ಕೋತಿಗಳ ಹಾವಳಿ ತಡೆಯಲು ತೆಂಗಿನ ಮರಕ್ಕೆ ಮೀನಿನ ಸಾರು!

7
ಹೊಸ ಪ್ರಯೋಗ

ಕೋತಿಗಳ ಹಾವಳಿ ತಡೆಯಲು ತೆಂಗಿನ ಮರಕ್ಕೆ ಮೀನಿನ ಸಾರು!

Published:
Updated:
Deccan Herald

ಬಿಳಿಕೆರೆ (ಮೈಸೂರು): ಕೋತಿಗಳ ಹಾವಳಿಯಿಂದ ಬೇಸತ್ತಿರುವ ಬಿಳಿಕೆರೆ ಹೋಬಳಿಯ ರೈತರು, ತೆಂಗಿನ ಫಸಲು ಉಳಿಸಿಕೊಳ್ಳಲು ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. ಮೀನಿನ ಸಾರನ್ನು ಬಾಟಲಿಯಲ್ಲಿ ಹಾಕಿ ತೆಂಗಿನ ಮರಕ್ಕೆ ಕಟ್ಟುವ ಮೂಲಕ ಕೋತಿಗಳ ನಿಯಂತ್ರಣಕ್ಕೆ ಮುಂದಾಗಿದ್ದಾರೆ.

ಮರದೂರ, ಹೊಸರಾಮನಹಳ್ಳಿ, ರಂಗಯ್ಯನಕೊಪ್ಪಲು, ಶ್ಯಾನಭೋಗರಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಳೆದ ಎರಡು ವರ್ಷಗಳಿಂದ ಕೋತಿಗಳ ಹಾವಳಿ ಹೆಚ್ಚಾಗಿತ್ತು. ಗುಂಪು ಗುಂಪಾಗಿ ತೋಟಗಳಿಗೆ ದಾಳಿಮಾಡಿ ಎಳನೀರು ಕಿತ್ತು ಹಾಳುಮಾಡುತ್ತಿದ್ದವು. ಅವುಗಳ ನಿಯಂತ್ರಣಕ್ಕೆ ಪಟಾಕಿ ಸಿಡಿಸಿ, ಕವಣೆ ಕಲ್ಲುಗಳನ್ನು ಪ್ರಯೋಗಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

‘ಸಮೀಪದಲ್ಲೇ ಇರುವ ಅರಬ್ಬಿತಿಟ್ಟು ರಕ್ಷಿತಾರಣ್ಯದಿಂದ ಮಧ್ಯಾಹ್ನದ ವೇಳೆಗೆ ಗ್ರಾಮದೊಳಕ್ಕೆ ನುಗ್ಗಿ ಹಾವಳಿಯೆಬ್ಬಿಸುತ್ತಿದ್ದವು. ಸಂಜೆ ಬಳಿಕ ತೋಟಗಳತ್ತ ಹೋಗಿ ಫಸಲು ನಾಶಮಾಡುತ್ತಿದ್ದವು. ಕಳೆದ 15 ದಿನಗಳಿಂದ ಮೀನಿನ ಸಾರನ್ನು ಪ್ಲಾಸ್ಟಿಕ್‌ ಬಾಟಲಿಗಳಿಗೆ ಹಾಕಿ ತೆಂಗಿನ ಮರದ ಬುಡದಿಂದ 8 ಅಡಿ ಎತ್ತರದಲ್ಲಿ ಕಟ್ಟುತ್ತಿದ್ದೇವೆ. ಮೀನಿನ ಸಾರಿನ ವಾಸನೆಯಿಂದ ಅವುಗಳು ಹತ್ತಿರಕ್ಕೆ ಬರುತ್ತಿಲ್ಲ’ ಎಂದು ಗ್ರಾಮಸ್ಥರು ತಿಳಿಸಿದರು.

ಕಳೆದ ಎರಡು ವರ್ಷಗಳಿಂದ ಮರದಲ್ಲಿ ಒಂದೇ ಒಂದು ಕಾಯಿಯನ್ನೂ ಬಿಡದಂತೆ ಕಿತ್ತು ಹಾಳು ಮಾಡಿದ್ದವು. ಇದರಿಂದ ಆರ್ಥಿಕವಾಗಿ ಕುಗ್ಗಿಹೋಗಿದ್ದೆವು. ಕೆಲ ದಿನಗಳ ಹಿಂದೆ ವಾಟ್ಸ್‌ಆ್ಯಪ್‌ನಲ್ಲಿ ಬಂದ ವಿಡಿಯೊವೊಂದನ್ನು ನೋಡಿದೆ. ಈ ಕುರಿತು ಗ್ರಾಮಸ್ಥರಿಗೂ ತಿಳಿಸಿದೆ. ಎಲ್ಲರೂ ನಿರ್ಧರಿಸಿ ಹದಿನೈದು ದಿನಗಳಿಂದ ಮರಗಳಿಗೆ ಮೀನಿನ ಸಾರನ್ನು ಕಟ್ಟಿದ್ದೇವೆ. ಈಗ ಕೋತಿಗಳ ಹಾವಳಿ ನಿಯಂತ್ರಣಕ್ಕೆ ಬಂದಿದೆ. ಈ ಪ್ರಯೋಗವನ್ನು ಮುಂದುವರಿಸಲಿದ್ದೇವೆ’ ಎಂದು ಗ್ರಾಮದ ರವಿಕುಮಾರ್‌ ‘ಪ್ರಜಾವಾಣಿ‘ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !