ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸಿಎಂ ಹುದ್ದೆ ತ್ಯಾಗ ಮಾಡಲಿ: ಎಂ.ಪಿ.ರೇಣುಕಾಚಾರ್ಯ ಸವಾಲು

ಡಾ.ಅಶ್ವತ್ಥನಾರಾಯಣ ಮೇಲೆ ಗರಂ
Last Updated 18 ಡಿಸೆಂಬರ್ 2019, 19:42 IST
ಅಕ್ಷರ ಗಾತ್ರ

ಬೆಂಗಳೂರು: ‘ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ನನಗೆ ನೀತಿ ಪಾಠ ಹೇಳುವ ಅಗತ್ಯವಿಲ್ಲ. ಅವರಿಗೆ ಪಕ್ಷದ ಮೇಲೆ ಗೌರವ ಇದ್ದರೆ, ಡಿಸಿಎಂ ಹುದ್ದೆಯನ್ನು ತ್ಯಾಗ ಮಾಡಲಿ’ ಎಂದು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಸವಾಲು ಹಾಕಿದರು.

ಉಪಮುಖ್ಯಮಂತ್ರಿ ಹುದ್ದೆ ರದ್ದು ಮಾಡಬೇಕು ಎಂಬ ಒತ್ತಾಯ ವನ್ನುಬುಧವಾರ ಇನ್ನಷ್ಟು ತೀವ್ರ
ಗೊಳಿಸಿದರು. ಅಲ್ಲದೆ, ತಮ್ಮ ಹೇಳಿಕೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಅಶ್ವತ್ಥ ನಾರಾಯಣ ಅವರ ವಿರುದ್ಧವೂ ಹರಿಹಾಯ್ದರು.

ಬಿಜೆಪಿ ಕಚೇರಿ ಬಳಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಪ್ರಧಾನಿ, ಪಕ್ಷದ ಅಧ್ಯಕ್ಷರು ಮತ್ತು ಮುಖ್ಯಮಂತ್ರಿಯವರ ಬಗ್ಗೆ ನನಗೆ ಅಪಾರ ಗೌರವ ಇದೆ. ಡಿಸಿಎಂ ಹುದ್ದೆ ಬಗ್ಗೆ ಮಾತನಾಡಿ ಅವರಿಗೆ ಅಗೌರವ ತರುವುದಿಲ್ಲ. ನಾನು ಎಲ್ಲಿ ಮಾತನಾಡಬೇಕೋ ಅಲ್ಲೇ ಮಾತ ನಾಡುತ್ತೇನೆ. ನನಗೆ ತಿಳಿವಳಿಕೆ ನೀಡಲು ಮುಖ್ಯಮಂತ್ರಿ ಇದ್ದಾರೆ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷರೂ ಇದ್ದಾರೆ’ ಎಂದರು.

‘ಎಲ್ಲ ಸಚಿವರನ್ನು ಡಿಸಿಎಂ ಮಾಡಲಿ, ನಾನೇನು ಬೇಡ ಎನ್ನುವು ದಿಲ್ಲ. ಮೂರು ಬಾರಿ ಶಾಸಕನಾಗಿ ಆಯ್ಕೆಯಾಗಿರುವ ನಾನೂ ಸಚಿವ ಸ್ಥಾನದ ಆಕಾಂಕ್ಷಿಯಾಗಿರುವುದರಿಂದ ಡಿಸಿಎಂ ಹುದ್ದೆ ಬಗ್ಗೆ ಮಾತನಾಡುವ ಹಕ್ಕು ನನಗೂ ಇದೆ’ ಎಂದು ಪ್ರತಿಪಾದಿಸಿದರು.

‘30 ವರ್ಷಗಳಿಂದ ಬಿಜೆಪಿಯಲ್ಲಿದ್ದೇನೆ. ನನಗೆ ಎಲ್ಲಿ ಮಾತನಾಡಬೇಕು, ಹೇಗೆ ಮಾತನಾಡಬೇಕು ಎಂಬುದು ಚೆನ್ನಾಗಿ ಗೊತ್ತಿದೆ. ಉಪಮುಖ್ಯಮಂತ್ರಿ ಹುದ್ದೆ ರದ್ದುಪಡಿಸಿ ಎನ್ನುವುದು ನನ್ನ ಒಬ್ಬನ ಅಭಿಪ್ರಾಯ ಅಲ್ಲ. ಶಾಸಕರು, ಸಂಸದರು, ಸಚಿವರು ಮತ್ತು ಜನರ ಭಾವನೆಯನ್ನು ನಾನು ವ್ಯಕ್ತಪಡಿಸಿದ್ದೇನೆ. ನನ್ನ ಹೇಳಿಕೆಯನ್ನು ಬಹಳಷ್ಟು ಶಾಸಕರು ಬೆಂಬಲಿಸಿದ್ದಾರೆ’ ಎಂದರು.

ಏನು ಮಾತನಾಡಿದ್ದೀರಿ ಗೊತ್ತಿದೆ: ‘ಐದು ವರ್ಷಗಳ ಹಿಂದೆ ಬಿಬಿಎಂಪಿ ಚುನಾವಣೆಯ ಟಿಕೆಟ್‌ ಹಂಚಿಕೆ ವಿಷಯದಲ್ಲಿ ನೀವು ಯಡಿಯೂರಪ್ಪ ಅವರ ಬಗ್ಗೆ ಏನು ಮಾತನಾಡಿದ್ದೀರಿ ಎಂಬುದು ಗೊತ್ತಿದೆ. ಅದನ್ನು ಇಲ್ಲಿ ಉಲ್ಲೇಖಿಸುವುದಿಲ್ಲ. ಈಗ ಮುಖ್ಯಮಂತ್ರಿ ಅವರ ಬಗ್ಗೆ ಮಾತನಾಡುತ್ತಿರುವ ನೀವು ಆಗ ಏಕೆ ಹಾಗೆ ವರ್ತಿಸಿಲ್ಲ’ ಎಂದು ಅವರು ಅಶ್ವತ್ಥನಾರಾಯಣ ಅವರನ್ನು ಖಾರವಾಗಿ ಪ್ರಶ್ನಿಸಿದರು.

ಅಧ್ಯಕ್ಷರಿಗೆ ಅಹವಾಲು ಸಲ್ಲಿಕೆ

ಉಪಮುಖ್ಯಮಂತ್ರಿ ಹುದ್ದೆ ರದ್ದು ಮಾಡಬೇಕೆಂಬ ಹೇಳಿಕೆ ನೀಡಿ ಪಕ್ಷದಲ್ಲಿ ಗೊಂದಲ ಸೃಷ್ಟಿಸಿರುವ ಶಾಸಕ ಎಂ.ಪಿ.ರೇಣುಕಾಚಾರ್ಯ ಪಕ್ಷದ ರಾಜ್ಯ ಘಟಕ ಅಧ್ಯಕ್ಷ ನಳಿನ್ ಕಟೀಲ್‌ ಅವರನ್ನು ಬುಧವಾರ ಭೇಟಿ ಮಾಡಿ ಈ ಕುರಿತು ಅಹವಾಲು ಸಲ್ಲಿಸಿದ್ದಾರೆ

ಪಕ್ಷದ ಕಚೇರಿಯಲ್ಲಿ ನಳಿನ್‌ ಜತೆ ಅವರು ಸುಮಾರು 20 ನಿಮಿಷ ಮಾತುಕತೆ ನಡೆಸಿದರು. ‘ಈಗಿರುವ ಉಪಮುಖ್ಯಮಂತ್ರಿ ಹುದ್ದೆ ರದ್ದು ಮಾಡಬೇಕು. ಮುಂದೆ ಯಾರಿಗೂ ಡಿಸಿಎಂ ಹುದ್ದೆಗಳನ್ನು ನೀಡಬಾರದು’ ಎಂದು ಪ್ರತಿಪಾದಿಸಿದರು.

‘ಜಾತಿಗೊಂದರಂತೆ ಉಪಮುಖ್ಯಮಂತ್ರಿ ಹುದ್ದೆ ನೀಡುತ್ತಾ ಹೋದರೆ, ಅದಕ್ಕೆ ಕೊನೆಯೇ ಇಲ್ಲ. ಇದು ಜಾತಿ– ಜಾತಿಗಳ ಮಧ್ಯೆ ಸಂಘರ್ಷಕ್ಕೆ ಕಾರಣವಾಗಲೂಬಹುದು. ಜಾತಿ, ಪ್ರದೇಶಗಳಿಗೆ ಅನುಗುಣವಾಗಿ ಸಚಿವ ಸ್ಥಾನಗಳನ್ನು ನೀಡಬಹುದು’ ಎಂದು ಅವರು ಅಧ್ಯಕ್ಷರಿಗೆ ತಿಳಿಸಿದರೆನ್ನಲಾಗಿದೆ.

ಉಪಮುಖ್ಯಮಂತ್ರಿ ಮಾಡಬೇಕೆಂದು ರಮೇಶಜಾರಕಿಹೊಳಿ, ಬಿ. ಶ್ರೀರಾಮುಲು ಸೇರಿದಂತೆ ಇನ್ನೂ ಹಲವರು ಪಟ್ಟು ಹಿಡಿದಿದ್ದಾರೆ. ಈ ಪೈಪೋಟಿ ಪಕ್ಷದ ಸಂಘಟನೆಯ ಮೇಲೂ ಕೆಟ್ಟ ಪರಿಣಾಮ ಬೀರಬಲ್ಲದು. ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಆಡಳಿತ ನಡೆಸಲು ಸಮರ್ಥರಿರುವಾಗ ಉಪಮುಖ್ಯಮಂತ್ರಿ ಹುದ್ದೆಗಳ ಅಗತ್ಯವಿಲ್ಲ ಎಂದು ಅವರು ಪ್ರತಿಪಾದಿಸಿದರು
ಎನ್ನಲಾಗಿದೆ.

******

ಪಕ್ಷದ ಸಂಘಟನೆ ಬಲಪಡಿಸುವ ಬಗ್ಗೆ ರೇಣುಕಾಚಾರ್ಯ ಅವರು ಮಾತುಕತೆ ನಡೆಸಿದರು. ಉಪಮುಖ್ಯಮಂತ್ರಿ ಹುದ್ದೆಗಳ ರದ್ದು ಮಾಡಬೇಕು ಎಂಬ ಬಗ್ಗೆ ಚರ್ಚೆ ನಡೆದಿಲ್ಲ
-ನಳಿನ್‌ ಕುಮಾರ್‌ ಕಟೀಲ್‌
ಅಧ್ಯಕ್ಷ, ಬಿಜೆಪಿ ರಾಜ್ಯ ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT