ಸೋಮವಾರ, ಅಕ್ಟೋಬರ್ 14, 2019
23 °C

ರಂಗಾಯಣ ನಿರ್ದೇಶಕರಿಗೆ ಕೊಕ್‌: ಪ್ರಸನ್ನ ಆಕ್ರೋಶ

Published:
Updated:

ಮೈಸೂರು: ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವು ರಂಗಾಯಣ ನಿರ್ದೇಶಕರಿಗೆ ಕೊಕ್‌ ನೀಡಿರುವ ಕ್ರಮವನ್ನು ರಂಗಕರ್ಮಿ ಪ್ರಸನ್ನ ಖಂಡಿಸಿದ್ದಾರೆ.

‘ರಂಗಾಯಣ ಸ್ವಾಯತ್ತ ಸಂಸ್ಥೆ. ಇದರ ನಿರ್ದೇಶಕರನ್ನು ತೆಗೆದು ಹಾಕಿರುವುದು ಕಾನೂನಾತ್ಮಕವಾಗಿ ತಪ್ಪು. ಈ ಸಂಸ್ಥೆಗೆ ತನ್ನದೇ ಆದ ಬೈಲಾ ಇದೆ. ಯಡಿಯೂರಪ್ಪ ಅವರಿಗೆ ಅಧಿಕಾರಿಗಳು ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸಿದ್ದಾರೆ’ ಎಂದು ಸೋಮವಾರ ಆಕ್ರೋಶ ವ್ಯಕ್ತಪಡಿಸಿದರು. 

‘ರಂಗಾಯಣ ನಿರ್ವಹಣೆಯಲ್ಲಿ ಏನಾದರೂ ಸಮಸ್ಯೆ ಇದ್ದರೆ ವಿಚಾರಣೆ ಮಾಡಲಿ. ಆದರೆ, ಚೆನ್ನಾಗಿ ನಿರ್ವಹಣೆ ಮಾಡುತ್ತಿದ್ದರೂ ಅವರನ್ನು ತೆಗೆದು ಹಾಕುವ ಮೂಲಕ ಸರ್ಕಾರ ರಾಜಕೀಯ ಮಾಡುತ್ತಿದೆ. ಮುಂದೆ ಸರ್ಕಾರದಿಂದ ಹೊಸದಾಗಿ ನೇಮಕವಾಗುವ ನಿರ್ದೇಶಕರು ಅಥವಾ ಸದಸ್ಯರು ಬಿಜೆಪಿ ಏಜೆಂಟ್‌ಗಳಾಗುವ ಅಪಾಯವಿದೆ. ಕಲಾವಿದರು ರಾಜಕೀಯ ಪ್ರತಿನಿಧಿಗಳಾಗುವ ಸಾಧ್ಯತೆ ಇರುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಹಿಂದೆ ಕಲಬುರ್ಗಿ ನಿರ್ದೇಶಕ ವಿರುದ್ಧ ರಂಗ ಸಮಾಜ ಹಾಗೂ ಜನರು ದೂರು ನೀಡಿದ್ದರು. ಆದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಕುರಿತು ನಾಟಕ ಮಾಡಿದ್ದರು ಎಂದು ಅವರನ್ನು ತೆಗೆಯಲಿಲ್ಲವೇ’ ಎಂದು ಪ್ರಶ್ನಿಸಿದರು.

ಭಾಗೀರಥಿ ಬಾಯಿ ಕದಂ (ಮೈಸೂರು), ಎ.ಗಣೇಶ್ ಸಾಗರ (ಶಿವಮೊಗ್ಗ), ಮಹೇಶ್ ವಿ. ಪಾಟೀಲ್ (ಕಲಬುರ್ಗಿ) ಹಾಗೂ ಪ್ರಮೋದ್ ಶಿಗ್ಗಾಂ (ಧಾರವಾಡ) ರಂಗಾಯಣದ ನಿರ್ದೇಶಕರಾಗಿದ್ದರು. ಅವರ ಬದಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿಯನ್ನು ರಂಗಾಯಣಗಳ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ.

Post Comments (+)