ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯದಶಮಿ: ಗೆಲುವಿನ ಹಬ್ಬ

ಅಕ್ಟೋಬರ್ 8 ವಿಜಯದಶಮಿ
Last Updated 4 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ನವರಾತ್ರಿಪರ್ವದ ಹತ್ತನೆಯ ದಿನವನ್ನು ‘ವಿಜಯದಶಮಿ’ಯಾಗಿ ಆಚರಿಸುವುದುಂಟು.

ಜೀವನಕ್ಕೆ ಹೊಸತನವನ್ನು – ನವತ್ವವನ್ನು – ತುಂಬುವುದೇ ನವರಾತ್ರಿ ಆಚರಣೆಯ ಪ್ರಧಾನ ಉದ್ದೇಶ. ಜೀವನೋತ್ಸಾಹಕ್ಕೆ ಪೂರಕವಾಗಿ ಒದಗುವಂಥದ್ದು ವಿಜಯ, ಎಂದರೆ ಗೆಲುವು. ಅದು ಯಾರಿಗೆ ತಾನೆ ಬೇಡ? ನಮ್ಮ ಜೀವನವು ಜಯವನ್ನು ಪಡೆಯಲಿ ಎಂಬ ಆಶಯದಿಂದ ಮಾತೃಶಕ್ತಿಯನ್ನು ಆರಾಧಿಸುವ ದಿನವೇ ವಿಜಯದಶಮಿ. ಇದನ್ನು ಮುಖ್ಯವಾಗಿ ಕ್ಷತ್ರಿಯರು ಆಚರಿಸುತ್ತಿದ್ದರು ಎಂದು ಹೇಳುವುದುಂಟು. ಆದರೆ ಸಮಾಜದ ಎಲ್ಲರೂ ಕೂಡ ಈ ಹಬ್ಬದಲ್ಲಿ ಭಾಗವಹಿಸುತ್ತಾರೆನ್ನಿ.

ಯುದ್ಧದಲ್ಲಿ ಜಯಸಿಗಲೆಂದು ಕ್ಷತ್ರಿಯರು ವಿಜಯದಶಮಿಯಂದು ದೇವಿಯನ್ನು ಪೂಜಿಸುತ್ತಿದ್ದರು; ಹಿಂದಿನ ದಿನ ಆಯುಧಗಳ ಪೂಜೆ ನಡೆದಿರುತ್ತದೆ; ಅದಕ್ಕೂ ಮೊದಲು ದುರ್ಗೆಯ ಆರಾಧನೆಯೂ ನಡೆದಿರುತ್ತದೆ.ಯುದ್ಧ ಎನ್ನುವುದು ಇಬ್ಬರು ಶತ್ರುಗಳ ನಡೆಯುವ ಕಾದಾಟವೇ ಆಗಬೇಕಿಲ್ಲವಷ್ಟೆ! ನಮ್ಮಲ್ಲೂ ದುರ್ಗುಣಗಳೆಂಬ ಹಲವು ಶತ್ರುಗಳು ಹೊಂಚುಹಾಕಿ ಕಾಯುತ್ತಿರುತ್ತವೆ, ನಮ್ಮ ಜೀವನವನ್ನು ಸೋಲಿಸಲು. ನಾವು ಅವುಗಳ ವಿರುದ್ಧವೂ ಹೋರಾಟ ಮಾಡಿ ಜಯವನ್ನು ಸಂಪಾದಿಸಬೇಕು. ಆಗಷ್ಟೇ ಜೀವನಹೋರಾಟ ಸಾರ್ಥಕತೆಯನ್ನು ಪಡೆಯುವುದು. ಇದರ ಸಾಂಕೇತಿಕತೆಯನ್ನೂ ವಿಜಯದಶಮಿಯ ಆಚರಣೆಯಲ್ಲಿ ಕಾಣುತ್ತೇವೆ.

ಷೋಡಶೋಪಚಾರ ಪೂಜೆಯೊಂದಿಗೆ ದೇವಿಯನ್ನು ಆರಾಧಿಸಿ, ಬಳಿಕ ಅವಳ ಮೂರ್ತಿಯನ್ನು ನೀರಿನಲ್ಲಿ ವಿಸರ್ಜಿಸುವ ಕ್ರಮವುಂಟು. ಅಂದು ವಿಶೇಷವಾಗಿ ಬನ್ನಿಮರವನ್ನು ಪೂಜಿಸಲಾಗುತ್ತದೆ. ಈ ವೃಕ್ಷಪೂಜೆಗೆ ಹಿನ್ನೆಲೆಯೂ ಇದೆ. ಪಾಂಡವರು ಅಜ್ಞಾತವಾಸಕ್ಕೆ ಮುನ್ನ ಅವರ ಎಲ್ಲ ಶಸ್ತ್ರಗಳನ್ನು ಬನ್ನಿಮರದಲ್ಲಿ ಅಡಗಿಸಿಟ್ಟಿದ್ದರಂತೆ. ಅಂತೆಯೇ ಶ್ರೀರಾಮನೂ ಕೂಡ ರಾವಣನ ಸಂಹಾರಕ್ಕೆ ಮೋದಲು ಬನ್ನಿಮರವನ್ನು ಪೂಜಸಿದ್ದನಂತೆ. ಹೀಗೆ ಬನ್ನಿಮರಕ್ಕೂ ಯುದ್ಧಕ್ಕೂ ಸಂಬಂಧವಿದೆ. ಯುದ್ಧದಲ್ಲಿ ಜಯವನ್ನು ಪಡೆಯುವುದಕ್ಕೂ ಈ ಮರಕ್ಕೂ ನಂಟಿದೆ ಎಂದಾಯಿತು.

‘ಬನ್ನಿ’ ಎನ್ನುವುದು ಸಂಸ್ಕೃತದ ‘ವಹ್ನಿ’ ಎಂಬುದರ ಕನ್ನಡರೂಪ. ’ವಹ್ನಿ’ ಎಂದರೆ ಅಗ್ನಿ. ಬನ್ನಿಮರ ಎಂದು ಕರೆಯುವುದು ಶಮೀವೃಕ್ಷಕ್ಕೆ. ಶಮೀವೃಕ್ಷವನ್ನು ‘ಅಗ್ನಿಗರ್ಭಾ’ ಎಂದು ಕರೆಯಲಾಗುತ್ತದೆ – ಎಂದರೆ ಅಗ್ನಿಯ ಮೂಲ ಎಂದು ತಾತ್ಪರ್ಯ. ಹಿಂದಿನ ಕಾಲದಲ್ಲಿ ಯಜ್ಞಗಳನ್ನು ಮಾಡಲು ಅಗ್ನಿಯನ್ನು ಪಡೆಯಲು ಈ ಮರದ ಕೊರಡುಗಳನ್ನು ಮಥಿಸಲಾಗುತ್ತಿತ್ತು. ಹೀಗಾಗಿ ಈ ಮರಕ್ಕೆ ‘ಅಗ್ನಿಗರ್ಭಾ’ ಎಂದು ಹೆಸರು. ಇದಲ್ಲದೆ ಈ ಮರದಲ್ಲಿರುವ ಅಗ್ನಿಯನ್ನು ‘ದುರ್ಗಾ’ ಎಂದೂ ಕರೆಯಲಾಗುವುದು. ಹೀಗಾಗಿ ದುರ್ಗೆಗೂ ಬನ್ನಿಮರಕ್ಕೂ ನಂಟು ಒದಗಿದೆ. ದುರ್ಗೆ ಎಂದರೆ ನಮ್ಮ ಎಲ್ಲ ಕಷ್ಟಗಳನ್ನು ಪರಿಹರಿಸುವವಳು ಎಂದು ಅರ್ಥ.

ಬನ್ನಿಮರ ಪೂಜಿಸುವಾಗ ಹೇಳುವ ಶ್ಲೋಕಗಳು

ಶಮೀ ಶಮಯತೇ ಪಾಪಂ ಶಮೀ ಲೋಹಿತಕಂಟಕಾ
ಧಾರಿಣ್ಯರ್ಜುನ ಬಾಣಾನಾಂ ರಾಮಸ್ಯ ಪ್ರಿಯವಾದಿನೀ
ಕರಿಷ್ಯಮಾಣ ಯಾತ್ರಾಯಾಂ ಯಥಾಕಾಲಂ ಸುಖಂ ಮಯಾ
ತತ್ರ ನಿರ್ವಿಘ್ನಕರ್ತ್ರೀ ತ್ವಂ ಭವ ಶ್ರೀರಾಮ ಪೂಜಿತೇ

ಇದರ ತಾತ್ಪರ್ಯ: ‘ಶಮೀ ಪಾಪಗಳನ್ನು ಶಮನಗೊಳಿಸುವುದು. ಅದು ಕೆಂಪುಮುಳ್ಳುಗಳಿಂದ ಕಂಗೊಳಿಸುವುದು. ಅರ್ಜುನನ ಬಾಣಗಳನ್ನು ಧರಿಸಿದ್ದ ದಿವ್ಯವಾದ ವೃಕ್ಷವದು. ಶ್ರೀರಾಮನಿಗೂ ಒಳಿತನ್ನು ನುಡಿದ ಮರ. ಈಗ ನನ್ನ ವಿಜಯಯಾತ್ರೆಗೂ ನೆರವಾಗಲಿ, ಶ್ರೀರಾಮನಿಂದ ಪೂಜಿತವಾದ ಆ ದಿವ್ಯವೃಕ್ಷ.’

ಅಕ್ಷರಾಭ್ಯಾಸ

ಎಳೆಯಮಕ್ಕಳಿಗೆಅಕ್ಷರಾಭ್ಯಾಸ ಮಾಡಿಸಲು ವಿಜಯದಶಮೀ ಪ್ರಶಸ್ತವಾದ ದಿನ. ಅಂದು ಯಾವುದಾದರೊಂದು ದೇವಿಯ ಪುಣ್ಯಕ್ಷೇತ್ರದಲ್ಲಿಮಕ್ಕಳಿಗೆಅಕ್ಷರಾಭ್ಯಾಸವನ್ನುಮಾಡಿಸುವುದು ವಾಡಿಕೆ. ಹೀಗೆ ಹೋಗಲು ಅವಕಾಶ ಇಲ್ಲದಿದ್ದಾಗ, ತಂದೆಯೇ ಮಗುವಿಗೆ ಅಕ್ಷರವನ್ನು ತಿದ್ದಿಸಬಹುದು. ಅಕ್ಕಿಯಲ್ಲಿ ಅರಿಸಿನ ತುಂಡಿನಿಂದ ಮಗುವಿನ ಕೈ ಹಿಡಿದು ಅಕ್ಷರವನ್ನು ಬರೆಸುವುದುಂಟು. ‘ಶ್ರೀ’ ಎಂದೋ ಅಥವಾ ‘ಶ್ರೀಗಣಾಧಿಪತಯೇ ನಮಃ’ ಎಂದೋ ಅಥವಾ ‘ಓಂ ನಮಃ ಶೀವಾಯ ಸಿದ್ಧ ನಮಃ’ ಎಂದೋ ಅವರವರ ಸಂಪ್ರದಾಯದ ಪ್ರಕಾರ ಅಕ್ಷರವನ್ನು ಮಗುವಿನಿಂದ ಬರೆಸಲಾಗುವುದು. ಶೃಂಗೇರಿಯಲ್ಲಿ ನಡೆಸುವ ಅಕ್ಷರಾಭ್ಯಾಸಕ್ಕೆ ವಿಶೇಷ ಸ್ಥಾನವಿದೆ. ಏಕೆಂದರೆ ಆ ಕ್ಷೇತ್ರದ ಅಧಿದೇವತೆ ಶಾರದೆ; ಸರಸ್ವತಿಯ ರೂಪ; ಶಂಕರಾಚಾರ್ಯರಿಂದಲೇ ಶಾರದಾಪ್ರತಿಷ್ಠೆ ನಡೆದಿದೆ ಎನ್ನುವುದು ಆಸ್ತಿಕರ ನಂಬಿಕೆ. ಹೀಗೆಯೇ ಕೊಲ್ಲೂರಿನ ಮೂಕಾಂಬಿಕೆಯ ಆಲಯದಲ್ಲಿಯೂ ಅಕ್ಷರಾಭ್ಯಾಸ ನಡೆಯವುದು. ಕಾಶ್ಮೀರವೂ ಶಾರದೆಯ ಪೂಜೆಗೆ ಪ್ರಶಸ್ತವಾಗಿರುವ ಸ್ಥಳ. ಶಾರದೆಯನ್ನು ‘ಕಾಶ್ಮೀರಪುರವಾಸಿನೀ’ ಎಂದೇ ಕರೆಯಲಾಗಿದೆ ಎನ್ನುವುದನ್ನೂ ಗಮನಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT