ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷಮಿಸಿ, ನನಗೆ ಮಹಾರಾಷ್ಟ್ರ ಅನ್ನ ಕೊಟ್ಟಿದೆ, ಅದಕ್ಕಾಗಿ ಜೈಕಾರ: ಸಚಿವ ನಾರಾಯಣಗೌಡ

Last Updated 2 ಮಾರ್ಚ್ 2020, 11:32 IST
ಅಕ್ಷರ ಗಾತ್ರ

ಮಳವಳ್ಳಿ: ‘ನಾನುಒರಿಜಿನಲ್ ಕನ್ನಡಿಗ. ಆದರೆ, ಮಹಾರಾಷ್ಟ್ರಕ್ಕೆ ಜೈಕಾರ ಹಾಕಿದ್ದರಿಂದ ಯಾರಿಗಾದರೂ ನೋವಾಗಿದ್ದರೆ ದಯವಿಟ್ಟು ಕ್ಷಮಿಸಿ’ ಎಂದು ಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು.

ಪಟ್ಟಣದ ಎನ್ಇಎಸ್ ಬಡಾವಣೆಯ ಜ್ಞಾನಧಾರೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

‘ನನಗೆ ಮಹಾರಾಷ್ಟ್ರ ಅನ್ನ ಕೊಟ್ಟಿದೆ. ಹೀಗಾಗಿ, ಇತ್ತೀಚೆಗೆ ನಡೆದ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಶಿವಾಜಿಗೆ ಹಾಗೂ ಮಹಾರಾಷ್ಟ್ರಕ್ಕೆ ಜೈ ಅಂದಿದ್ದೆ. ಇದೇ ಕಾರ್ಯಕ್ರಮದಲ್ಲಿ ವಿವಿಧ ರಾಜ್ಯಗಳ 17 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅಲ್ಲಿ ಬೇರೆ ಬೇರೆ ರಾಜ್ಯಗಳ ಬಗ್ಗೆ ಹೊಗಳಿದ್ದೆ. ಹತ್ತಾರು ಬಾರಿ ಕರ್ನಾಟಕಕ್ಕೆ ಜೈಕಾರ ಹಾಕಿದ್ದೆ. ಆದರೆ, ಅದನ್ನು ಮಾಧ್ಯಮಗಳು ತೋರಿಸಿಲ್ಲ, ಪ್ರಕಟಿಸಿಲ್ಲ. ಮಹಾರಾಷ್ಟ್ರಕ್ಕೆ ಜೈ ಅಂದಿದ್ದನ್ನು ಮಾತ್ರ ಬಿತ್ತರಿಸಲಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಟೀಕೆ ಮಾಡಲ್ಲ: ‘ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರು ಪ್ರಧಾನಿಯಾಗಿದ್ದವರು. ಅವರನ್ನು ನನ್ನ ತಂದೆಗೆ ಸಮನಾಗಿ ನೋಡುತ್ತಿದ್ದೇನೆ. ಅವರ ಹೇಳಿಕೆಗೆ ಟೀಕೆ ಮಾಡುವುದಿಲ್ಲ. ದೊಡ್ಡವರು ಪ್ರತಿಭಟನೆ ಮಾಡುವುದಾಗಿ ಹೇಳಿದ್ದಾರೆ. ಮಾಡಲಿ ಸಂತೋಷ’ ಎಂದರು.

ಜೆಡಿಎಸ್‌ ಕಾರ್ಯಕರ್ತರಿಗೆ ಸಚಿವರು ಕಿರುಕುಳ ನೀಡುತ್ತಿದ್ದಾರೆ ಎಂಬ ದೇವೇಗೌಡರ ಆರೋಪಕ್ಕೆ ಈ ರೀತಿ ಪ್ರತಿಕ್ರಿಯಿಸಿದರು.ವಿವಿಧ ಕ್ರೀಡೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು.

ಕಾರ್ಯಕ್ರಮದಲ್ಲಿ ಭಗವಾನ್ ಬುದ್ಧ ಮಹಾವಿದ್ಯಾಲಯ ಸಂಸ್ಥಾಪಕ ಅಧ್ಯಕ್ಷ ಯಮದೂರು ಸಿದ್ದರಾಜು, ಮನ್ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ, ತಹಶೀಲ್ದಾರ್ ಕೆ.ಚಂದ್ರಮೌಳಿ, ಪುರಸಭೆ ಸದಸ್ಯರಾದ ಕೃಷ್ಣ, ರವಿ, ಪುರಸಭೆ ಮುಖ್ಯಾಧಿಕಾರಿ ಗಂಗಾಧರ್, ಶಿವಕುಮಾರ್, ಚೇತನ್‌ ಕುಮಾರ್, ನೀಲಕಂಠ ಇದ್ದರು.

ಸಕ್ಕರೆ ಕಾರ್ಖಾನೆ ಪ್ರಾರಂಭಕ್ಕೆ ಕ್ರಮ

‘ಜಿಲ್ಲೆಯ ಮತದಾರರ ಆಶೀರ್ವಾದದಿಂದ ಸಿಕ್ಕಿದ ಸಚಿವ ಸ್ಥಾನವನ್ನು ನಿಮ್ಮೆಲ್ಲರಿಗೂ ಧಾರೆ ಎರೆಯುತ್ತೇನೆ. ಜನರ ಸೇವಕನಾಗಿ ಕೆಲಸ ಮಾಡಿ, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಮುಖ್ಯಮಂತ್ರಿ ಯಡಿಯೂರಪ್ಪಅವರ ಜೊತೆ ಮಾತನಾಡಿ ಶೀಘ್ರದಲ್ಲೇ ಸಕ್ಕರೆ ಕಾರ್ಖಾನೆಗಳ ಪ್ರಾರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು. ನಾನೊಬ್ಬ ರೈತನ ಮಗನಾಗಿದ್ದು, ತೋಟಗಾರಿಕೆ ಸಚಿವ ಸ್ಥಾನ ಸಿಕ್ಕಿರುವುದು ಸಂತೋಷ ತಂದಿದೆ. ಈಗಾಗಲೇ 4-5 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ರೈತರ ಕಷ್ಟಗಳನ್ನು ಆಲಿಸಿದ್ದೇನೆ. ಈ ಬಾರಿಯ ಬಜೆಟ್ ಅಧಿವೇಶನದಲ್ಲಿ ರೈತರ ಸಂಕಷ್ಟಗಳ ಬಗ್ಗೆ ಗಮನ ಸೆಳೆಯುತ್ತೇನೆ’ ಎಂದು ಕೆ.ಸಿ.ನಾರಾಯಣಗೌಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT