ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಣ್ಚಪ್ಪಾಡಿ ಶಾಲೆ: 7ತರಗತಿಗೆ ಒಬ್ಬರೇ ಶಿಕ್ಷಕಿ

ಕುಮಾರಮಂಗಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರೇ ಇಲ್ಲ
Last Updated 15 ಜೂನ್ 2018, 13:20 IST
ಅಕ್ಷರ ಗಾತ್ರ

ಪುತ್ತೂರು: ಪುತ್ತೂರು ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಒಂದಾದ ಸವಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿ ಪುಣ್ಚಪ್ಪಾಡಿ ಗ್ರಾಮದಲ್ಲಿ ಇರುವ ಎರಡು ಸರ್ಕಾರಿ ಶಾಲೆಗಳಲ್ಲಿಯೂ ಶಿಕ್ಷಕರ ಕೊರತೆ ಕಾಡುತ್ತಿದೆ.

67 ವಿದ್ಯಾರ್ಥಿಗಳು ಇರುವ ಪುಣ್ಚಪ್ಪಾಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇರುವುದು ಒಬ್ಬರು ಶಿಕ್ಷಕರು. ಕುಮಾರಮಂಗಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸದ್ಯ ಕಾಯಂ ಶಿಕ್ಷಕರೇ ಇಲ್ಲ. ಇದು ಪಾಲಕರಲ್ಲಿ ಆತಂಕ ಮೂಡಿಸಿದೆ.

ಪುಣ್ಚಪ್ಪಾಡಿ ಸರ್ಕಾರಿ  ಹಿರಿಯ ಪ್ರಾಥಮಿಕ ಶಾಲೆ ಕಳೆದ ವರ್ಷವಷ್ಟೇ 90ನೇ ವರ್ಷಾಚರಣೆ ಸಂಭ್ರಮ ಆಚರಣೆಯಿಂದ ಹಿಗ್ಗುತ್ತಿದೆ.  ಆದರೆ ಶಿಕ್ಷಕರ ಕೊರತೆ ಕಾಡುತ್ತಿರುವುದು ಈ ಸಂಭ್ರಮಕ್ಕೆ ಮಂಕು ಕವಿಯುವಂತೆ ಮಾಡಿದೆ. ಇದರ ನೆನಪಿನಲ್ಲಿ ಸುಂದರ ಕೊಠಡಿ ನಿರ್ಮಾಣವೂ ₹4ಲಕ್ಷ ವೆಚ್ಚದಲ್ಲಿ ನಡೆದಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದೇಣಿಗೆಯಲ್ಲಿ ಕಚೇರಿ ಕೊಠಡಿ ನಿರ್ಮಾಣ ಮಾಡಲಾಗಿದೆ. ಉತ್ತಮ ಶೌಚಾಲಯ ವ್ಯವಸ್ಥೆಯೂ ಇದೆ. ಶಾಲಾ ಕಟ್ಟಡವೂ ಸುಂದರವಾಗಿದೆ. ಎಲ್ಲಾ ವ್ಯವಸ್ಥೆಗಳು ಇಲ್ಲಿ ಅಚ್ಚುಕಟ್ಟಾಗಿ ಇದ್ದರೂ, ಶಿಕ್ಷಕರ ಕೊರತೆ ಎಲ್ಲವನ್ನೂ ಇಲ್ಲದಂತೆ ಮಾಡಿದೆ ಎಂಬ ಆತಂಕ ಇಲ್ಲಿನ ವಿದ್ಯಾರ್ಥಿಗಳಲ್ಲಿ ಮೂಡಿದೆ.

ಪುಣ್ಚಪ್ಪಾಡಿ ಶಾಲೆಯಲ್ಲಿ 1ರಿಂದ 7ರ ತನಕ ತರಗತಿ ಇದೆ. 67 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಶಿಕ್ಷಣ ಇಲಾಖೆ ನಿಯಮಾನುಸಾರ ಕನಿಷ್ಠ 3 ಶಿಕ್ಷಕರು ಇಲ್ಲಿ ಇರಬೇಕು. ಆದರೆ, ಈಗ ಇಲ್ಲಿರುವುದು ಬರೀ ಒಬ್ಬರು ಮಾತ್ರ. ಮುಖ್ಯ ಶಿಕ್ಷಕರ ಆಡಳಿತಾತ್ಮಕ ಜವಾಬ್ದಾರಿ ಹೊರೆಯೂ ಇವರ ಹೆಗಲೇರಿದೆ. ಕಳೆದ ವರ್ಷ ಇಬ್ಬರು ಅತಿಥಿ ಶಿಕ್ಷಕರು ಇದ್ದರೂ, ಈ ಬಾರಿ ಈ ತನಕ ಅತಿಥಿ ಶಿಕ್ಷಕರ ನೇಮಕವಾಗದೇ ಇರುವುದರಿಂದ ಪ್ರಸ್ತುತ ಇಲ್ಲಿರುವ ಶಿಕ್ಷಕಿ ರಶ್ಮಿತಾ ಜೈನ್ ಅವರು ತರಗತಿ ಅಲೆದಾಡಿಕೊಂಡು 7 ತರಗತಿ ನಿಭಾಯಿಸಬೇಕಾದ ಸ್ಥಿತಿ ಇದೆ.

ಹಿಂದುಳಿದ ವರ್ಗದ ವಿದ್ಯಾರ್ಥಿಗಳೇ ಇರುವ ಪುಣ್ಚಪ್ಪಾಡಿ ಶಾಲೆಯಲ್ಲಿ 67 ವಿದ್ಯಾರ್ಥಿ‌ಗಳ ಪೈಕಿ 46 ಮಂದಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದವರು. ದೇವಸ್ಯ ಎಂಬಲ್ಲಿನ ದಲಿತ ಕಾಲೊನಿ ಮಂದಿ 1 ಕಿ.ಮೀ ಹತ್ತಿರವಿರುವ ಸವಣೂರು ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸದೆ ಇಲ್ಲಿನ ಮೋಹಕ್ಕೆ 3 ಕಿಮೀ ದೂರದದಲ್ಲಿರುವ ಈ ಶಾಲೆಗೆ ಕಳುಹಿಸುತ್ತಿದ್ದಾರೆ. ದೇವಸ್ಯ ಕಾಲೊನಿ 16 ಮಂದಿ ಮಕ್ಕಳು ಈ ಶಾಲೆಗೆ ಬರುತ್ತಾರೆ. ಹಿಂದುಳಿದ ಮಕ್ಕಳೆ ಹೆಚ್ಚು ಇರುವ ಈ ಶಾಲೆಯಲ್ಲಿನ ಶಿಕ್ಷಕರ ಸಮಸ್ಯೆ ಇಲಾಖೆ ಮುಂದಾಗುತ್ತಿಲ್ಲ ಎಂಬ ಆಕ್ರೋಶ ಇಲ್ಲಿನ ಜನರದು.

ಪುಣ್ಚಪ್ಪಾಡಿ ಶಾಲೆ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಪಿ.ಡಿ.ಗಂಗಾಧರ ರೈ ದೇವಸ್ಯ ಅವರು ಶಿಕ್ಷಕರ ಕೊರತೆ ಪರಿಹಾರ ಮಾಡುವಂತೆ ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಿಕೊಂಡಿದ್ದಾರೆ. ತಕ್ಷಣವೇ ಶಾಲೆಗೆ ಮೂರು ಶಿಕ್ಷಕರನ್ನು ನೇಮಕಗೊಳಿಸದಿದ್ದರೆ ವಾರದೊಳಗೆ ಎಸ್‌ಡಿಎಂಸಿ ಜತೆ ಸೇರಿ ಪ್ರತಿಭಟನೆ ನಡೆಸುವುದಾಗಿ ಸವಣೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಇಂದಿರಾ.ಬಿ.ಕೆ ಅವರು ಎಚ್ಚರಿಸಿದ್ದಾರೆ.

ಶಾಲೆಗೆ ಕೂಡಲೇ ಮೂರು ಮಂದಿ ಶಿಕ್ಷಕರ ನಿಯೋಜನೆ ಮಾಡಿ ಸಮಸ್ಯೆ ಬಗೆಹರಿಸುವಂತೆ ಸವಣೂರು ಯುವಕ ಮಂಡಲದ ಮಾಜಿ ಅಧ್ಯಕ್ಷ ಮಹೇಶ್ ಕೆ, ಮತ್ತು ಸವಣೂರಿನ `ಬೊಳ್ಳಿ ಬೊಲ್ಪು' ತುಳು ಕೂಟದ ಗೌರವಾಧ್ಯಕ್ಷ ಗಿರಿಶಂಕರ್ ಸುಲಾಯ, ಅಧ್ಯಕ್ಷ ಕುಂಜಾಡಿ ಪ್ರಕಾಶ್ಚಂದ್ರ ರೈ ಮುಗೇರುಗುತ್ತು, ಕಾರ್ಯದರ್ಶಿ ಉಮಾಪ್ರಸಾದ್ ರೈ ನಡುಬೈಲು ಅವರು ಗುರುವಾರ ನಿಯೋಗದಲ್ಲಿ ತೆರಳಿ ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ರಾಜೇಶ್ವರಿ ಅವರು ಸಮಸ್ಯೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ನಿವಾರಿಸುವಂತೆ ಒತ್ತಾಯಿಸಿದ್ದಾರೆ.

ಒಬ್ಬರು ಶಿಕ್ಷಕರನ್ನು ನಾಳೆಯಿಂದಲೇ ಕರ್ತವ್ಯಕ್ಕೆ ನಿಯೋಜನೆ ಮಾಡುತ್ತೇವೆ. ಅತಿಥಿ ಶಿಕ್ಷರರ ನೇಮಕವಾದ ಬಳಿಕ ನಿಮ್ಮ ಶಾಲೆಗೂ ಕೊಡುತ್ತೇವೆ ಎಂಬ ಭರವಸೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಸಿಕ್ಕಿದೆ.

ಈ ಶಾಲೆಯಲ್ಲಿ ಕಾಯಂ ಶಿಕ್ಷಕರೆ ಇಲ್ಲ

ಪುಣ್ಚಪ್ಪಾಡಿ ಶಾಲೆಯ ಸ್ಥಿತಿ ಇದಾದರೆ ಇದೇ ಗ್ರಾಮದ ಕುಮಾರಮಂಗಲ ಹಿರಿಯ ಪ್ರಾಥಮಿಕ ಶಾಲೆಯದ್ದು ಇದಕ್ಕಿಂತಲೂ ಶೋಚನೀಯ ಸ್ಥಿತಿ ಇದೆ. 1ರಿಂದ 7ನೇ ತನಕ ತರಗತಿ ಇರುವ ಕುಮಾರಮಂಗಲ ಶಾಲೆಯಲ್ಲಿ 16 ಮಕ್ಕಳಿದ್ದಾರೆ. ಆದರೆ ಕಾಯಂ ಶಿಕ್ಷಕರು ಯಾರೂ ಇಲ್ಲ.  ಕ್ಲಸ್ಟರ್ ವ್ಯಾಪ್ತಿಯಲ್ಲಿ ಹೆಚ್ಚುವರಿ ಶಿಕ್ಷಕರಿಲ್ಲ. ನಿಯೋಜನೆಗೆ ಯಾರೂ ಒಪ್ಪುತ್ತಿಲ್ಲ. ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯ ಬಳಿಕ ಸಮಸ್ಯೆ ಸರಿಯಾಗಬಹುದು. ಕಳೆದ ವರ್ಷದ ಅತಿಥಿ ಶಿಕ್ಷಕರೇ ಮತ್ತೆ ಇಲ್ಲಿಗೆ ಬರುತ್ತಾರೆ ಎಂಬ ಉತ್ತರ ಶಿಕ್ಷಣ ಇಲಾಖೆಯ ಅಧಿಕಾರಿಗಳಿಂದ ಸಿಗುತ್ತಿದೆ. ಹೀಗಾದರೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಲು ಹೇಗೆ ಸಾಧ್ಯಎಂಬಪ್ರಶ್ನೆಪೋಷಕರನ್ನುಕಾಡುತ್ತಿದೆ.

ಮನವಿಗೂ ಬೆಲೆಯಿಲ್ಲ

ತೀರಾ ಗ್ರಾಮಿಣ ಪ್ರದೇಶ ಪುಣ್ಷಪ್ಪಾಡಿ ಗ್ರಾಮ ವ್ಯಾಪ್ತಿಯ ಪುಣ್ಚಪ್ಪಾಡಿ ಮತ್ತು ಕುಮಾರಮಂಗಲ ಈ ಎರಡೂ ಪ್ರಾಥಮಿಕ ಶಾಲೆಗಳಲ್ಲಿಯೂ ಶಿಕ್ಷಕರ ಕೊರತೆ ಇದೆ. ಈ ಎರಡೂ ಶಾಲೆಗಳಲ್ಲಿಯೂ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳೇ ಹೆಚ್ಚಾಗಿ ಇದ್ದರೂ, ಶಿಕ್ಷಣ ಇಲಾಖೆ ಇಲ್ಲಿನ ಶಿಕ್ಷಕರ ಕೊರತೆ ನೀಗಿಸಲು ಮುಂದಾಗುತ್ತಿಲ್ಲ. ತಾನೇ ಸ್ವತಹಃ ಕ್ಷೇತ್ರ ಶಿಕ್ಷಣಾಧಿಕಾರಿ ಅವರಲ್ಲಿ ಮೂರು ಬಾರಿ ಮನವಿ ಮಾಡಿಕೊಂಡಿದ್ದರೂ, ಈ ತನಕ ಯಾವುದೇ ಪ್ರಯೋಜನವಾಗಿಲ್ಲ ಎಂದು ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ರಾಜೇಶ್ವರಿ ನೋವಿನಿಂದ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT