ಶುಕ್ರವಾರ, ನವೆಂಬರ್ 15, 2019
22 °C
ರಾಜ್ಯದಲ್ಲಿ ಪ್ರಾಯೋಗಿಕ ಯೋಜನೆ

ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ‘ಹುಲ್ಲುಗಾವಲು’: ₹ 35 ಲಕ್ಷ ಅನುದಾನ ಬಿಡುಗಡೆ

Published:
Updated:
Prajavani

ಹುಣಸೂರು: ರಾಷ್ಟ್ರೀಯ ಉದ್ಯಾನ ನಾಗರಹೊಳೆ ಹುಲಿ ಸಂರಕ್ಷಿತಾರಣ್ಯದಲ್ಲಿ ಹುಲ್ಲುಗಾವಲು ಬೆಳೆಸುವ ಪ್ರಾಯೋಗಿಕ ಯೋಜನೆಗೆ ಅರಣ್ಯ ಇಲಾಖೆ ಮುಂದಾಗಿದೆ.

643 ಚದರ ಕಿ.ಮೀ ವ್ಯಾಪ್ತಿಯಲ್ಲಿ ಹರಡಿಕೊಂಡಿದ್ದ ಈ ಉದ್ಯಾನ, ಈಚೆಗೆ 200 ಚದರ ಕಿ.ಮೀ ವಿಸ್ತರಿಸಿ ಬೃಹತ್ ಉದ್ಯಾನವಾಗಿ ಹೊರಹೊಮ್ಮಿದೆ.

ಈ ಉದ್ಯಾನದ 50 ರಿಂದ 80 ಹೆಕ್ಟೇರ್ ಪ್ರದೇಶದಲ್ಲಿ ಹುಲ್ಲುಗಾವಲು ಅಭಿವೃದ್ಧಿಪಡಿಸುವ ಯೋಜನೆ ಹೊಂದಿದ್ದು, ಅದಕ್ಕಾಗಿ ಸರ್ಕಾರವು ₹ 35 ಲಕ್ಷ ಅನುದಾನ ಬಿಡುಗಡೆ ಮಾಡಿದೆ.

’ಅರಣ್ಯ ಪ್ರದೇಶದಲ್ಲಿರುವ ಪ್ರಾಣಿಗಳಿಗೆ ಆಹಾರವಾಗಬಲ್ಲ ‘ಹುಲ್ಲು’ ಬೆಳೆಸುವ ಯೋಜನೆ ಇದು’ ಎಂದು ನಾಗರಹೊಳೆ ಹುಲಿ ಯೋಜನಾ ನಿರ್ದೇಶಕ ನಾರಾಯಣಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ಅರಣ್ಯದಲ್ಲಿ ಲಂಟಾನ ಕಳೆ ಹೆಚ್ಚಾಗಿ ಬೆಳೆದಿರುವುದರಿಂದ ಸಸ್ಯಾಹಾರಿ ಪ್ರಾಣಿಗಳಿಗೆ ಮೇವಿನ ಕೊರತೆ ಉಂಟಾಗಿ ಪ್ರಾಣಿಗಳ ಸಂಖ್ಯೆ ಕಡಿಮೆಯಾಗುವ ಸಾಧ್ಯತೆ ಇದೆ. ಸಸ್ಯಾಹಾರಿ ಪ್ರಾಣಿಗಳ ಸಂಖ್ಯೆ ಕುಸಿತವಾದಲ್ಲಿ ಮಾಂಸಾಹಾರಿ ಪ್ರಾಣಿಗಳ ಆಹಾರಕ್ಕೆ ಧಕ್ಕೆ ಆಗಲಿದೆ. ಹೀಗಾಗಿ, ಸಸ್ಯಾಹಾರಿಗಳಾದ ಜಿಂಕೆ, ಕಾಡುಕೋಣ ಸೇರಿದಂತೆ ಹಲವು ಪ್ರಾಣಿಗಳ ಸಂರಕ್ಷಣೆ ಅಗತ್ಯವಾಗಿದೆ ಎಂದು ಹೇಳಿದರು.

ಒಂದೇ ಪ್ರದೇಶದಲ್ಲಿ ಹುಲ್ಲುಗಾವಲು ಬೆಳೆಸುವ ಬದಲಿಗೆ ಅರಣ್ಯದ ಆಯ್ದ ಭಾಗಗಳಲ್ಲಿ ಲಂಟಾನ ತೆರವುಗೊಳಿಸಿ ಹುಲ್ಲು ಬೆಳೆಸುವ ಪ್ರಕ್ರಿಯೆ ಆರಂಭಿಸಲಾಗುತ್ತಿದೆ. ಈಗಾಗಲೇ ಮಹಾರಾಷ್ಟ್ರದಲ್ಲಿ ಈ ಪ್ರಯತ್ನ ನಡೆಸಿ ಯಶಸ್ಸು ಲಭಿಸಿದೆ.

ಸ್ಥಳೀಯ ತಳಿ: ಹುಲ್ಲುಗಾವಲು ಬೆಳೆಸುವ ಯೋಜನೆಗೆ ಬೇರೆ ಕಡೆಯಿಂದ ಹುಲ್ಲಿನ ತಳಿ ಆಮದು ಮಾಡಿಕೊಳ್ಳುತ್ತಿಲ್ಲ. ಬದಲಾಗಿ ಸ್ಥಳೀಯವಾಗಿ ಲಭ್ಯವಿರುವ ಬಿತ್ತನೆ ಬೀಜ ಸಂಗ್ರಹಿಸಿ ಅರಣ್ಯದಲ್ಲಿ ಬಿತ್ತುವ ಕೆಲಸ ಮಾಡಲಾಗುತ್ತದೆ. ಬೀಜ ಸಂಗ್ರಹಣೆ ಕಾರ್ಯಕ್ಕೆ ಇಲಾಖೆ ಸಿಬ್ಬಂದಿ ಮುಂದಾಗಿದ್ದು, ಮುಂಗಾರಿನಲ್ಲಿ ಆಯ್ದ ಭಾಗಗಳಲ್ಲಿ ಬಿತ್ತನೆ ನಡೆಯಲಿದೆ ಎಂದು ನಾರಾಯಣಸ್ವಾಮಿ ಮಾಹಿತಿ ನೀಡಿದರು.

ತರಬೇತಿ: ಹುಲ್ಲುಗಾವಲು ಪ್ರದೇಶ ಅಭಿವೃದ್ಧಿ ನಿಟ್ಟಿನಲ್ಲಿ ಮಹಾರಾಷ್ಟ್ರದಿಂದ ಬಂದಿದ್ದ ಹುಲ್ಲುಗಾವಲು ತಜ್ಞ ಡಾ.ಮುರತ್ಕಲ್ ಎರಡು ದಿನಗಳ ಕಾರ್ಯಾಗಾರ ನಡೆಸಿದ್ದಾರೆ. ಹುಲ್ಲುಗಾವಲು ಬೆಳೆಸುವ ಮತ್ತು ನಿರ್ವಹಿಸುವ ಸಂಬಂಧ ಬಂಡೀಪುರ, ಚಾಮರಾಜನಗರ, ಮೈಸೂರು ಮತ್ತು ಕೊಡಗು ಜಿಲ್ಲಾ ಅರಣ್ಯ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ.

ಲಂಟಾನ ತೆರವು: ಅರಣ್ಯದಲ್ಲಿ ಲಂಟಾನ ತೆರವುಗೊಳಿಸುವ ಕಾರ್ಯ ಕೂಡ ನಡೆಯುತ್ತಿದೆ. ಯಂತ್ರ ಬಳಸಿ ಕೆಲಸ ಬೇಗ ಮುಗಿಸಬಹುದು. ಆದರೆ, ಇತರೆ ಪ್ರಭೇದದ ಸಸ್ಯಗಳಿಗೆ ಧಕ್ಕೆ ಉಂಟಾಗುತ್ತದೆ. ಹೀಗಾಗಿ, ಮಾನವಶಕ್ತಿ ಬಳಸಿ ಕೆಲಸದಲ್ಲಿ ತೊಡಗಿದ್ದೇವೆ ಎಂದರು.

**

ಹುಲ್ಲು ಬೆಳೆಸುವ ಯೋಜನೆಗೆ ಕೇಂದ್ರದಿಂದ ₹ 5 ಕೋಟಿ ಅನುದಾನ ಬಂದಿದೆ. ರಾಜ್ಯದಲ್ಲಿ ಪ್ರಥಮವಾಗಿ ನಾಗರಹೊಳೆಯಲ್ಲಿ ಯೋಜನೆ ಕೈಗೆತ್ತಿಕೊಳ್ಳಲಾಗಿದೆ.
-ನಾರಾಯಣಸ್ವಾಮಿ, ಹುಲಿ ಯೋಜನಾ ನಿರ್ದೇಶಕ, ನಾಗರಹೊಳೆ

ಪ್ರತಿಕ್ರಿಯಿಸಿ (+)