ಟಾಂಗಾ ಏರಿ ನಗರ ಸುತ್ತಿದ ದಂಪತಿ

7
ವಾರಾಂತ್ಯದಲ್ಲಿ ಮತ್ತಷ್ಟು ರಂಗು ಪಡೆದ ದಸರಾ ಮಹೋತ್ಸವ

ಟಾಂಗಾ ಏರಿ ನಗರ ಸುತ್ತಿದ ದಂಪತಿ

Published:
Updated:
Deccan Herald

ಮೈಸೂರು: ವಾರಾಂತ್ಯಕ್ಕೆ ಸಾಂಸ್ಕೃತಿಕ ನಗರಿಯ ಬೀದಿಗಳಲ್ಲಿ ಜನವೋ ಜನ. ಇದು ನಾಡಹಬ್ಬ ದಸರಾ ಮಹೋತ್ಸವಕ್ಕೆ ಮತ್ತಷ್ಟು ರಂಗು ತುಂಬಿತು.

ಶರನ್ನವರಾತ್ರಿಯ ನಾಲ್ಕನೇ ದಿನವಾದ ಶನಿವಾರ ಬೆಳ್ಳಂಬೆಳಿಗ್ಗೆ ನಡೆದ ಪಾರಂಪರಿಕ ಟಾಂಗಾ ಸವಾರಿ ಕಣ್ಮನ ಸೆಳೆಯಿತು. ಮೈಸೂರು ಶೈಲಿಯ ಸಾಂಪ್ರದಾಯಿಕ ಉಡುಗೆ ತೊಟ್ಟ 70 ದಂಪತಿ 35 ಟಾಂಗಾ, ಸಾರೋಟ್‌ಗಳಲ್ಲಿ ನಗರ ಸುತ್ತಿದರು. ಸುಮಾರು ಎರಡೂವರೆ ಗಂಟೆ ಪಾರಂಪರಿಕ ಕಟ್ಟಡಗಳ ದರ್ಶನ ಪಡೆದರು.

ಸವಾರಿಯು ಪುರಭವನದಿಂದ ಪ್ರಾರಂಭವಾಗಿ ಚಾಮರಾಜ ಒಡೆಯರ್ ವೃತ್ತ, ಅಂಬಾವಿಲಾಸ ಅರಮನೆ, ಕೆ.ಆರ್‌.ವೃತ್ತ, ಜಗನ್ಮೋಹನ ಅರಮನೆ, ಕ್ರಾಫರ್ಡ್‌ ಭವನ ಸೇರಿದಂತೆ ಮೈಸೂರಿನ ಪ್ರಮುಖ ಬೀದಿಗಳಲ್ಲಿ ಸಾಗಿ ಮೈಸೂರು ವೈದ್ಯಕೀಯ ಕಾಲೇಜು ಬಳಿ ಸಮಾಪ್ತಿಗೊಂಡಿತು.

ಮಹಿಳೆಯರಿಗೆ ಬಾಗಿನ ನೀಡುವ ಮೂಲಕ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌ ಚಾಲನೆ ನೀಡಿದರು. ಟಾಂಗಾ ಗಾಡಿಗಳನ್ನು ಸಿಂಗರಿಸಲಾಗಿತ್ತು. ಪ್ರವಾಸಿಗರಿಗೆ ಮೈಸೂರಿನ ಪರಂಪರೆ, ಇತಿಹಾಸ ಸಾರುವ ಉದ್ದೇಶದಿಂದ ಈ ಸವಾರಿ
ಆಯೋಜಿಸಲಾಗಿತ್ತು.

ರಸ್ತೆ ಮಧ್ಯೆ ಜಾತ್ರೆ: ರಸ್ತೆ ಮಧ್ಯೆ ಜಾತ್ರೆಯಲ್ಲಿ (ಓಪನ್‌ ಸ್ಟ್ರೀಟ್‌ ಫೆಸ್ಟಿವಲ್‌) ಯುವಕ, ಯುವತಿಯರದ್ದೇ ದರ್ಬಾರ್‌. ಬೆಳಿಗ್ಗೆಯಿಂದಲೇ ತಂಡೋಪತಂಡವಾಗಿ ಲಗ್ಗೆ ಇಟ್ಟರು. ನಡುರಸ್ತೆಯಲ್ಲಿ ಹೆಜ್ಜೆ ಹಾಕಿ ಸಂಭ್ರಮಿಸಿದರು. ಸಂಗೀತ, ನೃತ್ಯ, ಬೆಳಕಿನ ಚಿತ್ತಾರ ಹೊಸ ಲೋಕವನ್ನೇ ಸೃಷ್ಟಿಸಿತು. ಸಂಸ್ಕೃತಿ ಬಿಂಬಿಸುವ ಡೊಳ್ಳು ಕುಣಿತ, ವೀರಗಾಸೆ, ಕಂಸಾಳೆ ಪ್ರದರ್ಶನ ಉತ್ಸವಕ್ಕೆ ಮೆರುಗು ತುಂಬಿತು. ವಿದೇಶದಲ್ಲಿ ನಡೆಯುವ ಕಾರ್ನಿವಲ್ ಉತ್ಸವದ ಮಾದರಿಯಲ್ಲೇ ರಸ್ತೆ ಉದ್ದಕ್ಕೂ ಉತ್ಸವ ಆಯೋಜಿಸಲಾಗಿತ್ತು.

ಮೈಸೂರು ದರ್ಶನ: ಮೈಸೂರು ನಗರದ ದರ್ಶನ ಮಾಡಿಸುವ ಹೆಲಿರೈಡ್‌ಗೆ ಚಾಲನೆ ಲಭಿಸಿತು. ಎರಡು ಹೆಲಿಕಾಪ‍್ಟರ್‌ಗಳು ಹಾರಾಟ ನಡೆಸುತ್ತಿವೆ. 10 ನಿಮಿಷಗಳ ಹಾರಾಟಕ್ಕೆ ಒಬ್ಬರಿಗೆ ₹ 2,399 ದರ ವಿಧಿಸಲಾಗುತ್ತಿದೆ.

ಮುಂದುವರೆದ ಕಾಂಗ್ರೆಸಿಗರ ಮುನಿಸು

ಮೈಸೂರು, ಚಾಮರಾಜನಗರ ಭಾಗದ ಕಾಂಗ್ರೆಸ್‌ ಶಾಸಕರ ಮುನಿಸು ಮುಂದುವರೆದಿದೆ. ದಸರೆ ನಾಲ್ಕನೇ ದಿನಕ್ಕೆ ತಲುಪಿದ್ದು, ಯಾರೊಬ್ಬರೂ ಭಾಗಿಯಾಗಿಲ್ಲ.

ತವರಿನಲ್ಲಿ ದಸರಾ ನಡೆಯುತ್ತಿದ್ದರೂ ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಇದುವರೆಗೆ ಈ ಕಡೆ ತಲೆಹಾಕಿಲ್ಲ.

ಆಗಸದಲ್ಲಿ ಸಾಹಸ

ಬನ್ನಿಮಂಟಪ ಮೈದಾನದಲ್ಲಿ ಪ್ರದರ್ಶಿಸಿದ ವೈಮಾನಿಕ ಪ್ರದರ್ಶನ ಮನಸೂರೆಗೊಂಡಿತು. ಏರ್‌ ಡೆವಿಲ್‌, ಆಕಾಶ ಗಂಗಾ ತಂಡಗಳು ಆಗಸದಲ್ಲಿ ಸಾಹಸ ಪ್ರದರ್ಶನ ನೀಡಿದವು.

ಒಂಬತ್ತು ಯೋಧರು ಸ್ಕೈ ಡೈವಿಂಗ್‌ ನಡೆಸಿದರು. ಪ್ಯಾರಾಚೂಟ್‌ ಧರಿಸಿ ಹೆಲಿಕಾಪ್ಟರ್‌ನಿಂದ 7 ಸಾವಿರ ಅಡಿ ಎತ್ತರದಿಂದ ಭುವಿಗೆ ಜಿಗಿದರು. 115 ಅಡಿ ಎತ್ತರದಿಂದ ಧರೆಗೆ ಪುಷ್ಪಮಳೆ ಸುರಿಸಿದರು. ಗರುಡ ಕಮಾಂಡೊ ತಂಡದವರು 50 ಅಡಿ ಎತ್ತರದಿಂದ ಹಗ್ಗದ ನೆರವಿನಿಂದ ಸರಸರನೆ ಕೆಳಗಿಳಿದರು. ಐದಾರು ಸಾವಿರ ಪ್ರೇಕ್ಷಕರು ಇದಕ್ಕೆ ಸಾಕ್ಷಿಯಾದರು. ಭಾನುವಾರ ಆಗಸದಲ್ಲಿ ಕಸರತ್ತು ನಡೆಸಲಿದ್ದು, ಅದಕ್ಕೆ ಪೂರ್ವಭಾವಿಯಾಗಿ ಶನಿವಾರ ತಾಲೀಮು ಹಮ್ಮಿಕೊಳ್ಳಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !