ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಶಿಕ್ಷಣ ನೀತಿ – ಮಗುವಿಗೆ ಬೇಕು ಬಹು ಭಾಷೆಯ ಜ್ಞಾನ

ಪ್ರಾಥಮಿಕ, ಮಾಧ್ಯಮಿಕ ಶಾಲೆಗಳ ನಿಯಂತ್ರಣಕ್ಕೆ ಚತುಷ್ಕೋನ ಸೂತ್ರ
Last Updated 8 ಜೂನ್ 2019, 19:59 IST
ಅಕ್ಷರ ಗಾತ್ರ

ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ ತ್ರಿಭಾಷಾ ಸೂತ್ರವನ್ನು ಬಲವಾಗಿ ಪ್ರತಿಪಾದಿಸಿದೆ. ಮಗುವಿಗೆ 3ನೇ ವಯಸ್ಸಿನಿಂದಲೇ ಭಾಷೆಯನ್ನು ಕಲಿಸಬೇಕು,ಅತಿ ಹೆಚ್ಚು ಭಾಷೆಯ ಜ್ಞಾನ ಮಗುವಿಗೆ ಸಿಗುವಂತಾಗಬೇಕು ಎಂದು ತಿಳಿಸಿದೆ.

ಮಗುವಿಗೆ ಬಹುಭಾಷೆ ಕಲಿಯುವ ಶಕ್ತಿ ಇರುತ್ತದೆ. ಭಾಷೆ ಕಲಿಸುವುದು ಎಂದರೆ ಕೇವಲ ಬರವಣಿಗೆ ಅಲ್ಲ. ಓದುವುದು, ಮಾತನಾಡುವುದೂ ಭಾಷೆ. ಮಾತೃಭಾಷೆಯಲ್ಲಿ ಶಿಕ್ಷಣ ಕೊಡಬೇಕು. ಭಾರತದ ಬೇರೆ ಬೇರೆ ಭಾಷೆಗಳನ್ನು ಕಲಿಯುವ ವಾತಾವರಣ ನಿರ್ಮಿಸಬೇಕು.ತ್ರಿಭಾಷಾ ಸೂತ್ರವೇ ಇದಕ್ಕೆ ಪರಿಹಾರ ಎಂಬುದನ್ನು ನೀತಿಯಲ್ಲಿ ತಿಳಿಸಲಾಗಿದೆ.

ಮಾತೃಭಾಷೆ, ಸ್ಥಾನಿಕ ಭಾಷೆ, ಪ್ರಾದೇಶಿಕ ಭಾಷೆ, ಅಂತರರಾಷ್ಟ್ರೀಯ ಭಾಷೆ... ಹೀಗೆ ಬೇರೆ ಬೇರೆ ಹಂತ ಇದೆ. ಆದರೆ ರಾಷ್ಟ್ರೀಯ ಭಾಷೆಗೆ ಮಾತ್ರ ಒತ್ತು ನೀಡಬೇಕು ಎಂದು ಸಮಿತಿ ಹೇಳಿಲ್ಲ.

ಪಠ್ಯ–ಪಠ್ಯೇತರ ಭೇದ ಸಲ್ಲ: ‘ಇಂದು ಪಠ್ಯ, ಸಹಪಠ್ಯ ಮತ್ತು ಪಠ್ಯೇತರ ಎಂದು ವಿಭಜಿಸಿ ಅದನ್ನು ಅನುಸರಿಸುತ್ತಿದ್ದೇವೆ. ಆದರೆ, ಇಂತಹ ಯಾವುದೇ ವ್ಯತ್ಯಾಸ ಮಾಡಬಾರದು’ ಎಂದು ನೀತಿಯಲ್ಲಿ ತಿಳಿಸಲಾಗಿದೆ.

ಎಲ್ಲವೂ ಪಠ್ಯವೇ (ಕರಿಕುಲಮ್‌) ಆದಾಗ ಎಲ್ಲವನ್ನೂ ಸಮಾನವಾಗಿ ನೋಡುವುದು ಸಾಧ್ಯವಾಗುತ್ತದೆ ಎಂಬುದು ಸಮಿತಿಯ ಅಭಿಪ್ರಾಯ.

ಇದೇ ಹಾದಿಯಲ್ಲಿ ಸಾಗುವಾಗ ಶೈಕ್ಷಣಿಕ ಮತ್ತು ವೃತ್ತಿಪರ ಎಂದು ವ್ಯತ್ಯಾಸ ಮಾಡುವುದೂ ಸಲ್ಲ.ಎಲ್ಲವನ್ನೂ ಒಟ್ಟು
ಗೂಡಿಸುವ ವಿಚಾರ ಆಗಬೇಕು. ಮಕ್ಕಳಿಗೆ ಆಯ್ಕೆ ಮಾಡುವ ಅವಕಾಶ ಕೊಡಬೇಕು ಎಂದು ಸಹ ತಿಳಿಸಲಾಗಿದೆ.

ಪಠ್ಯಕ್ರಮ: ಶಾಲಾ ಹಂತದಲ್ಲಿನ ಪಠ್ಯಕ್ರಮದಲ್ಲಿ ಭಾಷೆಯ ಜ್ಞಾನ, ವೈಜ್ಞಾನಿಕ ಮನೋಭಾವ ಬೆಳೆಸುವುದು ಬಹಳ ಮುಖ್ಯ. ಕಲಾತ್ಮಕವಾದ ದೃಷ್ಟಿಕೋನ ಬೆಳೆಸಬೇಕು. ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ತಿಳಿಸುವ ಪ್ರಯತ್ನ ಮಾಡಬೇಕು. ನೈತಿಕ ಮೌಲ್ಯಗಳು, ಡಿಜಿಟಲ್‌ ಸಾಕ್ಷರತೆ ಅಗತ್ಯ.ಸಮಾಜದಲ್ಲಿ ಇಂದು ನಡೆಯುವ ವಿದ್ಯಮಾನಗಳು, ಭಾರತದ ಜ್ಞಾನ ಪರಂಪರೆ ವಿಷಯಗಳೂ ಪಠ್ಯಕ್ರಮದಲ್ಲಿ ಇರಬೇಕು ಎಂದು ತಿಳಿಸಲಾಗಿದೆ.

ಶಾಲೆಗಳ ನಿಯಂತ್ರಣ:ಶಾಲೆ ನಿಯಂತ್ರಣ ವ್ಯವಸ್ಥೆ ಬೇರೆ, ಶಾಲೆ ನಡೆಸುವುದು ಬೇರೆ, ಶೈಕ್ಷಣಿಕ ಅಂಶ ಗಮನಿಸುವುದು ಬೇರೆ, ಪರೀಕ್ಷೆಗಳನ್ನು ನಡೆಸುವ ವ್ಯವಸ್ಥೆ ಬೇರೆ.... ಇದರಿಂದ ಶಾಲೆಯ ಕೆಲಸದ ಬಗ್ಗೆ ಆಳವಾಗಿ ಅಧ್ಯಯನ ನಡೆಸಿ ಮುನ್ನಡೆಯುವುದು ಸಾಧ್ಯವಾಗುತ್ತದೆ.

ಇದಕ್ಕಾಗಿ ಎಲ್ಲ ಶಾಲೆಗಳ ನಿಯಂತ್ರಣಕ್ಕೆ ರಾಜ್ಯ ಮಟ್ಟದಲ್ಲಿ ರಾಜ್ಯ ಶಾಲಾ ನಿಯಂತ್ರಣ ಪ್ರಾಧಿಕಾರ ರಚನೆಯಾಗಬೇಕು. ಎಲ್ಲ ಶಾಲೆಗಳ ಆರಂಭ, ಗುಣಮಟ್ಟದ ಮೇಲೆ ನಿಗಾವಹಿಸುವುದು ಇದರ ಕೆಲಸ. ಸರ್ಕಾರಿ ಶಾಲೆಗಳನ್ನು ಗಮನಿಸಲು ಶಾಲಾ ಶಿಕ್ಷಣ ನಿರ್ದೇಶನಾಲಯ ಸ್ಥಾಪಿಸಬೇಕು. ಶಾಲೆಗಳನ್ನು ನಡೆಸುವುದು ಇದರ ಕೆಲಸ. ಎಸ್‌ಸಿಇಆರ್‌ಟಿ ನಂತಹ ಸಂಸ್ಥೆಗಳು ಪಠ್ಯಕ್ರಮ, ಪಠ್ಯಪುಸ್ತಕ, ಅಧ್ಯಾಪಕರ ತರಬೇತಿ ಮೊದಲಾದ ಕೆಲಸವನ್ನು ಮಾಡಬೇಕು.ಪರೀಕ್ಷಾ ಮಂಡಳಿ ಪರೀಕ್ಷೆ ನಡೆಸಬೇಕು ಎಂದು ನೀತಿಯಲ್ಲಿ ವಿವರಿಸಲಾಗಿದೆ.

ಶಾಲಾ ಸಂಕೀರ್ಣ ರಚನೆ

ಇಂದು ಸಾಕಷ್ಟು ಶಾಲೆಗಳಿವೆ. ಆದರೆ ಈ ಶಾಲೆಗಳಲ್ಲಿ ಶೈಕ್ಷಣಿಕ ವಾತಾವರಣ ಇಲ್ಲ. ಮೂರು ತರಗತಿ, ಒಬ್ಬರು ಮೇಷ್ಟ್ರು ಅಲ್ಲಿರುತ್ತಾರೆ. ಅಲ್ಲಿ ಬೇರೆಸೌಲಭ್ಯ ಇಲ್ಲ. ಇದರ ಸುಧಾರಣೆಗೆ ಸುಮಾರು 30 ಶಾಲೆಗಳನ್ನು ಒಳಗೊಂಡ ಶಾಲಾ ಸಂಕೀರ್ಣ (ಸ್ಕೂಲ್‌ ಕಾಂಪ್ಲೆಕ್ಸ್‌) ರಚನೆಯ ಸಲಹೆ ನೀಡಲಾಗಿದೆ. ಇದು ಕ್ಲಸ್ಟರ್ ರೀತಿಯದು. ಶೈಕ್ಷಣಿಕವಾಗಿಗಮನಿಸುವ ರೀತಿಯ ಸಂಕೀರ್ಣ ಅದಾಗಿರಬೇಕು. ಆಡಳಿತ ಮತ್ತು ಶೈಕ್ಷಣಿಕ ಒಂದೇ ವ್ಯಾಪ್ತಿಯಲ್ಲಿ ಇರುತ್ತದೆ.

ಈ ಪದ್ಧತಿಯಲ್ಲಿ ಪ್ರೌಢಶಾಲೆಪ್ರಾಂಶುಪಾಲರು ಈ ಕಾಂಪ್ಲೆಕ್ಸ್‌ನ ಮುಖ್ಯಸ್ಥರಾಗಿರುತ್ತಾರೆ. ಅವರು ಎಲ್ಲ ಶಾಲೆಗಳ ಶಿಕ್ಷಕರನ್ನು ಬಳಸಿಕೊಂಡು ಒಟ್ಟು ಶಾಲೆಗಳಿಗೆ ಬೇಕಾದ ಶಿಕ್ಷಣ ವ್ಯವಸ್ಥೆ ನಡೆಸುತ್ತಾರೆ. ಗ್ರಂಥಾಲಯ, ಪ್ರಯೋಗಾಲಯ, ಸಂಗೀತ ಶಿಕ್ಷಕರು, ಯೋಗ ಹೀಗೆ ವಿವಿಧ ವಿಷಯಗಳನ್ನು ಒಂದೇ ಸಂಕೀರ್ಣದಲ್ಲಿ ಒದಗಿಸುವ ವ್ಯವಸ್ಥೆಯೊಳಗೆ ಬರಬೇಕು. ಆಗ ಪ್ರತಿಯೊಂದು ಮಗುವಿಗೂ ಉತ್ತಮ, ಪ್ರತಿಯೊಂದು ಶಾಲೆಗೂ ಉತ್ತಮ ಶಾಲೆಯವಾತಾವರಣ ಸಿಗುತ್ತದೆ. ಇದು ಸರ್ಕಾರಿ ಶಾಲೆಗಳಿಗೆ ಮಾತ್ರ ಅನ್ವಯ ಎಂದು ನೀತಿಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT