ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಮನ ಸೆಳೆದ ದನಗಳ ಜಾತ್ರೆ

Last Updated 20 ಫೆಬ್ರುವರಿ 2018, 6:57 IST
ಅಕ್ಷರ ಗಾತ್ರ

ಮಧುಗಿರಿ: ತಾಲ್ಲೂಕಿನ ದಂಡಿನ ಮಾರಮ್ಮ ದೇವಿಯ ಜಾತ್ರೆ ಅಂಗವಾಗಿ ನಡೆದ ದನಗಳ ಜಾತ್ರೆ ಎಲ್ಲರ ಗಮನ ಸೆಳೆಯಿತು. ರಾಜ್ಯ ಹಾಗೂ ಜಿಲ್ಲೆಯ ವಿವಿಧ ಊರುಗಳಿಂದ ರಾಸುಗಳು ಬಂದು ಸೇರಿವೆ. ರಾಸುಗಳನ್ನು ಮೈ ತೊಳೆದು ಸಿಂಗರಿಸಿದ ರೈತರು ಬ್ಯಾಂಡ್‌ ಸೆಟ್ ಬಾರಿಸುತ್ತಾ ಜಾತ್ರೆಗೆ ಕರೆ ತರುತ್ತಿದ್ದು ವಿಶೇಷವಾಗಿತ್ತು. ಜಾತ್ರೆಯಲ್ಲಿ ಹೆಚ್ಚಾಗಿ ದೇಸಿ ತಳಿ ಹಳ್ಳಿಕಾರ್ ಹಾಗೂ ಅಮೃತ ಮಹಲ್ ಜಾನುವಾರುಗಳು ಕಂಡು ಬಂದವು.

‘ಕಳೆದ ಎರಡು ತಿಂಗಳಿಂದ ಜಾನುವಾರುಗಳಿಗೆ ಉರುಳಿ, ಅವರೆ, ತೊಗರಿ ಸೇರಿದಂತೆ ವಿವಿಧ ಧಾನ್ಯಗಳು ಹಾಗೂ ಬೆಲ್ಲವನ್ನು ನೀಡಿ ಹೋರಿಗಳ ಮೈ ತುಂಬುವುದಕ್ಕೆ ವಿಶೇಷ ಆಹಾರವನ್ನು ನೀಡುವುದರ ಜತೆಗೆ ರೋಗ ಬಾರದಂತೆ ಲಸಿಕೆಗಳನ್ನು ಹಾಕಿಸಲಾಗಿದೆ’ ಎಂದು ರೈತ ಚೇತನ್ ಹೇಳುತ್ತಾರೆ.

ಜಾನುವಾರು ಖರೀದಿಗೆಂದು ರಾಜ್ಯ ಹಾಗೂ ನೆರೆ ರಾಜ್ಯ ಸೀಮಾಂಧ್ರ ಪ್ರದೇಶದ ಅನಂತಪುರ, ಹಿಂದೂಪುರ, ಮಡಕಶಿರಾ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಗೌರಿಬಿದನೂರು, ಹಾವೇರಿ, ಚಿತ್ರದುರ್ಗ, ಹಿರಿಯೂರಿನ ದಲ್ಲಾಳಿ ಹಾಗೂ ರೈತರು ಬಂದಿದ್ದರು.

ಜಾತ್ರೆಯಲ್ಲಿ ಕುಡಿಯುವ ನೀರು ಹಾಗೂ ದೀಪದ ವ್ಯವಸ್ಥೆ ಕಲ್ಪಿಸಲಾಗಿತ್ತು. ಜಾತ್ರೆಗೆ ಬಂದ ಜಾನುವಾರುಗಳಿಗೆ ಪಶು ಇಲಾಖೆ ವತಿಯಿಂದ ತಾತ್ಕಾಲಿಕ ಆಸ್ಪತ್ರೆ ತೆರೆದು ಚಿಕಿತ್ಸೆ ನೀಡಲಾಯಿತು.

ಉತ್ತಮ ರಾಸುಗಳಿಗೆ ಬೆಳ್ಳಿ ಪಲ್ಲಕಿಯ ದಿನದಂದು ಬಹುಮಾನ ನೀಡಲಾಗುವುದು. ಜಾತ್ರೆಯಲ್ಲಿ ರಾಸುಗಳ ಸುಂಕದ ವಸೂಲಿ ಇಲ್ಲದೆ ಇರುವುದರಿಂದ ದಂಡಿನ ಮಾರಮ್ಮ ದೇವಾಲಯದ ಆಡಳಿತ ಮಂಡಳಿಗೆ ರೈತರು ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT