ಶಿಕ್ಷಣದ ವ್ಯವಸ್ಥೆಯೊಳಗಿರಲಿ ಪೂರ್ವ ಪ್ರಾಥಮಿಕ

ಮಂಗಳವಾರ, ಜೂನ್ 25, 2019
22 °C
ರಾಷ್ಟ್ರೀಯ ನೀತಿಯಲ್ಲಿ ಶಿಕ್ಷಣದ ಆಮೂಲಾಗ್ರ ಬದಲಾವಣೆಗೆ ಸಲಹೆ– ಮಗು ಕೇಂದ್ರಿತ ಶಿಕ್ಷಣಕ್ಕೆ ಒತ್ತು

ಶಿಕ್ಷಣದ ವ್ಯವಸ್ಥೆಯೊಳಗಿರಲಿ ಪೂರ್ವ ಪ್ರಾಥಮಿಕ

Published:
Updated:

ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ ಕರಡು ದೇಶದ ಜನರ ಮುಂದಿದೆ. ಒಂದೂವರೆ ವರ್ಷಗಳ ಕಾಲ ಮಾಡಿದ ಸತತ ಅಧ್ಯಯನ, ಚರ್ಚೆ, ಸಭೆಗಳ ಫಲವಾಗಿ ಹೊಸ ಶಿಕ್ಷಣ ನೀತಿ ರೂಪುಗೊಂಡಿದೆ. ಹಲವು ಶಿಫಾರಸುಗಳನ್ನು ನೀಡಿದ್ದು, ಜಾರಿಗೆ ಬಂದರೆ ಶಿಕ್ಷಣ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆಗಳು ಉಂಟಾಗುವ ನಿರೀಕ್ಷೆ ಇದೆ.

ಸುಮಾರು 470 ಪುಟಗಳಷ್ಟು ವಿಸ್ತಾರವಾಗಿರುವ ಈ ನೀತಿಯ ಮೊದಲನೇ ಭಾಗದಲ್ಲಿ ಶಾಲಾ ಶಿಕ್ಷಣದ ಬಗ್ಗೆ ಹೇಳಲಾಗಿದೆ. ಪೂರ್ವ ಪ್ರಾಥಮಿಕ, ಸಾಕ್ಷರತೆ, ಅಂಕಿ ಸಂಖ್ಯೆ, ಶಾಲೆಯಿಂದ ಹೊರಗುಳಿಯುವಿಕೆ, ಶಾಲೆಯ ವ್ಯವಸ್ಥೆಯ ಬಗ್ಗೆ ತಿಳಿಸಲಾಗಿದೆ.  2ನೇ ಭಾಗದಲ್ಲಿ ಉನ್ನತ ಶಿಕ್ಷಣದ ಬಗ್ಗೆ, 3ನೇ ಭಾಗದಲ್ಲಿ ಶಿಕ್ಷಣದಲ್ಲಿ ತಂತ್ರಜ್ಞಾನ, ವೃತ್ತಿಪರ ಶಿಕ್ಷಣದಂತ ವಿಷಯಗಳ ಬಗ್ಗೆ ಹೇಳಲಾಗಿದೆ. ಕೊನೆಯ ಭಾಗದಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಹೇಗೆ ಆಮೂಲಾಗ್ರವಾಗಿ ಬದಲಾವಣೆ ಮಾಡಬೇಕು ಎಂಬುದನ್ನು ತಿಳಿಸಲಾಗಿದೆ. ಜತೆಗೆ ಎರಡು ಅಧ್ಯಾಯಗಳನ್ನು ಫೈನಾನ್ಸ್‌ ಮತ್ತು ವೇ ಫಾರ್ವರ್ಡ್‌ ಬಗೆಗೆ ವಿವರಿಸಲಾಗಿದೆ. ಡಾ. ಕಸ್ತೂರಿರಂಗನ್‌ ಅವರು ಪೀಠಿಕೆಯಲ್ಲಿ ಒಟ್ಟು ಶಿಕ್ಷಣ ವ್ಯವಸ್ಥೆಯ ದೂರದೃಷ್ಟಿಯನ್ನು ಕಟ್ಟಿಕೊಟ್ಟಿದ್ದಾರೆ.

ಪೂರ್ವ ಪ್ರಾಥಮಿಕ: ಶಾಲಾ ಶಿಕ್ಷಣದಲ್ಲಿ ಇಲ್ಲಿಯವರೆಗೆ ಪೂರ್ವ ಪ್ರಾಥಮಿಕ ಶಿಕ್ಷಣ ಭಾಗಿಯಾಗಿಯೇ ಇರಲಿಲ್ಲ. ಎಲ್ಲವೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ನಡೆಯುತ್ತಿದೆ. ಪೂರ್ವ ಪ್ರಾಥಮಿಕ ಎಂಬುದು ಶಿಕ್ಷಣದವ್ಯವಸ್ಥೆಯೊಳಗೆ ಬರಬೇಕು. 3 ವರ್ಷಗಳಿಂದ 6 ವರ್ಷವರೆಗೂ ಮಗುವಿನ ಪೂರ್ವ ಪ್ರಾಥಮಿಕ ಹಂತವಾಗಿರುತ್ತದೆ. ಪೂರ್ವ ಪ್ರಾಥಮಿಕ ಹಂತದಿಂದ 12ನೇ ತರಗತಿವರೆಗೂ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಜಾರಿಗೆ ಬರಬೇಕು ಎಂದು ನೀತಿಯಲ್ಲಿ ತಿಳಿಸಲಾಗಿದೆ.

ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಹೆಚ್ಚು ನಿಯಂತ್ರಣಗೊಳಿಸಬೇಕು. ನರ್ಸರಿ ಹೆಸರಲ್ಲಿ, ಎಲ್‌ಕೆಜಿ, ಯುಕೆಜಿ ಹೆಸರಲ್ಲಿ ಹಲವಾರು ರೀತಿಯ
ಬೆಳವಣಿಗೆಗಳಾಗಿವೆ. ಮಗುವಿನ ಆರಂಭವನ್ನೇ ಮಗುವಿನ ಮುಕ್ತಾಯದ ರೀತಿಯಲ್ಲಿ ನೋಡುವ ದೃಷ್ಟಿಕೋನ ಬೆಳೆದಿದೆ.

ಪೋಷಕರ ಸಂದರ್ಶನ ನಡೆಸಿ ಮಗುವನ್ನು ಶಾಲೆಗೆ ಸೇರಿಸುವ ಪರಿಪಾಠ ಅಪಾಯಕಾರಿ ಬೆಳವಣಿಗೆ. ಮಗುವಿನ ಮೆದುಳು 6 ವರ್ಷದ ವೇಳೆಗೆಶೇ 80ರಷ್ಟು ಪ್ರಗತಿಯಾಗಿರುತ್ತದೆ. ಯೋಚನೆ, ಯೋಜನೆ ಸರಿಯಾದ ರೀತಿ ಅನುಷ್ಠಾನ ಆಗುವಂತೆ ಮಾಡಬೇಕು. 5ನೇ ತರಗತಿ ಮತ್ತು ನಂತರ ಮೂಲಭೂತವಾದ ಸಾಕ್ಷರತೆ ಮತ್ತು ಅಂಕಿ ಅಂಶ ಎರಡೂ ಬಹಳ ಮುಖ್ಯ. ನ್ಯಾಷನಲ್ ಟ್ಯೂಟರ್ಸ್‌ ಪ್ರೋಗ್ರಾಂ ಸಹಿತ ಹಲವಾರು ಕಾರ್ಯಕ್ರಮಗಳನ್ನು ನಡೆಸುವ ಸಾಧ್ಯತೆಯನ್ನು ಮುಂದಿಡಲಾಗಿದೆ.

ರೆಮಿಡಿಯಲ್ ಇನ್‌ಸ್ಟ್ರಕ್ಷನ್‌ ಏಡ್ಸ್‌ ಪ್ರೋಗ್ರಾಂ (ಆರ್‌ಐಎಪಿ) ಅನ್ನು ಪ್ರಸ್ತಾಪಿಸಲಾಗಿದೆ. ನಮ್ಮ ಸುತ್ತಮುತ್ತಲಲ್ಲೇ ಸಿಗುವ ಸಂಪನ್ಮೂಲವನ್ನು (ನಿವೃತ್ತ ಶಿಕ್ಷಕರು, ಹಿರಿಯ ನಾಗರಿಕರು) ಶಾಲೆಗಳು ಬಳಸಬೇಕು. ಪ್ರಾಥಮಿಕ ಸಾಕ್ಷರತೆ, ಅಂಕಿ ಸಂಖ್ಯೆಯ 
ಬುನಾದಿ ಒದಗಿಸುವ ಬಗ್ಗೆ ಗಮನ ಕೊಡಬೇಕು. ಅಂಕಿಅಂಶಕ್ಕೂ ಗಣಿತಕ್ಕೂ ವ್ಯತ್ಯಾಸ ಇದೆ. ಇದನ್ನು ಪ್ರಾಥಮಿಕ ಹಂತದಲ್ಲೇ ಗಟ್ಟಿ ಮಾಡಬೇಕು ಎಂದು ತಿಳಿಸಲಾಗಿದೆ.

(ಮುಂದುವರಿಯುವುದು)

 ***

ಯಾಕಾಗಿ ರಾಷ್ಟ್ರೀಯ ಶಿಕ್ಷಣ ನೀತಿ..

ರಾಷ್ಟ್ರೀಯ ಶಿಕ್ಷಣ ನೀತಿಯ ಕರಡನ್ನು ಡಾ.ಕಸ್ತೂರಿರಂಗನ್‌ ನೇತೃತ್ವದ ಸಮಿತಿ ದೇಶದ ಜನತೆಯ ಮುಂದೆ ಇಟ್ಟಿದ್ದು, ಯಾಕಾಗಿ ಸಮಿತಿ ರಚನೆಯಾಯಿತು ಎಂದು ವಿವರಿಸಿದ್ದಾರೆ ಸಮಿತಿಯ ಸದಸ್ಯ ಹಾಗೂ ಶಿಕ್ಷಣ ತಜ್ಞ ಡಾ.ಎಂ.ಕೆ.ಶ್ರೀಧರ್‌.

ಭಾರತದ ಒಟ್ಟಾರೆ ಶಿಕ್ಷಣ ವ್ಯವಸ್ಥೆ ಬಹಳ ಬೃಹದಾಕಾರವಾದುದು. ಅದು ಗಾತ್ರದಲ್ಲಷ್ಟೇ ಅಲ್ಲ, ಅಲ್ಲಿ ಇರುವ ವಿದ್ಯಾರ್ಥಿಗಳು, ಶಿಕ್ಷಕರು, ಶಿಕ್ಷಣ ಸಂಸ್ಥೆಗಳ ಸಂಖ್ಯೆ, ಮಾಡುವ ಖರ್ಚಿನ ದೃಷ್ಟಿಯಿಂದಲೂ ಬಹಳ ದೊಡ್ಡದು. ನಮ್ಮಲ್ಲಿ ಶಿಕ್ಷಣ ವ್ಯವಸ್ಥೆ ಔಪಚಾರಿಕವಾಗಿ ನಿರ್ಮಾಣವಾಗಲು ಬ್ರಿಟಿಷರು ಕಾರಣ. ಬ್ರಿಟಿಷರು ಬರುವುದಕ್ಕೆ ಮೊದಲು ಭಾರತೀಯ ಸಮಾಜದಲ್ಲಿ ಶಿಕ್ಷಣ ವ್ಯವಸ್ಥೆ ಹೇಗಿತ್ತು ಎಂಬುದನ್ನು ಗಾಂಧೀವಾದಿ ಧರಂಪಾಲ್‌ ಅವರು ತಮ್ಮ ‘ಬ್ಯೂಟಿಪುಲ್‌ ಟ್ರೀ’ ಪುಸ್ತಕದಲ್ಲಿ ಉಲ್ಲೇಖ ಮಾಡಿದ್ದಾರೆ ಮತ್ತು ಸಾಕಷ್ಟು ಸಂಶೋಧನೆಯನ್ನೂ ಮಾಡಿದ್ದಾರೆ.

ಬ್ರಿಟಿಷರು ಬಂದ ನಂತರ ಔಪಚಾರಿಕ ವ್ಯವಸ್ಥೆ ನಿರ್ಮಾಣ ಮಾಡಿದರು. ಮೆಕಾಲೆ ಅವರು ಭಾರತೀಯ ನೈಜ ಶಿಕ್ಷಣವನ್ನು ಬದಲಾವಣೆ ಮಾಡಬೇಕು ಎಂಬ ನಿಟ್ಟಿನಲ್ಲಿ ಬರೆದ ಹಲವು ಪತ್ರಗಳನ್ನು ನಾವು ನೋಡಿದ್ದೇವೆ. ವಸಾಹತುಶಾಹಿ ಶಿಕ್ಷಣ ವ್ಯವಸ್ಥೆ ಆ ಮೂಲಕ ಇಲ್ಲಿ ಆರಂಭವಾಯಿತು. ಸ್ವಾತಂತ್ರ್ಯ ಬಂದು 72 ವರ್ಷಗಳ ಬಳಿಕವೂ ಅದು ಮುಂದುವರಿದಿದೆ. 

2015ರಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸುವತ್ತ ಸರ್ಕಾರ ಯೋಜನೆ ಆರಂಭಿಸಿತು. ಅಂದಿನ ಮಾನವ ಸಂಪನ್ಮೂಲ ಸಚಿವೆ ಸ್ಮತಿ ಇರಾನಿ ಇದಕ್ಕೆ ಚಾಲನೆ ನೀಡಿದರು. 2016ರವರೆಗೆ ಈ ಶಿಕ್ಷಣ ವ್ಯವಸ್ಥೆ ಹೇಗಿರಬೇಕು ಎಂಬ ದೊಡ್ಡ ಚರ್ಚೆ ನಡೆಯಿತು. ಅದನ್ನು ಮಾಡಲು ಶಾಲಾ ದೃಷ್ಟಿಯಿಂದ 13, ಉನ್ನತ ಶಿಕ್ಷಣ ದೃಷ್ಟಿಯಿಂದ 20 ಅಂಶಗಳನ್ನು ಪ್ರಶ್ನಾವಳಿ ರೂಪದಲ್ಲಿ ನೀಡಿದ್ದರು. ಎಲ್ಲ ಸಲಹೆಗಳನ್ನು ಕ್ರೋಡೀಕರಿಸಿ ವರದಿ ತಯಾರು ಮಾಡುವ ಹೊಣೆಯನ್ನು  ಟಿ.ಎಸ್‌.ಆರ್‌.ಸುಬ್ರಹ್ಮಣ್ಯಂ ನೇತೃತ್ವದ ಸಮಿತಿಗೆ ನೀಡಲಾಯಿತು. 2016ರಲ್ಲಿ ಅವರು ವರದಿ ತಯಾರಿಸಿದರು.

ಸರ್ಕಾರ ಆ ವರದಿ ಸ್ವೀಕರಿಸಿತ್ತು. ಅನುಷ್ಠಾನ ಆಗಲಿಲ್ಲ. ಮಾನವ ಸಂಪನ್ಮೂಲ ಇಲಾಖೆ ಆಂತರಿಕವಾಗಿ ಇನ್ನೊಂದು ಶಿಕ್ಷಣ ನೀತಿ ಕರಡನ್ನು ಸಿದ್ಧಪಡಿಸಿತು. ಬಳಿಕ ಸಚಿವರಾದ ಪ್ರಕಾಶ್ ಜಾವಡೇಕರ್‌ 2017ರ ಜೂನ್‌ 24ರಂದು ಈಗಿನ ಕಸ್ತೂರರಂಗನ್‌ ಸಮಿತಿ ರಚಿಸಿದರು. 2018ರ ಡಿಸೆಂಬರ್‌ 15ರವರೆಗೂ ಸಮಿತಿ ಹಲವಾರು ಸಭೆಗಳನ್ನು ನಡೆಸಿ, 70 ಸಂಸ್ಥೆಗಳು, 200ಕ್ಕಿಂತಲೂ ಅಧಿಕ ತಜ್ಞರು, ಭಾಗೀದಾರರ ಜತೆಗೆ ಸಮಾಲೋಚನೆ ನಡೆಸಿ ಮೇ 31ರಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್‌ ಪೊಕ್ರಿಯಾಲ್‌ ಅವರಿಗೆ ವರದಿ ಸಲ್ಲಿಸಿದೆ. ಇದು ಈಗ ಸಾರ್ವಜನಿಕರ ಮುಂದೆ ಇದ್ದು, ಸ್ವೀಕರಿಸುವುದು, ಬಿಡುವುದು ಸರ್ಕಾರಕ್ಕೆ ಬಿಟ್ಟ ವಿಚಾರ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !