ಕೆಎಸ್‌ಆರ್‌ಟಿಸಿ ನಿಲ್ದಾಣಗಳಲ್ಲಿ ನ್ಯಾಪ್‌ಕಿನ್ ಸೌಲಭ್ಯ: ಡಿ.ಸಿ. ತಮ್ಮಣ್ಣ

7

ಕೆಎಸ್‌ಆರ್‌ಟಿಸಿ ನಿಲ್ದಾಣಗಳಲ್ಲಿ ನ್ಯಾಪ್‌ಕಿನ್ ಸೌಲಭ್ಯ: ಡಿ.ಸಿ. ತಮ್ಮಣ್ಣ

Published:
Updated:

ಶಿವಮೊಗ್ಗ: ರಾಜ್ಯದ ಎಲ್ಲ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣಗಳಲ್ಲಿ ಮಹಿಳೆಯರಿಗೆ ರಿಯಾಯಿತಿ ದರದಲ್ಲಿ ನ್ಯಾಪ್‌ಕಿನ್‌ಗಳು ದೊರೆಯಲಿವೆ. ಎಂಎಸ್‌ಐಎಲ್‌ಗೆ ಈ ಜವಾಬ್ದಾರಿ ವಹಿಸಲಾಗಿದೆ ಎಂದು ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಮಾಹಿತಿ ನೀಡಿದರು.

ಇಲ್ಲಿನ ಮುಖ್ಯ ಬಸ್‌ನಿಲ್ದಾಣದಲ್ಲಿ ಶನಿವಾರ ನೂತನ ಬಸ್‌ ಮಾರ್ಗಗಳಿಗೆ ಚಾಲನೆ ನೀಡಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.

ನ್ಯಾಪ್‌ಕಿನ್‌, ಪುಸ್ತಕಗಳು ಸೇರಿದಂತೆ ಪ್ರಯಾಣಿಕರಿಗೆ ಅಗತ್ಯವಾದ ಸಾಮಗ್ರಿಗಳನ್ನು ಎಂಎಸ್‌ಐಎಲ್‌ ಶೇ 30ರಿಂದ 40ರಷ್ಟು ರಿಯಾಯಿತಿ ದರದಲ್ಲಿ ಪೂರೈಸಲಿದೆ. ಬದಲಾಯಿಸಿದ ನ್ಯಾಪ್‌ಕಿನ್ ಸುಡಲು ಒಂದು ಬರ್ನಿಂಗ್ ಸೆಂಟರ್‌ ತೆರೆಯಲಾಗುತ್ತದೆ. ಇದರಿಂದ ಶೌಚಾಲಯಗಳಲ್ಲಿ ಬಿಸಾಡುವ ಕಿರಿಕಿರಿ ತಪ್ಪಲಿದೆ. ನಿಲ್ದಾಣಗಳಲ್ಲಿ ‘ತಾಯಿ ಮಡಿಲು ಕೇಂದ್ರ’ ತೆರೆಯಲಾಗಿದೆ. ಬಾಣಂತಿ ಮಹಿಳೆಯರು ಅಲ್ಲಿ ಮಕ್ಕಳಿಗೆ ಹಾಲುಣಿಸಲು ವ್ಯವಸ್ಥೆ ಮಾಡಲಾಗಿದೆ. ಮಹಿಳೆಯರ ಕಾಳಜಿ, ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರ ನೀಡಿದರು.

ಬಿಎಂಟಿಸಿ ನಷ್ಟ ₹350 ಕೋಟಿ ಸೇರಿದಂತೆ ರಾಜ್ಯದ ಸಾರಿಗೆ ಸಂಸ್ಥೆ ವಾರ್ಷಿಕ ₹500 ಕೋಟಿಯಿಂದ ₹600 ಕೋಟಿ ನಷ್ಟ ಅನುಭವಿಸುತ್ತಿದೆ. ಈ ನಷ್ಟ ಭರಿಸಲು ಪ್ರಯಾಣ ದರ ಹೆಚ್ಚಳ ಅನಿವಾರ್ಯ. ಕೆಂಪು ಬಸ್‌ಗಳ ಪ್ರಯಾಣ ದರ ಹೆಚ್ಚಳ ಪ್ರಮಾಣ ಕಡಿತಗೊಳಿಸಲು ಚರ್ಚೆ ನಡೆಯುತ್ತಿದೆ ಎಂದರು.

ಎಲ್ಲ ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳ ನಿಲ್ದಾಣಗಳಲ್ಲಿ ಬಹು ಅಂತಸ್ತಿನ ಕಟ್ಟಡ ನಿರ್ಮಿಸಿ, ವಾಣಿಜ್ಯೋದ್ದೇಶಕ್ಕೆ ಬಳಕೆ ಮಾಡಲಾಗುವುದು. ಸರ್ಕಾರಿ ಕಚೇರಿಗಳಿಗೆ ಜಾಗ ನೀಡಲಾಗುವುದು. ಅದರಿಂದ ಬರುವ ಆದಾಯ ನಷ್ಟ ಭರಿಸಲು ಸಹಕಾರಿಯಾಗುತ್ತದೆ. ಹೊಸ ಬಸ್‌ ಖರೀದಿಸುವ ಬದಲು ಸುಸ್ಥಿತಿಯಲ್ಲಿರುವ ಚರ್ಸಿಗಳಿಗೇ ತಲಾ ₨ 3.5 ಲಕ್ಷ ವೆಚ್ಚದಲ್ಲಿ ಹೊಸ ಬಾಡಿ ನಿರ್ಮಿಸಲು ನಿರ್ಧರಿಸಲಾಗಿದೆ ಇದರಿಂದ ಹಣವೂ ಉಳಿತಾಯವಾಗುತ್ತದೆ ಎಂದು ವಿವರ ನೀಡಿದರು.

ಎಷ್ಟೇ ನಷ್ಟವಾದರೂ ಕೆಎಸ್‌ಆರ್‌ಟಿಸಿ ಖಾಸಗೀಕರಣಕ್ಕೆ ಅವಕಾಶ ನೀಡುವುದಿಲ್ಲ. 1.16 ಲಕ್ಷ ಗ್ರಾಮೀಣ ಕನ್ನಡಿಗರಿಗೆ ಉದ್ಯೋಗ ನೀಡಿರುವ ಏಕೈಕ ಸಂಸ್ಥೆ ಉನ್ನತೀಕರಿ, ಲಾಭದತ್ತ ತೆಗೆದುಕೊಂಡು ಹೋಗಲು ಶ್ರಮಿಸುತ್ತೇನೆ ಎಂದರು.

 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !