ಮಂಗಳವಾರ, ಜನವರಿ 28, 2020
19 °C

ಕಲ್ಪತರು ನಾಡಲ್ಲಿ ಪ್ರಧಾನಿ ನರೇಂದ್ರ ಮೋದಿ ಬೇಡಿದ ಮೂರು ಸಂಕಲ್ಪಗಳು ಯಾವುವು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ನಮ್ಮ ಪ್ರಾಚೀನ ಸಂಸ್ಕೃತಿ ಗೌರವಿಸಿ, ಪರಿಸರ ಹಾಗೂ ನೀರಿನ ರಕ್ಷಣೆಗೆ ಮುಂದಾಗಿ, ಪ್ಲಾಸ್ಟಿಕ್‌ ಬಳಸದಿರುವಂತೆ ನೀವು ಸಂಕಲ್ಪ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಜನರಲ್ಲಿ ಮನವಿ ಮಾಡಿದ್ದಾರೆ.

ಇಲ್ಲಿನ ಸಿದ್ಧಗಂಗಾ ಮಠದ ಆವರಣದಲ್ಲಿ ಡಾ.ಶಿವಕುಮಾರ ಸ್ವಾಮೀಜಿ ವಸ್ತು ಸಂಗ್ರಹಾಲಯಕ್ಕೆ ಶಂಕುಸ್ಥಾಪನೆ ಮಾಡಿದ ಬಳಿಕ ಅವರು ಮಾತನಾಡಿದರು.

1) ನಿಮ್ಮ ಪ್ರಾಚೀನ ಸಂಸ್ಕೃತಿಯನ್ನು ಗೌರವಿಸಿ, ಸಮಾಜದಲ್ಲಿ ಈ ಬಗ್ಗೆ ನಿರಂತರ ಜಾಗೃತಿ ಮೂಡಿಸಿ.
2) ಪ್ರಕೃತಿ ಮತ್ತು ವಾತಾವರಣ ರಕ್ಷಣೆಗೆ ಮುಂದಾಗಿ, ಪ್ಲಾಸ್ಟಿಕ್ ಬಳಸಬೇಡಿ.
3) ನೀರಿನ ಸಂರಕ್ಷಣೆಗೆ ಗಮನಕೊಡಿ.

ಭವಿಷ್ಯದ ಭಾರತಕ್ಕಾಗಿ ನನಗಾಗಿ ಈ ಮೂರು ಸಂಕಲ್ಪ ಮಾಡಿ, ತೀರ್ಮಾನ ತೆಗೆದುಕೊಳ್ಳಿ ಎಂದು ಅವರು ವಿನಂತಿ ಮಾಡಿದರು. ಇದಕ್ಕೂ ಮುನ್ನ ಮಾತನಾಡಿದ ಮೋದಿ, ಕಾಂಗ್ರೆಸ್‌ ಪಕ್ಷ ಮತ್ತು ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿ, ಸಮೃದ್ಧ, ಸಕ್ಷಮ ಸರ್ವ ಹಿತಕಾರಿ ಭಾರತದ ಬಗ್ಗೆ ಮಾತನಾಡಿದರು. 

ದೇಶದಲ್ಲಿ ಪೌರತ್ವ ಕಾಯ್ದೆ ವಿರೋಧಿಸುತ್ತಿರುವವರ ಬಗ್ಗೆ ಮಾತನಾಡಿದ ಮೋದಿ, ನಿಮಗೆ ಸಿಎಎ ಕಾಯ್ದೆಯನ್ನು ವಿರೋಧಿಸಬೇಕು ಮತ್ತು ಅದರ ವಿರುದ್ಧ ಹೋರಾಡಲೇಬೇಕು ಎಂದಿದ್ದರೆ ಪಾಕಿಸ್ತಾನದಲ್ಲಿ ಈವರೆಗೆ ಏನೆಲ್ಲ ಆಗಿದೆ ಅದರ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು. ವಿಶ್ವದ ವೇದಿಕೆಗಳಲ್ಲಿ ಪಾಕಿಸ್ತಾನದ ಬಣ್ಣ ಬಯಲಾಗಿರುವಾಗ ನೀವು ಪಾಕಿಸ್ತಾನದ ಪರವಾಗಿ ಏಕೆ ಮಾತನಾಡುತ್ತೀರಾ? ದೇಶದಲ್ಲಿ ದ್ವೇಷದ ವಾತಾವರಣ ಯಾಕೆ ನಿರ್ಮಾಣ ಮಾಡುತ್ತೀರಾ? ಇದನ್ನು ಜನರು ಗಮನಿಸುತ್ತಿದ್ದಾರೆ ಎಂದು ಎಚ್ಚರಿಸಿದರು. 

ಕಾಂಗ್ರೆಸ್ ವಿರುದ್ಧ ವಾಗ್ದಾಳಿ

ಪಾಕಿಸ್ತಾನದ ಜನ್ಮವೇ ಧರ್ಮದ ಆಧಾರದ ಮೇಲೆ ಆಗಿದೆ. ಅಲ್ಲಿ ಬೇರೆ ಧರ್ಮದವರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಹಿಂದೂ, ಕ್ರಿಶ್ಚಿಯನ್, ಬೌದ್ಧರ ಮೇಲೆ ನಿರಂತರ ಹಿಂಸಾಚಾರ–ಅತ್ಯಾಚಾರಗಳು ನಡೆದವು. ಅಲ್ಲಿಂದ ಅಸಂಖ್ಯ ಜನರು ಭಾರತಕ್ಕೆ ಬಂದು ಆಶ್ರಯ ಕೋರಿದರು. ಪಾಕಿಸ್ತಾನದವರು ಅಲ್ಪಸಂಖ್ಯಾತರ ಮೇಲೆ ವ್ಯಾಪಕ ಹಿಂಸಾಚಾರ ನಡೆಸಿದರೂ ಕಾಂಗ್ರೆಸ್ಸಿಗರು ಮತ್ತು ಅವರ ಸಹಚರರು ಅದರ ಬಗ್ಗೆ ಮಾತನಾಡುತ್ತಿಲ್ಲ ಎಂದು ಟೀಕಿಸಿದರು.

ತಮ್ಮ ಜೀವ, ಹೆಣ್ಣುಮಕ್ಕಳ ಮಾನ ಉಳಿಸಿಕೊಳ್ಳಲು ಭಾರತಕ್ಕೆ ಬಂದವರನ್ನು ಕಾಪಾಡಲು ಮುಂದಾದರೆ ಕಾಂಗ್ರೆಸ್‌ ಮತ್ತು ಅವರ ಸಹಚರರು ವಿರೋಧ ಮಾಡುತ್ತಿದ್ದಾರೆ. ಇವರಿಗೆ ಇತರ ದೇಶಗಳಿಂದ ಬಂದ ಅಲ್ಪಸಂಖ್ಯಾತರ ಬದುಕು ಅರಿಯಲು, ಸುಧಾರಿಸಲು ಸಮಯವೇ ಇಲ್ಲ ಎಂದು ವಾಗ್ದಾಳಿ ನಡೆಸಿದರು. 

ಜಮ್ಮು ಮತ್ತು ಕಾಶ್ಮೀರದಲ್ಲಿ ಹೊಸ ಬದಲಾವಣೆ ಕಾಣಿಸುತ್ತಿದೆ. ರಾಮ ಜನ್ಮಭೂಮಿಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಶಾಂತಿಯುತ ಪ್ರಯತ್ನಗಳು ಆಗುತ್ತಿವೆ. ಅಲ್ಪಸಂಖ್ಯಾತರು ಆತ್ಮಗೌರವದಿಂದ ಬಾಳಲು ಅಗತ್ಯವಿರುವ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ಮೋದಿ ಹೇಳಿದರು. 

ದೇಶ ಹಲವು ವರ್ಷಗಳಿಂದ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ನಮ್ಮ ಸರ್ಕಾರ ಹಗಲಿರುಳು ಶ್ರಮಿಸುತ್ತಿದೆ. ಎಲ್ಲ ಮನೆಗಳಿಗೆ ನೀರು, ಎಲ್ಲ ಹಳ್ಳಿಗಳಿಗೆ ಬ್ರಾಡ್‌ಬ್ಯಾಂಡ್‌ಗಾಗಿ ನಾವು ಶ್ರಮಿಸುತ್ತಿದ್ದೇವೆ. ದೇಶದ ಬಡ ಹೆಣ್ಣುಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವ, ಗ್ರಾಮಗಳನ್ನು ಬಯಲು ಶೌಚಮುಕ್ತಗೊಳಿಸುವ, ಕೃಷಿಕರು, ಕೃಷಿ ಕಾರ್ಮಿಕರು, ಸಣ್ಣ ವ್ಯಾಪಾರಿಗಳನ್ನು ಬ್ಯಾಂಕ್‌ ವ್ಯವಸ್ಥೆಯೊಂದಿಗೆ ಜೋಡಿಸುವ ಕಾರ್ಯ ವೇಗವಾಗಿ ನಡೆಯುತ್ತಿದೆ ಎಂದರು.

21ನೇ ಶತಮಾನದ ಮೊದಲ ದಶಕ ಹೇಗಿತ್ತು ಅಂತ ನಿಮಗೆ ಗೊತ್ತಿರಬಹುದು. ಆದರೆ ಇವತ್ತು ಅಂದ್ರೆ 3ನೇ ದಶಕದಲ್ಲಿ ಅಂಥ ಪರಿಸ್ಥಿತಿಯಿಲ್ಲ. ಬಲವಾದ ಅಡಿಪಾಯದೊಂದಿಗೆ 3ನೇ ದಶಕ ಆರಂಭವಾಗುತ್ತಿದೆ. ನಮ್ಮಲ್ಲಿ ಹೊಸ ಆಕಾಂಕ್ಷೆ ಮೂಡಿದೆ. ಭಾರತವನ್ನು ಸಮೃದ್ಧ, ಸಕ್ಷಮ ಸರ್ವ ಹಿತಕಾರಿ ವಿಶ್ವ ಶಕ್ತಿಯಾಗಿಸಬೇಕು ಎನ್ನುವ ಆಕಾಂಕ್ಷೆ ಅದು. ದೇಶದ ಮಹಿಳೆಯರು, ಮಕ್ಕಳು, ದಲಿತರು ಸೇರಿದಂತೆ ಎಲ್ಲರ ಆಕಾಂಕ್ಷೆಯೂ ಅದಾಗಿದೆ ಎಂದು ಮೋದಿ ಹೇಳಿದರು

ಶಿವಕುಮಾರ ಸ್ವಾಮೀಜಿ ಜೊತೆಗೆ ಪೇಜಾವರ ಶ್ರೀಗಳಾದ ವಿಶ್ವೇಶ ತೀರ್ಥರನ್ನು ದೇಶ ಕಳೆದುಕೊಂಡಿದೆ. ನನಗಂತೂ ಬಹಳ ದುಃಖವಾಗಿದೆ. ಅವರು ಮಹಾನ್ ಸಂತರಾಗಿದ್ದರು. ಅವರು ಭೌತಿಕವಾಗಿ ನಮ್ಮಿಂದ ದೂರವಾಗಿರುವುದು ನಮ್ಮನ್ನು ಕಾಡುತ್ತಿದೆ. ಅಧ್ಯಾತ್ಮಿಕ ಜೀವನದಲ್ಲಿ ಇಂಥ ಅನೇಕ ಘಟನೆಗಳು ನಡೆಯುತ್ತವೆ ಅವನ್ನು ತಡೆಯಲು ನಮ್ಮಿಂದ ಆಗುವುದಿಲ್ಲ. ಆದರೆ ಅವರು ತೋರಿದ ದಿಕ್ಕಿನಲ್ಲಿ ಸಾಗುವ ಮೂಲಕ ತಾಯಿ ಭಾರತಿಗೆ ಸೇವೆ ಸಲ್ಲಿಸಬೇಕು ಎಂದು ಮೋದಿ ಹೇಳಿದರು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು