ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದನಕ್ಕೆ ಚಕ್ಕರ್ ಹೊಡೆದು ಟಿ.ವಿಯಲ್ಲಿ ಕಲಾಪ ನೋಡುವ ಮೋದಿ

Last Updated 14 ಮಾರ್ಚ್ 2019, 20:40 IST
ಅಕ್ಷರ ಗಾತ್ರ

* ಮೋದಿ ಅವರೊಂದಿಗೆ ಹಲವು ಸಲ ಮುಖಾಮುಖಿ ಆಗಿದ್ದೀರಿ. ಅವರ ಸಾಮರ್ಥ್ಯ, ದೌರ್ಬಲ್ಯಗಳೇನು?

ನೋಡಿ, ಮೋದಿ ಅವರೊಂದಿಗೆ ನಾನು ಲೋಕಸಭೆಯಲ್ಲಿ ಮಾತ್ರವಲ್ಲ ಮುಖಾಮುಖಿಯಾಗಿದ್ದು. ನಾವಿಬ್ಬರಷ್ಟೇ ಇರುವ ಮಹತ್ವದ ಸಭೆಗಳಲ್ಲಿ (ಒನ್‌–ಟು–ಒನ್‌) ಪಾಲ್ಗೊಂಡಿದ್ದೇವೆ. ಸಿಬಿಐ, ಸಿವಿಸಿ ನಿರ್ದೇಶಕರಂತಹ ಉನ್ನತ ಹುದ್ದೆಗಳಿಗೆ ನೇಮಕ ಮಾಡುವಾಗ ಗಂಟೆಗಟ್ಟಲೆ ಸಭೆ ನಡೆಯುತ್ತದೆ. ಆದರೆ, ಆ ಸಭೆಗಳಲ್ಲಿ ಮೋದಿ ಸ್ವತಃ ಏನನ್ನೂ ಚರ್ಚೆ ಮಾಡುವುದಿಲ್ಲ.

ಕಣ್ಣಿನಲ್ಲಿ ಕಣ್ಣಿಟ್ಟು ಎಂದೂ ಮಾತನಾಡುವುದಿಲ್ಲ. ಇದು ರೈಟ್‌, ಇದು ರಾಂಗ್‌, ನಾನು ಹೇಳುವುದು ಹೀಗೆ...ಎಂದು ಯಾವಾಗಲೂ ವಾದ–ವಿವಾದ ಮಾಡುವುದಿಲ್ಲ. ಅಧಿಕಾರಿಗಳಿಂದ ಮಾಹಿತಿ ಕೊಡಿಸುತ್ತಾರೆ. ಅವರಿಗೆ ಬೇಕಾದ ಒಬ್ಬ ಸದಸ್ಯ ಸಭೆಯಲ್ಲಿ ಇದ್ದೇ ಇರುತ್ತಾರೆ. ಅವರ ಮೂಲಕ ನಿರ್ಣಯ ಮಂಡಿಸುತ್ತಾರೆ. ಅಲ್ಲಿಗೆ ಚರ್ಚೆ ಮುಗಿಯಿತು. ನಾನೇನಾದರೂ ವಿರುದ್ಧ ಹೇಳಿದರೆ, ‘ಟೀಕ್‌ ಹೈ’ ಎನುತ್ತಾರೆ. ನಿರ್ಣಯ 2:1ರಿಂದ ಪಾಸ್‌ ಆಗುತ್ತದೆ. ಮನ ಒಲಿಸುವ ಸಾಮರ್ಥ್ಯವನ್ನು ನಾನು ಅವರಲ್ಲಿ ಕಂಡಿಲ್ಲ.

ಇನ್ನು ಲೋಕಸಭೆಯಲ್ಲಿ ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಅವರ ಪರವಾಗಿ ಬೇರೆಯವರೇ ಉತ್ತರ ಕೊಡುತ್ತಾರೆ. ಮಹತ್ವದ ಸಂದರ್ಭದಲ್ಲೂ ಮೋದಿ ಉತ್ತರ ನೀಡುವುದಿಲ್ಲ. ಅನೇಕ ದೇಶಗಳಿಗೆ ಹೋಗಿಬಂದಿರುವ ಅವರು, ನಾನು ಇಂತಿಂಥ ದೇಶಕ್ಕೆ ಹೋಗಿದ್ದೆ, ಅಲ್ಲಿ ಇಂತಿಂಥ ಅಭಿಪ್ರಾಯ ವ್ಯಕ್ತವಾಯಿತು ಎಂದೂ ವಿವರಿಸುವುದಿಲ್ಲ. ವಿದೇಶದಲ್ಲಿ ಏನಾಯಿತು ಎಂದು ಕೇಳೋಣವೆಂದರೆ ವಿದೇಶಾಂಗ ಸಚಿವರೂ ಇರುವುದಿಲ್ಲ.

ಎಲ್‌.ಕೆ.ಅಡ್ವಾಣಿ, ಮುರಳಿ ಮನೋಹರ ಜೋಶಿ, ಕಲರಾಜ್‌ ಮಿಶ್ರಾ ಮುಂದಿನ ಸಾಲಿನಲ್ಲೇ ಕುಂತಿರ್ತಾರೆ. ಅವರ‍್ಯಾರನ್ನೂ ನೋಡದೆ ಸೀದಾ ಹೋಗ್ತಾರೆ. ಅವರದೇ ಪಾರ್ಟಿಯ ಹಿರಿಯರು, ಪಾರ್ಟಿಯನ್ನು ಕಟ್ಟಿ, ಜೀವಂತವಾಗಿ ಇಟ್ಟವರಿಗೂ ಅವರು ಗೌರವ ಕೊಡುವುದಿಲ್ಲ.

* ಪ್ರಧಾನಿಯವರಿಗೆ ಕಾರ್ಯಭಾರದ ಒತ್ತಡ ಇರುತ್ತದೆ. ಅಧಿವೇಶನ ನಡೆದಾಗ ಸದನದಿಂದ ಕದಲುವುದೇ ಅಪರಾಧ ಎನ್ನುವಂತೆ ಮಾತನಾಡಿದರೆ ಹೇಗೆ?

ಸಂಸತ್ತು ಇರುವುದೇ ಚರ್ಚೆ ಮಾಡಲಿಕ್ಕೆ. ಪ್ರಧಾನಿಯಾದವರು ಎಲ್ಲಿ ಹೋದರೂ ಸದನಕ್ಕೆ ಬರಬೇಕು. ಸದನಕ್ಕೆ ಅವರು ಉತ್ತರದಾಯಿ ಆಗಿದ್ದಾರೆ. ಕಲಾಪ ತಪ್ಪಿಸಿಕೊಂಡು ತಮ್ಮ ರೂಮ್‌ನಲ್ಲಿ ಕುಳಿತು ಸಂಸತ್‌ನಲ್ಲಿ ಏನು ನಡೆಯುತ್ತದೆ ಎಂದು ಟಿವಿಯಲ್ಲಿ ನೋಡಿದರೆ ಏನು ಪ್ರಯೋಜನ?

ನೆಹರೂ, ಶಾಸ್ತ್ರಿ, ಇಂದಿರಾ ಅವರೆಲ್ಲ ಚರ್ಚೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಹಾಗಾದರೆ ಅವರಿಗೆ ಕೆಲಸವೇ ಇರಲಿಲ್ಲವೇ? ನಮ್ಮದು ಸಂಸದೀಯ ಪ್ರಜಾಪ್ರಭುತ್ವ. ಅಲ್ಲಿಯೇ ಪ್ರಧಾನಿ ಉತ್ತರ ನೀಡಬೇಕು. ನೀವು ಏನು ಮಾಡುತ್ತೀರಿ ಎನ್ನುವುದು ದೇಶಕ್ಕೆ ಗೊತ್ತಾಗುವ ಜಾಗ ಅದು. ಕಲಾಪವನ್ನು ಹೊರಗೆ ಕುಳಿತು ವೀಕ್ಷಿಸುವುದು, ಕೊನೆ ಕ್ಷಣದಲ್ಲಿ ಸದನಕ್ಕೆ ಬರುವುದು, ಒಂದು ದೊಡ್ಡ ಭಾಷಣ ಮಾಡುವುದು, ಮತ್ತೆ ಹೊರ ಹೋಗುವುದು– ಇದು ಮೋದಿಯವರ ಶೈಲಿ. ಅಲ್ಲದೆ, ಅವರು ಯಾರಿಗೂ ಪ್ರಶ್ನೆ ಕೇಳಲು ಅವಕಾಶ ಕೊಡುವುದಿಲ್ಲ.

ಒಮ್ಮೆ ಸದನ ನಡೆಯುವಾಗ ಎನ್‌ಡಿಎ ಸದಸ್ಯರೆಲ್ಲ ಎದ್ದು ನಿಂತರು. ನಾನು ಏನಾಯಿತು ಎಂದು ಯೋಚಿಸುತ್ತಿದ್ದೆ. ಅಷ್ಟರಲ್ಲಿ ಮೋದಿ ಒಳಪ್ರವೇಶಿಸುತ್ತಿದ್ದರು. ಆಗ ಸುಷ್ಮಾಜಿ, ‘ಪ್ರಧಾನಿ ಬಂದರು, ದರ್ಶನ ಪಡೆಯಿರಿ’ ಎಂದರು. ‘ದರ್ಶನ ಪಡೆಯಲು ಅವರೇನು ದೇವರೇ’ ಎಂದು ನಾನು ಕೇಳಿದೆ. ದೊಡ್ಡ ಮೆಜಾರಿಟಿ ಸಿಕ್ಕ ಅಹಂಕಾರ ಅವರಿಗಿದೆ.

* ಮೋದಿ ತುಟಿ ಬಿಚ್ಚಲಿಲ್ಲ ಎಂದು ಕಾಂಗ್ರೆಸ್‌ ಹರಿಹಾಯುತ್ತದೆ. ಹತ್ತು ವರ್ಷ ಪ್ರಧಾನಿಯಾಗಿದ್ದ ಮನಮೋಹನ್‌ ಸಿಂಗ್‌ ಎಷ್ಟು ಸಲ ತುಟಿ ಬಿಚ್ಚಿದ್ದರು?

ಮೋದಿ, ದೇಶದಲ್ಲಿ ಚರ್ಚೆಯಾಗುವ ವಿಷಯಗಳ ಮೇಲೆ ಎಷ್ಟು ಸಲ ಮಾತನಾಡಿದ್ದಾರೆ ಹೇಳಿ? ಯಾವುದೇ ಚರ್ಚೆ ಇದ್ದರೂ ಮನಮೋಹನ್‌ ಸಿಂಗ್‌ ಒಂದು ಸಂಕ್ಷಿಪ್ತ ಹೇಳಿಕೆಯನ್ನು ತಪ್ಪದೇ ನೀಡುತ್ತಿದ್ದರು. ಮೋದಿ 90 ನಿಮಿಷ ಮಾತನಾಡಿದರೂ ಜಗತ್ತಿನ ಮಾಧ್ಯಮಗಳು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಸಿಂಗ್‌ ಅವರ 10 ನಿಮಿಷದ ಭಾಷಣವನ್ನು ಎಲ್ಲರೂ ಗಂಭೀರವಾಗಿ ಪರಿಗಣಿಸುತ್ತಿದ್ದರು. ಮೋದಿ ಮಾತುಗಳನ್ನು ಆಡಿ, ಆಡಿ ಅಧಿಕಾರಕ್ಕೆ ಬಂದರು. ಬಳಿಕ ದೇಶದ ಜನರು ‘ಆಡಿದ್ದನ್ನು ಮಾಡಿ, ಮಾಡಿ’ ಎಂದರು. ಮೋದಿ ಮಾತುಗಳನ್ನಾಡಿದರೇ ಹೊರತು ಏನೂ ಮಾಡಲಿಲ್ಲ.

* ರಾಹುಲ್‌ ಹಾಗೂ ಪ್ರಿಯಾಂಕಾ ಅವರಲ್ಲಿ ಪ್ರಧಾನಿ ಹುದ್ದೆಗೆ ನಿಮ್ಮ ಆಯ್ಕೆ ಯಾರು?

ಒಗ್ಗಟ್ಟನ್ನು ಒಡೆಯುವಂತಹ ಈ ಪ್ರಶ್ನೆ ಬೇಡ. ಈಗಿನ ಕೇಂದ್ರ ಸರ್ಕಾರವನ್ನು ತೊಲಗಿಸಲು ನಾವೆಲ್ಲ ಹೋರಾಟ ನಡೆಸುತ್ತಿದ್ದೇವೆ. ಅದರಲ್ಲಿ ಸೋನಿಯಾಜಿ, ರಾಹುಲ್‌, ಪ್ರಿಯಾಂಕಾ ಎಲ್ಲಾ ಸೇರಿಕೊಂಡಿದ್ದಾರೆ. ಈ ಹೋರಾಟದಲ್ಲಿ ಯಶಸ್ವಿಯಾದ ಮೇಲಷ್ಟೇ ಉಳಿದ ವಿಷಯಗಳ ಪ್ರಶ್ನೆ ಉದ್ಭವಿಸುತ್ತದೆ.

* ದಲಿತ ಸಮುದಾಯದ ರಾಚಯ್ಯ, ಕೆ.ಎಚ್‌. ರಂಗನಾಥ್‌, ಬಸವಲಿಂಗಪ್ಪ ಅಂತಹ ಸಮರ್ಥ ನಾಯಕರು ಕಾಂಗ್ರೆಸ್‌ನಲ್ಲಿದ್ದರು. ಅವರನ್ನು ಕಾಂಗ್ರೆಸ್‌ ಮುಖ್ಯಮಂತ್ರಿಯನ್ನಾಗಿ ಮಾಡಿಲ್ಲ. ಈ ಹಿಂದೆಯೂ ಕಾಂಗ್ರೆಸ್‌ ದಲಿತರಿಗೆ ಅನ್ಯಾಯ ಮಾಡಿದೆಯಲ್ಲವೇ?

ರಂಗನಾಥ್‌ ಅವರು ಎರಡು ಸಲ ಕೆಪಿಸಿಸಿ ಅಧ್ಯಕ್ಷರಾಗಿದ್ದರು. 8 ಸಲ ಶಾಸಕರು ಆಗಿದ್ದರು. ಅವರು ಬುದ್ಧಿವಂತರಿದ್ದರು. ಅವರಿಗೆ ಪ್ರತಿಭೆ ಆಧಾರದಲ್ಲಿ ಮುಖ್ಯಮಂತ್ರಿ ಹುದ್ದೆ ಸಿಗಬೇಕಿತ್ತು ನಿಜ. ಆದರೆ, ಆ ವಿಚಾರದಲ್ಲಿ ಜಾತಿ ತರಬೇಡಿ. ಬುದ್ಧಿವಂತರಿಗೆ ಅವಕಾಶ ಸಿಗಬೇಕಿತ್ತು ಎಂದು ಕೇಳುವುದು ನ್ಯಾಯ.

* 1996ರಲ್ಲಿ ಎಚ್‌.ಡಿ.ದೇವೇಗೌಡರು ಪ್ರಧಾನಿಯಾದರು. 2019ರಲ್ಲಿ ಅಂತಹುದೇ ಸನ್ನಿವೇಶ ನಿರ್ಮಾಣವಾಗಿ ಖರ್ಗೆ ಪ್ರಧಾನಿಯಾಗುತ್ತಾರಾ?

ಮೊದಲು ನಮ್ಮ ಪಕ್ಷಕ್ಕೆ ಬಹುಮತ ಬರಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಖ್ಯೆಗೇ ಮನ್ನಣೆ. ರಾಹುಲ್‌ ಗಾಂಧಿ ಅವರನ್ನು ನಮ್ಮ ನಾಯಕ ಎಂದು ಒಪ್ಪಿಕೊಂಡಿದ್ದೇವೆ. ಅವರು ಪ್ರಧಾನಿಯಾಗಬೇಕು ಎಂಬುದು ನಮ್ಮ ಹಂಬಲ. ಒಂದು ವೇಳೆ ನಮ್ಮ ಪಕ್ಷಕ್ಕೆ ಬಹುಮತ ಬಾರದಿದ್ದರೆ ಸಮಾನಮನಸ್ಕ ಪಕ್ಷಗಳು ಜತೆಗೂಡಿ ಈ ಬಗ್ಗೆ ತೀರ್ಮಾನ ಮಾಡಲಿವೆ. ಆ ವಿಷಯದ ಬಗ್ಗೆ ಈಗಲೇ ಚರ್ಚೆ ಮಾಡುವುದು ಬೇಡ.

* ಯಾವ ವಿಚಾರ ಮುಂದಿಟ್ಟುಕೊಂಡು ಈ ಸಲ ಚುನಾವಣೆ ಎದುರಿಸುತ್ತೀರಿ?

ಪ್ರಣಾಳಿಕೆಯಲ್ಲಿದ್ದ ಅಂಶಗಳನ್ನು ಪ್ರಧಾನಿ ಅನುಷ್ಠಾನ ಮಾಡಲಿಲ್ಲ. ಅವರ ವೈಫಲ್ಯಗಳನ್ನು ಜನರ ಮುಂದಿಡುತ್ತೇವೆ. ಯುಪಿಎ ಸರ್ಕಾರದ ಸಾಧನೆಗಳನ್ನು ಬಿಂಬಿಸುತ್ತೇವೆ. ಉದ್ಯೋಗ ಖಾತರಿಯಂತಹ ಉತ್ತಮ ಕಾರ್ಯಕ್ರಮಗಳನ್ನು ಜಾರಿಗೆ ತಂದವರು ನಾವು. ಬಡವರಿಗೆ ಶಕ್ತಿ ತುಂಬಬೇಕು ಎಂಬ ಉದ್ದೇಶದಿಂದ ಈ ಯೋಜನೆ ಜಾರಿಗೆ ತಂದೆವು. ಆಹಾರಭದ್ರತೆ, ಶಿಕ್ಷಣ ಹಕ್ಕು, ಮಾಹಿತಿ ಹಕ್ಕು ಒಳ್ಳೆಯ ಯೋಜನೆ ಅಲ್ಲವೇ?

ಉದ್ಯೋಗ ಖಾತರಿ ಯೋಜನೆಯಡಿ ಕಾರ್ಮಿಕರ ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡುತ್ತಿಲ್ಲ. ನಮ್ಮ ರಾಜ್ಯಕ್ಕೆ ₹2,800 ಕೋಟಿ ಬಾಕಿ ಕೊಡಬೇಕಿದೆ. ಅದೇ ರೀತಿ, ಬೇರೆ ಬೇರೆ ರಾಜ್ಯಗಳಿಗೆ ಹಣ ಬಿಡುಗಡೆ ಮಾಡಬೇಕಿದೆ. ಇವೆಲ್ಲ ಜನರ ಕಣ್ಣಿಗೆ ಕಾಣುತ್ತಿವೆ. ಅವರು ನೋವು ಅನುಭವಿಸುತ್ತಿದ್ದಾರೆ. ಇವುಗಳ ಬಗ್ಗೆ ಮತ್ತಷ್ಟು ಬೆಳಕು ಚೆಲ್ಲುತ್ತೇವೆ.

* ಬಿಜೆ‍ಪಿಯವರು ಭಾವನಾತ್ಮಕ ವಿಚಾರ ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತಿದ್ದಾರೆ. ನೀವು ಅಭಿವೃದ್ಧಿ ವಿಚಾರ ಮುಂದಿಟ್ಟುಕೊಂಡು ಚುನಾವಣೆ ಎದುರಿಸಲು ಸಾಧ್ಯವೇ?

ನಾವು ಆದಷ್ಟು ಪ್ರಯತ್ನ ಮಾಡುತ್ತೇವೆ. ಬಿಜೆಪಿಯವರು ಜನರನ್ನು ಭಾವನಾತ್ಮಕವಾಗಿ ಶೋಷಣೆ ಮಾಡಿದ್ದಾರೆ. ಇದು ದೇಶಕ್ಕೆ ದ್ರೋಹ ಬಗೆದಂತೆ. ಜನರಿಗೆ ಮೋಸ ಮಾಡಿದಂತೆ. ಅವರು ಎಷ್ಟೇ ಕಥೆ ಹೇಳಿದರೂ ಜನರು ನಿರುದ್ಯೋಗ ಸಮಸ್ಯೆ, ಜಿಡಿಪಿ, ನೋಟು ರದ್ದತಿಯ ಪರಿಣಾಮಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ. ಮತ ಹಾಕುವಾಗ ಯೋಚಿಸುತ್ತಾರೆ. ನಮ್ಮ ಮಾತನ್ನು ಜನರು ಒಪ್ಪಿಕೊಳ್ಳುತ್ತಾರೆ ಎಂಬುದು ನನ್ನ ಅಭಿಪ್ರಾಯ.

ಒಳ್ಳೆಯ ಕೆಲಸಕ್ಕಾದರೂ ಪ್ರಚಾರ ಬೇಕಲ್ಲ. ನಮ್ಮ ವಿಚಾರ ಎಷ್ಟೇ ಒಳ್ಳೇದಿರಬಹುದು. ಆದರೆ, ಅನುಷ್ಠಾನಕ್ಕೆ ತರದಿದ್ದರೆ ಪ್ರಯೋಜನವಿಲ್ಲ. ಅನುಷ್ಠಾನಕ್ಕೆ ತಂದದ್ದನ್ನು ಪ್ರಚಾರ ಮಾಡದಿದ್ದರೆ, ಜನರಿಗೆ ಅರ್ಥ ಮಾಡಿಸದಿದ್ದರೆ ಕಷ್ಟ. ನಮ್ಮ ಸಮಸ್ಯೆ ಇದು.

ಪಾಕಿಸ್ತಾನದ ವಿರುದ್ಧ 1947, 1965 ಹಾಗೂ 1971ರಲ್ಲಿ ಯುದ್ಧ ಮಾಡಿ ಗೆಲುವು ಸಾಧಿಸಿದೆವು. ಇಂತಹ ದೊಡ್ಡ ದೊಡ್ಡ ಕೆಲಸಗಳನ್ನು ಮಾಡಿದ್ದೇವೆ. ಭಾವನಾತ್ಮಕ ವಿಚಾರದ ಹೆಸರಿನಲ್ಲಿ, ಜವಾನರ ಹೆಸರಿನಲ್ಲಿ, ಸರ್ಜಿಕಲ್‌ ಸ್ಟ್ರೈಕ್‌ ಹೆಸರಿನಲ್ಲಿ ಮತ ಕೇಳುವುದಿಲ್ಲ. ನಾವು ತಂದಿರುವ ಕಾರ್ಯಕ್ರಮಗಳು ಹಾಗೂ ಅಭಿವೃದ್ಧಿ ಹೆಸರಿನಲ್ಲಿ ಮತ ಕೇಳುತ್ತೇವೆ.

* ಲೋಕಸಭಾ ಚುನಾವಣಾ ಸೀಟು ಹಂಚಿಕೆಯಲ್ಲಿ ಮೈತ್ರಿ ಧರ್ಮ ಪಾಲನೆ ಆಗಿಲ್ಲ ಎಂಬ ಮಾತಿದೆಯಲ್ಲ?

ಇಲ್ಲಿ ಖರ್ಗೆ–ಗೌಡರ ಮೇಲುಗೈ ಕೆಳಗೈ ಎಂಬುದು ಇಲ್ಲ. ನಾವು ಸೈದ್ಧಾಂತಿಕವಾಗಿ ಹೋರಾಟ ಮಾಡುತ್ತಿದ್ದೇವೆ. ಆರ್‌ಎಸ್‌ಎಸ್‌ ಸಿದ್ಧಾಂತ ಇರಬೇಕಾ ಅಥವಾ ಸಾಮಾಜಿಕ ನ್ಯಾಯದ ಸಿದ್ಧಾಂತ ಇರಬೇಕಾ ಎಂಬ ಬಗ್ಗೆ ತೀರ್ಮಾನ ಆಗಬೇಕಿದೆ. ನಾವು ತತ್ವ ಆಧಾರದಲ್ಲಿ ಹೋರಾಟ ಮಾಡುತಿದ್ದೇವೆ. ತತ್ವ ಉಳಿದರೆ ನಾವು ಉಳಿಯುತ್ತೇವೆ. ನಂತರ ವೈಯಕ್ತಿಕ ವಿಚಾರದ ಬಗ್ಗೆ ಯೋಚನೆ ಮಾಡೋಣ.

* ಕಲಬುರ್ಗಿ ಕ್ಷೇತ್ರದಲ್ಲಿ ನಿಮ್ಮನ್ನು ಸೋಲಿಸಲು ಪ್ರಧಾನಿ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರೇ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ ಎಂಬ ಮಾತಿದೆಯಲ್ಲ?

ಮೋದಿ ಹಾಗೂ ಅಮಿತ್ ಶಾ ಕಲಬುರ್ಗಿಗೆ ಎಷ್ಟು ಸಲ ಬೇಕಾದರೂ ಬರಲಿ. ಅದರಿಂದ ಸಮಸ್ಯೆ ಇಲ್ಲ. ನಾನು ಕಲಬುರ್ಗಿಯಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ. ನಾನು ನಂಬಿದ್ದು ಮತದಾರರನ್ನು. ಅವರು ಆಶೀರ್ವಾದ ಮಾಡಿದರೆ ಯಾರಿಂದಲೂ ನನ್ನನ್ನು ತಡೆಯಲು ಸಾಧ್ಯವಿಲ್ಲ.

11 ಸಲ ನನ್ನನ್ನು ಗೆಲ್ಲಿಸಿದ್ದಾರೆ. ಕೇಂದ್ರೀಯ ವಿಶ್ವವಿದ್ಯಾಲಯ ಬರುವಂತೆ ಮಾಡಿದ್ದೇನೆ. ಕಲಬುರ್ಗಿಯಲ್ಲಿ ಮೆಡಿಕಲ್‌, ಡೆಂಟಲ್‌, ನರ್ಸಿಂಗ್‌ ಕಾಲೇಜು ಸ್ಥಾಪಿಸಿದ್ದೇನೆ. ಪ್ಯಾರಾ ಮೆಡಿಕಲ್‌ ಕಾಲೇಜು ಆರಂಭವಾಗಿದೆ. ಅದನ್ನು ಉದ್ಘಾಟಿಸುವ ಕೆಲಸವನ್ನು ಮೋದಿ ಮಾಡಬೇಕಿತ್ತು. ಆದರೆ, ಅವರು ಕಲಬುರ್ಗಿಯಿಂದಲೇ ಬೆಂಗಳೂರಿನ ರಾಜಾಜಿನಗರದಲ್ಲಿರುವ ಇಎಸ್‌ಐ ಆಸ್ಪತ್ರೆ ಉದ್ಘಾಟಿಸಿದರು.

ನಾನು ಕಾರ್ಮಿಕ ಸಚಿವನಾಗಿದ್ದಾಗ ನಾಲ್ಕೂವರೆ ವರ್ಷಗಳ ಹಿಂದೆಯೇ ಈ ಆಸ್ಪತ್ರೆ ಆರಂಭಿಸಿದ್ದೆ. ಅದನ್ನು ಮತ್ತೊಮ್ಮೆ ಉದ್ಘಾಟಿಸಿದರು. ನಾನು ರೈಲ್ವೆ ಸಚಿವನಾಗಿದ್ದಾಗ 27 ಹೊಸ ರೈಲುಗಳನ್ನು ಶುರು ಮಾಡಿದ್ದೆ. ಎಲ್ಲಿಯಾದರೂ ನಾವು ಡಂಗೂರ ಹೊಡೆದುಕೊಂಡಿದ್ದೇವೆಯೇ? ಕಾಲು ನೋವು, ಕಣ್ಣು ನೋವು ಎಲ್ಲದಕ್ಕೂ ಔಷಧ ಇದೆ. ಆದರೆ, ಹೊಟ್ಟೆ ಕಿಚ್ಚಿಗೆ ಔಷಧ ಇಲ್ಲ. ನಿಮಗೆ ಗೊತ್ತಿದ್ದರೆ ದಯವಿಟ್ಟು ತಿಳಿಸಿ. ಅವರಿಗೆ (ಬಿಜೆಪಿ) ಕೊಡುತ್ತೇನೆ.

* ಎಡಗೈಯವರಿಗೆ ಬಲಗೈಯವರು ಅನ್ಯಾಯ ಮಾಡಿದ್ದಾರೆ. ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯ ಶಿಫಾರಸು ಜಾರಿಗೊಳಿಸಲು ಅವಕಾಶ ನೀಡುತ್ತಿಲ್ಲ ಎಂಬ ಆಪಾದನೆ ಇದೆಯಲ್ಲ?

ದಲಿತ ಸಮುದಾಯವನ್ನು ಒಡೆಯಬೇಡಿ. ರಾಜಕೀಯ ಲಾಭಕ್ಕಾಗಿ ಹಾಗೂ ಮತಕ್ಕಾಗಿ ಒಬ್ಬರ ಮೇಲೆ ಇನ್ನೊಬ್ಬರ ಎತ್ತಿ ಕಟ್ಟಿ ಮಾತನಾಡಿದರೆ ಯಾರಿಗೂ ಲಾಭ ಇಲ್ಲ. ಯಾರಿಗೆ ಅನ್ಯಾಯವಾಗಿದೆ ಎಂಬುದನ್ನು ಎಲ್ಲರೂ ಕುಳಿತು ಚರ್ಚಿಸಿ. ಯಾವ್ಯಾವ ರಾಜಕೀಯ ಪಕ್ಷಗಳಲ್ಲಿ ನಿಮಗೆ ಮನ್ನಣೆ ಇದೆ ಎಂಬುದನ್ನು ಗಮನಿಸಿಕೊಳ್ಳಿ. ಅನ್ಯಾಯ ಆಗಿದ್ದರೆ ಸರಿಪಡಿಸಿ. ಅವರನ್ನು ಒಡೆಯಲು ಹೋದರೆ ಸಮಾಜವನ್ನು ಒಡೆದಂತೆ.

ಸದಾಶಿವ ಆಯೋಗದ ವರದಿ ನಮಗೆ ಸಿಕ್ಕಿಲ್ಲ. ಆ ವರದಿಯನ್ನು ವಿಧಾನಮಂಡಲದ ಅಧಿವೇಶನದಲ್ಲಿ ಮಂಡಿಸಿಲ್ಲ. ವರದಿಯ ಬಗ್ಗೆ ಸುದ್ದಿಗಳನ್ನು ಸೃಷ್ಟಿಸಲಾಗುತ್ತಿದೆ. ವರದಿಯನ್ನು ಮೊದಲು ಸದನದಲ್ಲಿ ಮಂಡಿಸಿ. ಅದನ್ನು ಜನರ ಗಮನಕ್ಕೆ ತನ್ನಿ. ಎಡಗೈ– ಬಲಗೈಯವರು ನಾವು ಅಣ್ಣ ತಮ್ಮಂದಿರಂತೆ ಇದ್ದೇವೆ. ಜಗಳ ಹಚ್ಚುವ ಕೆಲಸ ಮಾಡಬೇಡಿ.

ಜನಸಂಖ್ಯೆ ಆಧಾರದಲ್ಲಿ ಮಾದಿಗರಿಗೆ ಮೀಸಲಾತಿ ನೀಡುವ ಪ್ರಯೋಗವನ್ನು ಆಂಧ್ರಪ್ರದೇಶದಲ್ಲಿ ಮಾಡಿದರು. ಆದರೆ, ಅದನ್ನು ಹೈಕೋರ್ಟ್‌ ಒಪ್ಪಲಿಲ್ಲ. ಸುಪ್ರೀಂ ಕೋರ್ಟ್‌ ಸಹ ಮನ್ನಣೆ ನೀಡಲಿಲ್ಲ. ಈ ವಿಚಾರವನ್ನು ಮುಂದಿಟ್ಟುಕೊಂಡು ರಾಜಕೀಯ ಲಾಭ ಪಡೆಯಲು ಮುಂದಾಗಬೇಡಿ. ಆಗ ಅವರ ರಾಜಕೀಯ ಶಕ್ತಿ ಕುಗ್ಗಲಿದೆ.

ಹಾಕಿ ಆಟಗಾರ ಆಗಿದ್ದೆ
ಹುದ್ದೆಗಳಿಗೆ ಅಥವಾ ರಾಜಕೀಯ ಉನ್ನತ ಸ್ಥಾನಮಾನಗಳಿಗೆ ಹೋರಾಟ ಮಾಡುವುದಕ್ಕಿಂತ ನಂಬಿದ ತತ್ವ ಹೇಗೆ ಜಾರಿಗೆ ತರಬಹುದು ಎಂಬ ದೃಷ್ಟಿಕೋನದಿಂದ ರಾಜಕೀಯ ಸೇರಿದೆ. ಗುಲಬರ್ಗಾದ ನೂತನ ವಿದ್ಯಾಲಯದಲ್ಲಿ ಓದಿದ್ದೆ. ಮೋದಿ ಅದೇ ಮೈದಾನದಲ್ಲಿ ಮೊನ್ನೆ ಭಾಷಣ ಮಾಡಿದ್ದರು. ನಾನು 10–15 ವರ್ಷ ಆ ಕ್ರೀಡಾಂಗಣದಲ್ಲಿ ಆಡಿದ್ದೆ. ಹಾಕಿ ಆಟಗಾರ ಆಗಿದ್ದೆ. ರಾಜ್ಯ ಮಟ್ಟದ ಟ್ರೋಫಿ ಗೆದ್ದಿದ್ದೆವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT