ಗುರುವಾರ , ನವೆಂಬರ್ 14, 2019
22 °C

‘ಕಾನೂನು ಕುಣಿಕೆಯಿಂದ ಡಿಕೆಶಿ ಪಾರಾಗಲ್ಲ’

Published:
Updated:

ಬೆಂಗಳೂರು: ಕಾಂಗ್ರೆಸ್‌ ನಾಯಕ ಡಿ.ಕೆ.ಶಿವಕುಮಾರ್‌ ಅವರ ಭ್ರಷ್ಟಾಚಾರ ಮತ್ತು ಆರ್ಥಿಕ ಅಪರಾಧದ ಪ್ರಕರಣಗಳನ್ನು ಜಾತಿ ಆಧಾರದಲ್ಲಿ ಮರೆ ಮಾಚಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದ್ದಾರೆ.

ಶಿವಕುಮಾರ್‌ ಅವರು ಜಾರಿ ನಿರ್ದೇಶನಾಲಯದ ವಿಚಾರಣೆ ಎದುರಿಸಿ, ತಿಹಾರ್‌ ಜೈಲಿಗೆ ಹೋಗಿರುವುದು ನಿರೀಕ್ಷಿತ ಬೆಳವಣಿಗೆಯೇ ಆಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಈ ಪ್ರಕರಣದಲ್ಲಿ ರಾಜಕೀಯ ಉದ್ದೇಶದಿಂದ ಬಿಜೆಪಿಯನ್ನು ಟೀಕಿಸುತ್ತಿವೆ. ಆದರೆ, ಕಾನೂನು ಪ್ರಕಾರ ಕ್ರಮ ಎದುರಿಸುವುದು ಎಲ್ಲರಿಗೂ ಅನಿವಾರ್ಯ. ಈ ಹಿಂದೆಯೂ ಕಾನೂನು ಪ್ರಕಾರವೇ ಕ್ರಮ ಜರುಗಿಸಿರುವ ಅನೇಕ ಪ್ರಕರಣಗಳು ನಮ್ಮ ಕಣ್ಣ ಮುಂದೆಯೇ ಇವೆ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ ಮುಖಂಡರು ಅನಗತ್ಯವಾಗಿ ಈ ಪ್ರಕರಣದಲ್ಲಿ ಪ್ರಧಾನಿ ಮತ್ತು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರ ಹೆಸರುಗಳನ್ನು ಎಳೆದು ತಂದಿದ್ದಾರೆ. ತಮ್ಮ ಪಕ್ಷದ ಕಾರ್ಯಕರ್ತರನ್ನು ಪ್ರಚೋದಿಸಿ ಬೀದಿಗಿಳಿಯುವಂತೆ ಮಾಡಿ ಕಾನೂನು ಕ್ರಮದಿಂದ ಬಚಾವ್‌ ಆಗಲು ಯಾರಿಗೂ ಸಾಧ್ಯವಿಲ್ಲ. ಶಿವಕುಮಾರ್‌ ಬೆಂಬಲಿಗರು ಈಗಲಾದರೂ ಕಾನೂನು ಗೌರವಿಸುವುದನ್ನು ಈಗಲಾದರೂ ಕಲಿತುಕೊಳ್ಳಬೇಕು ಎಂದಿದ್ದಾರೆ.

ಕಾನೂನು ಕುಣಿಕೆಯಿಂದ ಪಾರಾಗಲ್ಲ: ತಿಹಾರ್‌ ಜೈಲು ಪಾಲಾಗಿರುವ ಡಿ.ಕೆ.ಶಿವಕುಮಾರ್‌ ಕಾನೂನು ಕುಣಿಕೆಯಿಂದ ಬಚಾವಾಗಿ ಬಿಡುಗಡೆಯಾಗುತ್ತಾರೆ ಎಂದು ರಾಜ್ಯದ ಜನರಾಗಲಿ, ಬಿಜೆಪಿಯಾಗಲಿ ನಿರೀಕ್ಷೆ ಮಾಡಿಲ್ಲ. ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಹೇಳಿದ್ದಾರೆ.

 ಹಿಂದೆ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ನ್ಯಾಯಾಲಯದಲ್ಲಿ ಇತ್ಯರ್ಥವಾದ ಪ್ರಕರಣಗಳನ್ನೂ ಪ್ರಸ್ತಾಪಿಸಿ ಟೀಕಿಸುತ್ತಿದ್ದ ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಅವರು ಈಗ ಡಿ.ಕೆ.ಶಿವಕುಮಾರ್‌ ಜೈಲು ಪಾಲಾದ ಪ್ರಕರಣದಲ್ಲಿ ಏಕೆ ಸುಮ್ಮನಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ಆರ್ಥಿಕ ಅಪರಾಧದಂತಹ ಗಂಭೀರ ಪ್ರಕರಣದಲ್ಲಿ ಜೈಲು ಪಾಲಾದ ಪಿ.ಚಿದಂಬರಂ ಮತ್ತು ಡಿ.ಕೆ.ಶಿವಕುಮಾರ್‌ ಎಸಗಿರುವ ಅಪರಾಧಗಳ ಬಗ್ಗೆ ಮಾತನಾಡುತ್ತಿಲ್ಲ. ಇಬ್ಬರೂ ಜೈಲಿಗೆ ಹೋದ ಮೇಲೆ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಏಕೆ ಮೌನ ವಹಿಸಿದ್ದಾರೆ ಎಂದೂ ಪ್ರಶ್ನಿಸಿದ್ದಾರೆ.

ಪ್ರತಿಕ್ರಿಯಿಸಿ (+)