ಸ್ಥಳೀಯ ಇತಿಹಾಸ, ಸಂಸ್ಕೃತಿ ಗಂಧವಿಲ್ಲದ ಪಠ್ಯ

ಗುರುವಾರ , ಮೇ 23, 2019
30 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಎನ್‌ಸಿಇಆರ್‌ಟಿ 6ನೇ ತರಗತಿ ಪುಸ್ತಕ ಅನುವಾದ ಮಾಡಲೊಪ್ಪದ ಉಪನ್ಯಾಸಕರು

ಸ್ಥಳೀಯ ಇತಿಹಾಸ, ಸಂಸ್ಕೃತಿ ಗಂಧವಿಲ್ಲದ ಪಠ್ಯ

Published:
Updated:
Prajavani

ಬೆಂಗಳೂರು: ಆರನೇ ತರಗತಿ ಸಮಾಜ ವಿಜ್ಞಾನಕ್ಕಾಗಿ ಶಿಕ್ಷಣ ಇಲಾಖೆಯು ಎನ್‌ಸಿಇಆರ್‌ಟಿಯಿಂದ ಆಯ್ಕೆ ಮಾಡಿರುವ ಪಠ್ಯ ಪುಸ್ತಕದಲ್ಲಿ ಕರ್ನಾಟಕ ಮತ್ತು ದಕ್ಷಿಣ ಭಾರತದ ಇತಿಹಾಸ, ಸಂಸ್ಕೃತಿ ವಿಷಯಗಳು ಇಲ್ಲದಿರುವುದು ಬೆಳಕಿಗೆ ಬಂದಿದೆ.

ಈ ಕಾರಣಕ್ಕಾಗಿ ಪಠ್ಯಪುಸ್ತಕ ಅನುವಾದಕ್ಕೆಂದು ನಿಯೋಜಿತರಾಗಿದ್ದ ಇಬ್ಬರು ಉಪನ್ಯಾಸಕರು ಪ್ರತಿಭಟನಾರ್ಥವಾಗಿ ಕರ್ನಾಟಕ ಪಠ್ಯ ಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದು, ಅನುವಾದ ಕಾರ್ಯದಿಂದ ಹಿಂದಕ್ಕೆ ಸರಿದಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ ಉಪನ್ಯಾಸಕ ಎಚ್‌.ಜಿ.ರಾಜೇಶ್‌ ಅವರು, ‘ಎನ್‌ಸಿಇಆರ್‌ಟಿಯ 6 ನೇ ತರಗತಿ ಸಮಾಜ ವಿಜ್ಞಾನ ಪಠ್ಯಪುಸ್ತಕದ ಅನುವಾದಕ್ಕೆ ನಮಗೆ ಆಹ್ವಾನ ನೀಡಲಾಗಿತ್ತು. ಪಠ್ಯಪುಸ್ತಕ ನೋಡಿದಾಗ ಅಚ್ಚರಿ ಆಯಿತು.
ಅದನ್ನು ದೆಹಲಿ ಮೂಲದ ಉಪನ್ಯಾಸಕರು ರಚಿಸಿದ್ದರಿಂದ ಸಂಪೂರ್ಣ ಉತ್ತರ ಭಾರತದ ಇತಿಹಾಸ ಮತ್ತು ಸಂಸ್ಕೃತಿಯ ವಿಚಾರಗಳೇ ತುಂಬಿಕೊಂಡಿದ್ದವು. ಕರ್ನಾಟಕ ಮತ್ತು ದಕ್ಷಿಣ ಭಾರತಕ್ಕೆ ಸಂಬಂಧಿಸಿದ ಇತಿಹಾಸದ ಅಂಶಗಳೇ ಇರಲಿಲ್ಲ’ ಎಂದರು.

‘ಆರನೇ ತರಗತಿ ಮಕ್ಕಳಿಗೆ ಸ್ಥಳೀಯ ಇತಿಹಾಸ ಮತ್ತು ಸಂಸ್ಕೃತಿ ವಿಷಯಗಳು ಇರಬೇಕು. ಆದರೆ, 136 ಪುಟಗಳ ಪುಸ್ತಕದಲ್ಲಿ ದಕ್ಷಿಣ ಭಾರತದ ಬಗ್ಗೆ ಹೆಚ್ಚೆಂದರೆ 6 ಪುಟಗಳ ಇತಿಹಾಸವೂ ಸಿಗುವುದಿಲ್ಲ. ಅದರಲ್ಲಿ ಕರ್ನಾಟಕದ ಬಗ್ಗೆ  ಒಂದು ಪುಟವೂ ಇಲ್ಲ. ಕರ್ನಾಟಕವನ್ನು ಆಳಿದ ರಾಜ ಮನೆತನಗಳಾದ ಕದಂಬರು, ಗಂಗರು, ಚಾಲುಕ್ಯರ ಪರಿಚಯವೇ ಇಲ್ಲ’ ಎಂದರು.

‘ಆ ಪುಸ್ತಕದಲ್ಲಿ ಮೌರ್ಯರು ಮತ್ತು ಶಾತವಾಹನ ರಾಜ ಮನೆತನಗಳ ವಿಚಾರಗಳಿವೆ. ಆದರೆ, ಆ ರಾಜಮನೆತನಕ್ಕೂ ಮತ್ತು ಕರ್ನಾಟಕಕ್ಕೂ ಇದ್ದ ನಂಟಿನ ಕುರಿತ ಮಾಹಿತಿ ಅದರಲ್ಲಿ ಇಲ್ಲ. ನಮ್ಮ ಮಕ್ಕಳಿಗೆ ವಾಸ್ತವವಾದ ಚರಿತ್ರೆಯನ್ನು ನಾವು ಕಲಿಸಿಕೊಡದೇ ಇದ್ದರೆ, ನಮ್ಮ ಇತಿಹಾಸವನ್ನು ಅವರು ಎಲ್ಲಿಂದ ತಿಳಿದುಕೊಳ್ಳಲು ಸಾಧ್ಯ’ ಎಂದು ಪ್ರಶ್ನಿಸಿದರು.

‘ಈ ಪುಸ್ತಕವನ್ನು ಅನುವಾದ ಮಾಡಿ, ಅಳವಡಿಸಿಕೊಳ್ಳುವ ಸಂಬಂಧ ಶಿಕ್ಷಣ ಇಲಾಖೆ ಅಧಿಕೃತವಾಗಿ ಸರ್ಕಾರಿ ಆದೇಶ ಹೊರಡಿಸಿಲ್ಲ. ಅನುವಾದಕ್ಕೆ ಮೊದಲು ಇಲಾಖೆ ತಜ್ಞರೊಂದಿಗೆ ಸಮಾಲೋಚನೆ ನಡೆಸಿದ್ದರೆ, ಇಂತಹ ಸಮಸ್ಯೆ ಉದ್ಭವಿಸುತ್ತಿರಲಿಲ್ಲ. ಉತ್ತರ ಭಾರತದ ಇತಿಹಾಸ ಇರಲೇಬಾರದು ಎನ್ನುವುದಿಲ್ಲ. ಆದರೆ ಸ್ಥಳೀಯ ಇತಿಹಾಸಕ್ಕೆ ಹೆಚ್ಚಿನ ಮಹತ್ವ ನೀಡಬೇಕಿತ್ತು’ ಎಂದು ರಾಜೇಶ್‌ ಹೇಳಿದರು.

‘ಕರ್ನಾಟಕ ಚರಿತ್ರೆ ಮತ್ತು ಸಂಸ್ಕೃತಿ ವಿಚಾರವನ್ನು ನಿರ್ಲಕ್ಷಿಸಲ್ಪಟ್ಟ ಪಠ್ಯಪುಸ್ತಕವನ್ನು ಅನುವಾದಿಸಲು ನಮ್ಮ ಮನಸ್ಸು ಒಪ್ಪುವುದಿಲ್ಲ. ಈ ಯೋಜನೆಯನ್ನು ಮರುಪರಿಶೀಲಿಸುವ ಬಗ್ಗೆ ಮರುಚಿಂತನೆ ನಡೆಸಬೇಕು’ ಎಂದು ಅವರು ಶಿಕ್ಷಣ ಇಲಾಖೆಗೆ ಮನವಿ ಮಾಡಿದ್ದಾರೆ.

ಬರಗೂರು ರಾಮಚಂದ್ರಪ್ಪ ವಿರೋಧ
‘ಎನ್‌ಸಿಇಆರ್‌ಟಿ ಪುಸ್ತಕಗಳನ್ನು ಪೂರ್ಣ ಪ್ರಮಾಣದಲ್ಲಿ ಅನುವಾದ ಮಾಡುವುದಕ್ಕೆ ನನ್ನ ವಿರೋಧವಿದೆ. ಈ ರೀತಿ ಮಾಡುವುದು ರಾಜ್ಯದ ಶೈಕ್ಷಣಿಕ ಸ್ವಾಯತ್ತತೆಗೆ ಧಕ್ಕೆ ಬರುತ್ತದೆ ’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಈ ಕ್ರಮವನ್ನು ವಿರೋಧಿಸಿದರು.

‘ನಮ್ಮಲ್ಲಿ ಸಾಕಷ್ಟು ತಜ್ಞರಿದ್ದಾರೆ. ಅತ್ಯುತ್ತಮ ಪಠ್ಯ ಪುಸ್ತಕ ರಚಿಸುವ ಶಕ್ತಿ ಅವರಲ್ಲಿ ಇಲ್ಲ ಎಂಬುದು ಅಧಿಕಾರಿಗಳ ಭಾವನೆಯೇ. ನನ್ನ ಅಧ್ಯಕ್ಷತೆಯಲ್ಲಿ ಪಠ್ಯ ಪುಸ್ತಕಗಳ ಪರಿಷ್ಕರಣೆ ನಡೆಯಿತು. ಕೇಂದ್ರೀಯ ಪಠ್ಯದ ಗುಣಮಟ್ಟಕ್ಕೆ ಕಡಿಮೆ ಇಲ್ಲದಂತೆ ರಚಿಸಲಾಗಿತ್ತು. ನಾವು ಪರಿಷ್ಕರಿಸಿದ ಪುಸ್ತಕದಲ್ಲಿ ಕೊರತೆ ಇದ್ದರೆ ಅದನ್ನು ಸರಿಪಡಿಸಿಕೊಳ್ಳಲು ಅವಕಾಶ ಇದ್ದೇ ಇದೆ’ ಎಂದು ಅವರು ಹೇಳಿದರು.

*
ಉತ್ತರ ಭಾರತದ ವಿಷಯ ತಜ್ಞರು ಉತ್ತರ ಭಾರತದ ಚರಿತ್ರೆಗೆ ಮನ್ನಣೆ ನೀಡಿರುವ ಪಠ್ಯ ನಮ್ಮ ಮಕ್ಕಳ ಮೇಲೆ ಹೇರುವುದು ಸರಿಯಲ್ಲ
-ಎಚ್‌.ಜಿ.ರಾಜೇಶ್‌, ಉಪನ್ಯಾಸಕ

*
ಪಠ್ಯವನ್ನು ಅನುವಾದ ಮಾಡಲಾಗುತ್ತಿದೆ ಎಂದರೆ, ಅದನ್ನು ಅಳವಡಿಸುತ್ತಿದ್ದೇವೆ ಎಂದರ್ಥವಲ್ಲ. ತಜ್ಞರೊಂದಿಗೆ ಚರ್ಚೆಯ ಬಳಿಕವೇ ಪಠ್ಯಪುಸ್ತಕ ರೂಪುಗೊಳ್ಳುತ್ತದೆ.
-ಪಿ.ಸಿ.ಜಾಫರ್‌, ಆಯುಕ್ತ, ಸಾರ್ವಜನಿಕ ಶಿಕ್ಷಣ ಇಲಾಖೆ

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !