ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೂಟಿಕೋರರನ್ನು ಕಾನೂನಿನಿಂದ ಸದೆಬಡಿಯಲಾಗದು: ಕುಮಾರಸ್ವಾಮಿ

Last Updated 23 ಡಿಸೆಂಬರ್ 2018, 19:50 IST
ಅಕ್ಷರ ಗಾತ್ರ

ಬೆಂಗಳೂರು: ‘ಹೆಚ್ಚು ಬಡ್ಡಿಯ ಆಸೆ ತೋರಿಸಿ, ಕೋಟ್ಯಾಂತರ ರೂಪಾಯಿಗಳನ್ನು ಲೂಟಿ ಹೊಡೆಯುವವರನ್ನು ಸದೆಬಡಿದು, ಹಣವನ್ನು ವಾಪಸ್ಸು ಕೊಡಿಸುವುದು ಅಷ್ಟು ಸುಲಭದ ಕೆಲಸವಲ್ಲ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅಸಹಾಯಕತೆ ವ್ಯಕ್ತಪಡಿಸಿದರು.

ನ್ಯಾಷನಲ್‌ ಕಾಲೇಜಿನ ಘಟಿಕೋತ್ಸವ ಭಾಷಣದಲ್ಲಿ ಅವರು ಸರ್ಕಾರದ ಯೋಜನೆಗಳನ್ನು ಸಮರ್ಥಿಸಿಕೊಳ್ಳುತ್ತ, ಸಮ್ಮಿಶ್ರ ಸರ್ಕಾರ ಮುನ್ನಡೆಸುವ ಕಷ್ಟ ತೋಡಿಕೊಂಡರು.

‘ಜೀವನದ ಕೊನೆಗಾಲದಲ್ಲಿ ಆರ್ಥಿಕ ಭದ್ರತೆ ಇರುತ್ತದೆಯಂದು ಅಥವಾ ಮಕ್ಕಳಿಗಾಗಿ ಜನರು ಹೆಚ್ಚಿನ ಬಡ್ಡಿಯ ಆಸೆಗೆ ಹಣ ಹೂಡುತ್ತಿದ್ದಾರೆ. ಈಗ ನೋಡಿ ಯಾವುದೋ ಒಂದು ಕಂಪನಿಯವರು ಜನರಿಂದ ಕೋಟ್ಯಾಂತರ ದುಡ್ಡು ವಸೂಲಿ ಮಾಡಿ, ಟೋಪಿ ಹಾಕಿದ್ದಾರೆ. ಮಜಾ ಮಾಡಿಕೊಂಡು ಇದ್ದಾರೆ’ ಎಂದು ಆ್ಯಂಬಿಡೆಂಡ್‌ ಕಂಪನಿಯ ಹೆಸರನ್ನು ಉಲ್ಲೇಖಿಸದೆ ಹೇಳಿದರು.

‘ಅಂತಹ ವ್ಯಕ್ತಿಗಳನ್ನು ಸದೆ ಬಡಿದು, ಹಣ ವಾಪಸ್ಸು ಕೊಡಿಸುವಷ್ಟು ಬಲಿಷ್ಠವಾದ ಕಾನೂನು ವ್ಯವಸ್ಥೆ ದೇಶದಲ್ಲಿ ಇಲ್ಲ. ದಾವೆ ಹೂಡಿದರೆ, ಅದೆಂತಹದ್ದೊ ಜಾಮೀನು ಅಂತ ತಕ್ಷಣ ಕೊಟ್ಟು ಬಿಡುತ್ತಾರೆ. ಕಾನೂನು ಶ್ರೀಮಂತರ ರಕ್ಷಣೆಗೆ ಇದೆ ಹೊರತು, ಬಡವರಿಗೆ ಅಲ್ಲ. ಇಂತಹ ವಾಸ್ತವಾಂಶಗಳನ್ನು ಎಲ್ಲರು ಅರಿತುಕೊಳ್ಳಬೇಕು’ ಎಂದರು.

‘ಇಂತಹ ಮೋಸಗಳನ್ನು ಯುವ ಸಮುದಾಯ ಕಡೆಗಣಿಸಬಾರದು. ಅವುಗಳ ಕುರಿತು ಯೋಚಿಸಬೇಕು. ಸರಿದಾರಿಯಲ್ಲಿ ನಡೆಯಬೇಕು’ ಎಂದು ಕಿವಿಮಾತು ಹೇಳಿದರು.

‘ಸಾಲಮನ್ನಾದಿಂದ ರಾಜ್ಯದ ಆರ್ಥಿಕ ಸ್ಥಿತಿ ಹದಗೆಡುತ್ತದೆ ಎಂದು ಕೆಲವರು ಟಿ.ವಿ. ಚರ್ಚೆಗಳಲ್ಲಿ ಬೊಬ್ಬೆ ಹೊಡೆಯುತ್ತಾರೆ. ನನ್ನ ಸರ್ಕಾರದಿಂದ ಆರ್ಥಿಕ ಶಿಸ್ತು ಉಲ್ಲಂಘನೆ ಆಗಿಲ್ಲ.ವಿತ್ತಿಯ ಕೊರತೆ ಪ್ರಮಾಣ ಶೇ 3 ದಾಟಬಾರದೆಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ರಾಜ್ಯದಲ್ಲಿ ಶೇ 2.85 ಮಾತ್ರ ವಿತ್ತಿಯ ಕೊರತೆ ಇರುವಂತೆ ನೋಡಿಕೊಂಡಿದ್ದೇವೆ’ ಎಂದರು.

‘ದೇಶದಲ್ಲಿ 2013ರಲ್ಲಿ ಬ್ಯಾಂಕುಗಳಿಗೆ ಮರುಪಾವತಿಯಾಗದ ಸಾಲದ ಪ್ರಮಾಣ ಶೇ 4ರಷ್ಟಿತ್ತು. ಈಗ ಆ ಪ್ರಮಾಣ ಶೇ 13ಕ್ಕೆ ಏರಿಕೆಯಾಗಿದೆ. ಅದರ ಮೊತ್ತವೇ ₹ 1 ಲಕ್ಷ ಕೋಟಿಯಷ್ಟಿದೆ. ಅದರ ಬಗ್ಗೆಯು ಜನರು ಯೋಚನೆ ಮಾಡಬೇಕಿದೆ’ ಎಂದು ಸಲಹೆ ನೀಡಿದರು.

‘ನನಗೆ ದೂರದೃಷ್ಟಿಯಿದೆ. ಬೆಂಬಲ ಇಲ್ಲ. ಹಣ ಸಂಪಾದನೆಗಾಗಿ ನಾನು ರಾಜಕೀಯಕ್ಕೆ ಬಂದವನಲ್ಲ. ನನಗೆ ಜಾತಿ ಮುಖ್ಯವಲ್ಲ. ದೇವರು ಕೊಟ್ಟ ಈ ಅಧಿಕಾರವನ್ನು ಸದ್ಬಳಕೆ ಮಾಡಿಕೊಳ್ಳುತ್ತೇನೆ. ಇತಿಹಾಸಕಾರರು ಬರೆದಿಡುವಂತ ಯೋಜನೆಗಳನ್ನು ತರುವುದು ನನ್ನ ಉದ್ದೇಶ’ ಎಂದು ಮಹತ್ವಾಕಾಂಕ್ಷೆಯನ್ನು ಬಿಚ್ಚಿಟ್ಟರು.

‘ಮಧ್ಯವರ್ತಿಗಳಿಗೆ ಕಡಿವಾಣ’

‘ಮಧ್ಯವರ್ತಿಗಳು ಮೈ–ಕೈ ನೋವಿಲ್ಲದೆ ಹಣ ಗಳಿಸುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಅಸಮಾಧಾನ ವ್ಯಕ್ತಪಡಿಸಿದರು.

‘ರಾಜ್ಯದ ರೈತರ ಬೆಳೆಯ ಒಟ್ಟು ಮೌಲ್ಯ ಅಂದಾಜು ₹ 24,000 ಕೋಟಿ ಇದೆ. ಆದರೆ ಗ್ರಾಹಕರು ಅದೇ ಬೆಳೆಯ ಉತ್ಪನ್ನಗಳನ್ನು ಖರೀಸುವ ಮೌಲ್ಯ ಅಂದಾಜು ₹ 54,000 ಕೋಟಿ ಇದೆ. ಈ ಪ್ರಕ್ರಿಯೆಯಲ್ಲಿ ಮಧ್ಯವರ್ತಿಗಳು ಸುಮಾರು ₹ 20,000 ಕೋಟಿಯಷ್ಟು ಲಾಭ ಮಾಡಿಕೊಳ್ಳುತ್ತಿದ್ದಾರೆ. ಬೆಳೆ ಉತ್ಪನ್ನಗಳು ರೈತರಿಂದ ನೇರವಾಗಿ ಗ್ರಾಹಕರಿಗೆ ತಲುಪಿಸುವ ಯೋಜನೆ ತರುವ ಚಿಂತನೆ ಇದೆ’ ಎಂದು ಮುಂದಾಲೋಚನೆ ತಿಳಿಸಿದರು.

*ಸರ್ಕಾರಕ್ಕೆ ಬೆಂಬಲ ಕೊಟ್ಟವರಿಗೆ, ಅವರದ್ದೇ ಅಜೆಂಡಾಗಳು ಇವೆ. ಅವೆಲ್ಲವನ್ನು ನಿಭಾಯಿಸುತ್ತ ಸಮ್ಮಿಶ್ರ ಸರ್ಕಾರ ನಡೆಸೋದು ತಂತಿಯ ಮೇಲಿನ ನಡಿಗೆ ಇದ್ದಂತೆ.

–ಎಚ್‌.ಡಿ.ಕುಮಾರಸ್ವಾಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT