ಯಗಳು ನಡೆಯುತ್ತಿವೆ. ಅಮಾಯಕರ ಜೀವನದ ಜೊತೆ ಕೆಲವರು ಚೆಲ್ಲಾಟವಾಡುತ್ತಿದ್ದಾರೆ. ಅದನ್ನು ಕೆಲವರು ಬೆಂಬಲಿಸುತ್ತಿದ್ದಾರೆ
- ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT