3
ಈಗಿನಿಂದಲೇ ಗುರಿ ಮುಟ್ಟಲು ಸಿದ್ಧತೆ ಮಾಡಿಕೊಳ್ಳುವಂತೆ ಬಿ.ಎಸ್. ಯಡಿಯೂರಪ್ಪಗೆ ಶಾ ಸೂಚನೆ

ರಾಜ್ಯ ಬಿಜೆಪಿಗೆ ‘ಮಿಷನ್‌–25’ ಟಾರ್ಗೆಟ್‌

Published:
Updated:

ಬೆಂಗಳೂರು: ಕೇಂದ್ರದಲ್ಲಿ ಮತ್ತೊಮ್ಮೆ ಅಧಿಕಾರ ಹಿಡಿಯಲು ಪಣ ತೊಟ್ಟಿರುವ ಪ‍್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ಅಧ್ಯಕ್ಷ ಅಮಿತ್‌ ಶಾ, ಕರ್ನಾಟಕದಿಂದ ಶತಾಯಗತಾಯ 25 ಸಂಸದರನ್ನು ಗೆಲ್ಲಿಸಿಕೊಡುವಂತೆ ರಾಜ್ಯ ಬಿಜೆಪಿಗೆ ಟಾರ್ಗೆಟ್‌ ಕೊಟ್ಟಿದ್ದಾರೆ.

‘ಮಿಷನ್‌25’ ಗುರಿ ಮುಟ್ಟಲು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು. ಅದಕ್ಕಾಗಿ ಪಕ್ಷದ ಕಾರ್ಯಕರ್ತರನ್ನು ತಕ್ಷಣವೇ ಅಣಿಗೊಳಿಸಬೇಕು’ ಎಂದು ಅಮಿತ್‌ ಶಾ,  ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಸೂಚಿಸಿದ್ದಾರೆ.

ಗುಜರಾತ್‌ನ ಅಹಮದಾಬಾದ್‌ನಲ್ಲಿ ಶಾ ಅವರನ್ನು ಯಡಿಯೂರಪ್ಪ ಸೋಮವಾರ ಭೇಟಿ ಮಾಡಿದಾಗ, ಲೋಕಸಭಾ ಚುನಾವಣೆಗೆ ನಡೆಸಿರುವ ಸಿದ್ಧತೆಯ ಬಗ್ಗೆ ಮಾಹಿತಿ ಕೋರಿದರು. ರಾಜ್ಯದಲ್ಲಿ ಮಾಡಿರುವ ಸಿದ್ಧತೆಗಳ ಬಗ್ಗೆ ರಾಜ್ಯ ಅಧ್ಯಕ್ಷರು ಮಾಹಿತಿ ಒಪ್ಪಿಸಿದರು.

‘ಕರ್ನಾಟಕದಿಂದ 25 ಸ್ಥಾನಗಳನ್ನು ಗೆಲ್ಲಿಸಲು ಸಾಧ್ಯವಿದೆ. ಆ ಬಗ್ಗೆ ಗರಿಷ್ಠ ಪ್ರಯತ್ನ ನಡೆಸಬೇಕು. 2019ರ ಚುನಾವಣೆಗೆ ಹೆಚ್ಚು ದಿನ ಇಲ್ಲ. ನಿಗದಿತ ಅವಧಿಗೆ ಮುನ್ನವೆ ಚುನಾವಣೆ ನಡೆಯುವ ಸಾಧ್ಯತೆಯೂ ಇದೆ ಎಂದು ಶಾ ತಿಳಿಸಿದರು’ ಎಂದು ಮೂಲಗಳು ಹೇಳಿವೆ.

ಅದಕ್ಕೆ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ, ‘ಕೆಲವು ಕ್ಷೇತ್ರಗಳಲ್ಲಿ ಮೊದಲೇ ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಿದರೆ, ಈಗಿನಿಂದಲೇ ಸಿದ್ಧತೆ ನಡೆಸಿಕೊಳ್ಳಲು ಸಾಧ್ಯವಾಗುತ್ತದೆ. ಬೆಂಗಳೂರು ಗ್ರಾಮಾಂತರದಲ್ಲಿ ಸಿ.ಪಿ.ಯೋಗೀಶ್ವರ, ಚಿಕ್ಕಬಳ್ಳಾಪುರದಲ್ಲಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ತುಮಕೂರಿನಲ್ಲಿ ಜಿ.ಎಸ್‌.ಬಸವರಾಜು, ಮಂಡ್ಯದಲ್ಲಿ ಆರ್‌.ಅಶೋಕ್‌, ಉಡುಪಿ– ಚಿಕ್ಕಮಗಳೂರು ಕ್ಷೇತ್ರಕ್ಕೆ ಜಯಪ್ರಕಾಶ್‌ ಹೆಗ್ಡೆ ಅಥವಾ ಡಿ.ವಿ.ಸದಾನಂದಗೌಡ ಅವರನ್ನು ಕಣಕ್ಕೆ ಇಳಿಸುವುದು ಸೂಕ್ತ. ಈಗ ಬೆಂಗಳೂರು ಉತ್ತರ ಪ್ರತಿನಿಧಿಸುವ ಸದಾನಂದ ಗೌಡರು ಒಂದು ವೇಳೆ ಉಡುಪಿ ಕ್ಷೇತ್ರಕ್ಕೆ ಅಭ್ಯರ್ಥಿಯಾದರೆ, ಈ ಕ್ಷೇತ್ರದಿಂದ ದಾಸರಹಳ್ಳಿ ಕ್ಷೇತ್ರದ ಮಾಜಿ ಶಾಸಕ ಮುನಿರಾಜು ಅವರನ್ನು ಕಣಕ್ಕೆ ಇಳಿಸಬಹುದು’ ಎಂಬ ಸಲಹೆ ನೀಡಿದರು ಎಂದು ಮೂಲಗಳು ತಿಳಿಸಿವೆ.

ಬೀದರ್‌ನಿಂದ ಭಗವಂತ ಖೂಬಾ ಬದಲಿಗೆ ಸುನಿಲ್‌ ವಲ್ಯಾಪುರೆ, ಬಳ್ಳಾರಿಯಿಂದ ಎನ್‌.ವೈ.ಹನುಮಂತಪ್ಪ ಅವರನ್ನು ಕಣಕ್ಕಿಳಿಸಿದರೆ ಗೆಲುವು ಸುಲಭ. ಬೆಂಗಳೂರು ಗ್ರಾಮಾಂತರ ಕ್ಷೇತ್ರ ಒಕ್ಕಲಿಗ ಪ್ರಾಬಲ್ಯದ ಕ್ಷೇತ್ರವಾಗಿದ್ದು, ಯೋಗೀಶ್ವರ ಅವರು ಕಾಂಗ್ರೆಸ್‌ ಮತ್ತು ಜೆಡಿಎಸ್‌ಗೆ ಪ್ರಬಲ ಪೈಪೋಟಿ ನೀಡಬಲ್ಲರು. ಚಿಕ್ಕಬಳ್ಳಾಪುರದಲ್ಲಿ ತೆಲುಗು ಭಾಷಿಗರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಕಟ್ಟಾ ಅವರನ್ನು ಕಣಕ್ಕಿಳಿಸುವುದರಿಂದ ಅನುಕೂಲವಾಗುತ್ತದೆ ಎಂದು ಯಡಿಯೂರಪ್ಪ ವಿವರಿಸಿದರು.

ಚಿಕ್ಕಮಗಳೂರು–ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ರಾಜ್ಯ ರಾಜಕೀಯಕ್ಕೆ ಮರಳಿ ತರಬೇಕು. ಅದಕ್ಕೆ ವರಿಷ್ಠರು ಒಪ್ಪಿಗೆ ನೀಡಿದರೆ, ಕೆ.ಎಸ್‌. ಈಶ್ವರಪ್ಪ ರಾಜೀನಾಮೆಯಿಂದ ಖಾಲಿಯಾಗಿರುವ ವಿಧಾನಪರಿಷತ್ತಿನ ಸದಸ್ಯ (ವಿಧಾನಸಭೆಯಿಂದ ಪರಿಷತ್ತಿಗೆ ಆಯ್ಕೆಯಾಗುವ) ಸ್ಥಾನಕ್ಕೆ ಶೋಭಾ ಅವರನ್ನು ಅಭ್ಯ‌ರ್ಥಿಯಾಗಿಸಬಹುದು ಎಂದು ರಾಜ್ಯ ಅಧ್ಯಕ್ಷರು, ಶಾ ಅವರಿಗೆ ಹೇಳಿದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 28 ಸ್ಥಾನಗಳ ಪೈಕಿ 17 ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್‌ 9, ಜೆಡಿಎಸ್‌ 2 ಸ್ಥಾನಗಳನ್ನು ಗೆದ್ದಿದ್ದವು. ಶಿವಮೊಗ್ಗ ಲೋಕಸಭಾ ಸದಸ್ಯರಾಗಿದ್ದ ಯಡಿಯೂರಪ್ಪ ಮತ್ತು ಬಳ್ಳಾರಿ ಲೋಕಸಭಾ ಸದಸ್ಯ ಶ್ರೀರಾಮುಲು ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿರುವುದರಿಂದ, ಲೋಕಸಭಾ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ಆದ್ದರಿಂದ ಈಗ ಬಿಜೆಪಿ ಸದಸ್ಯ ಬಲ 15 ಕ್ಕೆ ಇಳಿದಿದೆ. ಹೆಚ್ಚುವರಿ 10 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಶಾ ಈಗ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !