ಶನಿವಾರ, ಆಗಸ್ಟ್ 24, 2019
27 °C

ಕಾರವಾರ: ರಾಷ್ಟ್ರೀಯ ಹೆದ್ದಾರಿ ಜಲಾವೃತ

Published:
Updated:
Prajavani

ಬೆಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಮಳೆ ಬಿರುಸಾಗಿದೆ. ಆದರೆ ಮಲೆನಾಡು ಜಿಲ್ಲೆಗಳಲ್ಲಿ ಮುಂಗಾರು ಅಬ್ಬರ ಕಡಿಮೆ ಆಗಿದೆ.

ಉತ್ತರ ಕನ್ನಡ ಜಿಲ್ಲೆಯ ವಿವಿಧೆಡೆ ಆಗಾಗ ಜೋರು ಮಳೆ ಮುಂದುವರಿದಿದೆ. ಕಾರವಾರ ಮತ್ತು ಸುತ್ತಮುತ್ತ ಬುಧವಾರ ರಾತ್ರಿಯಿಂದಲೇ ಜಿಟಿಜಿಟಿ ಮಳೆಯಾಗುತ್ತಿತ್ತು. ಗುರುವಾರ ಬೆಳಗಿನ ಜಾವ ಭಾರಿ ಮಳೆಯಾಗಿದ್ದು, ನಗರದ ಹಲವು ಬಡಾವಣೆಗಳು ಜಲಾವೃತವಾದವು.

ಸಮೀಪದ ಬಿಣಗಾದಲ್ಲಿ ಮಳೆ ನೀರು ಹರಿದು ಹೋಗುವ ಜಾಗದಲ್ಲಿ ಮಣ್ಣು ತುಂಬಿತ್ತು. ಇದರಿಂದ ಹೆದ್ದಾರಿಯಲ್ಲಿ ಸುಮಾರು ಮೂರು ಅಡಿಗಳಷ್ಟು ನೀರು ನಿಂತು, ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತವಾಯಿತು. ನಗರಸಭೆ ಅಧಿಕಾರಿಗಳು ಭೇಟಿ ನೀಡಿ ಮಣ್ಣನ್ನು ತೆರವು ಗೊಳಿಸಿದರು. 

ನಗರದ ಜಿಲ್ಲಾ ಆಸ್ಪತ್ರೆಯ ಸಮೀಪವೂ ನೀರು ತುಂಬಿದ್ದರಿಂದ ಡಯಾಲಿಸಿಸ್ ಘಟಕದ ಕೊಠಡಿ ಜಲಾವೃತವಾಯಿತು. ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ನೀರು ತೆರವು ಮಾಡಿದರು. ನೀರಿನಿಂದ ಯಂತ್ರೋಪಕರಣಗಳಿಗೆ ಹಾನಿಯಾಗಿಲ್ಲ ಎಂದು ಜಿಲ್ಲಾ ಆಸ್ಪತ್ರೆ ಸರ್ಜನ್ ಡಾ.ಶಿವಾನಂದ ಕುಡ್ತರಕರ್ ತಿಳಿಸಿದರು.

ಜಿಲ್ಲೆಯ ಕರಾವಳಿ ಹಾಗೂ ಶಿರಸಿ, ಯಲ್ಲಾಪುರ, ಸಿದ್ದಾಪುರ, ಜೊಯಿಡಾದಲ್ಲೂ ಉತ್ತಮ ಮಳೆಯಾಗಿದೆ.

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿದಿದೆ. ಪರಿಹಾರ ಕೇಂದ್ರಗಳಲ್ಲಿ ಇರುವವರ ಹಾಗೂ ಮನೆಗೆ ತೆರಳಿರುವವರ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಳ್ಯ ತಾಲ್ಲೂಕಿನಲ್ಲಿ ಗರಿಷ್ಠ 8.7 ಸೆ.ಮೀ. ಮಳೆಯಾಗಿದೆ. ಜಿಲ್ಲೆಯ ಬಾಂಜಾರು
ಮಲೆ ಬಳಿ ತಾತ್ಕಾಲಿಕ ಸಂಪರ್ಕ ಸೇತುವೆ ನಿರ್ಮಾಣ ಮಾಡಲಾಗಿದೆ. ಚಾರ್ಮಾಡಿ ಘಾಟಿಯಲ್ಲಿ ದುರಸ್ತಿ ಕಾರ್ಯ ಭರದಿಂದ ನಡೆಯುತ್ತಿದೆ.

ಈ ಮಧ್ಯೆ ಇಲ್ಲಿನ ಕರಿಯಂಗಳ ಗ್ರಾಮದ ಪಲ್ಲಿಪಾಡಿಯಲ್ಲಿ ನೂತನವಾಗಿ ನಿರ್ಮಿಸಿದ ಮನೆಯ ಹಿಂಬದಿಯ ಗುಡ್ಡ ಜರಿದಿದ್ದು, ಮನೆ ಅಪಾಯಕ್ಕೆ ಸಿಲುಕಿದೆ. ಪರಿಸ್ಥಿತಿ ಮುಂದುವರಿದರೆ ಪಲ್ಲಿಪಾಡಿಗೆ ಹೋಗುವ ರಸ್ತೆಯ ಸಂಚಾರ ಸ್ಥಗಿತವಾಗುವ ಸಾಧ್ಯತೆ ಇದೆ ಎಂದು ಸ್ಥಳೀಯರು ಅತಂಕ ವ್ಯಕ್ತಪಡಿಸಿದ್ದಾರೆ.

ಗಿರಿಶ್ರೇಣಿ ಸಂಚಾರ ನಿರ್ಬಂಧ: ಚಿಕ್ಕಮಗಳೂರು ಜಿಲ್ಲೆಯ ಗಿರಿಶ್ರೇಣಿ ಭಾಗದಲ್ಲಿ ರಸ್ತೆ ರಿಪೇರಿ ಕಾಮಗಾರಿ ನಡೆಯುತ್ತಿದ್ದು, ಇದೇ 30ರವರೆಗೆ ಸಂಚಾರ ನಿರ್ಬಂಧಿಸಲಾಗಿದೆ.

ಮಳೆಯಿಂದಾಗಿ ಗಿರಿಶ್ರೇಣಿ ಮಾರ್ಗದಲ್ಲಿ ಕೆಲವೆಡೆ ಗುಡ್ಡದಮಣ್ಣು ಕುಸಿದು ರಸ್ತೆ ಹಾಳಾಗಿದ್ದು, ದುರಸ್ತಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಬಾಬಾಬುಡನ್‌ಗಿರಿ ಭಾಗದ ಮಾರ್ಗದ ಸಂಚಾರ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಜಿಲ್ಲೆಯಲ್ಲಿ ಮಳೆ ಕ್ಷೀಣಿಸಿದೆ. ಮಲೆನಾಡು ಭಾಗದ ಕೆಲವೆಡೆ ತುಂತುರು ಮಳೆಯಾಗಿದೆ.

ಶಿವಮೊಗ್ಗ ಜಿಲ್ಲೆಯ ಹೊಸನಗರ, ತೀರ್ಥಹಳ್ಳಿ, ಆಗುಂಬೆ, ಸಾಗರ, ಮಾಸ್ತಿಕಟ್ಟೆ, ಕೋಣಂದೂರು, ರಿಪ್ಪನ್‌ಪೇಟೆ, ಜೋಗ ಭಾಗದಲ್ಲಿ ಸಾಧಾರಣ ಮಳೆಯಾಗಿದೆ.

 

ಇಂದಿನಿಂದ ಶಾಲಾ, ಕಾಲೇಜು ಆರಂಭ

ಮಡಿಕೇರಿ: ಕೊಡಗಿನಲ್ಲಿ ಮಳೆ ಇಳಿಮುಖವಾಗಿದ್ದು, ಶುಕ್ರವಾರ ಶಾಲಾ– ಕಾಲೇಜು ಆರಂಭವಾಗಲಿವೆ. ನಿರಾಶ್ರಿತರಿಗಾಗಿ ಪರಿಹಾರ ಕೇಂದ್ರಗಳನ್ನು ತೆರೆದಿರುವ ಅಂಗನವಾಡಿ, ಶಾಲಾ– ಕಾಲೇಜುಗಳಿಗೆ ಮಾತ್ರ ರಜೆ ವಿಸ್ತರಿಸಲಾಗಿದೆ.

ಜಿಲ್ಲೆಯ ವಿವಿಧೆಡೆ ಗುರುವಾರ ಸಾಧಾರಣ ಮಳೆಯಾಗಿದೆ. ಮಡಿಕೇರಿಯಲ್ಲಿ ಮಧ್ಯಾಹ್ನ 20 ನಿಮಿಷ ಜೋರು ಮಳೆ ಸುರಿಯಿತು.

Post Comments (+)