ಭಾನುವಾರ, ಜನವರಿ 26, 2020
28 °C

ಭಕ್ತರಿಂದ ಮೂರು ಸಂಕಲ್ಪ: ಪ್ರಧಾನಿ ಕೋರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಪುರಾತನ ಭಾರತೀಯ ಸಂಸ್ಕೃತಿಯ ರಕ್ಷಣೆ, ಪ್ಲಾಸ್ಟಿಕ್ ಬಳಸದಿರುವುದು ಹಾಗೂ ಜಲ ಸಂರಕ್ಷಣೆ ಈ ಮೂರು ಸಂಕಲ್ಪಗಳನ್ನು ತಮ್ಮ ಭಕ್ತರು ಮತ್ತು ಸಾರ್ವಜನಿಕರಿಂದ ಮಾಡಿಸುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದ ಸಾಧು–ಸಂತರನ್ನು ಗುರುವಾರ ಕೋರಿದರು.

ಇಲ್ಲಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ್ದ ಪ್ರಧಾನಿ, ‘ಹೊಸ ವರ್ಷದ ಸಂದರ್ಭದಲ್ಲಿ ಈ ಪವಿತ್ರ ನೆಲದಿಂದ ಮೂರು ಸಂಕಲ್ಪಗಳನ್ನು ಸಾಧು ಸಂತರ ಮುಂದಿಡುತ್ತಿದ್ದೇನೆ’ ಎಂದರು.

‘ನಾನು ಈ ಹಿಂದೆ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ್ದೆ. ಆದರೆ ಈ ಬಾರಿ ಶಿವಕುಮಾರ ಸ್ವಾಮೀಜಿ ಇಲ್ಲದಿರುವುದು ನನ್ನಲ್ಲಿ ಶೂನ್ಯ ಭಾವ ಮೂಡಿಸಿದೆ. ದೇಶದ ಲಕ್ಷಾಂತರ ಜನರ ಬದುಕಿನ ಮೇಲೆ ಸ್ವಾಮೀಜಿ ಪ್ರಭಾವ ಬೀರಿದ್ದಾರೆ’ ಎಂದು ಹೇಳಿದರು.

‘ಸಾಮಾಜಿಕ, ಅಧ್ಯಾತ್ಮ ಕ್ಷೇತ್ರದಲ್ಲಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅಪಾರ ಕೆಲಸ ಮಾಡಿದ್ದಾರೆ’ ಎಂದು ಸ್ಮರಿಸಿದರು. 2014ರ ನಂತರ ದೇಶದ ಸಾಮಾನ್ಯ ಜನರ ಬದುಕಿನಲ್ಲಿ ಬದಲಾವಣೆ ತರಲು ಪ್ರಯತ್ನಿಸಲಾಗುತ್ತಿದೆ. 2020ನೇ ಸಾಲು ಯುವಕರು, ದಲಿತರು, ಹಿಂದುಳಿದವರು, ಆದಿವಾಸಿಗಳ ಅಭಿವೃದ್ಧಿಯ ವರ್ಷ ಆಗಬೇಕು. ಈ ವರ್ಷ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸ್ಥಾನ ಹೆಚ್ಚಲಿದೆ ಎಂದು ಹೇಳಿದರು.

ರುದ್ರಾಕ್ಷಿ, ವಿಭೂತಿ ಧರಿಸಿದ ಪ್ರಧಾನಿ
ಶಿವಕುಮಾರ ಸ್ವಾಮೀಜಿ ಅವರ ಗದ್ದುಗೆಯ ದರ್ಶನಕ್ಕೆ ಬಂದ ಪ್ರಧಾನ ಮಂತ್ರಿ ಅವರನ್ನು ನಾಡಿನ ನಾನಾ ಮಠಾಧೀಶರು ಬರಮಾಡಿಕೊಂಡರು. ಗದ್ದುಗೆ ಪ್ರವೇಶಿಸಿದ ಮೋದಿ ಅವರಿಗೆ ಸಿದ್ಧಲಿಂಗ ಸ್ವಾಮೀಜಿ ರುದ್ರಾಕ್ಷಿ ಮಾಲೆ ಹಾಕಿದರು. ಹಣೆಗೆ ವಿಭೂತಿ ಧರಿಸಿದರು.

ಮೋದಿ ಅವರು ಗದ್ದುಗೆಗೆ ಆರತಿ ಬೆಳಗಿ, ಪುಷ್ಪ ನಮನ ಸಲ್ಲಿಸಿದರು. ಪ್ರದಕ್ಷಿಣೆ ಹಾಕಿದರು. ಹೊರ ಆವರಣದಲ್ಲಿ ರುದ್ರಾಕ್ಷಿ ಗಿಡ ನೆಟ್ಟರು. ಮಠಾಧೀಶರೊಂದಿಗೆ ಭಾವಚಿತ್ರ ತೆಗೆಸಿಕೊಂಡರು. ವೇದಿಕೆಯಲ್ಲಿ ಶಿವಕುಮಾರ ಸ್ವಾಮೀಜಿ ವಸ್ತು ಸಂಗ್ರಹಾಲಯಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ರೈತ ಸಮಾವೇಶದಲ್ಲಿ ಪಾಲ್ಗೊಳ್ಳುವ ವೇಳೆಗೆ ಹಣೆಯಲ್ಲಿದ್ದ ವಿಭೂತಿ ಅಳಿಸಲಾಗಿತ್ತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು