ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮಳೆ ನೀರು ಸಂಗ್ರಹ ಶೀಘ್ರ

2013ರ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಮುಂದಾದ ಸಚಿವಾಲಯ
Last Updated 14 ಸೆಪ್ಟೆಂಬರ್ 2019, 20:01 IST
ಅಕ್ಷರ ಗಾತ್ರ

ಬೆಂಗಳೂರು: ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಶೀಘ್ರದಲ್ಲಿಯೇ ಮಳೆ ನೀರು ಸಂಗ್ರಹ ವ್ಯವಸ್ಥೆ ಜಾರಿಗೆ ಬರಲಿದೆ. ಅಂತರ್ಜಲ ಮರುಪೂರಣಗೊಳಿಸುವಂತಹ ಕಾರ್ಯವನ್ನು ಇದರೊಂದಿಗೆ ಕೈಗೆತ್ತಿಕೊಳ್ಳಲು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಮುಂದಾಗಿದೆ.

2013ರ ಮಾರ್ಗಸೂಚಿಯಲ್ಲಿಯೇ ಈ ಅಂಶವಿದ್ದು, ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಸಚಿವಾಲಯ ಮುಂದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಸ್ತೆ ಮೇಲೆ ಬೀಳುವ ಅಪಾರ ಪ್ರಮಾಣದ ಮಳೆ ನೀರು ವ್ಯರ್ಥ ಹರಿದು ಹೋಗುತ್ತಿದೆ. ಇದನ್ನು ಗಮನಿಸಿ ಸಚಿವಾಲಯ, ಈ ವ್ಯವಸ್ಥೆ ರೂಪಿಸಲು ಮುಂದಾಗಿದೆ. ರಸ್ತೆ ಬದಿ ಮಾತ್ರವಲ್ಲದೆ, ಟೋಲ್‌ ಸಂಗ್ರಹ ಕೇಂದ್ರ ಹಾಗೂ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಸ್ಥಳೀಯ ಕಚೇರಿಗಳು ಮತ್ತು ಅದರ ಗುತ್ತಿಗೆದಾರರಿಗೂ ಕೂಡ ಮಳೆ ನೀರು ಸಂಗ್ರಹ ವ್ಯವಸ್ಥೆ ರೂಪಿಸಿಕೊಳ್ಳಲು ಸಚಿವಾಲಯ ಸೂಚನೆ ನೀಡಲಿದೆ.

ರಾಜ್ಯದಲ್ಲಿನ ರಾಷ್ಟ್ರೀಯ ಹೆದ್ದಾರಿ ಮಾರ್ಗದಲ್ಲಿ ವರ್ಷಕ್ಕೆ ಅಂದಾಜು 1.5 ಟಿಎಂಸಿ ಅಡಿ ಮಳೆ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ. ಇದನ್ನು ಸಂಗ್ರಹಿಸಲು ಸಫಲವಾದರೆ, ಬೆಂಗಳೂರಿನಂತಹ ಮಹಾ ನಗರದ ಒಂದು ತಿಂಗಳಿನ ನೀರಿನ ಬೇಡಿಕೆ ಪೂರೈಸಬಹುದು.

ತಾತ್ಕಾಲಿಕ ಮಾರ್ಗಸೂಚಿಗಳನ್ನು ಒಳಗೊಂಡಿದ್ದ ಸುತ್ತೋಲೆ ಕುರಿತು ಇತ್ತೀಚಿನವರೆಗೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಆದರೆ, ಈ ಕುರಿತು ಕಳೆದ ವಾರ ಅಧಿಕಾರಿಗಳಿಗೆ ನಿರ್ದೇಶನ ನೀಡಿರುವ ಸಚಿವಾಲಯವು, ಮಳೆ ನೀರು ಸಂಗ್ರಹದ ಕುರಿತು ಸಮಗ್ರ ಯೋಜನಾ ವರದಿ ಸಿದ್ಧಪಡಿಸುವಂತೆ ಸೂಚಿಸಿದೆ.

ಈ ನಿಯಮಗಳು ಅನುಷ್ಠಾನಕ್ಕೆ ಬಂದ ನಂತರ, ಹೆದ್ದಾರಿಗಳಲ್ಲಿ ಇಂತಹ ವ್ಯವಸ್ಥೆ ರೂಪಿಸಿದ್ದರೆ ಮಾತ್ರ ಕಾಮಗಾರಿ ಮುಕ್ತಾಯ ಪ್ರಮಾಣ ಪತ್ರವನ್ನು ಅನುಷ್ಠಾನ ಕಚೇರಿ ಮತ್ತು ಅಧಿಕಾರಿಗಳು ಗುತ್ತಿಗೆದಾರರಿಗೆ ನೀಡಬೇಕು ಎಂದು ಸಚಿವಾಲಯ ಹೇಳಿದೆ.

‘ಇಂಗು ಗುಂಡಿ ಅಥವಾ ಮಳೆ ನೀರು ಸಂಗ್ರಹ ಘಟಕಗಳ ನಿರ್ವಹಣೆ ಮತ್ತು ನಿಯಮಿತವಾಗಿ ಸ್ವಚ್ಛಗೊಳಿಸುವುದು ಕೂಡ ಗುತ್ತಿಗೆ ಪಡೆದ ಸಂಸ್ಥೆಯ ಜವಾಬ್ದಾರಿಯಾಗಿರುತ್ತದೆ’ ಎಂದು ಸಚಿವಾಲಯವು ಇತ್ತೀಚೆಗೆ ರಾಜ್ಯಗಳಿಗೆ ಕಳುಹಿಸಿದ ಸುತ್ತೋಲೆಯಲ್ಲಿದೆ.

ಹೆಚ್ಚು ಮಳೆ ಬೀಳುವ ಪ್ರದೇಶ ಹಾಗೂ ಭೂ ತಾಂತ್ರಿಕ ವರದಿ ಆಧರಿಸಿ, ಎಲ್ಲಿ ಇಂತಹ ಮಳೆ ನೀರು ಸಂಗ್ರಹದ ಘಟಕ ನಿರ್ಮಿಸಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ.

ಅಂಕಿ–ಅಂಶ

* 1,100 ಮಿ.ಮೀ. ದೇಶದಲ್ಲಿ ವರ್ಷಕ್ಕೆ ಸರಾಸರಿ ಬೀಳುವ ಮಳೆಯ ಪ್ರಮಾಣ

* 61.60 ಲಕ್ಷ ಲೀಟರ್‌ ಹೆದ್ದಾರಿಗಳಲ್ಲಿ ಪ್ರತಿ ಕಿ.ಮೀ.ಗೆ ವ್ಯರ್ಥವಾಗಿ ಹರಿದು ಹೋಗುವ ನೀರಿನ ಪ್ರಮಾಣ

* 1.31 ಲಕ್ಷ ಕಿ.ಮೀ.ದೇಶದಲ್ಲಿನ ರಾಷ್ಟ್ರೀಯ ಹೆದ್ದಾರಿ ಜಾಲ (2018ರ ನವೆಂಬರ್‌ವರೆಗೆ)

* 7,334 ಕಿ.ಮೀ. ಕರ್ನಾಟಕ ರಾಷ್ಟ್ರೀಯ ಹೆದ್ದಾರಿ ಜಾಲ

*80%ರಾಷ್ಟ್ರೀಯ ಹೆದ್ದಾರಿಗಳಲ್ಲಿ ವ್ಯರ್ಥವಾಗಿ ಹರಿದು ಹೋಗುವ ಮಳೆ ನೀರಿನ ಪ್ರಮಾಣ

* 20%ರಾಷ್ಟ್ರೀಯ ಹೆದ್ದಾರಿಗಳಲ್ಲಿ ಆವಿಯಾಗುವ ಮಳೆ ನೀರಿನ ಪ್ರಮಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT