ಅಂತೂ ಕನ್ನಡವಾಯಿತು ’ನಮ್ಮೂರು ಬೆಂಗಳೂರು’; ಆಕ್ರೋಶಕ್ಕೆ ಮಣಿದ ರೆಡ್‌ ಎಫ್‌ಎಂ

7
ಸಿಎಂ ಎಚ್‌ಡಿಕೆ ಸಾಲುಗಳ ಬಳಕೆ

ಅಂತೂ ಕನ್ನಡವಾಯಿತು ’ನಮ್ಮೂರು ಬೆಂಗಳೂರು’; ಆಕ್ರೋಶಕ್ಕೆ ಮಣಿದ ರೆಡ್‌ ಎಫ್‌ಎಂ

Published:
Updated:

ಬೆಂಗಳೂರು: ಸಿಲಿಕಾನ್‌ ಸಿಟಿ, ಉದ್ಯಾನ ನಗರಿ ಬೆಂಗಳೂರನ್ನು ವರ್ಣಿಸುವ ’ನಮ್ಮೂರು ಬೆಂಗಳೂರು’ ಹಾಡಿನಲ್ಲಿ ಕನ್ನಡಕ್ಕಿಂತಲೂ ಹಿಂದಿ ಪದಗಳೆ ತುಂಬಿದ್ದರ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಕನ್ನಡಿಗರಿಂದ ಆಕ್ರೋಶ ವ್ಯಕ್ತವಾಗಿತ್ತು. ವಿಡಿಯೊದಲ್ಲಿ ಕಾಣಿಸಿಕೊಂಡಿದ್ದ ಎಚ್‌.ಡಿ.ಕುಮಾರಸ್ವಾಮಿ, ಇದಕ್ಕೂ ನನ್ನ ಮಾತುಗಳಿಗೂ ಸಂಬಂಧ ಇಲ್ಲವೆಂದು ಪ್ರಕಟಿಸಿಕೊಂಡಿದ್ದರು. ಇದೀಗ ಹಾಡಿನಲ್ಲಿರುವ ಹಿಂದಿ ಸಾಲುಗಳಿಗೆ ಕತ್ತರಿ ಪ್ರಯೋಗಿಸಿ ಇಂಗ್ಲಿಷ್ ಮಿಶ್ರಿತ ಕನ್ನಡಮಯ ಹಾಡನ್ನು ರೆಡ್‌ ಎಫ್‌ಎಂ ಬೆಂಗಳೂರು ಪ್ರಕಟಿಸಿಕೊಂಡಿದೆ. 

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ "ನಮ್ಮೂರು ನಮ್ಮೂರು ಇದುವೇ ನಮ್ಮ ಬೆಂಗಳೂರು" ಎನ್ನುವುದರೊಂದಿಗೆ ಹಾಡಿನ ಪ್ರಾರಂಭ. ಇಡೀ ಬೆಂಗಳೂರು, ಇಲ್ಲಿನ ವಿಶೇಷಗಳು, ಸ್ಥಳಗಳು ಹಾಗೂ ಆಕರ್ಷಣೆಗಳನ್ನು ಹೇಳುವ ಭರದಲ್ಲಿ ಕನ್ನಡವನ್ನು ಮರೆಮಾಚುವಷ್ಟು ಹಿಂದಿ ಹಾಗೂ ಇಂಗ್ಲಿಷ್‌ ಸಾಲುಗಳನ್ನು ಹಾಡಾಗಿಸಿ ಬೆರಿಸಲಾಗಿತ್ತು. ಸ್ವತಃ ಕುಮಾರಸ್ವಾಮಿ ಹಾಗೂ ಐಪಿಎಸ್‌ ಅಧಿಕಾರಿ ಡಿ.ರೂಪಾ ಈ ಕುರಿತು ಪ್ರತಿಕ್ರಿಯಿಸಿದ್ದರು. 

ಇದನ್ನೂ ಓದಿ: ರೆಡ್‌ ಎಫ್‌ಎಂನ 'ಬೆಂಗಳೂರು ಹಾಡು' ಹಿಂದಿಮಯ: ಕನ್ನಡಿಗರ ಆಕ್ರೋಶ, ಸಿಎಂ ಅಸಮಾಧಾನ

‘...ಈ ಹಾಡು ಕನ್ನಡಿಗರ ಭಾವನೆಗೆ ಮತ್ತು ಅಭಿಮಾನಕ್ಕೆ ನೋವುಂಟು ಮಾಡಿದೆ ಎಂದು ಅನ್ನಿಸುತ್ತದೆ. ಈ ಸೂಕ್ಷ್ಮತೆಗಳನ್ನು ಅರಿತು, ಈ ಹಾಡನ್ನು ಕನ್ನಡಿಗರಿಗೆ ಮತ್ತಷ್ಟು ಹತ್ತಿರವಾಗುವಂತೆ ಮಾರ್ಪಡು ಮಾಡುವಿರೆಂದು ಭಾವಿಸುವೆ’ ಎಂದು ರೂಪಾ ಸಲಹೆ ಮಾಡಿದ್ದರು. 

ಸಾಮಾಜಿಕ ಮಾಧ್ಯಮಗಳಲ್ಲಿ ಹಾಡು ಹಂಚಿಕೊಂಡಿದ್ದ ಹಲವು ರೆಡ್‌ ಎಫ್‌ಎಂ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಸುಮಾರು 2 ನಿಮಿಷ 10 ಸೆಕೆಂಡ್ ಇದ್ದ ಹಾಡಿನಲ್ಲಿ ಹಿಂದಿ ಸಾಲುಗಳನ್ನು ಕತ್ತರಿಸುವ ಮೂಲಕ ಹಾಡಿನ ಅವಧಿ 1 ನಿಮಿಷ 24 ಸೆಕೆಂಡ್‌ಗಳಿಗೆ ಇಳಿದಿದೆ.

(ಹಿಂದಿನ ಹಾಡಿನ ವಿಡಿಯೊ)

'..ಕನ್ನಡಿಗರೇ ಕಟ್ಟಿ, ಕನ್ನಡಿಗರೇ ಬೆಳೆಸಿರುವ ಬೆಂಗಳೂರು ನಮ್ಮ ಹೆಮ್ಮೆಯ ಕನ್ನಡ ನಾಡಿನ ರಾಜಧಾನಿ. ಇಲ್ಲಿ ಕನ್ನಡವೇ ಮೊದಲು, ಕನ್ನಡವೇ ಸರ್ವಸ್ವ. ..’ ಎಂದು ಸಿಎಂ ಕುಮಾರಸ್ವಾಮಿ ಫೇಸ್‌ಬುಕ್‌ ಖಾತೆಯಲ್ಲಿ ಬರೆದುಕೊಂಡಿದ್ದರು. 

ಹೊಸ ಹಾಡಿಗೆ ಪ್ರತಿಕ್ರಿಯಿಸಿರುವ ಕನ್ನಡಿಗರು, ‘ಇದೀಗ ಹಾಡು ಕೇಳಲು ಸೊಗಸಾಗಿದೆ’, 'ಇದು ಕನ್ನಡಿಗರಿಗೆ ಸಂದ ಜಯ’, 'ಕೆಟ್ಟ ಮೇಲೆ ಬುದ್ಧಿ ಬಂತು...ಇರಲಿ ಮುಂದಾದರು ಕನ್ನಡಕ್ಕೆ ಆದ್ಯತೆ ನೀಡಿ’, ಬದಲಿಸಿದ್ದಕ್ಕೆ ಧನ್ಯವಾದಗಳು ಎಂದಿದ್ದಾರೆ. ಇನ್ನೂ ಕೆಲವರು, ಇದೆಂಥ ಹಾಡು; ಅದೇ ಹಳೆಯದನ್ನು ಕತ್ತರಿಸಿ ಕೂಡಿಸಿರುವುದು ಎಂದೂ ಟೀಕಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 20

  Happy
 • 3

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !