ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಯಸ್ಸು ಆಧರಿಸಿದ ಬೋಧನೆಗೆ ಆದ್ಯತೆ

ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಉಲ್ಲೇಖ–ವಯಸ್ಸಿಗೆ ತಕ್ಕಂತೆ ಶಿಕ್ಷಣ ವ್ಯವಸ್ಥೆಗೆ ಸಲಹೆ
Last Updated 7 ಜೂನ್ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ಮಗುವಿನ ಪಾಲಿಗೆ ಮೊದಲ 15 ವರ್ಷಗಳ ಶಾಲಾ ಜೀವನ ಬಹಳ ಮಹತ್ವವಾದುದು. ಮಗುವಿನ ಬೆಳವಣಿಗೆಯ ನಾಲ್ಕು ಹಂತಗಳನ್ನು ಗಮನಿಸಿ 5+3+3+4 ಹಂತದ ಬೋಧನಾ ಕ್ರಮವನ್ನುರೂಪಿಸಬೇಕು ಎಂದು ರಾಷ್ಟ್ರೀಯ ಶಿಕ್ಷಣ ನೀತಿ ಸಲಹೆ ನೀಡಿದೆ.

ಮಗು ಜೀವನದ ಪಯಣದಲ್ಲಿ ಹಲವು ಹಂತಗಳನ್ನು ದಾಟಿ ಬರುತ್ತದೆ. ಅದು ಹಲವು ಸಾಮಾಜಿಕ, ಮಾನಸಿಕ ಬದಲಾವಣೆಗಳಿಗೆ ಒಳಗಾಗುತ್ತದೆ. ಅದನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಏನು ಕಲಿಸಬೇಕು, ಹೇಗೆ ಕಲಿಸಬೇಕು, ಯಾವುದಕ್ಕೋಸ್ಕರ ಕಲಿಸಬೇಕು ಎಂಬುದನ್ನು ಗಮನದಲ್ಲಿ ಇಡಬೇಕು ಎಂದು ವಿವರಿಸಲಾಗಿದೆ.

1ರಿಂದ 12ನೇ ತರಗತಿವರೆಗೆ 12 ವರ್ಷವಾಗುತ್ತದೆ. ಪೂರ್ವ ಪ್ರಾಥಮಿಕ 3 ವರ್ಷ ಸೇರಿದಾಗ ಒಟ್ಟು 15 ವರ್ಷವಾಗುತ್ತದೆ.ಮೊದಲ 5 ವರ್ಷದ ಮಕ್ಕಳ ‘ಫೌಂಡೇಶನಲ್‌ ಸ್ಟೇಜ್‌’ ಎಂದು ಕರೆಯಬೇಕು. ಅದು 3ರಿಂದ 8 ವರ್ಷದ ವರೆಗೆ ಇರುತ್ತದೆ. ಅಂದರೆ ಪೂರ್ವ ಪ್ರಾಥಮಿಕದಿಂದ 2ನೇ ತರಗತಿವರೆಗೆ ಈ ಹಂತ. ಈ ಹಂತದಲ್ಲಿ ಮಗುವಿನ ಮೆದುಳಿನ ಬೆಳವಣಿಗೆ ಬೆಳವಣಿಗೆ ರಾಕೆಟ್‌ ರೀತಿಯಲ್ಲಿ ಆಗಿರುತ್ತದೆ. ಈ ಹಂತದಲ್ಲಿ ಆಟ ಆಡಿಸಬೇಕು, ಮಗು ಎಲ್ಲವನ್ನೂ ಕಂಡು ಹಿಡಿಯುವ ರೀತಿಯಲ್ಲಿ ಪ್ರಯತ್ನಗಳನ್ನು ನಡೆಸಬೇಕು. ಒತ್ತಡದ ಕಲಿಕೆಯನ್ನು ಮಾಡಿಸಲೇಬಾರದು. ಮಗು ಸಹಜವಾದ ವಾತಾವರಣದಲ್ಲಿ ತಾನು ಏನೇನು ಮಾಡುತ್ತದೋ ಅದೇ ರೀತಿಯ ವಾತಾವರಣದಲ್ಲಿ ಅದನ್ನು ಬೆಳೆಸುತ್ತ ಬರಬೇಕು ಎಂದು ವಿವರಿಸಲಾಗಿದೆ.

ತಯಾರಿಯ ಹಂತ: 3ನೇ ತರಗತಿಯಿಂದ 5ನೇ ತರಗತಿಯವರೆಗೆ (8ರಿಂದ 10ನೇ ವರ್ಷದವರೆಗೆ) ತಯಾರಿಯ ಹಂತ ಎಂದು ಪರಿಗಣಿಸಬೇಕು. ಇಲ್ಲಿ ಆಟ ಮುಂದುವರಿಸುತ್ತ ವ್ಯವಸ್ಥಿತವಾದ ಕಲಿಕೆಗೆ ಬೇಕಾದ ತಯಾರಿ ಆರಂಭಿಸಬೇಕು ಎಂದು ಸಲಹೆ ನೀಡಲಾಗಿದೆ.

3ನೇ ಹಂತ 6ರಿಂದ 8ನೇ ತರಗತಿವರೆಗಿನದು (11ರಿಂದ 14 ವರ್ಷ). ಇಲ್ಲಿ ವ್ಯವಸ್ಥಿತವಾದ ಕಲಿಕೆಯನ್ನು ಆರಂಭಿಸಬೇಕು. ಯಾವ ಅರ್ಥ ಏನು, ಹೇಗೆ ಎನ್ನುವ ಬಗ್ಗೆ ಮಗುವಿಗೆ ಮನದಟ್ಟು ಮಾಡುವಂತಿರಬೇಕು.

ಕೊನೆಯ ಹಂತವೇ ಮಾಧ್ಯಮಿಕ ಶಿಕ್ಷಣ ಹಂತ.14ರಿಂದ 18 ವರ್ಷದೊಳಗಿನ ಅವಧಿ ಇದು. ಮಕ್ಕಳು ಆಗ9ರಿಂದ 12 ತರಗತಿಯಲ್ಲಿ ಇರುತ್ತಾರೆ. ಇಲ್ಲಿ ಎರಡು ಅಂಶಗಳನ್ನು ಗಮನಿಸಬೇಕು. ತನ್ನ ಕಾಲ ಮೇಲೆ ತಾನು ನಿಂತು ಏನಾದರೂ ಸಂಪಾದನೆ ಮಾಡುವ ತಯಾರಿಯನ್ನು ಈ ಹಂತದಲ್ಲಿ ಮಾಡಬೇಕು. 18 ವರ್ಷ ಆಗುವ ಹೊತ್ತಿಗೆ ಮಗು ಪ್ರಬುದ್ಧ (ಮೇಜರ್‌) ಆಗಿರುತ್ತದೆ.ಮೇಜರ್ ಆಗುವುದಕ್ಕೆ ಇರುವ ಪ್ರಯಾಣಕ್ಕೆ ಸರಿಯಾದ ತಯಾರಿ ಮಾಡಿರಬೇಕು ಎಂದು ನೀತಿಯಲ್ಲಿ ತಿಳಿಸಲಾಗಿದೆ.

(ಮುಂದುವರಿಯುವುದು)

ವೃತ್ತಿಪರ ಶಿಕ್ಷಣ

ಬಾಲಕ/ ಬಾಲಕಿ 10ನೇ ತರಗತಿಗೆ ಬಂದಾಗಲೇ ವೃತ್ತಿಪರ ಶಿಕ್ಷಣದ ಪ್ರವೇಶ ಮಾಡಿರಬೇಕು. 11 ಮತ್ತು 12ನೇ ತರಗತಿಯಲ್ಲಿ ಅದಕ್ಕೆ ಅವಕಾಶ ಕಲ್ಪಿಸಬೇಕು.ಯಾವ ಹಂತದಲ್ಲಿ, ಹೇಗೆ ಶಿಕ್ಷಣಕೊಡಬೇಕೆಂಬ ಸ್ಪಷ್ಟತೆ ಇಲ್ಲದೆ ಹೋದರೆ ಏನೇನೋ ಪ್ರಯತ್ನ ಮಾಡಲಾಗುತ್ತದೆ. ಸರಿಯಾದ ಹಂತದಲ್ಲಿ ಯಾವುದು ಬೇಕೋ, ಅದನ್ನು ಕಲಿಸಬೇಕು ಎಂದು ನೀತಿಯಲ್ಲಿ ತಿಳಿಸಲಾಗಿದೆ.

***

ವೃತ್ತಿಪರ ಶಿಕ್ಷಣ ಶಾಲಾ ಶಿಕ್ಷಣಕ್ಕೆ ಹೊರಗಿನದು ಅಲ್ಲ. ಎರಡೂ ಒಂದೇ. ಯಾವ ಮಗುವಿಗೆ ಎಂತಹ ಆಸಕ್ತಿ ಇದೆಯೋ ಅಲ್ಲಿಗೆ ಹೋಗುವ ಅವಕಾಶ ಒದಗಿಸಬೇಕು.
ಡಾ.ಎಂ.ಕೆ.ಶ್ರೀಧರ್‌,ರಾಷ್ಟ್ರೀಯ ಶಿಕ್ಷಣ ನೀತಿ ರಚನಾ ಸಮಿತಿಯ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT