ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಸ್‌ಬುಕ್‌ನಲ್ಲಿ ಚುನಾವಣೆ ಪ್ರಚಾರ ಜೋರು

ಸಾಮಾಜಿಕ ಜಾಲತಾಣಗಳಲ್ಲಿ ಶಾಸಕರು ಸಕ್ರಿಯ; ಕಾರ್ಯಕ್ರಮಗಳ ನೇರ ಪ್ರಸಾರ
Last Updated 7 ಮಾರ್ಚ್ 2018, 9:59 IST
ಅಕ್ಷರ ಗಾತ್ರ

ರಾಮನಗರ: ಚುನಾವಣೆ ಸಮೀಪಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಜಿಲ್ಲೆಯ ಶಾಸಕರು ಸಕ್ರಿಯರಾಗಿದ್ದಾರೆ. ಸ್ಥಳೀಯ ಕಾಮಗಾರಿಗಳ ಉದ್ಘಾಟನೆ, ಭೂಮಿಪೂಜೆ ಕಾರ್ಯಕ್ರಮಗಳೂ ನೇರ ಪ್ರಸಾರ ಕಾಣುತ್ತಿವೆ.

ಬಹುತೇಕ ಶಾಸಕರು ಫೇಸ್‌ಬುಕ್‌ನಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದಾರೆ. ಅಭಿಮಾನಿಗಳು, ಹಿಂಬಾಲಕರನ್ನು ಹೊಂದಿರುವ ಲೆಕ್ಕದಲ್ಲಿ ಸಚಿವ ಡಿ.ಕೆ. ಶಿವಕುಮಾರ್ ಮೊದಲಿಗರಾಗಿದ್ದಾರೆ.

ಅವರ ಅಧಿಕೃತ ಫೇಸ್‌ಬುಕ್‌ ಪುಟವನ್ನು 4.74 ಲಕ್ಷದಷ್ಟು ಮಂದಿ ಮೆಚ್ಚಿಕೊಂಡಿದ್ದು, ಅದನ್ನು ಹಿಂಬಾಲಿಸುತ್ತಿದ್ದಾರೆ. ಹಾಗೆಯೇ ‘ಡಿ.ಕೆ. ಶಿವಕುಮಾರ್‌–ಸರ್ವಿಂಗ್‌ ಕರ್ನಾಟಕ’ ಎನ್ನುವ ಮತ್ತೊಂದು ಖಾತೆಯನ್ನೂ ಅವರು ಹೊಂದಿದ್ದು, ಅದಕ್ಕೂ 1.93 ಲಕ್ಷದಷ್ಟು ಹಿಂಬಾಲಕರು ಇದ್ದಾರೆ. ಒಂದರಲ್ಲಿ ಸಂಪೂರ್ಣ ಕನ್ನಡ ಮತ್ತು ಇನ್ನೊಂದರಲ್ಲಿ ಇಂಗ್ಲಿಷ್‌ನಲ್ಲಿ ಚಿತ್ರ–ಮಾಹಿತಿಗಳು ನಿರಂತರ ಪ್ರಸಾರವಾಗುತ್ತಲಿವೆ. ಅದಕ್ಕೆಂದೇ ಸಚಿವರು ಪ್ರತ್ಯೇಕ ಸಿಬ್ಬಂದಿಯನ್ನು ನೇಮಿಸಿಕೊಂಡಿದ್ದಾರೆ. ಸರ್ಕಾರಿ, ಖಾಸಗಿ ಕಾರ್ಯಕ್ರಮಗಳ ಫೋಟೊ–ಸುದ್ದಿಗಳು ಕಾಣಿಸಿಕೊಳ್ಳುತ್ತಿವೆ.

ಜೆಡಿಎಸ್‌ನ ರಾಜ್ಯ ಘಟಕದ ಅಧ್ಯಕ್ಷರೂ ಆಗಿರುವ ಎಚ್‌.ಡಿ. ಕುಮಾರಸ್ವಾಮಿ ಅವರು ನೇರವಾಗಿ ಫೇಸ್‌ಬುಕ್‌ನಲ್ಲಿ ಕಾಣಿಸಿಕೊಳ್ಳುವುದು ಕಡಿಮೆ. ಆದರೆ ಪಕ್ಷದ ಪುಟಗಳು ಹಾಗೂ ಅಭಿಮಾನಿಗಳ ಪುಟಗಳಲ್ಲಿ ಅವರು ಹೆಚ್ಚೆಚ್ಚು ಕಾಣಿಸಿಕೊಂಡು ಸಾಮಾಜಿಕ ತಾಣಗಳಲ್ಲೂ ಹೆಚ್ಚು ಚರ್ಚೆಗೆ ಒಳಗಾಗುತ್ತಿದ್ದಾರೆ.

ಚುನಾವಣೆಯಲ್ಲಿ ಸಾಮಾಜಿಕ ಜಾಲತಾಣಗಳ ಮಹತ್ವವನ್ನು ಎಚ್‌ಡಿಕೆ ಅರಿತಿದ್ದು, ಅವರ ಅಣತಿಯಂತೆ ‘ಜೆಡಿಎಸ್ ಫ್ಯಾನ್ಸ್‌ ಕ್ಲಬ್‌’ ಸಕ್ರಿಯವಾಗಿದೆ. ಎಚ್‌ಡಿಕೆ ಪಾಲ್ಗೊಳ್ಳುವ ಪ್ರತಿ ಕಾರ್ಯಕ್ರಮವನ್ನು ಫೇಸ್‌ಬುಕ್‌ ಮೂಲಕ ನೇರ ಪ್ರಸಾರ ಮಾಡುತ್ತಿದೆ. ಎಚ್‌ಡಿಕೆ ಅವರ ಅಧಿಕೃತ ಪುಟವನ್ನು 2.19 ಲಕ್ಷ ಮಂದಿ ಫಾಲೋ ಮಾಡುತ್ತಿದ್ದಾರೆ. ಇದಲ್ಲದೆ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕುಮಾರಸ್ವಾಮಿ, ನಮ್ಮ ಕುಮಾರಸ್ವಾಮಿ ಸಹಿತ ಇನ್ನೂ ನಾಲ್ಕಾರು ಪ್ರೊಫೈಲ್‌ಗಳು ಫೇಸ್‌ಬುಕ್‌ ನಲ್ಲಿ ಕಾಣಸಿಗುತ್ತಿವೆ.

ಚನ್ನಪಟ್ಟಣದಿಂದ ಬಿಜೆಪಿ ಅಭ್ಯರ್ಥಿಯಾಗಲಿರುವ ಶಾಸಕ ಸಿ.ಪಿ. ಯೋಗೇಶ್ವರ್ ಅವರೂ ಫೇಸ್‌ಬುಕ್‌ನಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಸ್ಥಳೀಯ ಕಾರ್ಯಕ್ರಮಗಳೂ ಅವರ ಈ ಪುಟದಲ್ಲಿ ನೇರ ಪ್ರಸಾರ ಕಾಣುತ್ತಿವೆ. ಈಗಾಗಲೇ ಕ್ಷೇತ್ರದಾದ್ಯಂತ ಮನೆ ಮನೆ ಪ್ರಚಾರ ಕೈಗೊಂಡಿರುವ ಅವರು ಅದೆಲ್ಲವನ್ನೂ ಅಂತರ್ಜಾಲದಲ್ಲಿ ತೆರೆದಿಡುತ್ತಿದ್ದಾರೆ. ಅಧಿಕೃತ ಪುಟಕ್ಕೆ 35 ಸಾವಿರ ಹಿಂಬಾಲಕರು (ಫಾಲೋವರ್ಸ್‌) ಇದ್ದಾರೆ. ಇದಲ್ಲದೆ ಅವರ ಹೆಸರಿನ ಇನ್ನೊಂದು ಪುಟ ಹಾಗೂ ಅಭಿಮಾನಿಗಳ ಕ್ಲಬ್‌ ಪುಟಗಳೂ ಇವೆ.

ಅಲ್ಲೇ ಹೊಗಳಿಕೆ, ಅಲ್ಲೇ ತೆಗಳಿಕೆ: ಫೇಸ್‌ಬುಕ್‌ ಪುಟಗಳಲ್ಲಿ ನೇರ ಸಂವಾದಗಳು ನಿರಂತರವಾಗಿ ನಡೆಯುತ್ತಿವೆ. ಹೆಚ್ಚಿನ ಪ್ರತಿಕ್ರಿಯೆ ಹೊಗಳಿಕೆಯದ್ದಾದರೆ, ಇನ್ನೊಂದಿಷ್ಟು ತೆಗಳಿಕೆಯ ಮಾತುಗಳೂ ಇವೆ. ಕಾಮಗಾರಿ, ಕಾರ್ಯಕ್ರಮಗಳ ಬಗೆಗಿನ ಚರ್ಚೆಗಳು ಹೆಚ್ಚಾಗುತ್ತಿವೆ.

ಟ್ವಿಟರ್‌ನಲ್ಲೂ ಸದ್ದು: ಎಚ್‌ಡಿಕೆ, ಡಿ.ಕೆ.ಶಿ ಹಾಗೂ ಹಾಗೂ ಸಿಪಿವೈ ಟ್ವಿಟರ್‌ನಲ್ಲೂ ಖಾತೆಗಳನ್ನು ಹೊಂದಿದ್ದು, ಆಗಾಗ್ಗೆ ಸಂದೇಶ ನೀಡುತ್ತಾ ಬಂದಿದ್ದಾರೆ.

**
ಹಿಂದೆ ಬಿದ್ದ ಬಾಲಕೃಷ್ಣ

ಉಳಿದ ಮೂವರು ಶಾಸಕರಿಗೆ ಹೋಲಿಸಿದರೆ ಮಾಗಡಿಯ ಎಚ್.ಸಿ. ಬಾಲಕೃಷ್ಣ ಅವರು ಸಾಮಾಜಿಕ ಜಾಲತಾಣಗಳಿಂದ ದೂರವೇ ಉಳಿದಿದ್ದಾರೆ.

ಅವರ ಹೆಸರಿನಲ್ಲಿ ಫೇಸ್‌ಬುಕ್‌ ಖಾತೆ ಇದೆಯಾದರೂ ಅದು ಸಕ್ರಿಯವಾಗಿಲ್ಲ. ಸ್ವತಃ ಶಾಸಕರೇ ‘ನನಗೆ ಸಾಮಾಜಿಕ ಜಾಲತಾಣಗಳ ಬಗ್ಗೆ ಅಷ್ಟು ಆಸಕ್ತಿಯಿಲ್ಲ’ ಎಂದು ಪತ್ರಕರ್ತರ ಬಳಿ ಹೇಳಿಕೊಂಡಿದ್ದಾರೆ. ಆದಾಗ್ಯೂ ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಅವರು ಸಾಕ್ಷ್ಯಚಿತ್ರ ಸಿದ್ಧಪಡಿಸುವಲ್ಲಿ ತೊಡಗಿಕೊಂಡಿದ್ದಾರೆ ಎನ್ನಲಾಗಿದ್ದು, ಸದ್ಯದಲ್ಲಿಯೇ ಸಕ್ರಿಯವಾಗುವ ಸಾಧ್ಯತೆಯೂ ಇದೆ.

**

ವಾಟ್ಸಪ್‌ನಲ್ಲಿ ಸಮರ

ಚುನಾವಣೆಗೆ ಬೇಕಾದ ‘ಯುದ್ಧತಂತ್ರ’ಗಳನ್ನು ವಾಟ್ಸಪ್‌ನಲ್ಲಿ ಹರಡುವ ಕಾರ್ಯವು ಭರದಿಂದ ನಡೆದಿದೆ.

ಎದುರಾಳಿಗಳ ಲೋಪಗಳು, ಅವಹೇಳನಾಕಾರಿ ಸಂದೇಶಗಳನ್ನು ಇನ್ನೊಂದು ಗುಂಪು ವ್ಯಾಪಕವಾಗಿ ಹರಡತೊಡಗಿದೆ. ಇಲ್ಲಿಯೂ ಪಕ್ಷ/ಅಭ್ಯರ್ಥಿಗಳ ಅಭಿಮಾನಿಗಳು ಗುಂಪು ರಚಿಸಿಕೊಂಡು ಪ್ರಚಾರ ನಡೆಸತೊಡಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT