114 ತಾಲ್ಲೂಕುಗಳಲ್ಲಿ 26ಕ್ಕೆ ‘ಅಭಿವೃದ್ಧಿ’ ಪಟ್ಟ!

7
ಎಂಟು ತಾಲ್ಲೂಕುಗಳು ಹೊಸತಾಗಿ ‘ಹಿಂದುಳಿದ’ ಪಟ್ಟಿಗೆ ಸೇರ್ಪಡೆ; ಕೆಇಎ ಅಧ್ಯಯನ ವರದಿಯಲ್ಲಿ ಬಹಿರಂಗ

114 ತಾಲ್ಲೂಕುಗಳಲ್ಲಿ 26ಕ್ಕೆ ‘ಅಭಿವೃದ್ಧಿ’ ಪಟ್ಟ!

Published:
Updated:

ಬೆಂಗಳೂರು: ಪ್ರಾದೇಶಿಕ ಅಸಮಾನತೆ ನಿವಾರಣೆಗಾಗಿ ಡಾ.ಡಿ.ಎಂ. ನಂಜುಂಡಪ್ಪ ಸಮಿತಿ ಗುರುತಿಸಿದ ರಾಜ್ಯದ 114 ಹಿಂದುಳಿದ ತಾಲ್ಲೂಕುಗಳ ಪೈಕಿ 26 ತಾಲ್ಲೂಕುಗಳು ‘ಅಭಿವೃದ್ಧಿ’ ಪಟ್ಟಕ್ಕೇರಲು ಸಿದ್ಧವಾಗಿವೆ!

ಹನ್ನೊಂದು ವರ್ಷಗಳ ಅವಧಿಯಲ್ಲಿ ಹಿಂದುಳಿದ ತಾಲ್ಲೂಕುಗಳಿಗೆ ವಿಶೇಷ ಅಭಿವೃದ್ಧಿ ಯೋಜನೆ (ಎಸ್‌ಡಿಪಿ) ಅಡಿ ₹ 20,454 ಕೋಟಿ ಬಿಡುಗಡೆ ಆಗಿದೆ. ಆದರೆ, ಈ ಅವಧಿಯಲ್ಲಿ ಭದ್ರಾವತಿ, ವಿರಾಜಪೇಟೆ, ಮೂಡಿಗೆರೆ, ಸೋಮವಾರಪೇಟೆ, ಹೊಸಪೇಟೆ ಸೇರಿ ಒಟ್ಟು ಎಂಟು ತಾಲ್ಲೂಕುಗಳು ಹೊಸತಾಗಿ ‘ಹಿಂದುಳಿದ’ ಹಣೆಪಟ್ಟಿ ಕಟ್ಟಿಕೊಳ್ಳಲಿವೆ.

ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ (ಕೆಇಎ) ನಡೆಸಿದ ಅಧ್ಯಯನ ವರದಿಯಿಂದ ಈ ವಿಷಯ ಗೊತ್ತಾಗಿದೆ. ವರದಿಯಲ್ಲಿರುವ ಅಂಶಗಳು ‘ಪ್ರಜಾವಾಣಿ’ಗೆ ಲಭ್ಯವಾಗಿದೆ. ಆದರೆ, ಈ ವರದಿ ಸಚಿವ ಸಂಪುಟ ಸಭೆಯಲ್ಲಿ ಇನ್ನೂ ಮಂಡನೆ ಆಗಿಲ್ಲ. ಹೀಗಾಗಿ, ಅಭಿವೃದ್ಧಿ ಹೊಂದಿದ ಮತ್ತು ಹಿಂದುಳಿದ ತಾಲ್ಲೂಕುಗಳ ಪರಿಷ್ಕೃತ ಪಟ್ಟಿ ಬಹಿರಂಗಪಡಿಸಲು ಉನ್ನತ ಮೂಲಗಳು ನಿರಾಕರಿಸಿವೆ.

ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯವಾಗಿದೆ ಎಂಬ ಕೂಗು ಪ್ರಬಲವಾಗುತ್ತಿದ್ದಂತೆ ಈ ವರದಿಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದೂ ಮೂಲಗಳು ತಿಳಿಸಿವೆ.

ಗುಲ್ಬರ್ಗಾ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದ ಡಾ. ಛಾಯಾ ದೇಗಾಂವಕರ್‌, ಆರ್ಥಿಕ ತಜ್ಞ ಪ್ರೊ. ಆರ್‌.ಎಸ್‌. ದೇಶಪಾಂಡೆ ಅವರನ್ನೊಳಗೊಂಡ ತಂಡ ಈ ವರದಿ ಸಿದ್ಧಪಡಿಸಿದೆ.

ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ 2017ರ ನವೆಂಬರ್‌ನಲ್ಲಿ ನಡೆದ ಬೆಳಗಾವಿ ಅಧಿವೇಶನದಲ್ಲಿ ಎಸ್‌ಡಿಪಿ ಅಡಿ ಬಿಡುಗಡೆ ಮಾಡಿದ ಅನುದಾನದಿಂದ ಆಗಿರುವ ಬದಲಾವಣೆಯ ಅಧ್ಯಯನ ನಡೆಸುವುದಾಗಿ ಘೋಷಿಸಿದ್ದರು. ಅದರಂತೆ, ಅದೇ ವರ್ಷ ಡಿ. 7ರಂದು ಈ ತಂಡವನ್ನು ರಚಿಸಲಾಗಿತ್ತು.

ನಂಜುಂಡಪ್ಪ ವರದಿಯಲ್ಲಿ ಉಲ್ಲೇಖಿಸಿರುವ 35 ಸಾಮಾಜಿಕ – ಆರ್ಥಿಕ ಮಾನದಂಡಗಳು ಮತ್ತು 147 ಶಿಫಾರಸುಗಳನ್ನು ಆಧಾರವಾಗಿಟ್ಟು,  ಹನ್ನೊಂದು ವರ್ಷಗಳ ಅವಧಿಯಲ್ಲಿ ಬಳಕೆಯಾದ ಅನುದಾನದಿಂದ ಸಾಧಿಸಿದ ಅಭಿವೃದ್ಧಿಯನ್ನು ಈ ತಂಡ ಅಧ್ಯಯನ ಮಾಡಿದೆ. ಆರೋಗ್ಯ, ಶಿಕ್ಷಣ, ವಸತಿ, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ, ಉದ್ಯೋಗ ಮತ್ತಿತರ 11 ವಲಯಗಳಲ್ಲಿ ಅಭಿವೃದ್ಧಿ ಪಥವನ್ನು ತಂಡ ಅಧ್ಯಯನ ನಡೆಸಿದೆ. ಗುಂಪು ಚರ್ಚೆ ಮತ್ತು ಭಾಗಿದಾರರ ಜೊತೆ ಚರ್ಚಿಸಿ, ವಾಸ್ತವಾಂಶ ಪತ್ತೆ ಮಾಡಿದೆ. 2014ರಲ್ಲಿ ಜಿಲ್ಲಾ ಮಟ್ಟದಲ್ಲಿ ಸಿದ್ಧಪಡಿಸಿದ ತಾಲ್ಲೂಕುವಾರು ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿರುವ ಅಂಶಗಳನ್ನೂ ಈ ತಂಡ ಗಣನೆಗೆ ತೆಗೆದುಕೊಂಡಿದೆ.

ನಂಜುಂಡಪ್ಪ ಸಮಿತಿಯ ಪ್ರಕಾರ ಉತ್ತರ ಕರ್ನಾಟಕದ ವಲಯದಲ್ಲಿ 59 (ಬೆಳಗಾವಿ ವಿಭಾಗ–31, ಕಲಬುರ್ಗಿ ವಿಭಾಗ–28) ಹಿಂದುಳಿದ ತಾಲ್ಲೂಕುಗಳಿದ್ದರೆ, 55 (ಬೆಂಗಳೂರು ವಿಭಾಗ–33, ಮೈಸೂರು ವಿಭಾಗ–22) ಹಿಂದುಳಿದ ತಾಲ್ಲೂಕುಗಳು ದಕ್ಷಿಣ ಕರ್ನಾಟಕ ವಲಯದಲ್ಲಿದೆ.

ಕೆಇಎ ವರದಿ ಪ್ರಕಾರ, ಅತ್ಯಂತ ಹಿಂದುಳಿದ ತಾಲ್ಲೂಕುಗಳ ಪೈಕಿ 10 ಪಟ್ಟಿಯಿಂದ ಹೊರಬಂದಿವೆ. ಅತಿ ಹಿಂದುಳಿದ ತಾಲ್ಲೂಕುಗಳ ಪಟ್ಟಿಯಿಂದ 16 ಅಭಿವೃದ್ಧಿಯ ಹಳಿಗೆ ಮರಳಿವೆ. ಹೀಗೆ ಒಟ್ಟು 26 ತಾಲ್ಲೂಕುಗಳ ‘ಸ್ಥಾನಪಲ್ಲಟ’ಗೊಂಡರೂ ಹೊಸತಾಗಿ ಎಂಟು ತಾಲ್ಲೂಕುಗಳು ಸೇರಿರುವುದು ಅಚ್ಚರಿಗೆ ಕಾರಣವಾಗಿದೆ!

**
₹ 28,438.61 ಕೋಟಿ - ಎಸ್‌ಡಿಪಿ ಅಡಿ ಈವರೆಗೆ ಮೀಸಲಿಟ್ಟ ಹಣ
₹ 20,454.96 ಕೋಟಿ - ಬಿಡುಗಡೆ ಮಾಡಿದ ಹಣ
₹ 18,253.32 ಕೋಟಿ - ವೆಚ್ಚವಾದ ಹಣ
**

2002 - ಡಾ.ಡಿ.ಎಂ. ನಂಜುಂಡಪ್ಪ ಸಮಿತಿ ವರದಿ ಸಲ್ಲಿಕೆ
31 ಸಾವಿರ ಕೋಟಿ - ಎಂಟು ವರ್ಷಗಳಿಗೆ ‘ಎಸ್‌ಡಿಪಿ’ಗೆ ಮೀಸಲಿಡಲು ವರದಿ ಶಿಫಾರಸು
2007–08 - ಎಸ್‌ಡಿಪಿ ಜಾರಿ

**
ಕೆಇಎ ತಂಡ ಗುರುತಿಸಿದ ಅಂಶಗಳು
* ನಂಜುಂಡಪ್ಪ ವರದಿಯಲ್ಲಿರುವ ನೀತಿ–ನಿರೂಪಣೆ ವಿಷಯಗಳಲ್ಲಿ ಪ್ರಗತಿ ಆಗಿಲ್ಲ
* ಎಸ್‌ಡಿಪಿ ಮತ್ತು ಸಾಮಾನ್ಯ ಬಜೆಟ್‌ ವೆಚ್ಚದಲ್ಲಿ ಆಗಿರುವ ಬದಲಾವಣೆ ಪ್ರತ್ಯೇಕವಾಗಿ ಗುರುತಿಸುವುದು ಕಷ್ಟ
* ಕೃಷಿಗೆ ನೀಡುತ್ತಿದ್ದ ಶೇ 25ರಷ್ಟು ಆದ್ಯತೆ ಈಗ ಶೇ 8ಕ್ಕೆ ಇಳಿದಿದೆ

ಪ್ರಮುಖ ಶಿಫಾರಸುಗಳು
* ವಲಯವಾರು ಬದಲು ತಾಲ್ಲೂಕುವಾರು ಅನುದಾನ ಹಂಚಿಕೆ ಮಾಡಬೇಕು
* ಕಲಬುರ್ಗಿ, ಬೆಂಗಳೂರು, ಬೆಳಗಾವಿ, ಮೈಸೂರು ವಿಭಾಗಕ್ಕೆ 40:25:20:15 ಅನುಪಾತದಲ್ಲಿ ಅನುದಾನ ಹಂಚಿಕೆ ಮಾಡಲಾಗುತ್ತಿತ್ತು. ಇನ್ನು ಅತ್ಯಂತ ಹಿಂದುಳಿದ, ಅತಿ ಹಿಂದುಳಿದ, ಹಿಂದುಳಿದ ತಾಲ್ಲೂಕುಗಳಿಗೆ ಕ್ರಮವಾಗಿ ಶೇ 57, ಶೇ 25, ಶೇ 18 ಹಂಚಬೇಕು
* ಆರೋಗ್ಯ, ಶಿಕ್ಷಣ, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ, ಕೃಷಿ, ಪಶು ಸಂಗೋಪನೆ, ವಸತಿ, ಸಮಾಜ ಕಲ್ಯಾಣಕ್ಕೆ ಒತ್ತು ಕೊಡಬೇಕು

ಹಿಂದುಳಿದ ತಾಲ್ಲೂಕುಗಳು

ತಾಲ್ಲೂಕು; ನಂಜುಂಡಪ್ಪ ವರದಿ; ಕೆಇಎ ವರದಿ
ಅತ್ಯಂತ ಹಿಂದುಳಿದ; 39; 29
ಅತಿ ಹಿಂದುಳಿದ; 40; 24
ಹಿಂದುಳಿದ; 35; 43*
ಒಟ್ಟು; 114; 96
(*ಹೊಸತಾಗಿ ಎಂಟು ತಾಲ್ಲೂಕುಗಳು ಸೇರಿ)

 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !