ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲೇಜು ಸಂಖ್ಯೆ 15 ಸಾವಿರಕ್ಕೆ ಮಿತಿಗೊಳಿಸಿ

ವಿಶ್ವವಿದ್ಯಾಲಯಗಳ ಗಾತ್ರ ಹಿಗ್ಗಲಿ– ರಾಷ್ಟ್ರೀಯ ಶಿಕ್ಷಣ ನೀತಿ ಸಲಹೆ
Last Updated 10 ಜೂನ್ 2019, 1:34 IST
ಅಕ್ಷರ ಗಾತ್ರ

ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಕೆಲವೊಂದು ಕ್ರಾಂತಿಕಾರಕ ಬದಲಾವಣೆಗಳಿಗೆ ಕಾರಣವಾದ ಅಂಶಗಳನ್ನು ಉಲ್ಲೇಖಿಸಲಾಗಿದ್ದು, ಕಾಲೇಜುಗಳ ಸಂಖ್ಯೆಯನ್ನು 15 ಸಾವಿರಕ್ಕೆ ಕುಗ್ಗಿಸುವುದು ಇದರಲ್ಲಿ ಪ್ರಮುಖವಾದುದು.

ದೇಶದಲ್ಲಿ ಇದೀಗ 800 ವಿಶ್ವವಿದ್ಯಾಲಯಗಳಿವೆ.41 ಸಾವಿರ ಕಾಲೇಜುಗಳಿವೆ. ಕಾಲೇಜುಗಳಲ್ಲಿ ಎಲ್ಲ ರೀತಿಯ ವಿಷಯಗಳನ್ನೂ ಬೋಧಿಸುವಂತಹ ವ್ಯವಸ್ಥೆ ಜಾರಿಗೆ ಬರಬೇಕು. ಅದಕ್ಕಾಗಿ ವಿಶ್ವವಿದ್ಯಾಲಯಗಳ ಗಾತ್ರ ಹಿಗ್ಗಿಸಬೇಕು. ಇದರಿಂದ ಎಲ್ಲ ವಿಷಯಗಳ ಕಲಿಕೆಗೂ ಅವಕಾಶ ಸಿಗುತ್ತದೆ ಎಂದು ನೀತಿಯಲ್ಲಿ ತಿಳಿಸಲಾಗಿದೆ.

ಉನ್ನತ ಶಿಕ್ಷಣ ಸಂಸ್ಥೆಗಳನ್ನುಸಂಶೋಧನಾ ವಿಶ್ಯವಿದ್ಯಾಲಯಗಳು, ಬೋಧನಾ ವಿಶ್ವವಿದ್ಯಾಲಯಗಳು‌ ಹಾಗೂಪದವಿ ನೀಡುವ ಸ್ವಾಯತ್ತ ಕಾಲೇಜುಗಳು ಎಂದು ಮೂರುಬಗೆಯಲ್ಲಿ ವಿಂಗಡಿಸಬೇಕು.

ಸಂಶೋಧನೆಗಳಿಗೆ ಒತ್ತು ಕೊಡುವುದು ಸಂಶೋಧನಾ ವಿಶ್ವವಿದ್ಯಾಲಯಗಳ ಪ್ರಮುಖ ಅಂಶ. ಅಲ್ಲಿ ಇತರ ಸಾಂಪ್ರದಾಯಿಕ ಶಿಕ್ಷಣವೂ ಇರುತ್ತದೆ. ಬೋಧಕ ವರ್ಗವನ್ನು ಸೃಷ್ಟಿಸುವುದು ಬೋಧಕ ವಿಶ್ವವಿದ್ಯಾಲಯಗಳ ಪ್ರಮುಖ ಅಂಶ. ಅಲ್ಲೂ ಇತರ ಶಿಕ್ಷಣದ ವ್ಯವಸ್ಥೆ ಇರುತ್ತದೆ.

ಕಾಲೇಜುಗಳು ತಮ್ಮ ಪದವಿಯನ್ನು ತಾವೇ ನೀಡುವಂತಾಗಬೇಕು. ಇದುವೇ ಸ್ವಾಯತ್ತ ಕಾಲೇಜುಗಳ ಚಿಂತನೆ. ಇದರಿಂದ ನಮ್ಮ ಶಿಕ್ಷಣ ಸಂಸ್ಥೆಗಳು ಕ್ರಮೇಣ ವಿಶ್ವದರ್ಜೆಗೆ ಏರುವುದು ಸಾಧ್ಯವಾಗುತ್ತದೆ. ಈಗಿನ ಸಾಂಪ್ರದಾಯಿಕ ವಿಶ್ವವಿದ್ಯಾಲಯ, ಕೇಂದ್ರೀಯ ವಿಶ್ವವಿದ್ಯಾಲಯ, ಡೀಮ್ಡ್, ಖಾಸಗಿ ವಿಶ್ವವಿದ್ಯಾಲಯಗಳ ಪರಿಕಲ್ಪನೆ ಮುಂದೆ ಇಲ್ಲವಾಗುತ್ತದೆ. ಕಾಲೇಜುಗಳು ವಿಶ್ವವಿದ್ಯಾಲಯಕ್ಕೆ ಒಳಪಡುವ ಪ್ರಮೇಯವೂ ತಪ್ಪುತ್ತದೆ. ಇದೆಲ್ಲ ಹಂತ ಹಂತವಾಗಿ ನಡೆಯುವ ಪ್ರಕ್ರಿಯೆ ಎಂದು ತಿಳಿಸಲಾಗಿದೆ.

4 ವರ್ಷದ ಪದವಿ– ಬಿಇಡಿ:ಪದವಿ, ಬಿಇಡಿ ಕೋರ್ಸ್‌ಗಳನ್ನು ಈಗಿನ 3 ವರ್ಷದ ಬದಲಿಗೆ ನಾಲ್ಕು ವರ್ಷಕ್ಕೆ ವಿಸ್ತರಿಸುವುದು ಶಿಕ್ಷಣ ನೀತಿಯ ಇನ್ನೊಂದು ಪ್ರಮುಖ ಶಿಫಾರಸು.

ಪದವಿ ಶಿಕ್ಷಣ ಎಂಬುದು ಸಂಪೂರ್ಣವಾದ, ಸಮಗ್ರವಾದ ಅಂಶಗಳಿಂದ ಕೂಡಿದ್ದರೆಹೆಚ್ಚಿದ ಸಂಖ್ಯೆಯಲ್ಲಿ ವಿದ್ಯಾರ್ಥಿಗಳುಬೇರೆ ಬೇರೆ ಕ್ಷೇತ್ರಗಳಿಗೆ ಹೋಗುವುದು ಸಾಧ್ಯವಾಗುತ್ತದೆ. ಇದುವೇ ಟರ್ಮಿನಲ್‌ ಕೋರ್ಸ್‌ ಎನಿಸಿಕೊಳ್ಳುತ್ತದೆ ಎಂದು ನೀತಿಯಲ್ಲಿ ವಿವರಿಸಲಾಗಿದೆ.

ಪದವಿ ಶಿಕ್ಷಣದಲ್ಲಿ ಮೊದಲ ವರ್ಷ ಪೂರೈಸಿದವರಿಗೆ ಸರ್ಟಿಫಿಕೇಟ್‌, 2ನೇ ವರ್ಷ ಪೂರೈಸಿದವರಿಗೆ ಡಿಪ್ಲೊಮಾ, 3ನೇ ವರ್ಷ ಪೂರೈಸಿದವರಿಗೆ ಪದವಿ ಹಾಗೂ 4ನೇ ವರ್ಷ ಪೂರೈಸಿದವರಿಗೆ ಬೇಕಾದ ರೀತಿಯಲ್ಲಿ ಸೂಕ್ತ ಹೆಸರಿಟ್ಟು ಪ್ರಮಾಣಪತ್ರ ಕೊಡಬಹುದು. ಇಂದು 3 ವರ್ಷ ಓದಿದರೂ, ಒಂದು ವಿಷಯದಲ್ಲಿ ಫೇಲಾದರೆ ಅವರ ಸ್ಥಾನಮಾನ ಪಿಯುಸಿ ಮಟ್ಟದಲ್ಲೇ ಇರುತ್ತದೆ. ಆದರೆ ಹೊಸ ಪರಿಕಲ್ಪನೆಯಿಂದ ಅವರು ಓದಿದ್ದಕ್ಕೆ ತಕ್ಕಂತ ಪ್ರಮಾಣಪತ್ರ ಸಿಕ್ಕಿರುತ್ತದೆ.

ಬಹು ವಿಧದಲ್ಲಿ ಪದವಿಗೆ ಪ್ರವೇಶ ಮತ್ತು ಕೋರ್ಸ್‌ ಬಿಟ್ಟು ಹೋಗುವ (ಮಲ್ಟಿಪಲ್‌ ಎಂಟ್ರಿ ಆಂಡ್‌ ಎಕ್ಸಿಟ್‌) ವ್ಯವಸ್ಥೆ ಜಾರಿಗೆ ಬರಬೇಕು. ಅಂದರೆ ಪದವಿಯ ಯಾವುದೇ ವರ್ಷಕ್ಕೂ ಪ್ರವೇಶ ಪಡೆಯುವುದಕ್ಕೆ ಅವಕಾಶ ನೀಡಬೇಕು. ಆರಂಭದಲ್ಲಿ ಜಿಲ್ಲೆಯಲ್ಲಿ ಒಂದು ಕಾಲೇಜಿನಲ್ಲಿ ಇಂತಹ ಪ್ರಯೋಗ ಆರಂಭಿಸಿ ಬಳಿಕ ವಿಸ್ತರಿಸಬಹುದು. ಇದಕ್ಕೆ ‘ಬ್ಯಾಚುಲರ್‌ ಆಫ್‌ ಲಿಬರಲ್‌ ಆರ್ಟ್ಸ್‌ ಸ್ಟಡೀಸ್‌’ ಎಂಬ ಹೆಸರು ಇಡಬಹುದು ಎಂದು ಸಲಹೆ ನೀಡಲಾಗಿದೆ. ಪದವಿ ಶಿಕ್ಷಣ ಈಗಿನ ವಿಷಯವಾರು ಹಂಚಿಕೆ ರೀತಿಯಲ್ಲಿ ಇರಬಾರದು. 18 ವಯಸ್ಸಿನ ವಿದ್ಯಾರ್ಥಿಗೆತನ್ನ ಬುದ್ಧಿವಂತಿಕೆ ಮತ್ತು ತಾನು ಯೋಚನೆ ಮಾಡುವ ರೀತಿಯಲ್ಲಿ ವಿಷಯವಾರು ಇರುವುದಿಲ್ಲ. ಒಬ್ಬ ವಿದ್ಯಾರ್ಥಿಗೆಗಣಿತದಲ್ಲಿ ಆಸಕ್ತಿ ಇದೆ ಎಂದಾದರೆ ಅದಕ್ಕಾಗಿ ಆತ ವಿಜ್ಞಾನ ಓದಬೇಕು ಎಂದು ಹೇಳುವುದು ಸರಿಯಲ್ಲ. ನಳಂದಾ, ತಕ್ಷಶಿಲಾ ವಿಶ್ವವಿದ್ಯಾಲಯಗಳಲ್ಲಿ ಇದ್ದುದು ಇಂತ ಪರಿಕಲ್ಪನೆ. ಜೀವನಕ್ಕೆ ಬೇಕಾದಂತಹ ದೃಷ್ಟಿಕೋನ, ಕೌಶಲ ಬೆಳೆಸುವುದು ಪದವಿ ಶಿಕ್ಷಣದಿಂದ ಆಗಬೇಕು. ಹೀಗಾಗಿ ಅದಕ್ಕೆ ‘ಲಿಬರಲ್‌ ಆರ್ಟ್‌ ಸೈನ್ಸ್ ಎಜುಕೇಷನ್’ ಎಂದು ಕರೆಯಲಾಗಿದೆ. ಪದವಿಯನ್ನುವಿಷಯವಾರು ಮಾಡುವುದರ ಬದಲು ಎಲ್ಲಾ ಅಂಶಗಳೂ ಒಳಪಟ್ಟ, ವಿದ್ಯಾರ್ಥಿಗಳಿಗೆ ಆಯ್ಕೆ ಮಾಡಲು ಅವಕಾಶ ಇರಬೇಕು ಎಂದು ಶಿಫಾರಸು ಮಾಡಲಾಗಿದೆ.

ಬಿಇಡಿ ಕೋರ್ಸ್ ಸಹ ಪದವಿಯ ಒಂದು ಭಾಗ. ಪದವಿ ಮಾಡುತ್ತಲೇ ಬಿಇಡಿಯನ್ನು ಸಹ ಪೂರೈಸುವುದು 4 ವರ್ಷದ ಕೋರ್ಸ್‌ನಿಂದ ಸಾಧ್ಯ ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT