ಶನಿವಾರ, ಅಕ್ಟೋಬರ್ 19, 2019
27 °C
ರಾಜಕಾರಣಿಗಳು, ಹಿಂಬಾಲಕರ ಅಬ್ಬರ

ದಸರಾದಲ್ಲಿ ಹಣದ ದರ್ಬಾರು:ಭ್ರಷ್ಟರ ಜೇಬು ತುಂಬಿಸುವ ವಾರ್ಷಿಕೋತ್ಸವದಂತಾದ ನಾಡಹಬ್ಬ!

Published:
Updated:
Prajavani

 

ಇಡೀ ಮೈಸೂರು ಮತ್ತು ದಸರಾ ಈವೆಂಟ್‌ ಅನ್ನು ಸರಿಯಾಗಿ ಮರು ವಿನ್ಯಾಸ ಮಾಡಿ ಷೋಕೇಸ್ ಮಾಡಿದರೆ, ಒಂಬತ್ತು ದಿನ ಮಾತ್ರವಲ್ಲ, ಇಡೀ ಒಂದು ತಿಂಗಳು ದಸರಾ ಮಹೋತ್ಸವವನ್ನು ಪ್ರಾಯೋಜನೆ ಮೂಲಕವೇ ನಡೆಸಿ ಒಂದಷ್ಟು ಆದಾಯವನ್ನು ಇಡುಗಂಟಾಗಿ ಇಡುವಷ್ಟು ಸಂಪನ್ಮೂಲ ಸಂಗ್ರಹಕ್ಕೆ ವಿಫುಲ ಅವಕಾಶಗಳಿವೆ. ಹೀಗಿದ್ದರೂ ನಾಡಹಬ್ಬದ ಸಲುವಾಗಿ ಸರ್ಕಾರ ಬಿಡುಗಡೆ ಮಾಡುವ ಹಣ ಪ‍್ರಭಾವಿಗಳ ಜೇಬುಸೇರುತ್ತಿರುವುದರ ಬಗ್ಗೆ ಪ್ರಜಾವಾಣಿ ಒಳನೋಟ ಬೆಳಕು ಚೆಲ್ಲಿದೆ.

**

ಮೈಸೂರು: ಜನರ ಉತ್ಸವ ಆಗಬೇಕಿದ್ದ ನಾಡಹಬ್ಬ ದಸರಾ ಮಹೋತ್ಸವ ವರ್ಷದಿಂದ ವರ್ಷಕ್ಕೆ ಆಡಳಿತಾರೂಢ ಪಕ್ಷದ ರಾಜಕಾರಣಿಗಳು, ಅಧಿಕಾರಿಗಳು ಮತ್ತು ಗುತ್ತಿಗೆದಾರರ ಜೇಬು ತುಂಬಿಸುವ ‘ವಾರ್ಷಿಕೋತ್ಸವ’ ದಂತೆ ಮಾರ್ಪಾಟು ಆಗಿರುವ ಆರೋಪಕ್ಕೆ ಗುರಿಯಾಗಿದೆ.

ಆಹ್ವಾನ ಪತ್ರಿಕೆ ಮುದ್ರಣದಲ್ಲಿ, ಅತಿಥಿಗಳಿಗೆ ನೀಡುವ ಪುಷ್ಪಗುಚ್ಛದಲ್ಲಿ, ತಿನ್ನಲು ನೀಡುವ ಗೋಡಂಬಿ – ಒಣದ್ರಾಕ್ಷಿಯಲ್ಲಿ, ಹಾರ ತುರಾಯಿ ಪೇಟದಲ್ಲಿ, ಸಭೆಗಳಲ್ಲಿ ಬಡಿಸುವ ಊಟದಲ್ಲಿ, ಗಣ್ಯರಿಗೆ ಕಲ್ಪಿಸುವ ಹೋಟೆಲ್‌ ಕೊಠಡಿಯಲ್ಲಿ, ಕ್ರೀಡಾ ಪಟುಗಳಿಗೆ ವಿತರಿಸುವ ಟಿ–ಶರ್ಟ್‌ ನಲ್ಲಿ, ಕಲಾವಿದರಿಗೆ ನೀಡುವ ಸಂಭಾವನೆ ಯಲ್ಲಿ... ಹೀಗೆ ಹಣ ಲಪಟಾಯಿಸಲು ಈ ಉತ್ಸವದಲ್ಲಿ ದಾರಿ ನೂರು. ಹೆಸರಿಗೆ ಮಾತ್ರ ಜನರ ದಸರೆ, ದೇವರ ದಸರೆ.

ದಸರೆ ಎಂದರೆ ಅಧಿಕಾರಿಗಳಿಗೆ ಭೂರಿ ಭೋಜನ, ಜನಪ್ರತಿನಿಧಿಗಳ ಪಾಲಿಗೆ ವಿಶೇಷ ಉತ್ಸವ, ಲೂಟಿಕೋರರ ಪಾಲಿಗೆ ಹುಲ್ಲುಗಾವ ಲಾಗಿದೆ ಎಂಬುದನ್ನು ನಿವೃತ್ತ ಅಧಿಕಾ ರಿಗಳು, ಮಾಜಿ ಮೇಯರ್‌ಗಳು, ಅತೃಪ್ತ ಗುತ್ತಿಗೆದಾರರು ಅಷ್ಟೇ ವಿಷಾದ ದೊಂದಿಗೆ ಬಿಚ್ಚಿಡುತ್ತಾರೆ.

‘ಮಹಾರಾಜರ ಕಾಲದಲ್ಲಿ ಅರಮನೆ ದುಡ್ಡು, ಗುರುಮನೆ ದುಡ್ಡು ಎಂಬ ಭಾವನೆಯಿತ್ತು. ಅವ್ಯವಹಾರ ನಡೆಯುತ್ತಿರಲಿಲ್ಲ. ಈಗ ಸಾರ್ವಜನಿಕರ ತೆರಿಗೆ ಹಣ ಅಧಿಕಾರಿಗಳ, ರಾಜಕಾರಣಿಗಳ ಜೇಬು ತುಂಬಿಸುತ್ತಿದೆ. ಹೊಸ ಪರಿಕಲ್ಪನೆ ರೂಪಗೊಂಡಷ್ಟು ಇವರಿಗೆ ದುಡ್ಡು, ವರ್ಕ್‌ ಆರ್ಡರ್‌ ಕೊಡುವಾಗಲೇ ಕಮಿಷನ್‌ ದಂಧೆ ಶುರುವಾಗುತ್ತದೆ. ನಾನು ಮೇಯರ್‌ ಆಗಿದ್ದಾಗ ಅಧಿಕಾರಿಗಳನ್ನು ನಿಯಂತ್ರಿಸುವುದೇ ಕಷ್ಟ ವಾಗಿತ್ತು. ಸಚಿವರ ಸೆಕ್ರೆಟರಿಯೊಬ್ಬ ನನ್ನ ಕೊಠಡಿಗೆ ಬಂದು ಹಣಕ್ಕೆ ಬೇಡಿಕೆ ಇಟ್ಟಿದ್ದ. ಮಾಮೂಲಿ ಕೊಡುವಂತೆ ಸಚಿವರೊಬ್ಬರು ಅಧಿಕಾರಿಗೆ ಗದರಿದ್ದನ್ನು ನೋಡಿದ್ದೇನೆ’ ಎಂದು ಭ್ರಷ್ಟಾಚಾರದ ಬ್ರಹ್ಮಾಂಡವನ್ನು ಬಿಚ್ಚಿಡುತ್ತಾರೆ ಮಾಜಿ ಮೇಯರ್‌ ಎಚ್‌.ಎನ್‌. ಶ್ರೀಕಂಠಯ್ಯ.

ಸರ್ಕಾರ ಪ್ರತಿವರ್ಷ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆ. ಇದುವರೆಗಿನ ವೆಚ್ಚ ಗಮನಿಸಿದರೆ ಮೈಸೂರಿನಲ್ಲಿ ಕಾಮಗಾರಿಗೆ ಅವ ಕಾಶವೇ ಇರಬಾರದಿತ್ತು. ಪ್ರತಿ ವರ್ಷ ರಸ್ತೆ ರಿಪೇರಿಗೆಂದೇ ₹ 5 ಕೋಟಿ ನೀಡಲಾಗುತ್ತದೆ. ಈ ಹಣ ಪಡೆದು ಪ್ರಮುಖ ರಸ್ತೆಗಳ ಗುಂಡಿ ಮುಚ್ಚಲಾಗುತ್ತದೆ. ಮತ್ತೊಂದು ದಸರಾ ಬಂದಾಗ ಮತ್ತದೇ ರಸ್ತೆ ಕಾಮಗಾರಿ, ಕೋಟ್ಯಂತರ ರೂಪಾಯಿ ಬಿಲ್‌. ರಸ್ತೆಗೆ ಗುಂಡಿ ಬಿದ್ದಷ್ಟೂ ‘ಲಾಭ’ ಎನ್ನುವ ಮಾತು ಸುಳ್ಳಲ್ಲ.

ಇದನ್ನೂ ಓದಿ: ನಾಡಹಬ್ಬದ ಮೇಲೆ ಪ್ರಭಾವಿಗಳ ಹಿಡಿತ

ಗುಂಡಿ ಮುಚ್ಚಿದರೆ ಕಮಿಷನ್‌, ಗುಂಡಿ ತೆಗೆದರೆ ಕಮಿಷನ್‌, ಡಿವೈಡರ್‌ ಗಳಿಗೆ ಬಣ್ಣ ಮೆತ್ತಿದರೆ ಕಮಿಷನ್‌! ದಸರೆಯ ವಿವಿಧ ಕಾರ್ಯಕ್ರಮಗಳಿಗೆ ಪ್ರಾಯೋಜಕರು ನೀಡುವ ಹಣವಂತೂ ಲೆಕ್ಕಕ್ಕೇ ಸಿಗುವುದಿಲ್ಲ. ಜೊತೆಗೆ ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರ, ಜಿಲ್ಲಾ ಪಂಚಾಯಿತಿ, ವಿವಿಧ ಇಲಾಖೆಗಳು ಎಷ್ಟು ಅನುದಾನ ಮೀಸಲಿಟ್ಟಿದ್ದವು, ಎಷ್ಟು ಖರ್ಚು ಮಾಡಿದವು ಎಂಬುದು ಗೊತ್ತಾಗುವುದೇ ಇಲ್ಲ. ‘ಎಲ್ಲದಕ್ಕೂ ಲೆಕ್ಕ ಇದೆ, ಸದ್ಯದಲ್ಲೇ ಸಭೆಯಲ್ಲಿ ಮಂಡಿಸುತ್ತೇವೆ’ ಎಂದು ಕೊಂಡೇ ಮತ್ತೊಂದು ದಸರೆಗೆ ಬಜೆಟ್‌ ಕೇಳುತ್ತಾರೆ.

2018ರ ದಸರೆಯಲ್ಲಿ 11 ನಿಮಿಷಗಳ 3ಡಿ ಮ್ಯಾಪಿಂಗ್‌ ಕಾರ್ಯಕ್ರಮಕ್ಕೆ ₹ 50 ಲಕ್ಷ ನೀಡಲಾಗಿದೆ. ಕಳೆದ ವರ್ಷ ವಿದೇಶದಲ್ಲಿ ದಸರೆ ಪ್ರಚಾರ ಮಾಡುವುದಾಗಿ ಹೇಳಿ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು, ಮಾಜಿ ಸಚಿವರು ಲಂಡನ್‌, ಪ್ಯಾರಿಸ್‌ ಪ್ರವಾಸ ಮಾಡಿ ಬಂದಿದ್ದರು. ಈ ಸಲ ಪ್ರಚಾರಕ್ಕೆಂದು ₹2.45 ಕೋಟಿ ನೀಡಲಾಗಿದೆ. ಆದರೆ, ಪ್ರಚಾರವೇ ಆರಂಭವಾಗಿಲ್ಲ. ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಈ ಬಗ್ಗೆ ಸಭೆಯಲ್ಲಿ ತರಾಟೆ ತೆಗೆದುಕೊಂಡಾಗ ಉತ್ತರಿಸಲು ಅಧಿಕಾರಿಗಳು ತಡಬಡಾಯಿಸಿದರು. 

ವಿದ್ಯುತ್ ದೀಪಾಲಂಕಾರಕ್ಕಾಗಿ ಹಳೇ ಸೆಟ್‌ ಜೋಡಿಸಿ ಹೊಸ ಬಲ್ಬು ಗಳೆಂದು ಬಿಲ್‌ ಮಾಡಿದ್ದೂ ಇದೆ. ಅದೇ ಕಾರಣಕ್ಕಾಗಿ, ‘ದಯವಿಟ್ಟು ಈ ಬಾರಿ ಹಳೇ ಸೆಟ್‌ ಜೋಡಿಸಿ ಮರ್ಯಾದೆ ತೆಗೀಬೇಡಿ’ ಎಂದು ಉಸ್ತುವಾರಿ ಸಚಿವ ವಿ.ಸೋಮಣ್ಣ, ವಿದ್ಯುತ್‌ ಗುತ್ತಿಗೆದಾರರ ಸಭೆಯಲ್ಲಿ ಎದ್ದು ನಿಂತು ಕೈಮುಗಿದದ್ದು. ಯುವ ಸಂಭ್ರಮ, ಯುವ ದಸರೆಯಂಥ ಕಾರ್ಯಕ್ರಮಗಳ ಆಯೋಜನೆಯನ್ನು ಇವೆಂಟ್‌ ಮ್ಯಾನೇಜ್‌ಮೆಂಟ್‌ ಸಂಸ್ಥೆ ಗಳಿಗೆ ನೀಡುತ್ತಾರೆ. ಅಲ್ಲೂ ಕಮಿಷನ್‌ ತಪ್ಪಿದ್ದಲ್ಲ.

ಇನ್ನು ಟೆಂಡರ್‌ ವಿಚಾರ ಕೇಳುವುದೇ ಬೇಡ. ದಸರೆ 15 ದಿನ ಬಾಕಿ ಇದ್ದಾಗ ಟೆಂಡರ್ ಕರೆಯುತ್ತಾರೆ. ಆಗ ತಾಂತ್ರಿಕ ಕಾರಣ ನೀಡಿ ಟೆಂಡರ್‌ ರದ್ದುಪಡಿಸಿ, ಸಮಯವಿಲ್ಲ ಎಂದು ಇಷ್ಟ ಬಂದವರಿಗೆ ಗುತ್ತಿಗೆ ನೀಡಿ ಕಮಿಷನ್‌ ಪಡೆಯುವ ಪರಿಪಾಟ ಹಳೆಯದಾಗಿದೆ. ಇದಕ್ಕೆ ದಸರಾ ವಸ್ತುಪ್ರದರ್ಶನ ಪ್ರಾಧಿಕಾರದ ಕಾರ್ಯವೈಖರಿಯೇ ಸಾಕ್ಷಿ. ವಸ್ತುಪ್ರದರ್ಶನ ಆರಂಭವಾಗಿ ತಿಂಗಳಾದರೂ ಕೆಲ ಮಳಿಗೆಗಳು ತಲೆ ಎತ್ತಿರುವುದಿಲ್ಲ. ಕಳೆದ ಬಾರಿ ಉನ್ನತ ಶಿಕ್ಷಣ ಇಲಾಖೆ ಮಳಿಗೆ ಆರಂಭವಾಗಿದ್ದೇ ದಸರೆ ಶುರುವಾಗಿ 30 ದಿನಗಳಾದ ಮೇಲೆ.

ಕಳೆದ ವರ್ಷ ಯುವ ದಸರೆಯಲ್ಲಿ ಪ್ರದರ್ಶನ ನೀಡಿದ ಗಾಯಕ ವಿಜಯಪ್ರಕಾಶ್‌ ಹಾಗೂ ಅವರ ತಂಡಕ್ಕೆ ₹ 60 ಲಕ್ಷ , ಅರ್ಮಾನ್‌ ಮಲಿಕ್‌ ಹಾಗೂ ಹಾಗೂ ನೇಹಾ ಕಕ್ಕರ್‌ ಅವರಿಗೆ ತಲಾ ₹ 35 ಲಕ್ಷ ನೀಡಲಾಗಿತ್ತು. ಜೊತೆಗೆ ಜಿಎಸ್‌ಟಿ ಬೇರೆ. ಇದರಲ್ಲೂ ಕಮಿಷನ್‌ ವ್ಯವಹಾರ ಇದೆ ಎಂಬ ಆರೋಪವಿದೆ.

ಬದಲಾವಣೆ ಸಾಧ್ಯವೇ ಇಲ್ಲ...

‘ಹಿಂದಿನಿಂದಲೂ ದಸರೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಕಮಿಷನ್‌ ದಂಧೆಯನ್ನು ತಡೆಯಲು ಸಾಧ್ಯವೇ ಆಗದ ಪರಿಸ್ಥಿತಿ ಇದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಅಷ್ಟೊಂದು ಭ್ರಷ್ಟರಾಗಿದ್ದಾರೆ’ ಎಂದು ನುಡಿಯುತ್ತಾರೆ ಮಾಜಿ ಮೇಯರ್‌ ಪುರುಷೋತ್ತಮ.

**

ಹತ್ತು ರೂಪಾಯಿಯ ವ್ಯವಹಾರವೂ ಚೆಕ್‌ ಮೂಲಕವೇ ನಡೆಯಬೇಕು. ಹಿಂದೆ ಏನಾಗಿದೆಯೋ ನನಗೆ ಗೊತ್ತಿಲ್ಲ. ಈ ಬಾರಿ ಪಾರದರ್ಶಕವಾಗಿ ದಸರೆ ನಡೆಯಬೇಕು.
– ವಿ.ಸೋಮಣ್ಣ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ

Post Comments (+)