ವಿಚಾರಣೆ: ತನಿಖಾ ಸಮಿತಿ ಮುಂದೆ ಗೈರು ಹಾಜರಾದ ಪ್ರೊ.ರಂಗಪ್ಪ

7
ಪ್ರೊ.ರಾಜಣ್ಣ ಅವರನ್ನು ಬಿಡುಗಡೆಗೊಳಿಸಲು ಸಮಿತಿ ಪತ್ರ

ವಿಚಾರಣೆ: ತನಿಖಾ ಸಮಿತಿ ಮುಂದೆ ಗೈರು ಹಾಜರಾದ ಪ್ರೊ.ರಂಗಪ್ಪ

Published:
Updated:
ಕೆ.ಎಸ್.ರಂಗಪ್ಪ

ಮೈಸೂರು: ಮೈಸೂರು ವಿಶ್ವವಿದ್ಯಾಲಯದಲ್ಲಿ ನಡೆದಿರುವ ಬೋಧಕೇತರ ಸಿಬ್ಬಂದಿ ಅಕ್ರಮ ನೇಮಕಾತಿ ಪ್ರಕರಣದ ವಿಚಾರಣೆಗಾಗಿ ನೇಮಕಗೊಂಡಿದ್ದ ತನಿಖಾ ಸಮಿತಿಯ ಮುಂದೆ ಅಕ್ರಮ ನೇಮಕಾತಿ ಆರೋಪ ಎದುರಿಸುತ್ತಿರುವ ಅಂದಿನ ಕುಲಪತಿ ಪ್ರೊ.ಕೆ.ಎಸ್‌.ರಂಗಪ್ಪ ಅವರೇ ಹಾಜರಾಗಿರಲಿಲ್ಲ.

ಪರಿಶೀಲನೆಗಾಗಿ ವಿ.ವಿ.ಗೆ ಧಿಡೀರ್‌ ಭೇಟಿ ನೀಡಿದಾಗ ಕುಲಸಚಿವರಾಗಿದ್ದ ಪ್ರೊ.ಆರ್.ರಾಜಣ್ಣ ಅವರು ಕರ್ತವ್ಯಕ್ಕೆ ಹಾಜರಾಗದೇ ಇದ್ದುದನ್ನು ಸಮಿತಿಯು ಗಮನಿಸಿತ್ತು. ಕುಲಸಚಿವ ಹುದ್ದೆಯಿಂದ ಪ್ರೊ.ರಾಜಣ್ಣ ಅವರನ್ನು ತೆರವುಗೊಳಿಸುವಂತೆ ಉನ್ನತ ಶಿಕ್ಷಣ ಇಲಾಖೆಗೆ ಪತ್ರವನ್ನೂ ಬರೆದಿತ್ತು.

2017ರ ಮೇ 25ರಂದು ವಿಚಾರಣೆ ನಡೆಸುವಂತೆ ರಾಜ್ಯಪಾಲರು ತನಿಖಾ ಸಮಿತಿಯನ್ನು ನೇಮಿಸಿದ್ದರು. ಸಮಿತಿ ಸದಸ್ಯರಾದ ಡಾ.ಎಂ.ಆರ್.ನಿಂಬಾಳ್ಕರ್‌ ಹಾಗೂ ಡಾ.ಕನುಭಾಯ್ ಸಿ.ಮಾವನಿ ಅವರು ಜೂನ್‌ 5ರಿಂದ ಮೂರು ದಿನಗಳ ಕಾಲ ವಿಚಾರಣೆ ನಡೆಸಲು ತೀರ್ಮಾನಿಸಿದ್ದರು. ಇದಕ್ಕಾಗಿ ಅವರು ಜೂನ್‌ 6ರಂದು ಕ್ರಾಫರ್ಡ್ ಭವನಕ್ಕೆ ದಿಢೀರ್‌ ಭೇಟಿ ನೀಡಿದಾಗ ಪ್ರೊ.ರಾಜಣ್ಣ ಅವರು ಕರ್ತವ್ಯಕ್ಕೆ ಹಾಜರಾಗದೇ ಇರುವುದು ಗಮನಕ್ಕೆ ಬಂದಿತ್ತು. ಹಾಗಾಗಿ, ‘ವಿಚಾರಣೆ ಆರಂಭಗೊಳ್ಳುವ ಮುನ್ನವೇ ಪ್ರೊ.ರಾಜಣ್ಣ ಅವರನ್ನು ಕುಲಸಚಿವ ಹುದ್ದೆಯಿಂದ ತೆರವುಗೊಳಿಸಬೇಕು’ ಎಂದು ಜೂನ್ 6ರಂದೇ ಉನ್ನತ ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದರು.

ಪ್ರೊ.ರಂಗಪ್ಪ ಗೈರು: ಇದಾದ ಬಳಿಕ ಸಮಿತಿಯು ಜೂನ್‌ 7ರಂದು ಗುಜರಾತ್‌ನ ಸೂರತ್‌ನಲ್ಲಿ ಸಭೆ ನಡೆಸಿ, ಆರೋಪಿಗಳಾದ ಪ್ರೊ.ಕೆ.ಎಸ್.ರಂಗಪ್ಪ, ಪ್ರೊ.ಆರ್.ರಾಜಣ್ಣ, ಉಪ ಕುಲಸಚಿವ ಎಂ.ವಿ.ವಿಷಕಂಠ ಅವರಿಂದ ಲಿಖಿತ ಹೇಳಿಕೆ ಪಡೆದುಕೊಳ್ಳಲು ತೀರ್ಮಾನಿಸಿತ್ತು. ನಂತರ, ಈ ಮೂವರಿಗೂ ಜುಲೈ 11ರಂದು ಮೈಸೂರು ವಿ.ವಿ ಅತಿಥಿಗೃಹದಲ್ಲಿ ವಿಚಾರಣಾ ಸಭೆಗೆ ಹಾಜರಾಗುವಂತೆ ತಿಳಿಸಲಾಗಿತ್ತು.

‘ಈ ಸಭೆಗೆ ವಿವಿಧ ಕಾರಣಗಳಿಂದಾಗಿ ಹಾಜರಾಗಲು ಸಾಧ್ಯವಿಲ್ಲ’ ಎಂದು ಅಂದಿನ ಕುಲಸಚಿವರಾದ ಡಿ.ಭಾರತಿ ಅವರಿಗೆ ರಂಗಪ್ಪ ಪತ್ರ ಕಳುಹಿಸಿದ್ದರು ಎಂದು ತನಿಖಾ ಸಮಿತಿಯ ವರದಿಯಲ್ಲಿ ಉಲ್ಲೇಖಿಸಿದೆ.

ಆದರೆ, ಪ್ರೊ.ರಾಜಣ್ಣ, ಪ್ರೊ.ವಿಷಕಂಠ, ಅಂದಿನ ಪ್ರಭಾರಿ ಕುಲಪತಿ ಪ್ರೊ.ದಯಾನಂದ ಮಾನೆ, ಹಣಕಾಸು ಅಧಿಕಾರಿ ಪ್ರೊ.ಎಂ.ಬಿ.ಮಹಾದೇವಪ್ಪ ಅವರು ಸಭೆಗೆ ಹಾಜರಾಗಿ ವಿಚಾರಣೆಯಲ್ಲಿ ಕೇಳಿದ್ದ ಪ್ರಶ್ನೆಗಳಿಗೆ ಉತ್ತರಿಸಿದ್ದರು. ವಿಚಾರಣೆ ಸಮಯ
ದಲ್ಲಿ ಮೀಸಲಾತಿ ನಿಯಮಗಳನ್ನು ಪಾಲಿಸದೇ ಇರುವುದು, ಹುದ್ದೆಗಳನ್ನು ತುಂಬಲು ಸರ್ಕಾರದಿಂದ ಅನುಮತಿ ಪಡೆಯದಿರುವುದು, ದಿನಪತ್ರಿಕೆಗಳಲ್ಲಿ ಜಾಹೀರಾತು ನೀಡದೇ ಇರುವುದು ತಿಳಿದುಬಂದಿತ್ತು. ವೇತನ ನೀಡಲು ಹಣಕಾಸು ಮೂಲಗಳು ಇಲ್ಲದೇ ಇರುವ ಬಗ್ಗೆಯೂ ಹಣಕಾಸು ಅಧಿಕಾರಿ ಸಮಿತಿಗೆ ತಿಳಿಸಿದ್ದರು.

ಈ ಹಿನ್ನೆಲೆಯಲ್ಲಿ ನೇಮಕಾತಿಯನ್ನು ವಜಾಗೊಳಿಸಿ, ನೇಮಕಾತಿ ಮಾಡಿದವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಹೂಡುವಂತೆ ರಾಜ್ಯಪಾಲರಿಗೆ ಶಿಫಾರಸು ಮಾಡಿತ್ತು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !